ಮುಖಪುಟ /ಸುದ್ದಿ ಸಮಾಚಾರ   
 

ತಮಿಳುನಾಡಿನಲ್ಲಿ ಮೊಳಗಿದ ಕನ್ನಡ ಡಿಂಡಿಮ
ಅಯನಾವರಂನಲ್ಲಿ ಸರ್ವಜ್ಞ ಪ್ರತಿಮೆಯ ಅನಾವರಣ

Sarvagna Murthy, ಸರ್ವಜ್ಞಮೂರ್ತಿ, ಕನ್ನಡರತ್ನ.ಕಾಂ ಚಿತ್ರಚೆನ್ನೈ, ಆ.13:  ತಮಿಳುನಾಡಿನ ರಾಜಧಾನಿ ಚೆನ್ನೈನ ಅಯನಾವರಂನ ಜೀವಾ ಉದ್ಯಾನವನದಲ್ಲಿಂದು ಕನ್ನಡದ ಶ್ರೇಷ್ಠ ಕವಿ, ತ್ರಿಪದಿಗಳ ತ್ರಿವಿಕ್ರಮ ಸರ್ವಜ್ಞಮೂರ್ತಿಯ ಪುತ್ಥಳಿಯ ಅನಾವರಣ ವಿಧ್ಯುಕ್ತವಾಗಿ ಜರುಗಿತು.

ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರ ಅಧ್ಯಕ್ಷತೆಯಲ್ಲಿ ಚೆನ್ನೈನ ರೈಲ್ವೆ ರಕ್ಷಣಾ ಸಮಿತಿಯ ಕವಾಯತು ಮೈದಾನದಲ್ಲಿ ನಡೆದ ಸಮಾರಂಭ ಸ್ಥಳದಿಂದಲೇ  ರಿಮೋಟ್ ಮೂಲಕ  ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ಪ್ರತಿಮೆಯ ಅನಾವರಣ ನೆರವೇರಿಸಿದರು.

ಕೃಷ್ಣ ಜನ್ಮಾಷ್ಟಮಿಯ ಶುಭ ದಿನದಂದು 6 ಕೋಟಿ ಕನ್ನಡಿಗರ ಕಾಮನೆ ಈಡೇರಿದೆ. ತಮಿಳುನಾಡು ರಾಜಧಾನಿಯಲ್ಲಿ  ಸರ್ವಜ್ಞರ ಮೂರ್ತಿ ಅನಾವರಣಗೊಂಡು ಹೊಸ ಅಧ್ಯಾಯನಕ್ಕೆ ನಾಂದಿ ಹಾಡಿದೆ ಎಂದು ಯಡಿಯೂರಪ್ಪ ಅಭಿಪ್ರಾಯಪಟ್ಟರು.

ಎರಡೂ ರಾಜ್ಯಗಳ ಜನರ ಭಾಷೆ ಎರಡಾದರೂ ಭಾವನೆ ಒಂದು, ನಾವೆಲ್ಲರೂ ಭಾರತೀಯರು ಎಂಬ ಸಾಮರಸ್ಯದ ಸಾಮಗಾನ ಹಾಡಲು ಇದು ಸುಸಂದರ್ಭ ಎಂದರು. ಸೌಹಾರ್ದ ಸೇತುವೆ ಸದೃಢಗೊಳ್ಳಲು ವಿಶ್ವಮಾನವರಾದ ಇಬ್ಬರು ದಾರ್ಶನಿಕರ ಪ್ರತಿಮೆಯ ಅನಾವರಣ ಪ್ರೇರಕವಾಗಿದೆ ಎಂದರು.

ಸಂಘರ್ಷದ ಬದಲು, ಸ್ನೇಹ ವಿಶ್ವಾಸದ ಚರ್ಚೆಯ ಮೂಲಕ ವಿವೇಕ ಮಾರ್ಗದಲ್ಲಿ ಎಲ್ಲ ಕ್ಲಿಷ್ಟಕರ ಸಮಸ್ಯೆ ಬಗೆಹರಿಸಿಕೊಳ್ಳಲು ಸಾಧ್ಯ ಎಂಬುದಕ್ಕೆ ಈ ಸಮಾರಂಭ ಸಾಕ್ಷಿಯಾಗಿದೆ. ಇದೊಂದು ಐತಿಹಾಸಿಕ ಘಟನೆ ಎಂದು ಬಣ್ಣಿಸಿದರು.

ಕನ್ನಡಿಗರು ಮತ್ತು ತಮಿಳು ಜನರು ಸೋದರ ಸೋದರಿಯರಂತೆ ಬಾಳಲು ಸಿದ್ಧರಿದ್ದೇವೆ ಎಂದು ಈ ಸಮಾರಂಭ ಸಾರಿದೆ ಎಂದ ಅವರು, ಇರುವುದೊಂದೇ ಭೂಮಿ, ಕುಡಿವುದೊಂದೇ ನೀರು, ಸುಡುವಗ್ನಿ ತಾನೊಂದೇ ಇರಲು ಕುಲ ಗೋತ್ರ ಎತ್ತಣದು ಸರ್ವಜ್ಞ ಎಂದ ಕವಿ ಜಾತಿ ಮತ ಭಾಷೆ ಎಲ್ಲವನ್ನೂ ಮೀರಿದ ಮಹಾನ್ ಪುರುಷ ಎಂದರು.

ಕರುಣಾನಿಧಿ ಮಾತನಾಡಿ,  ತಮಿಳುನಾಡಿನಲ್ಲಿ ಕನ್ನಡದ ಮಕ್ಕಳಿಗೆ ಕನ್ನಡವನ್ನು ಶಾಲೆಯಲ್ಲಿ ಕಲಿಯಲು ಅವಕಾಶ ಕಲ್ಪಿಸಲಾಗಿದೆ. ಕನ್ನಡಿಗರು ಆಚರಿಸುವ ಯುಗಾದಿಯ ದಿನದಂದು ಹಾಗೂ ಕೇರಳದವರು ಆಚರಿಸುವ ಓಣಂ ಹಬ್ಬದ ದಿನ ರಜೆ ನೀಡಲಾಗಿದೆ. ಎಲ್ಲ ಭಾಷಿಕರ, ಜನರ ಭಾವನೆಗಳಿಗೆ ಸೂಕ್ತ ಮನ್ನಣೆ ನೀಡಲಾಗಿದೆ ಎಂದರು.

ಕರ್ನಾಟಕ ತಮಿಳುನಾಡು ನಡುವೆ ಯಾವುದೇ ರೀತಿಯ ಸಮಸ್ಯೆ ಎದುರಾದರೂ ನಾವು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುತ್ತೇವೆಂಬ ಭರವಸೆ ತಮಗಿದೆ ಎಂದರು. ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ತಿರುವಾರೂರು ರಥದ ಮಾದರಿಯನ್ನು ನೆನಪಿನ ಕಾಣಿಕೆಯಾಗಿ ನೀಡಿ ಗೌರವಿಸಿದರು. ಸಮಾರಂಭದಲ್ಲಿ ಸುಂದರ ಸರ್ವಜ್ಞ ಪ್ರತಿಮೆ ನಿರ್ಮಿಸಿದ ಶಿಲ್ಪಿ ಪ್ರಮೋದಿನಿ ದೇಶಪಾಂಡೆ ಅವರಿಗೆ ಸುವರ್ಣ ಹಾರ ನೀಡಿ ಗೌರವಿಸಲಾಯಿತು.

ಸಚಿವರುಗಳಾದ ವಿ.ಎಸ್. ಆಚಾರ್ಯ, ಕರುಣಾಕರರೆಡ್ಡಿ, ಈಶ್ವರಪ್ಪ, ಆರ್. ಅಶೋಕ್,  ರಾಮಚಂದ್ರಗೌಡ, ಬಿ.ಎನ್.ಬಚ್ಚೇಗೌಡ, ಸುರೇಶ್ ಕುಮಾರ್,  ಸಂಸದರಾದ ಡಿ.ಬಿ. ಚಂದ್ರೇಗೌಡ, ಅನಂತಕುಮಾರ್, ನಟ ರಜನಿಕಾಂತ್, ಕಮಲಾಹಾಸನ್ , ಕರ್ನಾಟಕದಿಂದ ಹೋಗಿದ್ದ ಸಾಹಿತಿಗಳು, ಕಲಾವಿದರು, ಚಿತ್ರರಂಗದ ಗಣ್ಯರು ಹಾಜರಿದ್ದರು.

ಇದೇ ಸಂದರ್ಭದಲ್ಲಿ ತಮಿಳುನಾಡಿನ ಕನ್ನಡಸಂಘದ ವತಿಯಿಂದ ಇದೇ ಸಂದರ್ಭದಲ್ಲಿ  ಎರಡೂ ರಾಜ್ಯಗಳ ಮುಖ್ಯಮಂತ್ರಿಗಳಾದ ಎಂ.ಕರುಣಾನಿಧಿ ಹಾಗೂ ಯಡಿಯೂರಪ್ಪ ಅವರನ್ನು ಸನ್ಮಾನಿಸಲಾಯಿತು.

ಸಮಾರಂಭಕ್ಕೆ ಹರಿದು ಬಂದ ಜನಸಾಗರ ಈ ಅಪೂರ್ವ ಕ್ಷಣವನ್ನು ಕಣ್ತುಂಬಿಕೊಂಡಿತು. ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಹೊರನಾಡ ಕನ್ನಡಿಗರು ತಮ್ಮ ಕೈಯಲ್ಲಿ ಕನ್ನಡಧ್ವಜ ಹಿಡಿದು ತಮ್ಮ ಅಭಿಮಾನ ಮೆರೆದರು.

 ಮುಖಪುಟ /ಸುದ್ದಿ ಸಮಾಚಾರ