ಮುಖಪುಟ /ಸುದ್ದಿ ಸಮಾಚಾರ   
 

ತಮಿಳುಕವಿ ತಿರುವಳ್ಳುವರ್ ಪ್ರತಿಮೆ ಅನಾವರಣ

Tiruvalluvar, ತಿರುವಳ್ಳುವರ್ ಪ್ರತಿಮೆ ಅನಾವರಣ, ಬೆಂಗಳೂರು, ಆಗಸ್ಟ್ 9 : 18 ವರ್ಷಗಳ ಬಳಿಕ ಬೆಂಗಳೂರಿನಲ್ಲಿ ತಮಿಳು ಕವಿ, ದಾರ್ಶನಿಕ ತಿರುವಳ್ಳುವರ್ ಪ್ರತಿಮೆಯ ವಿಧ್ಯುಕ್ತ ಅನಾವರಣ ನೆರವೇರಿತು. ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರು ಇಂದು ಹಲಸೂರಿನ ಆರ್.ಬಿ.ಎನ್.ಎಂ.ಎಸ್. ಮೈದಾನದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ರಿಮೋಟ್ ಮೂಲಕ ಸುವರ್ಣ ವರ್ಣದ ತಿರುವಳ್ಳುವರ್ ಕಂಚಿನ ಪ್ರತಿಮೆಯನ್ನು ಅನಾವರಣ ಮಾಡಿದರು.

ನಂತರ ಮಾತನಾಡಿದ ಅವರು, ಕರ್ನಾಟಕದಲ್ಲಿ ತಿರುವಳ್ಳುವರ್ ಪ್ರತಿಮೆ, ತಮಿಳುನಾಡಿನಲ್ಲಿ ಸರ್ವಜ್ಞಮೂರ್ತಿಯ ಪ್ರತಿಮೆ ಅನಾವರಣಗೊಂಡರೆ ಸಾಲದು ಎರಡೂ ರಾಜ್ಯಗಳ ಜನರ ಮನಸುಗಳು ಬೆಸೆಯಬೇಕು ಎಂದರು. ಸರ್ವಜ್ಞ ಹಾಗೂ ತಿರುವಳ್ಳುವರ್ ಯಾವುದೇ ಒಂದು ಭಾಷೆ, ಧರ್ಮ ಅಥವಾ ರಾಜ್ಯಕ್ಕೆ ಸೀಮಿತವಾದವರಲ್ಲ ಎಂದು ಅಭಿಪ್ರಾಯಪಟ್ಟರು. ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆ ಅನಾವರಣ ಆಗುವತನಕ ಕರ್ನಾಟಕದಲ್ಲಿ ಯಾವುದೇ ಸಾರ್ವಜನಿಕ ಸಮಾರಂಭದಲ್ಲಿ ಪಾಲ್ಗೊಳ್ಳದಿರಲು ತಾವು ಮಾಡಿದ್ದ ಶಪಥ ಈಡೇರಿದೆ ಎಂದರು.

ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಅವರಿಗೆ ನೆನಪಿನ ಕಾಣಿಕೆ ನೀಡಿ ಸತ್ಕರಿಸಿದ ಮುಖ್ಯಮಂತ್ರಿ ಯಡಿಯೂರಪ್ಪಮುಖ್ಯಮಂತ್ರಿ ಯಡಿಯೂರಪ್ಪ ಮಾತನಾಡಿ, ನೆರೆ ರಾಜ್ಯಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಲು ಸರ್ಕಾರ ಬಯಸುತ್ತದೆ, ಆದರೆ, ಕನ್ನಡ ನಾಡು, ನುಡಿ, ಜಲದ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಎಂದು ಸ್ಪಷ್ಟಪಡಿಸಿದರು. ಕರುಣಾನಿಧಿ ಅವರಿಗೆ ಸ್ಮರಣಿಕೆ ನೀಡಿ ಶಾಲು ಹೊದಿಸಿ ಅಭಿನಂದಿಸಿದರು.

ಕರ್ನಾಟಕ ಹಾಗೂ ತಮಿಳುನಾಡು ನಡುವೆ ಹತ್ತಿರ ಹತ್ತಿರ ಎರಡು ದಶಕಗಳಿಂದ ಉಲ್ಭಣಿಸುತ್ತಿರುವ ಸಂಘರ್ಷಗಳಿಗೆ ತೆರೆ ಎಳೆಯುವ ನಿಟ್ಟಿನಲ್ಲಿ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ಸಮನ್ವಯದ ಹಾದಿ ಹಿಡಿದಿದ್ದು, ಇದರ ಮೊದಲ ಹೆಜ್ಜೆಯಾಗಿ ಇಂದು ರಾಜ್ಯದ ರಾಜಧಾನಿಯಲ್ಲಿ ತಿರುವಳ್ಳುವರ್ ಪ್ರತಿಮೆಯ ಅನಾವರಣ ನೆರವೇರಿತು.

ಇದಕ್ಕೆ ಪ್ರತಿಯಾಗಿ ಇದೇ 13ರಂದು ಚೆನ್ನೈನ ಅಯನಾವರಂನಲ್ಲಿ ಕನ್ನಡದ ಕವಿ ಸರ್ವಜ್ಞನ ಪ್ರತಿಮೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ನೆರವೇರಿಸಲಿದ್ದು, ಸಿದ್ಧತೆಗಳು ಭರದಿಂದ ಸಾಗಿವೆ.

 ಮುಖಪುಟ /ಸುದ್ದಿ ಸಮಾಚಾರ