ಮುಖಪುಟ /ಸುದ್ದಿ ಸಮಾಚಾರ   
 

ಮಾರುಕಟ್ಟೆಗೆ ಬಂದ ಮಣ್ಣಿನ ಗಣಪ
ಈ ಬಾರಿ ಆಗಸ್ಟ್ 23ರಂದು ಭಾದ್ರಪದ ಶುದ್ಧ ಚೌತಿ. ಅಂದು ಗಣೇಶ ಚತುರ್ಥಿ.
ವರಸಿದ್ಧಿ ವಿನಾಯಕನ ವ್ರತ.. ಕೋರೋಣ ಗಣಪಗೆ ಸ್ವಾಗತ...

Ganesha, Lord Ganapa, ಗಣೇಶ ಚತುರ್ಥಿ, ಗಣೇಶನ ಹಬ್ಬ.ಬೆಂಗಳೂರು, ಆಗಸ್ಟ್ 9: ಭಾದ್ರಪದ ಚೌತಿಯ ದಿನ  ಪೂಜೆಗೊಳ್ಳುವ ಮಣ್ಣಿನ ಗಣಪ ಬೆಂಗಳೂರು ಮಾರುಕಟ್ಟೆಗೆ ಬರುತ್ತಿದ್ದಾನೆ. ಲಾಲ್‌ಬಾಗ್ ರಸ್ತೆಯ ಗಣಪನ ಮಾರುಕಟ್ಟೆ, ಯಶವಂತಪುರ ಮಾರ್ಕೆಟ್, ಜಯಚಾಮರಾಜೇಂದ್ರ ಮಾರುಕಟ್ಟೆ, ಮಲ್ಲೇಶ್ವರ ಮಾರುಕಟ್ಟೆಯಲ್ಲಿ ಈಗಾಗಲೇ ಗಣೇಶನ ಮಣ್ಣಿನ ವಿಗ್ರಹಗಳು ಸಹಸ್ರ ಸಂಖ್ಯೆಯಲ್ಲಿ ಆಗಮಿಸಿವೆ.

ರಾಜ್ಯದ 81 ತಾಲೂಕುಗಳಲ್ಲಿ ಈ ಬಾರಿ ಮಳೆಯ ಅಭಾವವಿದ್ದಾಗ್ಯೂ, ಉಳಿದ ಭಾಗಗಳಲ್ಲಿ ಉತ್ತಮ ಮಳೆಯಾಗಿದ್ದು ಬರಲಿರುವ ಗೌರಿ -ಗಣೇಶನ ಹಬ್ಬದ ಉತ್ಸಾಹ ಜನರಲ್ಲಿ ಕಾಣಬರುತ್ತಿದೆ.

ಈ ವರ್ಷ ಆಗಸ್ಟ್ 23ರ ಬುಧವಾರ ಭಾದ್ರಪದ ಶುದ್ಧ ಚೌತಿ - ಅಂದು ಗಣೇಶ ಚತುರ್ಥಿ, ವರಸಿದ್ಧಿವಿನಾಯಕ ವ್ರತ. ಗಣೇಶನ ಸ್ವಾಗತಿಸಲು ಆಗಲೇ ಮಕ್ಕಳು ಪುಟ್ಟದೊಂದು ಕಾಣಿಕೆ ಡಬ್ಬಿ ಹಿಡಿದು ರಸ್ತೆಗಳಲ್ಲಿ ಕುಲುಕುತ್ತಿದ್ದಾರೆ. ಮಣ್ಣಿನ ಗೌರಿ- ಗಣಪನ ಮಾರುವ ವ್ಯಾಪಾರಿಗಳು ತಮ್ಮ ವಿಗ್ರಹಗಳಿಗೆ ಬಣ್ಣ ಹಚ್ಚಿ ಅಂತಿಮ ರೂಪ ನೀಡುವ ಕಾಯಕದಲ್ಲಿ ನಿರತರಾಗಿದ್ದಾರೆ.

ಮೈದಾನ, ಬೀದಿಗಳಲ್ಲಿ ಗಣೇಶೋತ್ಸವಗಳನ್ನು ಆಚರಿಸುವ ಸಂಘ ಸಂಸ್ಥೆಗಳು, ಬಿಲ್ ಬುಕ್ ಪ್ರಿಂಟ್ ಮಾಡಿಸಿ, ಹಣ ಸಂಗ್ರಹ ಕಾರ್ಯದಲ್ಲಿ ನಿರತರಾಗಿದ್ದಾರೆ. ದೊಡ್ಡ ಗಾತ್ರದ ದೊಳ್ಳುಹೊಟ್ಟೆ ಗಣಪನ ವಿಗ್ರಹಕ್ಕೆ ಅಡ್ವಾನ್ಸೂ ಕೊಟ್ಟಿದ್ದಾರೆ. ಪ್ರತಿವರ್ಷದಂತೆ ಕಾಯಿ -ಕಡುಬು ತಿನ್ನಲು ಗಣಪ ಬಂದೇ ಬರುತ್ತಾನೆ. ಚಿಕ್ಕ ಕೆರೆಯಲ್ಲಿ ಬಿದ್ದು ದೊಡ್ಡ ಕೆರೆಯಲ್ಲಿ ಎದ್ದೇ ಏಳುತ್ತಾನೆ. ಈ ಬಾರಿ ತಿಂಗಳಿಗೆ ಮೊದಲೇ ಗಣಪ ಎದ್ದು ಕುಳಿತಿದ್ದಾನೆ. ಮಣ್ಣಿನ ಗಣಪನ ಮಾಡುವ - ಮಾರುವ ವ್ಯಾಪಾರಿಗಳು ಪ್ರತಿವರ್ಷ ಗಣಪನಿಗೆ ವಿವಿಧ ರೂಪ ನೀಡುತ್ತಾರೆ.

ಪಂಚಮುಖಿ, ಅಷ್ಟಮುಖಿ, ಮಯೂರಾರೂಢ, ಮೂಷಿಕವಾಹನ, ಸಿಂಹವಾಹನ, ವೃಷಭವಾಹನ.... ಹೀಗೆ ನಾನಾ ಬಗೆಯ ಗಣಪ ಸಿದ್ಧಗೊಂಡಿವೆ. ಆರ್ಕೆಸ್ಟ್ರಾ ತಂಡಗಳು ಪತ್ರಿಕೆಗಳಲ್ಲಿ ಪುಟ್ಟ ಜಾಹೀರಾತು ನೀಡಿ, ಗಣೇಶೋತ್ಸವ ಸಮಿತಿಗಳ ಗಮನ ಸೆಳೆಯುವ ಕಾಯಕದಲ್ಲಿ ತೊಡಗಿವೆ. ವ್ಯಾಪಾರಿಗಳು ಹೀಗೆ ತಮ್ಮ ವ್ಯಾಪಾರತಂತ್ರ ರೂಪಿಸುತ್ತಿದ್ದರೆ, ಇದಾವುದರ ಪರಿವೆಯೂ ಇಲ್ಲದೆ. ವಯಸ್ಸಾದ ಅಜ್ಜಿಯರು ಮನೆಯಲ್ಲಿ ಮಡಿಯಿಂದ 16 ಎಳೆ,  16 ಹಿಡಿ ಹಾಗೂ 21 ಎಳೆ, 21 ಹಿಡಿ ಗೆಜ್ಜೆವಸ್ತ್ರಗಳ ತಯಾರಿಯಲ್ಲಿ ನಿರತರಾಗಿದ್ದಾರೆ. ಮಹಿಳೆಯರು ಚತುರ್ಥಿಯ ಗಣಪನ ನೈವೇಧ್ಯಕ್ಕೆ ಬೇಕಾದ ಕಡುಬು, ಚಕ್ಕುಲಿ, ಮುಚ್ಚೋರೆ... ಮೊದಲಾದ ಖಾದ್ಯ ಮಾಡಲು, ಸಾಮಾನಿನ ಪಟ್ಟಿ ಸಿದ್ಧಪಡಿಸುತ್ತಿದ್ದಾರೆ.

ಬಿದಿರು ವ್ಯಾಪಾರಿಗಳು ಗೌರಮ್ಮನ ಹಬ್ಬಕ್ಕೆ ಮೊರಗಳ ತಯಾರಿಯಲ್ಲಿ ನಿರತರಾಗಿದ್ದಾರೆ. ಗ್ರಂಧಿಗೆ ಅಂಗಡಿಯ ಮಂದಿ, ರೆಡಿಮೇಡ್ ಗೆಜ್ಜೆವಸ್ತ್ರಗಳಿಗೆ ಆರ್ಡರ್ ಕೊಟ್ಟಿದ್ದಾರೆ. ಸೀರೆ ಅಂಗಡಿಗಳ ಮುಂದೆ ಈಗಾಗಲೇ ಡಿಸ್ಕೌಂಟ್ ಬೋರ್ಡ್‌ಗಳು ಕಾಣಬರುತ್ತಿವೆ. ಗಣಪನ ಹಬ್ಬಕ್ಕೆ ಲಾಟರಿ ಸ್ಕೀಮ್‌ಗಳೂ ಆರಂಭಗೊಂಡಿವೆ.

ಈ ಬಾರಿ ಗೌರಿ ಹಬ್ಬವೂ ಆಗಸ್ಟ್ 23ರಂದೇ ಬಂದಿದ್ದು, ತಾಯಿ ಮಗನ ಸ್ವಾಗತಕ್ಕೆ ಭಕ್ತರು ಸಜ್ಜಾಗುತ್ತಿದ್ದಾರೆ.

 ಮುಖಪುಟ /ಸುದ್ದಿ ಸಮಾಚಾರ