ಮುಖಪುಟ /ಸುದ್ದಿ ಸಮಾಚಾರ 

ಕರ್ನಾಟಕ ಬಂದ್ ಯಶಸ್ವಿ ಕನ್ನಡಿಗರಿಗೆ ವಾಟಾಳ್ ಅಭಿನಂದನೆ

ಬೆಂಗಳೂರು, ಏ.18  ತಮಿಳುನಾಡಿನ ಖ್ಯಾತೆಗೆ ತಕ್ಕ ಉತ್ತರ ನೀಡಿದ್ದಾರ ಎಂದು ಕನ್ನಡ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ಹೇಳಿದ್ದಾರೆ.

ಬೆಂಗಳೂರನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಂದ್‌ಗೆ ಸ್ವಯಂ ಪ್ರೇರಿತವಾಗಿ ಬೆಂಬಲ ನೀಡಿದ ೨ ಸಾವಿರಕ್ಕೂ ಹೆಚ್ಚು ಸಂಘಟನೆಗಳಿಗೆ ಹಾಗೂ ರಾಜ್ಯದ ಜನತೆಗೆ ಅತ್ಯಂತ ಪ್ರೀತಿ ವಿಶ್ವಾಸದಿಂದ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.

ತಮಿಳುನಾಡು ಸರ್ಕಾರ ವಿನಾ ಕಾರಣ ನಮ್ಮ ಮೇಲೆ ದಾಳಿ ಮಾಡಿದೆ. ಮೇಕೆದಾಟಿಗೆ ವಿರೋಧ ಮಾಡುವ ಕಾರಣವೇ ಇಲ್ಲ. ಇದು ಕನ್ನಡಿಗರ ಸಹನೆಯ ಮೇಲಿನ ದಾಳಿ ಎಂದು ತಾವು ವ್ಯಾಖ್ಯಾನಿಸುವುದಾಗಿ ಹೇಳಿದರು.

ಕರ್ನಾಟಕ ಸರ್ಕಾರ ಕುಡಿಯುವ ನೀರಿನ ಉದ್ದೇಶಕ್ಕೆ ಮೇಕೆದಾಟುವಿನಲ್ಲಿ ಅಣೆಕಟ್ಟೆ ನಿರ್ಮಿಸಲು ಮುಂದಾಗುತ್ತಿದ್ದಂತೆ ತಮಿಳುನಾಡು ಅನಗತ್ಯವಾಗಿ ತಂಟೆ ತೆಗೆದು, ಬಂದ್ ಮಾಡಿದ ಕಾರಣ ಕರ್ನಾಟಕದ ಜನ ಕೂಡ ಪ್ರತಿಬಂದ್ ಮಾಡಿದ್ದಾರೆ ಎಂದು ವಿವರಿಸಿದರು.

ರಾಜ್ಯ ಸರ್ಕಾರ ೩೦ ದಿನಗಳ ಒಳಗಾಗಿ ಕುಡಿಯುವ ನೀರಿನ ಯೋಜನೆಗೆ  ಶಂಕುಸ್ಥಾಪನೆ ಮಾಡಬೇಕು ಎಂದು ವಾಟಾಳ್ ನಾಗರಾಜ್ ಒತ್ತಾಸಿದರು.

ಈ ಬಂದ್ ಕರ್ನಾಟಕ ಸರ್ಕಾರದ ಅಥವಾ ನಮ್ಮ ಮುಖ್ಯಮಂತ್ರಿ ವಿರುದ್ಧ ಅಲ್ಲ. ಇದು ತಮಿಳುನಾಡಿನ ವಿರುದ್ಧ ಹಾಗೂ ತ"ಳುನಾಡು ಒತ್ತಡಕ್ಕೆ ಮಣಿಯದಂತೆ ಕೇಂದ್ರ ಸರ್ಕಾರಕ್ಕೆ ನೀಡಿದ ಎಚ್ಚರಿಕೆ ಎಂದು ತಿಳಿಸಿದರು.

ಇದು ಕೇವಲ ಮೈಸೂರು ಭಾಗದ ಪ್ರಶ್ನೆಯಲ್ಲ. ಇಡೀ ಅಖಂಡ ಕರ್ನಾಟಕದ ಪ್ರಶ್ನೆ ನಮ್ಮ ಜಲ, ನೆಲದ ಪ್ರಶ್ನೆ ಎಂದ ಅವರು, ರಾಜ್ಯ ಸರ್ಕಾರ ಕಳಸ ಬಂಡೂರಿ ನಾಲಾ ಯೋಜನೆ ಜಾರಿಗೊಳಿಸಬೇಕು, ಹೈದ್ರಾಬಾದ್ ಕರ್ನಾಟಕ, ಬೆಳಗಾವಿ, ಕೊಡಗು ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು, ಕೃಷ್ಣ ಕೊಳ್ಳದ ನೀರಾವರಿ ಯೋಜನೆಗಳಿಗೆ ಪ್ರತಿ ವರ್ಷ ೧೦ಸಾವಿರ ಕೋಟಿ ರೂಪಾ ನೀಡಲೇಬೇಕು ಎಂದು ಒತ್ತಾಯಿಸಿ ಹೋರಾಟ ಮಾಡುವುದಾಗಿಯೂ ಹೇಳಿದರು. 

ಮುಖಪುಟ /ಸುದ್ದಿ ಸಮಾಚಾರ