ಮುಖಪುಟ /ಸುದ್ದಿ ಸಮಾಚಾರ 

ವಿಮಾನ ನಿಲ್ದಾಣಕ್ಕೂ ತಟ್ಟಿದ ಬಂದ್ ಬಿಸಿ

ಬೆಂಗಳೂರು, ಏ.18 ರಾಜ್ಯದ ರಾಜಧಾನಿ ಬೆಂಗಳೂರಿಗೆ ಕರ್ನಾಟಕ ಬಂದ್ ಬಿಸಿ ಬಲವಾಗಿಯೇ ತಟ್ಟಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಇಂದು ಬೆಳಗ್ಗೆಂದಲೇ ಬಿ.ಎಂ.ಟಿ.ಸಿ. ಬಸ್ ಸಂಚಾರ ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ಸದಾ ಜನರಿಂದ ತುಂಬಿ ತುಳುಕುವ ಕೆಂಪೇಗೌಡ ಬಸ್ ನಿಲ್ದಾಣ, ಶಾಂತಿನಗರ, ಶಿವಾಜಿನಗರ ಬಸ್ ನಿಲ್ದಾಣಗಳು ಬಿಕೋ ಎನ್ನುತ್ತಿದ್ದವು.

ಅಲ್ಲದೆ ಸದಾ ಜನರಿಂದ ಗಿಜಿಗುಡುವ ಮಹಾತ್ಮಾಗಾಂಧಿ ರಸ್ತೆ, ಕೃಷ್ಣರಾಜ ಮಾರುಕಟ್ಟೆ, ಗಾಂಧಿನಗರ ಪ್ರದೇಶ ನಿರ್ಜನವಾಗಿತ್ತು. ಬಂದ್‌ಗೆ ಚಲನಚಿತ್ರ ರಂಗ ಕೂಡ ಬೆಂಬಲ ಸೂಚಿಸಿರುವ ಹಿನ್ನೆಲೆಯಲ್ಲಿ ನಗರದ ಎಲ್ಲ ಚಿತ್ರ ಮಂದಿರಗಳಲ್ಲಿ ಪ್ರದರ್ಶನ ರದ್ದುಗೊಳಿಸಲಾಗಿತ್ತು.

ಪೆಟ್ರೋಲ್ ಬಂಕ್, ಹೊಟೆಲ್, ರೆಸ್ಟೋರೆಂಟ್, ಮಾಲ್‌ಗಳು ಸಹ ಮುಚ್ಚಿದ್ದರೆ ಆಟೋರಿಕ್ಷಾಗಳ ಸಂಚಾರ ಸಂಪೂರ್ಣ ಸ್ಥಗಿತವಾಗಿತ್ತು. ಸರ್ಕಾರಿ ಕಚೇರಿಗಳಲ್ಲಿ ಹಾಜರಾತಿ ವಿರಳವಾಗಿತ್ತು.

ಈ ಮಧ್ಯೆ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಬೆಂಗಳೂರಿನ ಕಾವೇರಿ ಭವನ ಬಳಿ ಹಾಗೂ ಮತ್ತಿತರ ಕಡೆಗಳಲ್ಲಿ ಉರುಳು ಸೇವೆ ಮಾಡಿ ತಮಿಳುನಾಡು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. 
ಈ ಮಧ್ಯೆ ಬಂದ್ ಬಿಸಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ತಟ್ಟಿತು. ದೇಶದ ವಿವಿಧ ನಗರಗಳಿಂದ ಹಾಗೂ ವಿದೇಶಗಳಿಂದ ಬೆಂಗಳೂರಿಗೆ ಬಂದ ಹಾಗೂ ಬೆಂಗಳೂರಿನಿಂದ ಬೇರೆ ಊರುಗಳಿಗೆ ತೆರಳಬೇಕಿದ್ದ ಪ್ರಯಾಣಿಕರು ಸಂಪರ್ಕ ಸಂಚಾರ ಸೇವೆ ಇಲ್ಲದೆ ಪರದಾಡಿದರು.

ಬೆಂಗಳೂರಿನಿಂದ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ವಾಯುವಜ್ರ ಸೇವೆ ಜತೆಗೆ ಕ್ಯಾಬ್ ಗಳ ಸಂಚಾರವೂ ಸ್ಥಗಿತಗೊಂಡ ಕಾರಣ ಜನರು ತೊಂದರೆ ಅನುಭವಿಸಿದರು. ವಿಮಾನ ನಿಲ್ದಾಣದಲ್ಲಿ ಬಂದಿಳಿದ ಪ್ರಯಾಣಿಕರು ಬಂಧುಗಳನ್ನು ಕರೆದೊಯ್ಯಲು ಹಾಗೂ ಬಿಡಲು ಬಂದಿದ್ದ ಖಾಸಗಿ ವಾಹನ ಮಾಲೀಕರು ಮತ್ತು ಚಾಲಕರ ಬಳಿ ಲಿಫ್ಟ್ ಕೇಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

.ಮುಖಪುಟ /ಸುದ್ದಿ ಸಮಾಚಾರ