ಮುಖಪುಟ /ಸುದ್ದಿ ಸಮಾಚಾರ

ಬಾಂಬ್ ನಿಷ್ಕ್ರಿಯಗೊಳಿಸಿದ ಬಿ.ಎಸ್.ಯಡಿಯೂರಪ್ಪ

Advaniಬೆಂಗಳೂರು, ಏ.೨೨: ಬಿಜೆಪಿ ರಾಷ್ಟ್ರೀಯ ನಾಯಕ ಎಲ್.ಕೆ. ಆಡ್ವಾಣಿ ಬಜೆಪಿ ಆಡಳಿತ ಇರುವ ರಾಜ್ಯಗಳ ಮುಖ್ಯಮಂತ್ರಿಗಳಿಂದ ಬಲವಂತವಾಗಿ ಹಣ ವಸೂಲಿ ಮಾಡುತ್ತಾರೆ ಎಂದು ಧನಂಜಯಕುಮಾರ್ ಸಿಡಿಸಿದ ಬಾಂಬ್ ಅನ್ನು ಕೆಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನಿಷ್ಕ್ರಿಯಗೊಳಿಸಿದ್ದಾರೆ.

ಅಡ್ವಾಣಿ ಅವರ ಕುಟುಂಬದವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನೂ ಹೆದರಿಸಿ,  ಅಧಿಕಾರದಲ್ಲಿ ಮುಂದುವರಿಸಲು ಹಣ ಸುಲಿಗೆ ಮಾಡಿದ್ದರು ಎಂದು ಬಾಂಬ್ ಸಿಡಿಸಿ ದೊಡ್ಡ ಸುದ್ದಿ ಮಾಡಿದ್ದರು. ಇದಕ್ಕೆ ಉತ್ತರ ಕರ್ನಾಟಕ ಪ್ರವಾಸದಲ್ಲಿರುವ ಬಿ.ಎಸ್.ವೈ. ಪ್ರತಿಕ್ರಿಯೆ ನೀಡಿ ಅಡ್ವಾಣಿ ಕುಟುಂಬದ ನಡುವೆ ತಮ್ಮ ಹಣಕಾಸಿನ ವ್ಯವಹಾರವೇನೂ ಇಲ್ಲ. ಅಡ್ವಾಣಿ ವಿಚಾರವೇ ಬೇರೆ, ಅವರ ಮಕ್ಕಳ ವಿಚಾರವೇ ಬೇರೆ ಎಂದು ಹೇಳಿ ತೀವ್ರತೆಯನ್ನು ತಣ್ಣಗೆ ಮಾಡಿದ್ದಾರೆ.

ಈ ಮಧ್ಯೆ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಧನಂಜಯ ಕುಮಾರ್ ಬಿಜೆಪಿ ರಾಷ್ಟ್ರೀಯ ನಾಯಕ ಎಲ್.ಕೆ. ಅಡ್ವಾಣಿ ಅವರ ವಿರುದ್ಧ ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಅದು ಆಧಾರ ರಹಿತವಾದದ್ದು ಎಂದು ಹೇಳಿದ್ದಾರೆ.

ಕೊಪ್ಪಳದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂಥ ಕಪೋಲ ಕಲ್ಪಿತ ಆರೋಪಗಳಿಗೆ ಪ್ರತಿಕ್ರಿಯೆ ನೀಡುವ ಅಗತ್ಯವೇ ಇಲ್ಲ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ಪ್ರಲ್ಹಾದ ಜೋಶಿ ಶಿವಮೊಗ್ಗದಲ್ಲಿ ಪ್ರತಿಕ್ರಿಯೆ ನೀಡಿ, ಅಡ್ವಾಣಿ ಒಬ್ಬ ರಾಜಕೀಯ ಸಂತ. ಅವರ ಬಗ್ಗೆ ಹೀಗೆ ಮಿತ್ಯಾರೋಪ ಮಾಡುವುದು ಸರಿಯಲ್ಲ. ಅವರ ಈ ಹೇಳಿಕೆ ಆಕಾಶಕ್ಕೆ ಉಗುಳಿದಂತೆ ಎಂದರು.

ಆಡ್ವಾಣಿ ಅವರ ಬಗ್ಗೆ ಹಗುರವಾಗಿ ಮಾತನಾಡುವುದು ತರವಲ್ಲ. ಅಂಥ ಮೇರು ವ್ಯಕ್ತಿಯ ಮೇಲೆ  ಆರೋಪ ಮಾಡುವ ಮೊದಲು ಯೋಚನೆ ಮಾಡಬೇಕು ಎಂದರು.

ಯಾವ ವ್ಯಕ್ತಿ ಆರೋಪ ಮಾಡಿದ್ದಾರೆ ಎಂಬುದರ ಮೇಲೆ ಪ್ರತಿಕ್ರಿಯೆ ನೀಡಬೇಕಾಗುತ್ತದೆ. ಅಡ್ವಾಣಿ ಅವರ ಸಚಿವ ಸಂಪುಟದಿಂದ ಹೊರಬಿದ್ದವರು ಈಗ ಈ ರೀತಿ ಹೇಳಿಕೆ ನೀಡಿದರೆ ಅರ್ಥವಿಲ್ಲ. ಇದೆಲ್ಲವೂ ಚುನಾವಣಾ ಸಂದರ್ಭದಲ್ಲಿ ಮಾಡುವ ಮಿಥ್ಯಾರೋಪ ಎಂದರು.

ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಧನಂಜಯ ಕುಮಾರ್ ಹೇಳಿಕೆಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಚುನಾವಣೆ ಸಂದರ್ಭದಲ್ಲಿ ಹೀಗೆ ಸುಳ್ಳು ಆರೋಪ ಮಾಡಿ ಜನರಲ್ಲಿ ಗೊಂದಲ ಮೂಡಿಸುವ ಬದಲು ದಾಖಲೆ ಬಹಿರಂಗ ಮಾಡಲಿ ಎಂದು ಸವಾಲು ಹಾಕಿದರು.

ಧನಂಜಯ ಕುಮಾರ್ ತಮ್ಮ ಆರೋಪ ಸಾಬೀತುಪಡಿಸಿದರೆ, ರಾಜ್ಯ ಬಿಜೆಪಿ ಕಚೇರಿ ಬಾಗಿಲು ಹಾಕುವುದಾಗಿಯೂ ಹೇಳಿದರು.

ಮುಖಪುಟ /ಸುದ್ದಿ ಸಮಾಚಾರ