ಮುಖಪುಟ /ಸುದ್ದಿ ಸಮಾಚಾರ 

ಆಡ್ವಾಣಿಯೂ ಭ್ರಷ್ಟ - ಧನಂಜಯಕುಮಾರ್ ಹೊಸ ಬಾಂಬ್

Advaniಬೆಂಗಳೂರು, ಏ.೨೨: ಬಿಜೆಪಿ ರಾಷ್ಟ್ರೀಯ ನಾಯಕ ಎಲ್.ಕೆ. ಆಡ್ವಾಣಿ ಮತ್ತು ಅವರ ಮಕ್ಕಳು ಬಿಜೆಪಿ ಆಡಳಿತ ಇರುವ ಸರ್ಕಾರದ ಮುಖ್ಯಮಂತ್ರಿಗಳನ್ನು ಹೆದರಿಸಿ ಸೂಟ್‌ಕೇಸ್ ತುಂಬಿಕೊಂಡು ಹೋಗುತ್ತಾರೆ ಎಂದು ಕೆಜೆಪಿ ಪ್ರಚಾರ ಸಮಿತಿ ಅಧ್ಯಕ್ಷ ಧನಂಜಯಕುಮಾರ್ ಗುರುತರ ಆರೋಪ ಮಾಡಿದ್ದಾರೆ.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನೂ ಹೆದರಿಸಿ, ನೀವು ಅಧಿಕಾರದಲ್ಲಿ ಮುಂದುವರಿಯಬೇಕಾದರೆ ಇಂತಿಷ್ಟು ಹಣ ಕೊಡಿ ಎಂದು ಹೇಳಿ ಆಗಾಗ್ಗೆ ಹಣ ತುಂಬಿಕೊಂಡು ಹೋಗುತ್ತಿದ್ದರು ಎಂದು ಹೇಳುವ ಮೂಲಕ ಆಡ್ವಾಣಿ ಅವರೂ ಭ್ರಷ್ಟರು ಎಂದು ಹೇಳಿದ್ದಾರೆ.

ನನ್ನ ಆರೋಪಕ್ಕೆ ಆಡ್ವಾಣಿ ಪ್ರತಿಕ್ರಿಯೆ ನೀಡಲಿ, ಸೂಕ್ತ ಸಮಯದಲ್ಲಿ ಯಾರು ಯಾರು ಎಷ್ಟೆಷ್ಟು ಹಣ ತುಂಬಿಕೊಂಡು ಹೋಗಿದ್ದಾರೆ ಎಂಬ ವಿವರವನ್ನು ನೀಡಲಾಗುವುದು ಎಂದು ಹೇಳುವ ಮೂಲಕ ಧನಂಜಯಕುಮಾರ್ ಹೊಸ ಬಾಂಬ್ ಸಿಡಿಸಿದ್ದಾರೆ.

ರಾಜ್ಯದಲ್ಲಿ ಪ್ರಚಾರಕ್ಕೆ ಆಗಮಿಸಿದ ಆಡ್ವಾಣಿ ಯಡಿಯೂರಪ್ಪ ಅವರನ್ನು ಗುರಿಯಾಗಿಟ್ಟುಕೊಂಡು ಮಾತನಾಡಿದ್ದಾರೆ. ಭ್ರಷ್ಟಾಚಾರಿಗಳು ಈಗ ಪಕ್ಷದಲ್ಲಿ ಇಲ್ಲ ಎಂದು ಹೇಳಿದ್ದಾರೆ. ಆದರೆ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರ ಮನೆಯಲ್ಲಿ ನೋಟು ಏಣಿಸುವ ಯಂತ್ರ ಸಿಕ್ಕಿದೆ. ಲೋಕಾಯುಕ್ತ ದಾಳಿ ನಡೆದಿದೆ. ಪ್ರಕರಣ ದಾಖಲಾಗಿದೆ. ಇದು ಅಡ್ವಾಣಿ ಅವರಿಗೆ ಕಾಣುವುದಿಲ್ಲವೇ ಎಂದು ಪ್ರಶ್ನಿಸಿದರು.

ಮತ್ತೊಬ್ಬ ಉಪ ಮುಖ್ಯಮಂತ್ರಿ ಆರ್. ಅಶೋಕ್, ಮಾಜಿ ಮುಖ್ಯಮಂತ್ರಿ ಸದಾನಂದಗೌಡ, ಸಚಿವ ಸಿ.ಟಿ.ರವಿ ಲೋಕಾಯುಕ್ತ ಪ್ರಕರಣ ಎದುರಿಸುತ್ತಿದ್ದಾರೆ. ಇನ್ನು ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯನಾಯ್ಡು ಜೈಲಿಗೆ ಹೋಗಿ ಬಂದಿದ್ದಾರೆ. ಇವರು ಇವರ ಪಕ್ಷದಲ್ಲಿಲ್ಲವೇ ಎಂದು ಪ್ರಶ್ನಿಸಿದರು.

ಎಲ್ಲಕ್ಕಿಂತ ಮಿಗಿಲಾಗಿ ೧೨ ಸಾವಿರ ಕೋಟಿ ರೂಪಾಯಿ ಹುಡ್ಕೋ ಹಗರಣದಲ್ಲಿ ಭಾಗಿಯಾಗಿರುವ ಸಂಸದ ಅನಂತಕುಮಾರ್ ಅವರ ಹತ್ತಿರದಲ್ಲೇ ಇದ್ದಾರೆ. ಇನ್ನೂ ಈ ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿದೆ ಎಂದು ನೆನಪಿಸಿದರು.

ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ನಿತಿನ್ ಗಡ್ಕರಿ ಅವರ ಮನೆ, ಕಚೇರಿ ಮೇಲೆ ಐ.ಟಿ. ದಾಳಿ ಆಗಿದೆ. ಅವರ ಪೂರ್ತಿ ಕಂಪನಿಯ ಅವ್ಯವಹಾರಗಳು ಬಯಲಾಗಿವೆ. ಹೀಗಿರುವಾಗ ನೀವು ಯಡಿಯೂರಪ್ಪ ಅವರನ್ನು ಭ್ರಷ್ಟ ಎಂದು ಹೇಳಲು  ನೈತಿಕತೆ ಇದೆಯೇ ಎಂದು ಪ್ರಶ್ನಿಸಿದರು.

ಯಡಿಯೂರಪ್ಪ ಅವರ ಮಕ್ಕಳು ನಡೆಸುವ ಟ್ರಸ್ಟ್‌ಗೆ ಯಾರೋ ದೇಣಿಗೆ ಕೊಟ್ಟದ್ದನ್ನೇ ದೊಡ್ಡದಾಗಿ ಆಡ್ವಾಣಿ ಮಾತನಾಡುತ್ತಾರೆ. ಆದರೆ ವೀರಪ್ಪ ಮೊಯ್ಲಿ ಅವರ ಮಕ್ಕಳ ಟ್ರಸ್ಟ್‌ಗೆ ಹಣ ಬಂದರೆ ಇವರು ಏಕೆ ಇವರು ಮಾತನಾಡಲ್ಲ. ಕಾಂಗ್ರೆಸ್ ಬಗ್ಗೆ ಮೃದು ಧೋರಣೆ ಅನುಸರಿಸುವ ಅಡ್ವಾಣಿ ಅವರೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆಯೇ ಎಂದು ಕೇಳಿದರು.

ಮುಂದಿನ ಪ್ರಧಾನಿ ಅಭ್ಯರ್ಥಿ ಯಾರು ಎಂಬುದು ಇನ್ನೂ ನಿರ್ಧಾರ ಆಗಿಲ್ಲ ಎಂದು ಹೇಳುವ ಮೂಲಕ ತಾವು ಇನ್ನೂ ಪ್ರಧಾನಿ ರೇಸ್‌ನಲ್ಲಿ ಇರುವುದನ್ನು ಪರೋಕ್ಷವಾಗಿ ಸಾರಿಸುವ  ರಾಷ್ಟ್ರೀಯ ನಾಯಕ ಆಡ್ವಾಣಿ ನಿನ್ನೆ ರಾಜ್ಯದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ  ಪಾಲ್ಗೊಂಡಿದ್ದರು. ಆ ಸಭೆಯಲ್ಲಿ ಜನರೇ ಇರಲಿಲ್ಲ. ಖಾಲಿ ಕುರ್ಚಿಗಳೇ ಇದ್ದವು. ಜನರನ್ನು ಆಕರ್ಷಿಸಲು ಆಗದ ಇವರು ಮತ್ತೊಬ್ಬರ ಬಗ್ಗೆ ಮಾತನಾಡುವುದು ಅಕ್ಷಮ್ಯ ಎಂದರು.

ಇನ್ನು ನಿನ್ನೆ ಬೆಂಗಳೂರಿಗೆ ಆಗಮಿಸಿದ್ದ ಸುಷ್ಮಾ ಸ್ವರಾಜ್ ಅವರು ಭಾಷಣ ಮಾಡಿದ ಸಭೆಯಲ್ಲೂ ಕಡಿಮೆ ಸಂಖ್ಯೆಯಲ್ಲಿ ಜನ ಇದ್ದರು. ಜನ ಇವರಿಗೆ ಬೆಂಬಲ ನೀಡುತ್ತಿಲ್ಲ ಎಂದು ಹೇಳಿದರು.

ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ಆಡಳಿತವನ್ನು ಬಿಜೆಪಿ ಮರೆತು ಬಿಟ್ಟಿದೆ ಎಂದು ಅಡ್ವಾಣಿ ಹೇಳಿದ್ದಾರೆ. ಇದು ಸ್ವಾಗತಾರ್ಹ  ಸದಾನಂದಗೌಡ ಹಾಗೂ ಜಗದೀಶ ಶೆಟ್ಟರ್ ಅವರ ಆಡಳಿತದಲ್ಲಿ ಆದ ಸಾಧನೆ ಮೇಲೆ ಮತ ಕೇಳುವುದಾದರೆ ಕೇಳಲಿ ಆಗ ಜನರೇ ತೀರ್ಮಾನಿಸುತ್ತಾರೆ ಎಂದು ಹೇಳಿದರು.

೧೦ ತಿಂಗಳು ಜಗದೀಶ ಶೆಟ್ಟರ್ ಹಾಗೂ ೧೧ ತಿಂಗಳು ಸದಾನಂದಗೌಡ ನಡೆಸಿದ ಆಡಳಿತದಲ್ಲಿ ಏನು ಸಾಧನೆ ಆಗಿದೆ, ಯಡಿಯೂರಪ್ಪ ಅವರ ಕಾಲದಲ್ಲಿ ರಾಜ್ಯ ಪ್ರಗತಿ ಹೇಗೆ ಆಗಿತ್ತು ಎಂಬುದು ಎಲ್ಲರಿಗೂ ಗೊತ್ತಿದೆ. ಯಾರು ಉತ್ತಮ ಮುಖ್ಯಮಂತ್ರಿ ಎಂಬುದನ್ನು ಅಡ್ವಾಣಿ ಅವರೇ ಹೇಳಲಿ ಎಂದು ಸವಾಲು ಹಾಕಿದರು.

ಪ್ರಾದೇಶಿಕ ಪಕ್ಷಗಳಿಗೆ ದೇಶದಲ್ಲಿ ಭವಿಷ್ಯ ಇಲ್ಲ ಎಂದು ಅಡ್ವಾಣಿ ಹೇಳಿದ್ದಾರೆ. ಮುಂದಿನ ಲೋಕಸಭಾ ಚುನಾವಣೆ ಬಳಿಕ ಪ್ರಾದೇಶಿಕ ಪಕ್ಷಗಳ ಬೆಂಬಲ ಇಲ್ಲದೆ ಬಿಜೆಪಿ ಕೇಂದ್ರದಲ್ಲಿ ಸರ್ಕಾರ ರಚಿಸಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ಪ್ರಾದೇಶಿಕ ಪಕ್ಷಗಳ ಬೆಂಬಲ ಇಲ್ಲದೆ ಯಾವುದೇ ರಾಷ್ಟ್ರೀಯ ಪಕ್ಷ ಕೇಂದ್ರದಲ್ಲಿ ಆಡಳಿತ ನಡೆಸಲು ಸಾಧ್ಯವಿಲ್ಲ.  ಹೀಗಿರುವಾಗ ಪ್ರಾದೇಶಿಕ ಪಕ್ಷಗಳ ಬಗ್ಗೆ ಮಾತನಾಡಬೇಡಿ ಎಂದು ಆಡ್ವಾಣಿ ಅವರಿಗೆ ತಿರುಗೇಟು ನೀಡಿದರು.

ಇನ್ನು ಸುಷ್ಮಾ ಸ್ವರಾಜ್ ಅವರು ಕೆಜೆಪಿಗೆ ನೆಲೆ ಇಲ್ಲ ಎಂದು ಹೇಳಿದ್ದಾರೆ. ಪ್ರತಿ ಚುನಾವಣೆಯಲ್ಲಿ ಗೆಲ್ಲುವಂಥ ಕ್ಷೇತ್ರ ಹುಡುಕಿ ಹುಡುಕಿ ಸುರಕ್ಷಿತ ಕ್ಷೇತ್ರದಲ್ಲಿ ಮಾತ್ರ ಸ್ಪರ್ಧಿಸುವ ಸುಷ್ಮಾ ಸ್ವರಾಜ್ ಕೆಜೆಪಿ ಬಗ್ಗೆ ಮಾತನಾಡುತ್ತಾರೆ ಎಂದು ತರಾಟೆಗೆ ತೆಗೆದುಕೊಂಡರು. 

ಮುಖಪುಟ /ಸುದ್ದಿ ಸಮಾಚಾರ