ಮುಖಪುಟ /ಸುದ್ದಿ ಸಮಾಚಾರ   

ಸುವರ್ಣ ವಸ್ತ್ರ ನೀತಿಗೆ ಜವಳಿ ಉದ್ದಿಮೆದಾರರ ಮೆಚ್ಚುಗೆ

gulihatti shekar, minister of government of Karnatakaಬೆಂಗಳೂರು, ಏ. 23: ಜವಳಿ ಉದ್ಯಮಕ್ಕೆ ಉತ್ತೇಜನ ನೀಡಲು ಸರ್ಕಾರ ಜಾರಿಗೆ ತಂದಿರುವ ಸುವರ್ಣ ವಸ್ತ್ರ ನೀತಿಯ  ಪರಿಣಾಮವಾಗಿ ಹೂಡಿಕೆದಾರರು ರಾಜ್ಯದಲ್ಲಿ ಜವಳಿ ಉದ್ದಿಮೆ ಸ್ಥಾಪಿಸಲು ಉತ್ಸಾಹ ತೋರುತ್ತಿದ್ದಾರೆ ಎಂದು ಸಚಿವ ಶ್ರೀ ಗೂಳಿಹಟ್ಟಿ ಡಿ. ಶೇಖರ್ ಅವರು ತಿಳಿಸಿದರು.

ಅವರು ಇಂದು ನಗರದಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆಯ ಅಧಿಕಾರಿಗಳಿಗಾಗಿ ಏರ್ಪಡಿಸಲಾಗಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಜೂನ್‌ನಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಪೂರ್ವಭಾವಿಯಾಗಿ ತಾವು ಈಗಾಗಲೇ ಮುಂಬೈ ಹಾಗೂ ಸೂರತ್‌ನಲ್ಲಿ ರೋಡ್ ಷೋ ನಡೆಸಿದ್ದು, ಸಾಕಷ್ಟು  ಕೈಗಾರಿಕೋದ್ಯಮಿಗಳು ಬಂಡವಾಳ ಹೂಡಲು ಉತ್ಸುಕರಾಗಿದ್ದಾರೆ ಎಂದು ತಿಳಿಸಿದರು.

ಮುಂಬೈನಲ್ಲಿ ನಡೆದ ರೋಡ್ ಷೋನಲ್ಲಿ ಸುಮಾರು ೧೭ ಕೈಗಾರಿಕೋದ್ಯಮಿಗಳು ಭಾಗವಹಿಸಿದ್ದು, ಮುಂಬೈ ಮೂಲದ ಸಂಸ್ಥೆಯೊಂದು ರಾಜ್ಯದಲ್ಲಿ ರೂ. ೨೦೦ ಕೋಟಿಯಷ್ಟು ಬಂಡವಾಳ ಹೂಡಲು ಮುಂದೆ ಬಂದಿದೆ.

ರಾಜ್ಯದಲ್ಲಿ ಹತ್ತಿ, ರೇಷ್ಮೆ, ಉಣ್ಣೆಯ ಉತ್ಪಾದನೆ ಹೇರಳವಾಗಿರುವುದು ಜವಳಿ ಉದ್ಯಮದ ಕಚ್ಚಾವಸ್ತು ಇಲ್ಲಿಯೇ ಲಭ್ಯವಾಗುತ್ತದೆ. ಆದರೆ ಹತ್ತಿ ಸಂಸ್ಕರಣಾ ಘಟಕಗಳು ರಾಜ್ಯದಲ್ಲಿ ವಿರಳವಾಗಿದ್ದು, ಸೂರತ್‌ನಲ್ಲಿ ನಡೆಸಿದ ರೋಡ್ ಷೋ ಸಂದರ್ಭದಲ್ಲಿ ರಾಜ್ಯದಲ್ಲಿ ಸಂಸ್ಕರಣಾ ಘಟಕಗಳನ್ನು ಪ್ರಾರಂಭಿಸುವಂತೆ ಅಲ್ಲಿನ ಉದ್ಯಮಿಗಳ ಮನವೊಲಿಸಲಾಗಿದೆ ಎಂದು ಅವರು ತಿಳಿಸಿದರು.

ಜವಳಿ ವಲಯದಲ್ಲಿ ಸುಮಾರು ೫ರಿಂದ ೧೦ ಸಾವಿರ ಕೋಟಿ ರೂಪಾಯಿ ಬಂಡವಾಳ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಹರಿದುಬರುವ ಸಾಧ್ಯತೆ ಇದೆ ಎಂದು ತಿಳಿಸಿದ ಸಚಿವರು ಮುಂದಿನ ತಿಂಗಳು ಟರ್ಕಿ, ಶ್ರೀಲಂಕಾ ಹಾಗೂ ಇಂಡೋನೇಷಿಯಾ ದೇಶಗಳಲ್ಲಿ ರೋಡ್ ಷೋ ನಡೆಸಲಾಗುವುದು ಎಂದು ತಿಳಿಸಿದರು.

ಸುವರ್ಣ ವಸ್ತ್ರ ನೀತಿಯು ನೇಕಾರರ, ಜವಳಿ ವಲಯದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಿದ್ದು, ತರಬೇತಿಗೆ ಹೆಚ್ಚಿನ ಒತ್ತು ಕೊಟ್ಟಿದೆ. ರಾಜ್ಯದಲ್ಲಿ ಸುಮಾರು ೪೬ ತರಬೇತಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. ನಕ್ಸಲ್ ಪೀಡಿತ ಪ್ರದೇಶದ ಬಡಜನರಿಗೆ ಉದ್ಯೋಗಾವಕಾಶ ಕಲ್ಪಿಸಲು ಕೈಮಗ್ಗ ನೇಕಾರಿಕೆ ತರಬೇತಿ ನೀಡಿ, ಅವರು ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಒದಗಿಸಲಾಗಿದೆ ಎಂದು ಸಚಿವರು ವಿವರಿಸಿದರು.

ಸುವರ್ಣ ವಸ್ತ್ರ ನೀತಿಯಡಿ ಜಿಲ್ಲಾ, ತಾಲ್ಲೂಕು ಕೇಂದ್ರಗಳಲ್ಲಿ ಜವಳಿ ಉದ್ದಿಮೆ ಸ್ಥಾಪನೆಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಹಿಂದುಳಿದ ಪ್ರದೇಶಗಳಲ್ಲಿ ಉದ್ದಿಮೆ ಸ್ಥಾಪಿಸುವವರಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಜವಳಿ ಆಯುಕ್ತ ಪಾಂಡುರಂಗ ಬಿ. ನಾಯಕ್ ಅವರು, ಜವಳಿ ನೀತಿಯು ನೇಕಾರರ ಬೇಡಿಕೆಗಳನ್ನು ಅರ್ಥ ಮಾಡಿಕೊಂಡು ಸೌಲಭ್ಯ ನೀಡುವ ಗುರಿ ಹೊಂದಿದೆ. ಜೊತೆಗೆ ಹೆಚ್ಚಿನ ಉದ್ಯೋಗ ಸೃಷ್ಟಿಗೆ ಪ್ರೋತ್ಸಾಹ ನೀಡುತ್ತದೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಸಲಹಾ ಸಂಸ್ಥೆಯಾದ ಐಎಲ್&ಎಫ್‌ಎಸ್‌ನ ಶ್ರೀ ಗಿರೀಶ್ ಕಾಮತ್ ಅವರು ಅಧಿಕಾರಿಗಳಿಗೆ ಪ್ರಾತ್ಯಕ್ಷಿಕೆ ನೀಡಿದರು. ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ, ಕರ್ನಾಟಕ ವಿದ್ಯುತ್ ಮಗ್ಗ ಅಭಿವೃದ್ಧಿ ನಿಗಮದ ಹಿರಿಯ ಅಧಿಕಾರಿಗಳು, ಜವಳಿ ಇಲಾಖೆಯ ಎಲ್ಲಾ ಅಧಿಕಾರಿಗಳು ಭಾಗವಹಿಸಿದ್ದರು.

 ಮುಖಪುಟ /ಸುದ್ದಿ ಸಮಾಚಾರ