ಮುಖಪುಟ /ಸುದ್ದಿ ಸಮಾಚಾರ   

ಪೊಲೀಸ್ ಇಲಾಖೆ ಸಂಪೂರ್ಣ ಗಣಕೀಕರಣ
ಪೊಲೀಸ್ ಐಟಿ ತಂತ್ರಾಂಶ ಉದ್ಘಾಟನೆ

Dr. V.S.Acharyaಬೆಂಗಳೂರು, ಏ.6: ದೇಶದಲ್ಲಿಯೇ ಮೊದಲ ಬಾರಿಗೆ ಪೊಲೀಸ್ ಇಲಾಖೆಯ ಸಂಪೂರ್ಣ ಗಣಕೀಕರಣ ಕಾರ್ಯ ರಾಜ್ಯ ಪೊಲೀಸ್ ಇಲಾಖೆಯಲ್ಲಿ ನಡೆಯುತ್ತಿದ್ದು, ಗೃಹ ಸಚಿವ ಡಾ. ವಿ.ಎಸ್. ಆಚಾರ್ಯ ಅವರು ಇಂದು ಪೊಲೀಸ್ ಪ್ರಧಾನ ಕಛೇರಿಯಲ್ಲಿ ರಾಜ್ಯ ಪೊಲೀಸ್ ಇಲಾಖೆಯ ಪೊಲೀಸ್ ಐಟಿ ತಂತ್ರಾಂಶವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಪೊಲೀಸ್ ಇಲಾಖೆಯ ಸಂಪೂರ್ಣ ಗಣಕೀಕರಣಕ್ಕೆ ಪೂರಕವಾಗಿ ಮಾಹಿತಿ ತಂತ್ರಜ್ಞಾನ ತರಬೇತಿ ಕೇಂದ್ರ ತೆರೆಯುವ ಬಗ್ಗೆ ಸರ್ಕಾರ ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ನಮ್ಮ ರಾಜ್ಯ ಮುಂಚೂಣಿಯಲ್ಲಿದೆ. ಸರ್ಕಾರಿ ಇಲಾಖೆಗಳು ಇದರ ಸದುಪಯೋಗ ಪಡೆದುಕೊಂಡು ಆಡಳಿತದಲ್ಲಿ ಮಾಹಿತಿ ತಂತ್ರಜ್ಞಾನವನ್ನು ಅಳವಡಿಸುವುದು ಇಂದಿನ ಅಗತ್ಯ. ಇದರಿಂದ ಹೆಚ್ಚುತ್ತಿರುವ ಜನರ ಬೇಡಿಕೆಗಳಿಗೆ ಸರ್ಕಾರ ಸೂಕ್ತವಾಗಿ ಸ್ಪಂದಿಸಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಪೊಲೀಸ್ ಇಲಾಖೆಯಲ್ಲಿ ಮಾಹಿತಿ ಸಂತ್ರಜ್ಞಾನ ಅಳವಡಿಸಿರುವುದರಿಂದ ಮಾಹಿತಿಯ ಸುಲಭ ಲಭ್ಯತೆ, ಪರಿಣಾಮಕಾರಿ ಸಂವಹನ, ಕಾರ್ಯದಕ್ಷತೆ ಹೆಚ್ಚುವುದಲ್ಲದೆ, ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ ಎಂದು ವಿವರಿಸಿದ ಅವರು ಅತ್ಯುತ್ತಮ ಸಂವಹನ ಜಾಲದ ಮೂಲಕ ವಿಶ್ವಾಸಾರ್ಹ ಮತ್ತು ಸುರಕ್ಷಿತ ಸಂವಹನ ಸಾಧಿಸುವುದು ಇಂದಿನ ಸವಾಲು. ನಕ್ಸಲ್ ಸಮಸ್ಯೆ, ಭಯೋತ್ಪಾದನೆಯಂತಹ ಕ್ಲಿಷ್ಟ ಸವಾಲುಗಳನ್ನು ಎದುರಿಸಲು ಮಾಹಿತಿ ತಂತ್ರಜ್ಞಾನವು ಪೊಲೀಸ್ ಇಲಾಖೆಗೆ ನೆರವು ನೀಡಲಿದೆ ಎಂದು ಅವರು ತಿಳಿಸಿದರು.

ಈ ತಂತ್ರಾಂಶವು ಪೊಲೀಸ್ ಇಲಾಖೆಯ ಎಲ್ಲಾ ಅಗತ್ಯಗಳಿಗೆ ಉತ್ತರವಾಗಿದ್ದು, ಇಲಾಖೆಯನ್ನು ಕಾಗದರಹಿತ ಇಲಾಖೆಯಾಗಿಸುವತ್ತ ಮಹತ್ವಪೂರ್ಣ ಹೆಜ್ಜೆಯಾಗಿದೆ ಎಂದು ಅವರು ನುಡಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಈ ಯೋಜನೆಯನ್ನು ಅನುಷ್ಠಾನಗೊಳಿಸಿದ ವಿಪ್ರೊ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಶ್ರೀ ಆನಂದ್ ಶಂಕರನ್ ಅವರು ಮಾತನಾಡಿ, ಈ ಯೋಜನೆಯು ಇತರ ರಾಜ್ಯಗಳಿಗೆ ಮಾದರಿಯಾಗಿದೆ ಎಂದು ವಿವರಿಸಿದರು.

ರಾಜ್ಯ ಪೊಲೀಸ್ ಮಹಾನಿರ್ದೇಶಕ ಹಾಗೂ ಮಹಾ ನಿರೀಕ್ಷಕ ಡಾ. ಅಜಯ್‌ಕುಮಾರ್ ಸಿಂಗ್ ಅವರು ಸ್ವಾಗತಿಸಿದರು. ಎಡಿಜಿಪಿ-ಆಡಳಿತ ಶ್ರೀ ನೀಲಂ ಅಚ್ಯುತ ರಾವ್ ಅವರು ವಂದಿಸಿದರು.

ಕಾರ್ಯಕ್ರಮದಲ್ಲಿ ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಶ್ರೀ ಅಭಿಜಿತ್ ದಾಸ್‌ಗುಪ್ತಾ, ಹೋಮ್‌ಗಾರ್ಡ್ಸ್ ಮತ್ತು ಅಗ್ನಿಶಾಮಕ ಇಲಾಖೆಯ ಡಿಜಿಪಿ ಶ್ರೀಮತಿ ಜೀಜಾ ಮಾಧವನ್ ಹರಿಸಿಂಗ್, ಸಿಐಡಿ ಡಿಜಿಪಿ ಡಾ. ಡಿ.ವಿ. ಗುರುಪ್ರಸಾದ್ ಮತ್ತಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಪೊಲೀಸ್ ಐಟಿ ಯೋಜನೆಯ ಬಗ್ಗೆ: ೨೦೦೩ರಲ್ಲಿ ಪೊಲೀಸ್ ಐಟಿ ಯೋಜನೆಯನ್ನು ಪ್ರಾರಂಭಿಸಲಾಯಿತು. ಈ ತಂತ್ರಾಂಶವನ್ನು ವಿಪ್ರೋ ಸಂಸ್ಥೆಯವರು ಅಭಿವೃದ್ಧಿಪಡಿಸಿದ್ದಾರೆ. ಇದೊಂದು ಪರಿಪೂರ್ಣ ತಂತ್ರಾಂಶವಾಗಿದ್ದು, ಪೊಲೀಸ್ ಇಲಾಖೆಯ ಎಲ್ಲಾ ಕಾರ್ಯಚಟುವಟಿಕೆಗಳನ್ನು ಗಣಕೀಕರಣ ಗೊಳಿಸುವ ಸಾಮರ್ಥ್ಯ ಹೊಂದಿದೆ. ಇದು ಪೊಲೀಸ್ ಇಲಾಖೆಯ ಎಲ್ಲಾ ಕಾರ್ಯಚಟುವಟಿಕೆಗಳನ್ನು ಒಳಗೊಂಡಿದ್ದು, ಇಲಾಖೆಯ ಪ್ರತಿಯೊಂದು ಘಟಕಕ್ಕೂ ವ್ಯಾಪಿಸಿದೆ.

ಈ ತಂತ್ರಾಂಶದ ಅನುಷ್ಠಾನಕ್ಕೆ ಬೇಕಾಗಿರುವ ದತ್ತಾಂಶ ಕೇಂದ್ರ (ಡಾಟಾ ಸೆಂಟರ್), ವ್ಯಾಪಕ ಸಂಪರ್ಕ ಜಾಲ, ಆಂಟಿ ವೈರಸ್, ಫೆಸಿಲಿಟಿ ಮ್ಯಾನೇಜ್‌ಮೆಂಟ್ ಸೇವೆಗಳು, ಸಹಾಯವಾಣಿ ಮೊದಲಾದವು ಸಿದ್ಧಗೊಂಡಿವೆ. ಈ ಯೋಜನೆಯ ಅನುಷ್ಠಾನಕ್ಕಾಗಿ ೭೦೦ ಕೆಲಸದ ದಿನಗಳ ಕ್ಷೇತ್ರ ಅಧ್ಯಯನ, ೭೦ ವಿಮರ್ಶಾ ಸಭೆಗಳು, ೩೦ ಸಾವಿರ ಪುಟಗಳ ದಾಖಲಾತಿಗಳು ಹಾಗೂ ತಂತ್ರಾಂಶ ಅಭಿವೃದ್ಧಿಗೆ ೭೦೦೦ ಕೆಲಸದ ದಿನಗಳನ್ನು ತೆಗೆದುಕೊಳ್ಳಲಾಗಿದೆ. ಈ ವರೆಗೆ ಸುಮಾರು ೧೦೦ಕ್ಕೂ ಹೆಚ್ಚು ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ೪ ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಈ ತಂತ್ರಾಂಶವನ್ನು ಸಂಪೂರ್ಣವಾಗಿ ಬಳಸಲು ಇನ್ನೂ ೧೪ ಸಾವಿರ ಪೊಲೀಸ್ ಸಿಬ್ಬಂದಿಗೆ ತರಬೇತಿ ನೀಡಬೇಕಾಗಿದೆ ಎಂದು ಡಿಜಿಪಿ ಡಾ. ಅಜಯ್‌ಕುಮಾರ್ ಸಿಂಗ್ ಅವರು ತಿಳಿಸಿದರು.

ಪೊಲೀಸ್ ಐಟಿ ತಂತ್ರಾಂಶದಲ್ಲಿ ಒಟ್ಟು ೧೨ ಮಾಡ್ಯೂಲ್‌ಗಳಿವೆ. ಅವುಗಳನ್ನು ಅಪರಾಧ, ಕಾನೂನು ಮತ್ತು ಸುವ್ಯವಸ್ಥೆ, ಸಂಚಾರ, ಆಡಳಿತ, ಹಣಕಾಸು, ಉಗ್ರಾಣ, ಸಶಸ್ತ್ರ ಮೀಸಲು, ಮೋಟಾರು ಸಾರಿಗೆ, ತರಬೇತಿ, ನಿಸ್ತಂತು, ಪ್ರಾಯೋಗಿಕ ವಿಧಿವಿಜ್ಞಾನ ಪ್ರಯೋಗಾಲಯ, ಕಾರ್ಯಾಧಾರಿತ ಮಾಹಿತಿ ವ್ಯವಸ್ಥೆ ಎಂದು ನಿಗದಿಪಡಿಸಲಾಗಿದೆ.

ಇಂದು ಈ ಮಾಡ್ಯೂಲ್‌ಗಳಲ್ಲಿ ನಿಸ್ತಂತು, ಮೋಟಾರು ಸಾರಿಗೆ ಮತ್ತು ಸಶಸ್ತ್ರ ಮೀಸಲು ಮಾಡ್ಯೂಲ್‌ಗಳಿಗೆ ಗೃಹ ಸಚಿವರು ಚಾಲನೆ ನೀಡಿದ್ದು, ಉಳಿದ ಮಾಡ್ಯೂಲ್‌ಗಳನ್ನು ಹಂತಹಂತವಾಗಿ ಈ ವರ್ಷಾಂತ್ಯದೊಳಗೆ ಅನುಷ್ಠಾನಗೊಳಿಸಲಾಗುವುದೆಂದು ತಿಳಿಸಲಾಯಿತು.

ಭಾರತ ಸರ್ಕಾರವು ಕ್ರೈಂ, ಕ್ರಿಮಿನಲ್ ಟ್ರಾಕಿಂಗ್ ನೆಟ್‌ವರ್ಕ್ ಅಂಡ್ ಸಿಸ್ಟಮ್ಸ್ (ಸಿಸಿಟಿಎನ್‌ಎಸ್) ಯೋಜನೆಯಲ್ಲಿ ಕರ್ನಾಟಕ ರಾಜ್ಯವು ಮುಂಚೂಣಿಯಲ್ಲಿರುವ ರಾಜ್ಯ ಎಂದು ಪರಿಗಣಿಸಿದೆ. ಈ ಸಿಸಿಟಿಎನ್‌ಎಸ್ ಯೋಜನೆಯು ದೇಶದ ೧೪ ಸಾವಿರ ಪೊಲೀಸ್ ಠಾಣೆಗಳು ಮತ್ತು ೬ ಸಾವಿರ ಉನ್ನತ ಪೊಲೀಸ್ ಕಚೇರಿಗಳನ್ನು ಸಂಪರ್ಕಗೊಳಿಸುವ  ಗುರಿಯನ್ನು ಹೊಂದಿದೆ. ಹಾಗೂ ಮುಖ್ಯ ತಂತ್ರಾಂಶದ ಅಭಿವೃದ್ಧಿಯನ್ನು ಆಯಾ ರಾಜ್ಯಗಳಿಗನುಗುಣವಾಗಿ ಸಿದ್ಧಪಡಿಸಲಾಗುವುದು. ಕರ್ನಾಟಕ ರಾಜ್ಯ ಪೊಲೀಸ್‌ಗೆ ತನ್ನದೇ ಆದ ಪೊಲೀಸ್ ಐಟಿ ತಂತ್ರಾಂಶವನ್ನು ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆಯೆಂದು ತಿಳಿಸಲಾಗಿದೆ.  

 ಮುಖಪುಟ /ಸುದ್ದಿ ಸಮಾಚಾರ