ಮುಖಪುಟ /ಸುದ್ದಿ ಸಮಾಚಾರ   

ಸಿಲಿಕಾನ್ ಸಿಟಿಯಲ್ಲಿ ಅರಳಿದ ಕಮಲ, ಬಿಜೆಪಿ ತೆಕ್ಕಗೆ ಬಿಬಿಎಂಪಿ

kamalaಬೆಂಗಳೂರು, ಏಪ್ರಿಲ್ 5: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಎಂಬ ಬಿಜೆಪಿಯ ಮೂರು ದಶಕಗಳ ಆಸೆ ಕೊನೆಗೂ ಈಡೇರಿದೆ. ಮಾರ್ಚ್ 28ರಂದು ಬಿಬಿಎಂಪಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರದ ಗದ್ದುಗೆ ಏರುವಷ್ಟು ನಿಚ್ಚಳ ಬಹುಮತ ಪಡೆದಿದೆ.

ಬಿಬಿಎಂಪಿ ಚುನಾವಣೆಯ ಮತದಾನದ ಬಗ್ಗೆ ನಿರಾಸಕ್ತಿ ತೋರಿದ್ದ ಬೆಂಗಳೂರಿಗರು ಕೇವಲ ಶೇ.44ರಷ್ಟು ಮತ ಹಾಕಿದ್ದ ಹಿನ್ನೆಲೆಯಲ್ಲಿ ಈ ಬಾರಿ ಅತಂತ್ರ ಸ್ಥಿತಿ ನಿರ್ಮಾಣವಾಗುತ್ತದೆ ಎಂಬ ರಾಜಕೀಯ ಪಂಡಿತರ ಲೆಕ್ಕಾಚಾರಗಳೆಲ್ಲಾ ತಿರುಗುಮುರುಗಾಗಿವೆ.

ಬಿಜೆಪಿ ನಿರೀಕ್ಷೆಗೂ ಮೀರಿ 198 ಸದಸ್ಯ ಬಲದ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ 111 ವಾರ್ಡ್ ಗಳಲ್ಲಿ ಜಯ ಸಾಧಿಸಿದ್ದರೆ, ಕೇವಲ 65 ಸ್ಥಾನ ಪಡೆದಿರುವ ಕಾಂಗ್ರೆಸ್ ಎರಡನೇ ಸ್ಥಾನಕ್ಕೂ, 15 ಸ್ಥಾನ ಪಡೆದಿರುವ ಜೆಡಿಎಸ್ ಮೂರನೇ ಸ್ಥಾನಕ್ಕೂ ತೃಪ್ತಿಪಟ್ಟುಕೊಳ್ಳುವಂತಾಗಿದೆ. ಆರಂಭದಲ್ಲಿ ಅಬ್ಬರ ಮಾಡಿ, ಮೇಯರ್ ಆಯ್ಕೆಯಲ್ಲಿ ತಾವೇ ನಿರ್ಣಾಯಕ ಎನ್ನುವಷ್ಟು ಸುದ್ದಿ ಮಾಡಿದ್ದ ಪಕ್ಷೇತರರು ಪಡೆದದ್ದು ಕೇವಲ 7 ಸ್ಥಾನ ಮಾತ್ರ.

ಇಂದು ಮತ ಎಣಿಕೆ ಆರಂಭವಾಗುತ್ತಿದ್ದಂತೆಯೇ ಮುನ್ನಡೆಯ ಓಟ ಆರಂಭಿಸಿದ ಬಿಜೆಪಿ ಕೊನೆಯ ವರೆಗೂ ಗೆಲುವಿನ ಓಟವನ್ನು ಕಾಯ್ದುಕೊಂಡಿತು. ಬೆಂಗಳೂರಿಗರು ಆಡಳಿತ ಪಕ್ಷಕ್ಕೆ ಸಂಪೂರ್ಣ ಬೆಂಬಲ ನೀಡಿದ್ದಾರೆ.

 

 ಮುಖಪುಟ /ಸುದ್ದಿ ಸಮಾಚಾರ