ಮುಖಪುಟ /ಲೇಖನಮಾಲೆ 
 

ಉಪಾಸನಾ ಬೆಳೆದು ಬಂದ ಹಾದಿ....

Upasana functionಸುಗಮ ಸಂಗೀತ ಕ್ಷೇತ್ರ ಈಗ ಬಲಗೊಳ್ಳುತ್ತಿದೆ. ವಿವಿಧ ಟಿ.ವಿ.ವಾಹಿನಿಗಳಲ್ಲಿ ಪ್ರಸಾರವಾಗುತ್ತಿರುವ ಗಾಯನ ಕಾರ್ಯಕ್ರಮಗಳಲ್ಲಿ ಸುಗಮ ಸಂಗೀತಕ್ಕೂ ಅವಕಾಶ ಲಭಿಸುತ್ತಿದೆ. ಆದರೆ, ಸುಗಮ ಸಂಗೀತ ನಶಿಸುತ್ತಿದ್ದ ಕಾಲದಲ್ಲಿ ಅದಕ್ಕೆ ನೀರೆರೆದು ಪೋಷಿಸಿದ ಹಲವು ಸಂಸ್ಥೆಗಳಿವೆ. ಅಂಥ ಸಂಸ್ಥೆಗಳಲ್ಲಿ ಉಪಾಸನಾ ಕೂಡ ಒಂದು. ಕಳೆದ 8 ವರ್ಷಗಳಿಂದ ಸುಗಮ ಸಂಗೀತ ಕ್ಷೇತ್ರಕ್ಕೆ ತನ್ನನ್ನು ಅರ್ಪಿಸಿಕೊಂಡಿರುವ ಉಪಾಸನಾ ಕರ್ನಾಟಕ ಹಾಗೂ ಕಡಲಾಚೆ ಬೆಳಗುತ್ತಿದೆ. ಮನೆಯಂಗಳದಿಂದ ಮನದಂಗಳಕ್ಕೆ ಲಗ್ಗೆ ಇಟ್ಟಿದೆ. ಶಾಸ್ತ್ರೀಯ ಕರ್ನಾಟಕ ಸಂಗೀತದಿಂದ ಕುಡಿಯೊಡೆದು ಚಿಗುರು ಇಂದು ಹೆಮ್ಮರವಾಗಿ ಬೆಳೆಯಲು ಅಳಿಲು ಸೇವೆ ಸಲ್ಲಿಸಿದೆ.

ಸುಗಮ ಸಂಗೀತ ಇಂದು ಇಷ್ಟು ಎತ್ತರ ಬೆಳೆಯಲು ನಾದೋಪಾಸಕರೇ ಕಾರಣ. ಇಂಥ ಒಂದು ನಾದೋಪಾಸನೆಯ ಸಂಸ್ಥೆಯೇ ಉಪಾಸನಾ ಎಂಬುದು ಅತಿಶಯೋಕ್ತಿಯ ಮಾತಲ್ಲ. ಈ ಹೊತ್ತು ಉಪಾಸನಾ ರಜತ ಗೀತ ಸಂಭ್ರಮದಲ್ಲಿದೆ. ಉಪಾಸನಾ ಸಂಸ್ಥೆಯ ಸ್ಥಾಪಕ ಜೆ. ಮೋಹನ್ ಅವರ 25ನೇ ಭಾವಗೀತೆಗಳ ಸಿ.ಡಿ. ಡಿ.25ರಂದು ಬಿಡುಗಡೆಯಾಗುತ್ತಿದೆ. ಯುವ ಪೀಳಿಗೆಗೆ ಸಂಗೀತವ ಕಲಿಸುತ್ತಾ, ಮನೆಯಂಗಳದಲ್ಲಿ ಗೀತಾರಾಧನೆ ನಡೆಸುತ್ತಾ ಕರ್ನಾಟಕದಲ್ಲಿ ಮನೆಮಾತಾಗಿರುವ ಉಪಾಸನಾ ಮೋಹನ್ ಈ ಸಿಡಿಯಲ್ಲಿ ತಮ್ಮ ಹಲವು ವರ್ಷಗಳ ಸಾಧನೆಯ ಪರಿಶ್ರಮವನ್ನು ಶ್ರೋತೃಗಳಿಗೆ ರಸವತ್ತಾಗಿ ಉಣಬಡಿಸಿದ್ದಾರೆ.

Archana Udupa, Surekha, Mangala, Nagachandrika,Divya and othersಹಿರಿಯ ಕವಿಗಳ ಬೆರಳೆಣಿಕೆಯ ಜನಪ್ರಿಯ ಭಾವಗೀತೆಗಳಿಗೆ ಮಾತ್ರ ಮೀಸಲಾಗಿದ್ದ ಸುಗಮ ಸಂಗೀತ ಕ್ಷೇತ್ರದಲ್ಲಿ ಹೊಸ ಹೊಸ ಗೀತೆಗಳಿಗೆ ರಾಗ ಸಂಯೋಜಿಸಿ, ಸಂಗೀತ ಹಾಗೂ ಸಾಹಿತ್ಯದ ಕೊಂಡಿಯಾಗಿ ಬೆಳೆದು ನಿಂತಿದ್ದಾರೆ.

ಕನ್ನಡ ಸುಗಮ ಸಂಗೀತ ಕ್ಷೇತ್ರಕ್ಕೆ ಗೀತ ಸಾಹಿತ್ಯ ಪೂರೈಸಿದೆ ಶ್ರೇಷ್ಠರನ್ನು ನೆನೆಯುವುದು - ಸತ್ಕರಿಸುವುದು ತನ್ನ ಕರ್ತವ್ಯ ಎಂಬುದು ಉಪಾಸನ ನಂಬಿಕೆ. ಹೀಗಾಗೇ ಈ ಸಮಾರಂಭದಲ್ಲೂ ಕವಿಶ್ರೇಷ್ಠರನ್ನು ಆದರದಿಂದ ಸತ್ಕರಿಸುತ್ತಿದೆ.

ಈಗಾಗಲೇ  ಭರವಸೆಯ ಕುಡಿಗಳು, ನಾಳಿನ ಗೀತೆಗಳು, ನಿಮಗಾಗೆ ಈ ಹಾಡುಗಳು, ಬಾಬಾ ಓ ಬೆಳಕೆ, ಬಾ ಭೃಂಗವೇ ಬಾ, ಹೊಸ ಹಾಡು, ಹೊಸ ಹಾದಿ, ಚಿಗುರು ಚೈತ್ರ, ಪ್ರೇಮದ ಚಿಟಿಕೆ ಮೊದಲಾದ 24ಧ್ವನಿಸುರುಳಿಗಳನ್ನು ಹೊರತಂದಿರುವ ಮೋಹನ್ ಅವರ 25ನೇ ಧ್ವನಿಸುರುಳಿ ಶ್ರೋತೃಗಳಲ್ಲಿ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿದೆ.

ಉಪಾಸನಾ ಸಂಸ್ಥೆ ಪ್ರತಿವರ್ಷ ನಾಡಿನ ಯುವ ಸುಗಮ ಸಂಗೀತಗಾರರಿಗೆ ಜಿ.ವಿ. ಅತ್ರಿ ನೆನಪಿನಲ್ಲಿ ಪ್ರಶಸ್ತಿ ನೀಡಿ ಹುರಿದುಂಬಿಸುತ್ತಿದೆ. ಅರ್ಚನಾ ಉಡುಪ, ಎಂ.ಡಿ.ಪಲ್ಲವಿ, ಪ್ರವೀಣ್ ಡಿ ರಾವ್, ಪಂಚಮ್ ಹಳಿಬಂಡಿ, ನರಹರಿ ದೀಕ್ಷಿತ್ ಮೊದಲಾದ ಯುವ ಸಾಧಕರಿಗೆ ಪ್ರಶಸ್ತಿ ನೀಡಿ ಉಪಾಸನಾ  ಅವರನ್ನು ಹುರಿದುಂಬಿಸಿದೆ.

ಕೇವಲ ತನ್ನ ಕಾರ್ಯಕ್ಷೇತ್ರವನ್ನು ಸಂಗೀತಕ್ಕಷ್ಟೇ ಸೀಮಿತವಾಗಿಸಿಕೊಳ್ಳದ ಉಪಾಸನಾ ಕಡಲಾಚೆಯ ಕನ್ನಡಿಗರ ಹಲವು ಕನ್ನಡ ಪುಸ್ತಕಗಳ ಬಿಡುಗಡೆ ಸಮಾರಂಭದ ಜವಾಬ್ದಾರಿಯನ್ನೂ ಯಶಸ್ವಿಯಾಗಿ ನಿರ್ವಹಿಸಿದೆ.

ಚಂದ್ರಶೇಖರ್ ಅವರ ಭಾರತದ ಬೃಹತ್ ಬೇಲಿ, ವೈ.ಆರ್. ಮೋಹನ್ ಅವರ ಅಮೆರಿಕಾಯಣ ಕೃತಿಗಳ ಬಿಡುಗಡೆ ಸಮಾರಂಭವನ್ನು ಅಚ್ಚುಕಟ್ಟಾಗಿ ನಡೆಸಿದ ಕೀರ್ತಿಯೂ ಉಪಾಸನಾಕ್ಕೆ ಸಲ್ಲುತ್ತದೆ.

Upasana Mohan ಮೋಹನ್ ತಮ್ಮ ಸಂಸ್ಥೆಯನ್ನು ಕೇವಲ ಒಂದು ಸಂಗೀತ ತಂಡವಾಗಿ ಕಟ್ಟಿಲ್ಲ. ಬದಲಾಗಿ ಸಂಗೀತ ಕ್ಷೇತ್ರದ ಪ್ರಾತಿನಿಧಿಕ ಸಂಸ್ಥೆಯಾಗಿ ಬೆಳೆಸಿದ್ದಾರೆ. ನಾಡಿನ ಹಿರಿಯ ಗಾಯಕರಾದ ಶಿವಮೊಗ್ಗ ಸುಬ್ಬಣ್ಣ, ಯಶವಂತ ಹಳಿಬಂಡಿ, ಕಸ್ತೂರಿ ಶಂಕರ್, ಅರ್ಚನಾ ಉಡುಪ, ನಗರ ಶ್ರೀನಿವಾಸ ಉಡುಪ, ಎಂ.ಡಿ.ಪಲ್ಲವಿ, ಚಂದ್ರಿಕಾ, ನಾಗಚಂದ್ರಿಕಾ ಭಟ್, ರಾಜು ಅನಂತಸ್ವಾಮಿ, ಸುನಿತಾ, ಅಪ್ಪಗೆರೆ ತಿಮ್ಮರಾಜು ಮೊದಲಾದವರೆಲ್ಲಾ ಉಪಾಸನಾ ಸಂಸ್ಥೆ ಈವರೆಗೆ ಆಯೋಜಿಸಿರುವ 74 ಮನೆಯಂಗಳದಲ್ಲಿ ಸುಗಮ ಸಂಗೀತ ಗೀತವಾಹಿನಿ ಕಾರ್ಯಕ್ರಮದಲ್ಲಿ ಹಾಡಿದ್ದಾರೆ.

ತಾನೊಬ್ಬ ಬೆಳೆದರೇ ಸಾಕೆಂದು ಬಯಸುವ ಸ್ವಾರ್ಥಿಗಳ ಈ ಜಗತ್ತಿನಲ್ಲಿ ಅಪರೂಪದ ವ್ಯಕ್ತಿಯಾಗಿ ಕಾಣುವ ಉಪಾಸನಾ ಮೋಹನ್, ತಮ್ಮೊಂದಿಗೆ ಯುವ ಗಾಯನ ಪ್ರತಿಭೆಗಳಿಗೆ ತಿಂಗಳಿಗೊಂದು ವೇದಿಕೆ ಕಲ್ಪಿಸುತ್ತಾ ಅವರ ವಿಕಾಸಕ್ಕೂ ಕಾರಣರಾಗಿದ್ದಾರೆ. ಎಲ್ಲರೊಳಗೊಂದಾಗಿ ಬೆಳೆಯುತ್ತಿರುವ, ಇತರರ ಪ್ರತಿಭೆಯ ಪ್ರಕಾಶಕ್ಕೂ ಶ್ರಮಿಸುತ್ತಿರುವ ಉಪಾಸನಾ, ಯುವ ಹಾಗೂ ಪ್ರತಿಭಾವಂತ ಗಾಯಕರ ಪಾಲಿನ ಆಶಾಕಿರಣವಾಗಿದೆ. ಆಕಾಶವಾಣಿ ಹಾಗೂ ದೂರದರ್ಶನದಲ್ಲಿ ರಾಗ ಸಂಯೋಜಕರಾಗಿ ಜನಮನ ಗೆದ್ದಿರುವ ಮೋಹನ್ ಬೆಂಗಳೂರಿನ ಸಂಗೀತ ಪ್ರಿಯರಿಗೆ ಉಪಸನಾ ಮೋಹನ್ ಎಂದೇ ಖ್ಯಾತರಾಗಿದ್ದಾರೆ.

ಓದಿದ್ದು ರೇಡಿಯೋ ಟಿವಿ ಡಿಪ್ಲೋಮಾ ಆದರೂ, ಎದೆಯೊಳಗೆ ಸಂಸ್ಕಾರದತ್ತವಾಗಿ ಅಡಗಿಸಿಕೊಂಡಿದ್ದ ಸಂಗೀತವನ್ನೇ ಬಾಳ ಸಂಗಾತಿಯನ್ನಾಗಿ ಮಾಡಿಕೊಂಡಿರುವ ಮೋಹನ್ ಚಿಕ್ಕವಯಸ್ಸಿನಲ್ಲೇ ಸಂಗೀತ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರ. ಸುಗಮ ಸಂಗೀತ ಬೆಳೆಯಲಿ, ಉಪಸನಾದ ಸಂಗೀತೋಪಾಸನೆ ನಿರಂತರವಾಗಿ ಸಾಗಲಿ ಎಂಬುದು ಕನ್ನಡರತ್ನ ಹಾರೈಕೆ.

ವಿಳಾಸ: ಜೆ. ಮೋಹನ್, ಉಪಾಸನಾ ಸಂಗೀತ ಶಾಲೆ, ೧೪೬, ೩ನೇ ಮಹಡಿ, ಡಿವಿಜಿ ರಸ್ತೆ, ಬಸವನಗುಡಿ, ಬೆಂಗಳೂರು. ದೂರವಾಣಿ - 9845338363.

ಮುಖಪುಟ /ಲೇಖನಮಾಲೆ