ಮುಖಪುಟ /ಲೇಖನಮಾಲೆ 
 

500, 1000 ನೋಟು ರದ್ದು, ರಿಯಲ್ ಎಸ್ಟೇಟ್ ಗೆ ವರವೋ ಶಾಪವೋ
ಮನೆ, ನಿವೇಶನ ದರ ಏರುತ್ತದೋ ಇಳಿಯುತ್ತದೋ..

ರಿಯಲ್ ಎಸ್ಟೇಟ್ ಕುಸಿಯತ್ತೋ ಏರತ್ತೋ..ಟಿ.ಎಂ.ಸತೀಶ್
ಬೆಂಗಳೂರು
, ನ.13:  ಕಪ್ಪುಹಣ ಮತ್ತು ನಕಲಿ ನೋಟುಗಳ ಹಾವಳಿ ನಿಯಂತ್ರಿಸಲು ಹಾಗೂ ಭಯೋತ್ಪಾದಕರ ಬಳಿ ಇರುವ ಭಾರತೀಯ ಹಣವನ್ನು ನಿಷ್ಕ್ರಿಯಗೊಳಿಸಲು ೫೬ ಇಂಚಿನ ಎದೆಯ ಪ್ರಧಾನಮಂತ್ರಿ ನರೇಂದ್ರ ಮೋದಿ ಕೈಗೊಂಡಿರುವ ದಿಟ್ಟ ನಿರ್ಧಾರದಿಂದ 500 ಮತ್ತು 1000ರೂ. ಮುಖಬೆಲೆಯ ನೋಟುಗಳ ಚಲಾವಣೆ ನ.8ರ ಮಧ್ಯರಾತ್ರಿಯಿಂದಲೇ ಹಠಾತ್ ರದ್ದಾಗಿದೆ. ಆದರೆ, ಈ ಕ್ರಮದಿಂದ ರಿಯಲ್ ಎಸ್ಟೇಟ್ ಉದ್ಯಮಕ್ಕೆ ವರವಾಗುತ್ತದೆಯೋ ಇಲ್ಲ ಶಾಪವಾಗಿ ಪರಿಣಮಿಸುತ್ತದೆಯೋ ಎಂಬ ಜಿಜ್ಞಾಸೆ ಈಗ ಎಲ್ಲರನ್ನೂ ಕಾಡುತ್ತಿದೆ.

1990ರ ದಶಕದಿಂದೀಚೆಗೆ ಭೂಮಿಗೆ ಬಂಗಾರದ ಬೆಲೆ ಬಂದಿದೆ. ಅದರಲ್ಲೂ ನಗರ ಪ್ರದೇಶಗಳಲ್ಲಿ ಭೂಮಿ ಖರೀದಿ, ಮಾರಾಟವೇ ಒಂದು ದೊಡ್ಡ ದಂದೆಯಾಗಿ ಮಾರ್ಪಟ್ಟು, ನೋಡು ನೋಡುತ್ತಿದ್ದಂತೆ ಹಲವರು ಕೋಟ್ಯಧಿಪತಿಗಳಾಗಿ ಹೋಗಿದ್ದಾರೆ. ರಾಜಕೀಯಕ್ಕೆ ಕಾಲಿಟ್ಟು ಶಾಸಕರು, ಮಂತ್ರಿಗಳೂ ಆಗಿ ಹೋಗಿದ್ದಾರೆ. ಹೀಗಾಗಿ ಅಧಿಕಾರ, ಹಣ ಎರಡೂ ಸೇರಿದ ರಿಯಲ್ ಎಸ್ಟೇಟ್ ಉದ್ಯಮ ಎಗ್ಗು ತಗ್ಗಿಲ್ಲದೆ ಮುನ್ನುಗ್ಗುತ್ತಿರುವ ದೊಡ್ಡ ಹಣ ವಹಿವಾಟಿನ ಕ್ಷೇತ್ರವಾಗಿ ಪರಿಣಮಿಸಿ, ಹಲವರ ಪಾಲಿಗೆ ಕಾಮಧೇನುವಾಗಿ ಹೋಗಿತ್ತು.
ರಿಯಲ್ ಎಸ್ಟೇಟ್ ಆಟಾಟೋಪವನ್ನು ಹತ್ತಿಕ್ಕಲು ತಂದ ಹಲವು ಕಾನೂನುಗಳೂ ಪರಿಣಾಮಕಾರಿಯಲ್ಲ ಎನ್ನುವಂತಾಗಿತ್ತು. ಕಾರಣ ಇಲ್ಲಿ ಚಾಪೆಯಲ್ಲ ರಂಗೋಲಿಯ ಕೆಳಗೆ ತೂರುವಂಥ ಚಾಣಕ್ಷರಿದ್ದಾರೆ.
ಆದರೆ, ಈಗ ಏಕಾಏಕಿ ರಿಯಲ್ ಎಸ್ಟೇಟ್ ಉದ್ಯಮದವರು ಬೆಚ್ಚಿ ಬಿದ್ದಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಈ ಕ್ಷೇತ್ರದ ಹಲವರ ನಿದ್ದೆ ಗೆಡಿಸಿದ್ದಾರೆ. ನ.೮ರ ಸಂಜೆಯಿಂದ ಹಲವರು ಕಂಗೆಟ್ಟು ಹೋಗಿದ್ದಾರೆ. ಈ ಮಧ್ಯೆ ದಿನದಿಂದ ದಿನಕ್ಕೆ ಏರುತ್ತಿದ್ದ ಭೂಮಿಯ ಬೆಲೆಯಿಂದಾಗಿ, ಸ್ವಂತ ಸೂರು ಹೊಂದುವ ಯೋಗವೇ ತಮಗಿಲ್ಲವೇನೋ ಎಂದು ಕೈಚೆಲ್ಲಿದ್ದ ಮಧ್ಯಮವರ್ಗದವರು ಈಗಲಾದರೂ ಭೂಮಿಯ ಬೆಲೆ ಕುಸಿಯುತ್ತದೆಯೇ, ತಮ್ಮ ಆಸೆ ಈಡುರುತ್ತದೆಯೇ ಎಂಬ ಕನಸು ಹೊತ್ತಿದ್ದರೆ, ಹೂಡಿಕೆಯ ದೃಷ್ಟಿಯಿಂದ ನಿವೇಶನ, ಫ್ಲಾಟ್ ಖರೀದಿ ಮಾಡಿರುವ ಮಂದಿ, ಇನ್ನು ಕಪ್ಪು ಹಣದ ಆಟ ನಡೆಯಲ್ಲ, ಏನಿದ್ದರೂ ನಿವೇಶನದತ್ತಲೇ ಜನ ಬರುತ್ತಾರೆ ಹೀಗಾಗಿ ದರ ಏರಿಕೆ ಆಗಬಹುದು ಎಂಬ ಆಸೆಯಲ್ಲಿದ್ದಾರೆ. ಈ ಎಲ್ಲದರ ನಡುವೆ, ಈಗ ಉದ್ಯಮಿಗಳು, ಶ್ರೀಸಾಮಾನ್ಯರಾದಿಯಾಗಿ ಎಲ್ಲರ ಚಿತ್ತವೂ ರಿಯಲ್ ಎಸ್ಟೇಟ್ ಉದ್ಯಮದತ್ತ ಹೊರಳಿದೆ. 
ಈವರೆಗೆ ಹೆಚ್ಚಾಗಿ ಕಪ್ಪು ಹಣ ಚಲಾವಣೆ ಆಗುತ್ತಿದ್ದುದೇ, ರಿಯಲ್ ಎಸ್ಟೇಟ್ ವಲಯದಲ್ಲಿ. ಕೇವಲ ಹಣ ಮಾಡುವ ಉದ್ದೇಶ ಹೊಂದಿರುವ ರಿಯಲ್ ಎಸ್ಟೇಟ್ ದಣಿಗಳಷ್ಟೇ ಅಲ್ಲ, ಪ್ರಜ್ಞಾವಂತ, ವಿದ್ಯಾವಂತ, ಗೌರವಾನ್ವಿತ ನಾಗರಿಕರೆನಿಸಿಕೊಂಡವರೂ ಈ ವಲಯದಲ್ಲಿ ಕಪ್ಪುಹಣ ಚಲಾವಣೆಗೆ ತಮ್ಮದೇ ಕೊಡುಗೆ ನೀಡಿದ್ದರು.
ಐವತ್ತು ಲಕ್ಷ ರೂಪಾಯಿ ಮಾರುಕಟ್ಟೆ ಮೌಲ್ಯ ನೀಡಿ ನಿವೇಶನ, ಕಟ್ಟಡ ಖರೀದಿಸಿದರೂ, ಮುದ್ರಾಂಕ ಶುಲ್ಕ ಮತ್ತು ನೋಂದಣಿ ಶುಲ್ಕ ಉಳಿಸಲು ಮಾರ್ಗದರ್ಶಿ ಮೌಲ್ಯ (ಗೈಡ್ ಲೈನ್ ವ್ಯಾಲ್ಯೂ)ಕ್ಕೆ ಅಂದರೆ 25-30 ಲಕ್ಷಕ್ಕೆ ಉಪ ನೋಂದಣಾಧಿಕಾರಿಗಳ ಕಾರ್ಯಾಲಯದಲ್ಲಿ ಶುದ್ಧಕ್ರಯಪತ್ರ ನೋಂದಣಿ ಮಾಡಿಸುತ್ತಿದ್ದರು. ಹೀಗಾಗಿ ಉಳಿದ 20-25 ಲಕ್ಷ ರೂಪಾಯಿ ಹಣ ತೆರಿಗೆ ವಂಚಿಸಿ, ಕಪ್ಪುಹಣವಾಗಿ ಚಲಾವಣೆಗೆ ಬರುತ್ತಿತ್ತು. 
ಈಗ ಮೋದಿ ಅವರು 500 ಮತ್ತು 1000 ರೂ. ಮುಖಬೆಲೆಯ ನೋಟುಗಳ ಚಲಾವಣೆಯನ್ನು ಅಧಿಕೃತವಾಗಿ ಹಿಂಪಡೆದಿರುವ ಹಿನ್ನೆಲೆಯಲ್ಲಿ ಹೀಗೆ ಕಪ್ಪು ಹಣ ಪಡೆದ ಮಂದಿ ಅದನ್ನು ಅಧಿಕೃತಗೊಳಿಸಿಕೊಳ್ಳುವುದು ಹೇಗೆ, ಸಿಕ್ಕಿಬಿದ್ದರೆ ಶೇ.120ರಿಂದ ಶೇ.200ರಷ್ಟು ದಂಡ ತೆರಬೇಕಾಗುತ್ತದೆ ಜೊತೆಗೆ ಆದಾಯ ತೆರಿಗೆ, ಮುದ್ರಾಂಕ ವಂಚನೆ ಆರೋಪವನ್ನೂ ಎದುರಿಸಬೇಕಾಗುತ್ತದೆ. ಜೈಲಿಗೆ ಹೋಗುವ ಸಂಭವವೂ ಇರುತ್ತದೆ ಎಂದು ಹೆದರಿ ಕಂಗೆಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಸದ್ಯಕ್ಕಂತೂ ಮನೆ, ನಿವೇಶನ, ಜಮೀನು ಖರೀದಿ, ನೋಂದಣಿ ಇಳಿಮುಖವಾಗಿದೆ.
ಕೆಲವರು ಪರಿಸ್ಥಿತಿಯ ಲಾಭ ಪಡೆದು, ಮಾರ್ಗದರ್ಶಿ ಬೆಲೆಗೆ ಸ್ಥಿರ ಸ್ವತ್ತುಗಳ ಖರೀದಿಗೆ ಮುಂದಾಗಿದ್ದರೆ, ಇನ್ನು ಮುಂದೆ ಕಪ್ಪುಹಣದ ಆಟ ನಡೆಯಲ್ಲ, ಹೀಗಾಗಿ ಸ್ಥಿರಸ್ವತ್ತುಗಳೇ ಶಾಶ್ವತ ಪ್ರಸ್ತುತ ಮಾರುಕಟ್ಟೆ ದರಕ್ಕಿಂತ ಶೇ.1೦ರಷ್ಟು ಹೆಚ್ಚಿಗೆ ಕೊಟ್ಟರೆ ಮಾತ್ರ ಮಾರುತ್ತೇವೆ ಎಂದು ಸ್ವತ್ತಿನ ಮಾಲೀಕರು ಹೇಳುತ್ತಿದ್ದಾರೆ. ಅಪಮೌಲ್ಯಗೊಂಡಿರುವ ಹಳೆಯ ನೋಟುಗಳನ್ನು ಹೊಸ ಚಲಾವಣೆಯಲ್ಲಿರುವ ಮೌಲ್ಯಯುತ ನೋಟಾಗಿ ಪರಿವರ್ತಿಸಿಕೊಳ್ಳಲು ಸಮಯಾವಕಾಶ ಬೇಕಾಗಿರುವುದರಿಂದ, ಜೊತೆಗೆ ಖಾತೆಯಿಂದ ನಗದು ತೆಗೆಯಲು ಮಿತಿ ಹೇರಿರುವ ಹಿನ್ನೆಲೆಯಲ್ಲಿ ಸದ್ಯಕ್ಕಂತೂ ಹೊಸ ವಹಿವಾಟುಗಳು ಯಾವುದೂ ನಡೆಯುತ್ತಿಲ್ಲವಾದರೂ ದರ ಏರಿಕೆ-ಇಳಿಕೆಯ ಮಾತುಕತೆಯಂತೂ ಭರ್ಜರಿಯಾಗಿ ಸಾಗಿದೆ.
ಮುಂದೇನಾಗತ್ತೆ?
ಅದೆಲ್ಲಾ ಸರಿ. ಮುಂದೇ ಏನಾಗತ್ತೆ. ಮನೆ, ನಿವೇಶನ, ಜಮೀನಿನ ದರ ಏರಿಕೆ ಆಗುತ್ತದೆಯೇ, ಇಲ್ಲ ಪಾತಾಳಕ್ಕೆ ಕುಸಿಯುತ್ತದೆಯೇ ಎಂಬ ಆತಂಕ ಕಾಡುತ್ತಿದ್ದು, ಎಲ್ಲರೂ ಈಗ ಕಾದು ನೋಡುವ ತಂತ್ರಕ್ಕೇ ಶರಣಾಗಿದ್ದಾರೆ.
ದರ ಏರಿಕೆ ಆಗತ್ತೆ: ಕೆಲವು ಆರ್ಥಿಕ ವಿಶ್ಲೇಷಕರ ರೀತ್ಯ, 500 ಮತ್ತು 1೦೦೦ ರೂ. ನೋಟುಗಳ ಚಲಾವಣೆ ರದ್ದು ಮಾಡಿರುವ ಹಿನ್ನೆಲೆಯಲ್ಲಿ ಕಪ್ಪು ಹಣಕ್ಕೆ ಕಡಿವಾಣ ಬಿದ್ದೇ ಬೀಳುತ್ತದೆ. ಹೀಗಾಗಿ ಭಾರೀ ಪ್ರಮಾಣದಲ್ಲಿ ಕಪ್ಪು ಹಣ ಇಟ್ಟಿರುವ ಮಂದಿ, ತಮ್ಮ ನೆಂಟರು, ಇಷ್ಟರು, ಗೆಳೆಯರ ನೆರವಿನಿಂದ ಸಾಧ್ಯವಾದಷ್ಟು ಹಣ ಪರಿವರ್ತನೆ ಮಾಡಿಕೊಂಡು ಹೊಸ ಹಣದಲ್ಲಿ ಅಧಿಕೃತವಾಗಿ ಜಮೀನು, ನಿವೇಶನ, ಕಟ್ಟಡ, ಫ್ಲಾಟ್ ಖರೀದಿಸಿ ಲಾಭ ಮಾಡಲು ಕೈಹಾಕುವ ಸಾಧ್ಯತೆ ಹೆಚ್ಚಾಗಿರುವ ಕಾರಣ ಕೆಲವೇ ದಿನದಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಭಾರೀ ಚೇತರಿಕೆ ಕಾಣುತ್ತದೆ ಎಂದು ಅಭಿಪ್ರಾಯಪಡುತ್ತಾರೆ.
ಹೊಸ ನೋಟುಗಳಲ್ಲಿ ಯಾವುದೇ ನ್ಯಾನೋ ಚಿಪ್ ಇಲ್ಲ ಎಂದು ಆರ್.ಬಿ.ಐ. ಹೇಳಿದ್ದರೂ, ಜನರಲ್ಲಿ ಹೊಸ ನೋಟಿನಲ್ಲಿ ಕಪ್ಪುಹಣ ಪತ್ತೆ ಮಾಡುವ ತಂತ್ರಜ್ಞಾನ ಇದೆ ಎಂಬ ಭೀತಿ ಇದೆ. ಜೊತೆಗೆ ಮತ್ತೆ ಸಾವಿರ ರೂಪಾಯಿ ನೋಟುಗಳನ್ನು ಹೊಸಬಣ್ಣ ಮತ್ತು ಹೊಸ ವಿನ್ಯಾಸದಲ್ಲಿ ಜಾರಿಗೆ ತರುವುದಾಗಿ ಕೇಂದ್ರ ಸರ್ಕಾರ ಹೇಳಿರುವ ಕಾರಣ, 56 ಇಂಚಿನ ಎದೆ ಇರುವ ಮೋದಿ, ಮತ್ತೆ ಮುಂದಿನ ಲೋಕಸಭಾ ಚುನಾವಣೆ ಹೊತ್ತಿಗೆ ಈಗ ಜಾರಿಗೆ ತಂದಿರುವ 2 ಸಾವಿರ ಮುಖ ಬೆಲೆಯ ಮತ್ತು 5೦೦ ರೂ ಮುಖಬೆಲೆಯ ಹೊಸ ನೋಟುಗಳನ್ನು ಹಿಂದಕ್ಕೆ ಪಡೆದು 1೦೦೦ ರೂ. ನೋಟುಗಳನ್ನು ಜಾರಿಗೆ ತರಬಹುದು ಎಂಬ ಭೀತಿಯೂ ಹಲವರಲ್ಲಿದೆ. ಹೀಗಾಗಿ ಮತ್ತೆ ನೋಟು ಶೇಖರಿಸಿಡುವುದಕ್ಕಿಂತ ಜಮೀನಿನ ಮೇಲೆ, ನಿವೇಶನ, ಫ್ಲಾಟ್ ಮೇಲೆ ಹಾಕುವುದೇ ಸೂಕ್ತ ಎಂಬ ನಿರ್ಧಾರಕ್ಕೆ ಬರುತ್ತಾರೆಂದೇ ಅವರು ಹೇಳುತ್ತಾರೆ.
ಹೀಗೇನಾದರೂ ಆದಲ್ಲಿ ಸಹಜವಾಗಿಯೇ ಸೈಟು, ಫ್ಲಾಟುಗಳಿಗೆ ಬೇಡಿಕೆ ಹೆಚ್ಚಾಗಿ ದರ ಏರಿಕೆ ಆಗುವುದು ಖಂಡಿತ. ಇದಕ್ಕೆ ವ್ಯತಿರಿಕ್ತವಾದ ಮತ್ತೊಂದು ವಾದವೂ ಇದೆ.
ದರ ಇಳಿಯತ್ತೆ: ಆದರೆ ಮತ್ತೆ ಕೆಲವು ಆರ್ಥಿಕ ತಜ್ಞರ ಅಭಿಪ್ರಾಯ ಸಂಪೂರ್ಣ ಭಿನ್ನವಾಗಿದೆ. ಅವರ ಪ್ರಕಾರ ಫ್ಲಾಟು, ಸೈಟುಗಳ ದರ ಇನ್ನು ಕೆಲವೇ ದಿನದಲ್ಲಿ ದೀಢೀರ್ ಕುಸಿಯುತ್ತದಂತೆ. ಅದಕ್ಕೆ ಅವರು ನೀಡುವ ಕಾರಣವೂ ತರ್ಕಬದ್ಧವಾಗೇ ಇದೆ. 
ಈಗಾಗಲೇ ಕೋಟ್ಯಂತರ ರೂಪಾಯಿ ಕಪ್ಪು ಹಣವನ್ನು ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಸುರಿದು, ಭೂಮಿ ಖರೀದಿಸಿ, ಫ್ಲಾಟ್ ನಿರ್ಮಿಸಲು ಕೋಟ್ಯಂತರ ರೂಪಾಯಿ ಹಣ ಸುರಿದು ಬಡ್ಡಿಯನ್ನೂ ಕಟ್ಟಲಾರದೆ ಇರುವ ಮಂದಿ, ಕೇಂದ್ರ ಸರ್ಕಾರದ ನಿರ್ಧಾರದಿಂದ ತಬ್ಬಿಬ್ಬಾಗಿ ಹೋಗಿದ್ದಾರೆ.
ಜನರ ಬಳಿ ಈಗ ಕಪ್ಪು ಹಣ ಇಲ್ಲ. ಹೀಗಾಗಿ ಯಾರೂ ಸೈಟು, ಫ್ಲಾಟು ಖರೀದಿಗೆ ಮುಂದೆ ಬಾರದಿದ್ದರೆ ತಾವು ಹಾಕಿರುವ ಬಂಡವಾಳದ ಗತಿಯೇನು ಎಂಬ ಆಂತಕಕ್ಕೆ ಸಿಲುಕಿದ್ದಾರೆ. ಹೀಗಾಗಿ ಅವರು ಬಂದಿದ್ದೇ ಲಾಭ ಅಂತ ಕಡಿಮೆ ಬೆಲೆಗೆ ಮಾರಾಟ ಮಾಡಲು ಮುಂದಾದರೆ, ದರ ಇಳಿಕೆ ಖಂಡಿತಾ ಎನ್ನುತ್ತಾರೆ.
ಈ ಮಧ್ಯೆ ಶ್ರೀಸಾಮಾನ್ಯರು ಕಾದು ನೋಡುವ ತಂತ್ರ ಅನುಸರಿಸುತ್ತಿದ್ದು, ಮಾರುಕಟ್ಟೆಯಲ್ಲಿ ಏರಿಕೆ ಆಗುತ್ತದೋ ಇಳಿಕೆ ಆಗುತ್ತದೋ ನೋಡಿ ಖರೀದಿಗೆ ಮುಂದಾಗುವ ಯೋಚನೆಯಲ್ಲಿದ್ದಾರೆ. ಸಧ್ಯಕ್ಕಂತೂ ಸ್ಥಗಿತಗೊಂಡಿರುವ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಇನ್ನು ಕೆಲವೇ ದಿನಗಳಲ್ಲಿ ಸಂಚಲನ ಉಂಟಾಗುವುದಂತೂ ನಿಶ್ಚಿತ. ನಾವೂ ಏನಾಗುತ್ತದೆಕಾದೇ ನೋಡಬೇಕು.

ಮುಖಪುಟ /ಲೇಖನಮಾಲೆ