ಮುಖಪುಟ /ಲೇಖನಮಾಲೆ 
 

ತಾಯಿಗೆ ಮಿಗಿಲಾದ ದೇವರಿಲ್ಲಾ....
ಇಂದಿನ ಯಾಂತ್ರಿಕ ಯುಗದಲ್ಲಿ ತಾಯಿ -ಮಗುವಿನ ನಡುವೆ ಮಮಕಾರ ಪ್ರೀತಿ ಇದೆಯೇ?

* ಶ್ರೀನಿವಾಸ್  

mother's day, ತಾಯಂದಿರ ದಿನ, ಅಮ್ಮಂದಿರ ದಿನ.ಅಮ್ಮ : ಈ ಭುವಿಯಲ್ಲಿ ಕಣ್ಣು ಬಿಡುವ ಪ್ರತಿಯೊಂದು ಶಿಶುವಿನ ಬಾಯಿಂದ ಮೊದಲು ಬರುವ ಪದವೇ ಅಮ್ಮ.. ಅಳುವಿನಲ್ಲೂ ಮಗು ತನ್ನ ತಾಯಿಯನ್ನು ಅಕ್ಕರೆಯಿಂದ ಅಮ್ಮ... ಎಂದು ಕರೆಯುತ್ತದೆ. ಯಾವುದೇ ಭಾಷೆಯಲ್ಲೂ ಅಮ್ಮ ಎಂಬುದು ಅತ್ಯಂತ ಮಧುರವಾದ ಶಬ್ದ. ಪುಟ್ಟ ಕಂದನ ಮೊದಲ ತೊದಲು ನುಡಿಯೂ ಅಮ್ಮ.

ಒಂದು ಕಾಲಘಟ್ಟದ ಮಾತು:

ನಮ್ಮ ವೇದೋಪನಿಷತ್ತುಗಳಲ್ಲಿ ವಿಘ್ನನಿವಾರಕನಾದ ಗಣಪ ಪ್ರಥಮ ವಂದಿಪನಾದರೆ, ಪ್ರಥಮ ಪೂಜಿತೆ ತಾಯಿ. ಮಾತೃದೇವೋ ಭವ, ಪಿತೃದೇವೋ ಭವ, ಆಚಾರ್ಯ ದೇವೋ ಭವ, ಅತಿಥಿದೇವೋ ಭವ ಎಂದು ಹೇಳುವಾಗ ತಾಯಿಗೇ ಅಗ್ರಸ್ಥಾನ.

ಉಪನಿಷತ್ತಿನ ಭಾಷ್ಯದಲ್ಲಿ

ನ ಗಾಯತ್ರಿಯಾ ಪರಂಮಂತ್ರಂ, ನಮಾತಾ ಪರೋದೈವಃ ಎಂಬ ವಾಕ್ಯವಿದೆ. ಅಂದರೆ ಗಾಯತ್ರೀ ಮಂತ್ರಕ್ಕಿಂತ ದೊಡ್ಡದಾದ, ಶ್ರೇಷ್ಠವಾದ ಮಂತ್ರ ಮತ್ತೊಂದಿಲ್ಲ. ಅಂತೆಯೇ ತಾಯಿಗಿಂತ ಮಿಗಿಲಾದ ದೇವರಿಲ್ಲ. ತಾಯಿ ಪ್ರತ್ಯಕ್ಷ ದೇವತೆ.

ಅನುಭಾವಾಮೃತದಿಂದ ತಾಯಿಯ ಹಿರಿಮೆಯ ಪ್ರತಿಪಾದಿಸುವ ಹಲವು ಪದಪುಂಜಗಳು, ವಾಕ್ಯಗಳು, ಗಾದೆಗಳು ಸೃಷ್ಟಿಯಾಗಿವೆ. ಕಾಣದ ದೇವರು ಊರಿಗೆ ನೂರು, ಕಾಣುವ ತಾಯೇ ಪರಮ ಗುರು ತಾಯಿಗಿಂತ ದೇವರಿಲ್ಲ, ಉಪ್ಪಿಗಿಂತ ರುಚಿಯಿಲ್ಲ ಎಂಬ ಮಾತುಗಳು ಅದೆಷ್ಟು ಅರ್ಥಪೂರ್ಣ. ನಮಗೆ ನಿತ್ಯ ಬೆಳಕು ನೀಡುವ, ಪ್ರತಿನಿತ್ಯ ದರ್ಶನ ನೀಡುವ ಭಾಸ್ಕರ ಅರ್ಥಾತ್ ಸೂರ್ಯ ಭಗವಾನನಂತೆಯೇ ದಿನವೂ ನಮ್ಮ ಕಣ್ಣಿಗೆ ಗೋಚರಿಸುವ, ನಮ್ಮನ್ನು ಅಕ್ಕರೆಯಿಂದ ಮುದ್ದಾಡಿ, ಲಾಲಿಸಿ, ಪಾಲಿಸಿದ, ನಮ್ಮ ಕಷ್ಟಕ್ಕೆ ತಾನೂ ಮರುಗಿ, ನಮ್ಮ ಯಶಸ್ಸು ಕಂಡು ಹಿರಿಹಿರಿ ಹಿಗ್ಗಿ ಹಾರೈಸುವ ತಾಯಿಗಿಂಥ ಮಿಗಿಲಾದ ದೇವರಿನ್ನೆಲ್ಲಿರಲು ಸಾಧ್ಯ.

ಅಮ್ಮ ಎಂದರೆ, ಅದೇನು ಹರುಷ, ಆ ಎರಡಕ್ಷರದ ಪದದಲ್ಲಿ ಅದೇನು ಚೈತನ್ಯ, ದೇವರು ದಯಾಮಯ. ಕರುಣಾಮಯಿ. ತಾಯಿಯೂ ಕರುಣಾಮಯಿ. ತ್ಯಾಗಮಯಿ. ದಯಾಮಯಿ. ಈ ಸೃಷ್ಟಿಯಲಿ ಭಗವಂತ, ತಾಯಿಯ ರೂಪದಲ್ಲಿ ಪ್ರತಿಯೊಬ್ಬರಿಗೂ ಸಾಕಾರನಾಗುತ್ತಾನೆ.

ಅಮ್ಮನ ವರ್ಣಿಸಲು ನಾನಂತೂ ಖಂಡಿತಾ ಶಕ್ತನಲ್ಲ. ತಾಯಿಯ ಬಗ್ಗೆ ಬರೆಯಲು ಅದೆಷ್ಟು ಪುಟಗಳಾದರೂ ಸಾಲುವುದಿಲ್ಲ. ನವಮಾಸ ಗರ್ಭದಲ್ಲಿ ಹೊತ್ತು, ಹಲವು ನೋವು, ಯಾತನೆ ಅನುಭವಿಸಿ, ಸೃಷ್ಟಿಗೆ ಕಾರಣವಾಗಿ, ತನ್ನ ಮಡಿಲಲ್ಲಿಟ್ಟು ಸಣ್ಣ ನೋವೋ ಆಗದಂತೆ ಜತನವಾಗಿ ಕಾಪಾಡಿ, ತಾನು ಅರೆಹೊಟ್ಟೆ ಇದ್ದರೂ, ಮಗನಿಗೆ ಹೊಟ್ಟೆತುಂಬಾ ಕೈತುತ್ತು ಹಾಕಿ ಬೆಳಸುವ ತಾಯಿಗೆ ತಾಯಿಯೇ ಸಾಟಿ.

ಈ ಜಗತ್ತಿನಲ್ಲಿ ಹುಡುಕಿದರೆ ಕೋಟ್ಯನುಕೋಟಿ ಕೆಟ್ಟ ಮಕ್ಕಳು ದೊರಕುತ್ತಾರೆ. ಆದರೆ, ಕೆಟ್ಟ ತಾಯಿ ಮಾತ್ರ ಅತಿ ವಿರಳ ಎಂಬುದು ಅನುಭಾವ. ತಾಯಿ ಮಮಕಾರದ ಸಾಕಾರ ಮೂರ್ತಿ. ತಾಯಿಯ ಹೃದಯ ಬಹು ಮೃದು, ಮಮಕಾರದ ಹಿಮವತ್ಪರ್ವತ. ಮಾತೃ ಹೃದಯದ ಬಗ್ಗೆ ನಾನು ಬಾಲ್ಯದಲ್ಲಿ ಓದಿದ, ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ನಿಂತ ಕಥೆಯೊಂದನ್ನು ನಿಮ್ಮೊಂದಿಗೆ ಹಂಚಿಕೊಳ್ಳಬಯಸುತ್ತೇನೆ...

ಪ್ರಿಯತಮೆಯೊಬ್ಬಳು... ತನ್ನ ಪ್ರಿಯಕರನಿಗೆ.. ನೀನು ನಿನ್ನ ತಾಯಿಯನ್ನು ಕೊಂದು ಆಕೆಯ ಹೃದಯವನ್ನು ತಂದು ನನಗೆ ಕೊಟ್ಟರೆ ಮಾತ್ರ, ನಾನು ನಿನ್ನ ನ್ನು ಮದುವೆ ಆಗುವೆ ಎಂದು ಹಠ ಹಿಡಿಯುತ್ತಾಳೆ.

ತನ್ನ ಪ್ರಿಯತಮೆಯ ಮೋಹಪಾಶದಲ್ಲಿ ಬಂಯಾಗಿ, ತನ್ನನ್ನೂ, ತನ್ನ ತನವನ್ನೂ ಮರೆತಿದ್ದ ಆ ಹುಚ್ಚು ಪ್ರೇಮಿ, ಮನೆಗೆ ಹೋಗಿ ತಾಯಿಯನ್ನು ಕೊಂದು, ನಿರ್ದಯದಿಂದ ಆಕೆಯ ಎದೆ ಸೀಳಿ ಹೃದಯ ಕಿತ್ತುಕೊಂಡು ಆತುರಾತುರವಾಗಿ ತನ್ನ ಪ್ರಿಯತಮೆಗೆ ತೋರಿಸಿ ಮೆಚ್ಚುಗೆಗಳಿಸಬೇಕು ಎಂಬ ಆತುರದಲ್ಲಿ ಓಡೋಡಿ ಬರುತ್ತಿದ್ದನಂತೆ.

ಹೀಗೆ ಓಡುತ್ತಿದ್ದಾಗ ರಸ್ತೆಯಲ್ಲಿ ಆ ಕೆಟ್ಟ ಮಗ ಕಲ್ಲೆಡವಿ ಕೆಳಗೆ ಬೀಳುತ್ತಾನೆ. ಆಗ ಅವನ ಕೈಯಲ್ಲಿದ್ದ ತಾಯಿಯ ಹೃದಯ ಕೇಳಿತಂತೆ. ಏನು ಕಂದ ಜೋರಾಗಿ ಬಿದ್ದು ಬಿಟ್ಟೆಯಾ? ನೋವಾಯಿತೆ? ಎಂದು ಮಮ್ಮಲ ಮರುಗಿತಂತೆ. ಆಗ ಹುಚ್ಚು ಪ್ರೇಮಿಗೆ ಮಾತೃವಾತ್ಸಾಲ್ಯದ ಬೆಲೆ ತಿಳಿಯಿತು. ಆದರೆ, ಅಷ್ಟೊತ್ತಿಗಾಗಲೇ ಕಾಲ ಮಿಂಚಿತ್ತು.

ಮಕ್ಕಳು ತಾಯಿಗೆ ಎಷ್ಟೇ ಕೇಡು ಮಾಡಿದರೂ, ತಾಯಿ ಮಾತ್ರ ಎಂದೂ ತನ್ನ ಮಕ್ಕಳಿಗೆ ಕೇಡು ಬಯಸುವುದಿಲ್ಲ. ಇಷ್ಟಾದರೂ ಪ್ರಸಕ್ತ ಸಮಾಜದಲ್ಲಿ, ಪ್ರಸಕ್ತ ಸನ್ನಿವೇಶದಲ್ಲಿ ಮಕ್ಕಳು ಅಸ್ಮರಣೀಯರಾಗಿ, ಕೃತಘ್ನರಾಗಿ ತಮ್ಮ ತಾಯಿಯನ್ನೇ ಮರೆಯುತ್ತಿರುವುದು ದುರ್ದೈವ.

ಅದಕ್ಕೇ ಹಿರಿಯರು ಹೇಳೋದು... ಒಬ್ಬ ತಾಯಿ ಹತ್ತು ಮಕ್ಕಳನ್ನೂ ಸಾಕುತ್ತಾಳೆ. ಆದರೆ, ಹತ್ತು ಮಕ್ಕಳು ಒಬ್ಬ ತಾಯಿಯನ್ನು ಸಾಕಲು ಹಿಂಜರಿಯುತ್ತಾರೆ. ವಾತ್ಸಲ್ಯ ಮಯಿಯಾದ ತಾಯಿಯನ್ನು ಆನಂದವಾಗಿರುವಂತೆ ನೋಡಿ ಕೊಳ್ಳುವುದು ಪ್ರತಿಯೊಬ್ಬ ಮಗನ ಕರ್ತವ್ಯ. ಆ ಅಂದಹಾಗೆ ಏಳೇಳು ಜನ್ಮ ಎತ್ತಿದರೂ ತಾಯಿಯ ಋಣ ಮಾತ್ರ ತೀರಿಸಲು ಸಾಧ್ಯವೇ ಇಲ್ಲ ಎಂಬುದು ಹಿರಿಯರ ಅಂಬೋಣ.

ಪ್ರಸಕ್ತ ಕಾಲಘಟ್ಟದ ಮಾತು:

ತಾಯಿಯ ಹಿರಿಮೆ, ಮಹತ್ವ ವಿವಾದಾತೀತವಾಗಿದ್ದ ಕಾಲ ಒಂದಿತ್ತು. ಅದುವೇ ಪ್ರಥಮ ಕಾಲಘಟ್ಟ. ಆದರೆ, ಇಂದು.. ಏನಾಗಿದೆ. ನಗರ ಪ್ರದೇಶದಲ್ಲಿ , ಹೈಟೆಕ್ ಸಮಾಜದಲ್ಲಿ, ತಾಯಿಯೂ ತನ್ನ ಮಕ್ಕಳನ್ನು ನಿರ್ಲಕ್ಷಿಸುತ್ತಿದ್ದಾಳೆಯೇ? ತಾಯಿಗೆ ತನ್ನ ಮಕ್ಕಳ ಮೇಲೆ ಆಸ್ಥೆ ಕಡಿಮೆಯಾಗಿದೆಯೇ? ತಾಯಿ ಎಂಬ ಪದ ಒಂದು ಹಂತದಲ್ಲಿ ಅರ್ಥ ಕಳೆದುಕೊಳ್ಳುತ್ತಿದೆಯೇ ಎಂಬ ಅನುಮಾನವೂ ಮೂಡತೊಡಗಿದೆ.

ಯಾಂತ್ರಿಕ ಬದುಕಿನ ನಗರ ಜೀವನದಲ್ಲಿ, ಐಷಾರಾಮದ ಬದುಕಿಗೆ ಮಾರುಹೋಗಿರುವ ಜನ, ತಾವೂ ಕಾರಿನಲ್ಲಿ ಓಡಾಡಬೇಕು, ಬಂಗಲೆಯಲ್ಲಿ ವಾಸ ಮಾಡಬೇಕು, ಮೈತುಂಬಾ ಒಡವೆ ವಸ್ತ್ರ ಧರಿಸಬೇಕು, ಸೊಸೈಟಿಯಲ್ಲಿ ಆಡಂಬರದಿಂದ ಬಾಳಬೇಕೆಂಬ ಮಹದಾಸೆಯಿಂದ ಇಬ್ಬರೊಂದಾಗಿ ದುಡಿಯಲು ಆರಂಭಿಸಿದ್ದಾರೆ.

ಏನು ಮಾಡೋದು ಹೇಳಿ.. ಇಬ್ಬರೂ ದುಡಿಯದಿದ್ದರೆ ಸಂಸಾರ ರಥವೇ ಸಾಗಲ್ಲ ಎಂಬುದು ಹಲವರ ಹೇಳಿಕೆ. ಆದರೆ, ಇದು ಖಂಡಿತಾ ಅಹನ್ಯಹನಿ ಕಾಲಕ್ಷೇಪಕ್ಕೆ ಅಲ್ಲ. ಈ ವಾದದಲ್ಲಿ ಹುರುಳಿಲ್ಲ. ಇಬ್ಬರೊಂದಾಗಿ ದುಡಿಯುವುದು ಅಭಿವೃದ್ಧಿಯ ಆಸೆಯಿಂದಲೇ ಹೊರೆತು, ಸಂಸಾರವೆಂಬ ರಥ ಸಾಗಿಸಲಿಕ್ಕಲ್ಲ.

ಈ ಜೋಡೆತ್ತಿನ ದುಡಿಮೆಯ ನೆಲೆಯಲ್ಲಿ ತಾಯಿ, ತಾನೇ ಎದೆಹಾಲು ಕುಡಿಸಿ, ಆರೈಕೆ ಮಾಡಬೇಕಾದ ಮೂರು ತಿಂಗಳ ಹಸು ಕಂದಮ್ಮನನ್ನೂ ಮಕ್ಕಳನ್ನು ನೋಡಿಕೊಳ್ಳುವ ಗೂಡಿಗೆ (ಕ್ರೆಷ್) ಬಿಟ್ಟು.. ತಾನು ಕೆಲಸಕ್ಕೆ ಹೋಗುತ್ತಾಳೆ. ಸಂಜೆ.. ಮನೆಗೆಬರುವ ಹೊತ್ತಿಗೆ ಆಯಾಸ. ಮಗುವಿಗೆ ಅಕ್ಕರೆಯಿಂದ ಹಾಲು ಉಣಿಸಲು ಈಕೆಗೆ ವ್ಯವಧಾನವಿಲ್ಲ. ತಂದೆಗಂತೂ.. ಇನ್ನೂ ಬಿಡುವಿಲ್ಲ. ಹೀಗಾಗಿ ಹಲವು ಮಕ್ಕಳು, ತಂದೆ ತಾಯಿ, ಅಜ್ಜ, ಅಜ್ಜಿ, ಅಣ್ಣ ತಮ್ಮ ಎಲ್ಲರೂ ಇದ್ದೂ ಅನಾಥರಂತೆ ಬೆಳೆಯುತ್ತಾರೆ. ತಾಯಿಯ ಸಹಜ ಪ್ರೀತಿ ವಾತ್ಸಲ್ಯದಿಂದ ವಂಚಿತರಾಗುತ್ತಿದ್ದಾರೆ.

ನಾನು ಚಿಕ್ಕವನಾಗಿದ್ದಾಗ, ಅಮ್ಮ ಮಕ್ಕಳನ್ನು ಬಿಟ್ಟೇ ಇರುತ್ತಿರಲಿಲ್ಲ. ನಾವು ಸ್ಕೂಲಿಗೆ ಹೋಗಿ ಬರುವ ನಾಲ್ಕು ಗಂಟೆ ಅಮ್ಮನಿಂದ ದೂರಾಗಿರುತ್ತಿದ್ದೆವೇ ಹೊರೆತು, ಮಿಕ್ಕೆಲ್ಲಾ ಸಮಯದಲ್ಲಿ ತಾಯಿಯ ಪ್ರೀತಿ ಅಕ್ಕರೆಯಲ್ಲೇ ಬೆಳೆದವರು. ಅದೃಷ್ಟವಂತರು.

ಅಮ್ಮನ ಆ ಅಕ್ಕರೆಯಲ್ಲಿಯೇ ರಾಮಾಯಣ, ಮಹಾಭಾರತದ ಸಾರವನ್ನು ಅರಿತವರು, ಪಾಡ್ಯ ಬಿದಿಗೆ, ತದಿಗೆ..ಯ ಕಲಿತವರು, ಋತುಗಳ ವಿವರ ತಿಳಿದವರು. ಇದು ಉತ್ತಮ ಸಂಸ್ಕಾರದ ಬಾಳ್ವೆಗೆ ಇಂದೂ ನಮಗೆ ದಾರಿದೀಪವಾಗಿದೆ. ಅದಕ್ಕೇ ಹಿರಿಯರು ಮನೆಯೆ ಮೊದಲ ಪಾಠಶಾಲೆ ಜನನಿ ತಾನೆ ಮೊದಲ ಗುರುವು ಜನನಿಯಿಂದ ಪಾಠ ಕಲಿತ ಜನರು ಧನ್ಯರು ಎಂದು ಹಾಡಿದ್ದು, ನುಡಿದದ್ದು.

ಆದರೆ, ಇಂದು ತಮ್ಮ ಮಕ್ಕಳು ಕ್ಲಾಸಿಗೆ ಫಸ್ಟ್ ಬರಬೇಕು, ತಾನು ಸರೀಕರೆದುರು ತಲೆಎತ್ತಿ ಬೀಗಬೇಕು ಎಂಬ ಬಯಕೆಯ ಪರಂತು ತಾಯಂದಿರಿಗೆ ಮತ್ತಾವ ಆಸೆಯೂ ಇಲ್ಲವಾಗಿದೆ. ಹೀಗಾಗೇ ಮಕ್ಕಳ ಮೇಲೆ ಆಸ್ಥೆಯೂ ಕಡಿಮೆಯಾಗಿದೆ.

ಪ್ರಸಕ್ತ ಬದುಕಿನ ಜಂಜಾಟದ ನಡುವೆಯೂ ಪ್ರೀತಿ, ವಾತ್ಸಲ್ಯ, ಮಮಕಾರಕ್ಕೆ ಅರ್ಥ ಬರಬೇಕು. ಮಾನವತ್ವ ಮೆರೆಯಬೇಕು.

ಮುಖಪುಟ /ಲೇಖನಮಾಲೆ