ಮುಖಪುಟ /ಲೇಖನಮಾಲೆ 
 

ಕೋತಿಯ ಕತೆ, ವ್ಯಥೆ: ಪ್ರವಾಸೋಧ್ಯಮ ಸಚಿವರಿಗೆ ವಾನರನ ಓಲೆ

ಸ್ವಾಮಿ,

Monkeyನನ್ನ ಹೆಸರು ಹನುಮಂತ ನಾನು ಮತ್ತು ನನ್ನ ಬಂಧು ಬಳಗ ಹೊಸಪೇಟೆಯಿಂದ ಅನತಿ ದೂರದಲ್ಲಿರುವ ಜಂಬುನಾಥ ಗುಡ್ಡದಲ್ಲಿ ಅನೇಕ ವರ್ಷಗಳಿಂದ ವಾಸವಾಗಿದ್ದೇವೆ. ವಿಜಯನಗರ ಅರಸರ ಕಾಲದಿಂದಲೂ ಆಂಧ್ರ ಹಾಗೂ ಕರ್ನಾಟಕ ರಾಜ್ಯದ ಭಕ್ತರು ಈ ದೇವಸ್ಥಾನಕ್ಕೆ ಬಂದು ಶಿವನಿಗೆ ಪೂಜೆ ಸಲ್ಲಿಸಿ, ಆರ್ಶಿವಾದ ಪಡೆಯುತ್ತಿದ್ದರು. ಸಾವಿರಾರು ವರ್ಷಗಳ ಹಿಂದೆ ನಮ್ಮ ಕುಲದೈವ ವಾನರ ಹಿರಿಯ ಜಾಂಬುವಂತನು ಹತ್ತು ಸಾವಿರ ವರ್ಷಗಳ ಕಾಲ ತಪಸ್ಸು ಮಾಡಿದ ಪುಣ್ಯ ಕ್ಷೇತ್ರವಿದು. ಜಾಂಬವಂತನ ಜಪ, ತಪ ಯುಗ ಯುಗಳು ಕಳೆದರೂ ಮುಗಿಯಲಿಲ್ಲ. ತಪೋ ಜ್ವಾಲೆ ಮೂರು ಲೋಕಗಳನ್ನು ಆವಾರಿಸಿದಾಗ ಶಿವನು ದರ್ಶನ ನೀಡಿ ಜಾಂಬವಂತನ ಜೊತೆಯಲ್ಲಿ ಈ ಬೆಟ್ಟದಲ್ಲಿ  ನೆಲಸಿದನೆಂದು ನನ್ನ ಅಜ್ಜ, ಮುತ್ತಾತಾಂದಿರು ಹೇಳುತ್ತಿದ್ದರು. ಗಿಡಮರಗಳಿಂದ ತುಂಬಿಕೊಂಡಿದ್ದ ಈ ಬೆಟ್ಟದಲ್ಲಿ  ನಾವು ಅವುಗಳ ಹಣ್ಣು ಹಂಪಲಗಳಿಂದ ಹಸಿವು ನೀಗಿಸಿಕೊಂಡು, ಸುಖಕರ ಜೀವನ ಸಾಗಿಸುತ್ತಿದ್ದೇವು. ಈಗ ಬೆಟ್ಟದಲ್ಲಿ ಗಿಡಮರಗಳು ಮಾಯವಾಗಿವೆ.

ಹಿಂದೆ ಈ ಪ್ರದೇಶದಲ್ಲಿ ಭಾರಿ ಸಿಡಿಲು (ಡೈನಾಮಿಕ್ ಬಾಂಬ್ ಸ್ಫೋಟ) ಬಡಿದ ಸದ್ದು ಕೇಳುಸುತ್ತಿತ್ತು.. ಈ ಸದ್ದಿಗೆ ಕೆಲ ಬಂಧು ಮಿತ್ರರು  ಜಾಗವನ್ನು ಖಾಲಿಮಾಡಿದರೆ, ಇನ್ನು ಕೆಲವರು ಪ್ರಾಣಬಿಟ್ಟರು. ಈಗ ಸದ್ದು ನಿಂತಿದೆ. ಬೆಟ್ಟದ ಮೇಲೆ ಭಾರಿ ಗಾತ್ರದ ವಾಹನಗಳು ಹಗಲು ರಾತ್ರಿ ಎನ್ನದೆ ಓಡಾಡುತ್ತಿವೆ. ವಾಹನಗಳ ಆರ್ಭಟಕ್ಕೆ ನೆಮ್ಮದಿ ಇಲ್ಲವಾಗಿದೆ. ಈ ಪ್ರದೇಶದಲ್ಲಿ ನಮಗೆ ಆಹಾರ ಸಿಗುತ್ತಿಲ್ಲ. ಬದಲಾಗಿ ಕೆಂಪು ಮಣ್ಣು ಸಿಗುತ್ತದೆ. ಈ ಮಣ್ಣಿಗೆ ದೇಶ ವಿದೇಶಗಳಲ್ಲಿ ಬಾರಿ ಬೆಲೆಯಿದೆ ಎಂದು ಭಕ್ತರೊಬ್ಬರು ನಮಗೆ ಹೇಳಿದ್ದರು. ಇದನ್ನು ಅರಿತ ನಾವು ಮಣ್ಣನ್ನು ತಿಂದು ಹಸಿವು ನೀಗಿಸಿಕೊಳ್ಳಬಹದೆಂದು ಪ್ರಯತ್ನ ಪಟ್ಟೆವು. ಆದರೆ, ಪ್ರಯೋಜನ ಆಗಲಿಲ್ಲ. ಮಣ್ಣಿಗಿಂತ ಅನ್ನ ಲೇಸು ಅನ್ನಿಸಿತು. ಇಲ್ಲಿಗೆ ಬಂದ ಭಕ್ತರು ನಮಗೆ ಹಣ್ಣುಗಳು ಇತರೆ ಪದಾರ್ಥಗಳನ್ನು ನೀಡಿ ನಮ್ಮನ್ನು ಪೋಷಿಸಿದ್ದಾರೆ.

ಅನೇಕ ವರ್ಷಗಳಿಂದ ನಮ್ಮಗಳ ಪಾಡಂತು ಹೀಗಿದೆ. ಶತ ಶತಮಾನಗಳಿಂದ ಇಲ್ಲಿ ನೆಲಸಿರುವ ಶಿವನಿಗೆ ನೆಲೆಯಿಲ್ಲದಂತಾಗಿದೆ. ಖನಿಜ ಮಾರುವ ಜನ ಸ್ವಾರ್ಥಕ್ಕಾಗಿ ಶಿವನನ್ನು ಹೊರದೂಡುವ ಕಾಯಕದಲ್ಲಿ ನಿರತರಾಗಿದ್ದಾರೆ. ಈ ಹಿಂದೆ ಇಲ್ಲಿನ ಭಕ್ತರು  ದೇವಸ್ಥಾನ ರಕ್ಷಣಗಾಗಿ ಹೋರಾಟ ನಡೆಸಿದ್ದರು. ಇವರ ಹೋರಾಟ ಫಲಸದೆ ದೇಗುಲಕ್ಕೆ ಕಾಯಕಲ್ಪ ದೊರೆಯಲಿಲ್ಲ. ನಾನು ತಮ್ಮಲ್ಲಿ ಮನವಿ ಮಾಡಿಕೊಳ್ಳುವುದೇನಂದರೆ, ಪ್ರವಾಸೋಧ್ಯಮ ಮಂತ್ರಿಗಳಾದ ನೀವು ಹಂಪಿಗೆ ನೂರಾರು ಕೋಟಿಗಳ ವೆಚ್ಚದಲ್ಲಿ ಅಭಿವೃದ್ಧಿಯನ್ನು ಕೈಗೊಂಡ್ಕುರುವಿರಿ. ಪಂಪಾ ಕ್ಷೇತ್ರಕ್ಕೆ  ದಕ್ಷಿಣ ದ್ವಾರ ಎನ್ನುವ ಜಂಬುನಾಥ ಗುಡ್ಡದ ಕಡೆ ನೀವು ತಿರಿಗಿ ನೋಡಿಲ್ಲ.

ವಾನರ ಸಂತತಿಗೆ ಆಹಾರ ಆಶ್ರಯವಿಲ್ಲದೆ ಹೋದರೂ ಚಿಂತೆಯಿಲ್ಲ. ಮುಂದಿನ ಪೀಳಿಗೆಗಾಗಿ ಈ ಪುರಾತನ ಐತಿಹಾಸಿಕ ದೇಗುಲದ ರಕ್ಷಣೆ ಮುಂದಾಗಿ ನಿರ್ಲಕ್ಷಿಸಿದಲ್ಲಿ ಸುಂದರ ದೇಗುಲ ಗಣಿಮಣ್ಣಿನಲ್ಲಿ ಹುದುಗಿ ಹೋಗುವ ಕಾಲ ದೂರವಿಲ್ಲ. ನಾನು ಬರೆದ ಈ ಪತ್ರ ಕೆಲವರಿಗೆ ಇಷ್ಟವಾಗದಿರಬಹದು. ಆದರೆ, ನಾನು ಬೆರದ ಎಲ್ಲ ಸಂಗತಿ ನಗ್ನ ಸತ್ಯ. ಈ ಪತ್ರದಲ್ಲಿ ನಾನು ಏನಾದರೂ ತಪ್ಪು ಬರೆದಿದ್ದರೆ ಕ್ಷಮಿಸಿ.  ಈ ಪತ್ರ ನಿಮ್ಮ ಕೈಸೇರಿದ ಕೂಡಲೇ ತಾವು ಕಾರ್ಯಪೃವತ್ತರಾಗುತ್ತೀರಿ ಎಂದು ನಾನು ನಂಬಿದ್ದೇನೆ.          

ನಿಮ್ಮ ನಂಬುಗೆಯ
ರಾಮನ ಭಂಟ ಹನುಮ

 ಪೋಷ್ಟುಮ್ಯಾನ್: ಪಿ.ಸತ್ಯನಾರಾಯಣ    

ಮುಖಪುಟ /ಲೇಖನಮಾಲೆ