ಮುಖಪುಟ /ಲೇಖನಮಾಲೆ 
 

ಪಿಟೀಲು ಮಾಂತ್ರಿಕ ಕುನ್ನಕುಡಿ ಒಂದು ನೆನಪು
ಮಹಾನ್ ಚೇತನ ಕುನ್ನಕುಡಿಯವರನ್ನು ಕಂಡ ಆ ಮಧುರ ಕ್ಷಣ

*ಟಿ.ಎಂ.ಸತೀಶ್

ಬೆಂಗಳೂರು: ನಾದ ಲೋಕದ ಮೋಡಿಗಾರ, ಪಿಟೀಲು ಮಾಂತ್ರಿಕ ಕುನ್ನಕುಡಿ ವೈದ್ಯನಾಥನ್ ಈಗ ನೆನಪು ಮಾತ್ರ. ಕುನ್ನಕುಡಿ ಅವರ ಪಾರ್ಥಿವ ಶರೀರ ಪಂಚಭೂತಗಳಲ್ಲಿ ಲೀನವಾಗಿದೆ. ಆದರೆ ಅವರು ನಾದ ಲೋಕದಲ್ಲಿ ಮೂಡಿಸಿದ ಛಾಪು ಅಜರಾಮರವಾಗಿದೆ.

ಶಾಸ್ತ್ರೀಯ ಸಂಗೀತ ಲೋಕದಲ್ಲಷ್ಟೇ ಅಲ್ಲದೆ, ಸಿನಿಮಾ ಸಂಗೀತ, ಲಘು ಸಂಗೀತ ಕ್ಷೇತ್ರಕ್ಕೂ ಅಮೂಲ್ಯ ಕೊಡುಗೆ ನೀಡಿರುವ ಕುನ್ನಕುಡಿ ಅವರು, ಎಂ.ಜಿ. ರಾಮಚಂದ್ರನ್, ಶಿವಾಜಿ ಗಣೇಶನ್ ಸೇರಿದಂತೆ ಪ್ರಖ್ಯಾತ ತಮಿಳು ನಟರ ಚಿತ್ರಗಳಿಗೆ ಸಂಗೀತ ನೀಡಿದ್ದಾರೆ. ತಿರುಮಲೈ ತೆಂಕುಮರಿ ಚಿತ್ರಕ್ಕೆ ನೀಡಿದ ಸಂಗೀತಕ್ಕಾಗಿ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿಗೂ ಅವರು ಪಾತ್ರರಾಗಿದ್ದಾರೆ.

1935ರಲ್ಲಿ ರಾಮಸ್ವಾಮಿ ಶಾಸ್ತ್ರೀ ಅವರ ಪುತ್ರನಾಗಿ ತಮಿಳುನಾಡಿನ ಪುದುಕೋಟೈ ಜಿಲ್ಲೆಯ ಕುನ್ನಕುಡಿಯಲ್ಲಿ ಜನಿಸಿದ ವೈದ್ಯನಾಥ್ ಪುಟ್ಟ ಗ್ರಾಮ ಕುನ್ನಕುಡಿಯನ್ನು ವಿಶ್ವವಿಖ್ಯಾತಗೊಳಿಸಿದರು.

ತಂದೆಯೇ ಇವರಿಗೆ ಮೊದಲ ಗುರು. ವಯೋಲಿನ್ ಹಿಡಿದ ಮೂರೇ ವರ್ಷದಲ್ಲಿ ಅರಿಯಾಕ್ಕಡಿ ರಾಮಾನುಜ ಅಯ್ಯಂಗಾರ್ ಅವರೊಂದಿಗೆ ವಯೋಲಿನ್ ನುಡಿಸುವ ಮಟ್ಟಕ್ಕೆ ಏರಿದ ಅವರು, ವಯೋಲಿನ್ ಅನ್ನೇ ತಮ್ಮ ಸಂಗಾತಿ ಮಾಡಿಕೊಂಡರು. ವಯೋಲಿನ್ ಒಂದಿಗೆ ಮಾತನಾಡುತ್ತಿದ್ದ ವೈದ್ಯನಾಥನ್ ವಯೋಲಿನ್ ನಿಂದಲೇ ಮಾತನಾಡಿಸುವಷ್ಟು ಸಾಮರ್ಥ್ಯ ತಮ್ಮದಾಗಿಸಿಕೊಂಡರು.

ವೇದ ಮಂತ್ರಗಳನ್ನು ವಯೋಲಿನ್ ನಲ್ಲಿ ನಡಿಸುತ್ತಿದ್ದ ಅವರು, ಪ್ರಾಣಿ ಪಕ್ಷಿಗಳ ಧ್ವನಿಯನ್ನೂ ವಯೋಲಿನ್ ನಲ್ಲಿ ಮೂಡಿಸಿದ ಮೋಡಿಗಾರ ಎನಿಸಿದ್ದರು.

ಮಧುರ ಕ್ಷಣ: ವಯೋಲಿನ್ ಮಾಂತ್ರಿಕ, ನಾದ ಲೋಕದ ಮೋಡಿಗಾರ ಕುನ್ನಕುಡಿ ವೈದ್ಯನಾಥನ್ ಅವರನ್ನು ಹತ್ತಿರದಿಂದ ನೋಡುವ, ಅವರೊಂದಿಗೆ ಮಾತನಾಡುವ ಅವಕಾಶ ನನಗೂ ಒಮ್ಮೆ ಒದಗಿತ್ತು. ಅದೊಂದು ಅವಿಸ್ಮರಣೀಯ ಅನುಭವ.

ಬೆಂಗಳೂರಿನ ಕೋಟೆ ಹೈಸ್ಕೂಲು ಮೈದಾನದಲ್ಲಿ ನಡೆದ ರಾಮೋತ್ಸವದಲ್ಲಿ ವಯೋಲಿನ್ ನುಡಿಸಲು ಬಂದಿದ್ದ ವೈದ್ಯನಾಥನ್ ಅವರನ್ನು ಹಿರಿಯ ಚಲನಚಿತ್ರ ನಟ ಶರಪಂಜರ ಶಿವರಾಂ ಅವರು ನನಗೆ ಪರಿಚಯ ಮಾಡಿಸಿಕೊಟ್ಟರು. ಕೆಲವು ನಿಮಿಷಗಳ ಕಾಲ ಅವರೊಂದಿಗೆ ಮಾತನಾಡುವ, ಜೊತೆಯಲ್ಲಿ ನಿಂತು ಫೋಟೋ ತೆಗೆಸಿಕೊಳ್ಳುವ  ಸೌಭಾಗ್ಯವೂ ನನಗೊದಗಿತು. ಅವರೊಂದಿ ಮಾತನಾಡಿದ ಸಂದರ್ಭದಲ್ಲಿ ಅವರ ಬಾಯಿಂದ ಹೊರಹೊಮ್ಮಿದ ಉಜ್ವಲ ವಿಶಾಲ ವಿಚಾರಧಾರೆ ನನ್ನನ್ನು ಮೋಡಿ ಮಾಡಿತು.

ಸಂಗೀತವೇ ಅವರ ಸಂಪೂರ್ಣ ಜಗತ್ತಾದರೂ, ಸಾಮಾಜದ ಬಗ್ಗೆ, ಯುವಜನರ ಬಗ್ಗೆ ಅವರಿಗಿದ್ದ ಕಾಳಜಿ ಕಳಕಳಿ ಮಹೋನ್ನತವಾದ್ದು. ಅವರೊಂದಿಗೆ ಕಳೆದ ಆ 5 ನಿಮಿಷಗಳನ್ನು ನನ್ನ ಬದುಕಿನಲ್ಲೇ ಮರೆಯಲಾಗದು. ಅವರ ಸಜ್ಜನಿಕೆ, ಸರಳತೆ ತುಂಬಿದ ಕೊಡ ಎಂದೂ ತುಳುಕದು ಎಂಬುದಕ್ಕೆ ಸಾಕ್ಷಿಯಾಗಿತ್ತು.

ನಾನು ಸಂಗೀತಗಾರನೂ ಅಲ್ಲ, ಶಾಸ್ತ್ರೀಯ ಸಂಗೀತದ ಬಗ್ಗೆ ತಿಳಿದವನೂ ಅಲ್ಲ. ಆದರೆ, ಸಂಗೀತ ಕೇಳುವುದು ನನ್ನ ಹವ್ಯಾಸಗಳಲ್ಲಿ ಒಂದು. ನನ್ನಂತೆ ಸಂಗೀತದ ಗಂಧ ಗಾಳಿಯೂ ತಿಳಿಯದ ಸಾಮಾನ್ಯ ಜನರೂ ಸಾಂಗೀತಾಸ್ವಾದನೆ ಮಾಡುವಂತೆ ಪಿಟೀಲು ನುಡಿಸುತ್ತಿದ್ದ ಅವರ ಕೈಚಳಕ ಎಂಥವರನ್ನೂ ತನ್ಮಯಗೊಳಿಸುತ್ತಿತ್ತು. ಅಂದು ಮೊದಲ ಸಾಲಿನಲ್ಲೇ ಕುಳಿತು ವೈದ್ಯನಾಥನ್ ಅವರು ತನ್ಮಯತೆಯಿಂದ ಸುಮಾರು 2 ಗಂಟೆಗಳ ಕಾಲ ವಯೋಲಿನ್ ನುಡಿಸುವುದನ್ನು ಕೇಳಿದ್ದೆ. ಇಂದು ಆ ಕ್ಷಣವನ್ನು ಸ್ಮರಿಸಿದರೆ ನಾನೆಷ್ಟು ಧನ್ಯ ಎನಿಸುತ್ತದೆ. ಕುನ್ನಕುಡಿಯವರಂಥ ಕಲಾವಿದರ ಸಂಖ್ಯೆ ಸಾವಿರವಾಗಲಿ. ವೈದ್ಯನಾಥನ್ ಅವರ ಆತ್ಮಕ್ಕೆ ಭಗವಂತ ಚಿರಶಾಂತಿಯನ್ನು ನೀಡಲಿ ಎಂದು ಭಗವಂತನನ್ನು ಪ್ರಾರ್ಥಿಸುತ್ತೇನೆ.

ಮುಖಪುಟ /ಲೇಖನಮಾಲೆ