ಮುಖಪುಟ /ಲೇಖನಮಾಲೆ 
 

ಬಸವನಗುಡಿಯ ಕಡಲೇಕಾಯಿ ಪರಿಶೆ

ನವೆಂಬರ್ 27, 28, 29 ರಂದು ಕಡಲೆಕಾಯಿ ಪರ್ವ

* ಟಿ.ಎಂ.ಸತೀಶ್

ತಾಜಾ ತಾಜಾ ಕಡಲೇ ಕಾಯಿ, ಗರಮಾಗರಂ ಕಡಲೇಕಾಯಿ, ಬೆಂಗಳೂರು ನಗರದ ಬಸವನ ಪರಿಶೆಯ ಬಡವರ ಬಾದಾಮಿ ಕಳ್ಳೇಕಾಯ್.... ಈ ಹಾಡನ್ನು ನೀವು ರೇಡಿಯೋದಲ್ಲಿ ಕೇಳಿದಾಗ ಇಲ್ಲವೇ ದೂರದರ್ಶನದಲ್ಲಿ ನೋಡಿದಾಗ ಇದೇನಿದು ಬೆಂಗಳೂರು ನಗರದ ಬಸವನ ಪರಿಶೆ ಎಂಬ ಪ್ರಶ್ನೆ ಮನದಲ್ಲಿ ಏಳದಿರದು.

ಬೆಂಗಳೂರು ಕರಗ ನಮಗೆ ಗೊತ್ತು. ಇದಾವುದೀ ಪರಿಶೆ ಎಂದು ಕೇಳುವವರು ಹಲವರಿದ್ದಾರೆ. ಬೆಂಗಳೂರಿನಲ್ಲಿ ಕರಗ ಎಷ್ಟು ಖ್ಯಾತಿಯೋ ಬಸವಣ್ಣನ ಗುಡಿಯಲ್ಲಿ ಪ್ರತಿ ಕಾರ್ತೀಕ ಮಾಸದ ಕೊನೆಯ ಸೋಮವಾರ ನಡೆಯುವ ಕಡಲೆಕಾಯಿ ಪರಿಶೆಯೂ ಅಷ್ಟೇ ಪ್ರಖ್ಯಾತ. ಪರಿಶೆ ಎಂದರೆ ಜಾತ್ರೆ. ಇಲ್ಲಿ ಕಡಲೆಕಾಯಿಗಾಗಿಯೇ ಜಾತ್ರೆ ನಡೆಯುತ್ತದೆ. ಈ ಕಡಲೆಕಾಯಿ ಕೊಳ್ಳಲು ಜನಜಾತ್ರೆಯೂ ನೆರೆಯುತ್ತದೆ.

ಕಾರ್ತೀಕದ ಕೊನೆಯ  ಸೋಮವಾರ ಹಾಗೂ ಮಂಗಳವಾರಗಳಂದು ಬೆಂಗಳೂರು ಬಸವನಗುಡಿಯ (ಬುಲ್‌ಟೆಂಪಲ್ ರೋಡ್) ಸುತ್ತಮುತ್ತ ಬರಿಯ ಕಡಲೆಕಾಯಿಗಳೇ ಕಾಣಿಸುತ್ತ್ತವೆ. ಇಲ್ಲಿ ಜನಜಾತ್ರೆ ನೆರೆಯುತ್ತದೆ. ದೂರದೂರುಗಳಿಂದ ಬಂದಿರುವ ಜನ ಮೂರು ದಿನಗಳ ಕಾಲ ಇಲ್ಲಿ ನಡೆಯುವ ಕಡಲೆ ಕಾಯಿ ಪರಿಶೆಯಲ್ಲಿ ಪಾಲ್ಗೊಂಡು ಹೊಸಬಗೆಯ ಆನಂದವನ್ನು ಅನುಭವಿಸುತ್ತಾರೆ.

ಬೆಂಗಳೂರು ನಗರ ಸಿಲಿಕಾನ್ ಸಿಟಿ. ಇಲ್ಲಿ ಯಾಂತ್ರಿಕತೆ, ತಾಂತ್ರಿಕತೆ ಎಷ್ಟು ಪ್ರಗತಿ ಸಾಸಿದ್ದರೂ ಜನರ ಧಾರ್ಮಿಕ ಭಾವನೆಗಳು ಅಚಲವಾಗಿವೆ. ಹೀಗಾಗೇ ಬೆಂಗಳೂರು ಬಸವಣ್ಣನ ಗುಡಿ ಹಾಗೂ ಆ ಗುಡಿಯ ಕೆಳಗಿರುವ ದೊಡ್ಡ ಗಣಪನ ಗುಡಿಗೆ ನಿತ್ಯ ನೂರಾರು ಪ್ರವಾಸಿಗರು,ಭಕ್ತರು ಆಗಮಿಸುತ್ತಾರೆ. ಬೆಂಗಳೂರಿನಲ್ಲಿ ಬುಲ್ ಟೆಂಪಲ್ ಒಂದು ಪ್ರಖ್ಯಾತ ಪ್ರವಾಸಿ ತಾಣವೂ ಆಗಿರುವುದು ಇದಕ್ಕೆ ಮತ್ತಷ್ಟು ಇಂಬು ನೀಡಿದೆ.

ರಾಜ್ಯದ ಅನೇಕ ಸ್ಥಳಗಳಲ್ಲಿ ಪ್ರತಿವರ್ಷ ಜಾತ್ರೆ ಉತ್ಸವಗಳು ನಡೆಯುತ್ತವೆ. ಆದರೆ, ಅಲ್ಲೆಲ್ಲಾ ದೇವರ ಹೆಸರಿನಲ್ಲಿ ಮಾತ್ರ ಜಾತ್ರೆ ನಡೆಯುತ್ತದೆ. ಎಡೆಯೂರು ಸಿದ್ಧಲಿಂಗೇಶ್ವರ ಜಾತ್ರೆ, ಘಾಟಿ ಸುಬ್ರಹ್ಮಣ್ಯ ಜಾತ್ರೆ, ತುರುವೇಕೆರೆ ಉಡಿಸಿಲಮ್ಮನ ಜಾತ್ರೆ ... ಇತ್ಯಾದಿ. ಆದರೆ, ಬೆಂಗಳೂರು ಬಸವನಗುಡಿಯಲ್ಲಿ ಮಾತ್ರ ಕಡಲೆಕಾಯಿ ಹೆಸರಲ್ಲಿ ಜಾತ್ರೆ ನಡೆಯುತ್ತದೆ. ಆದರದು ಜಾತ್ರೆಯ ಪರ್ಯಾಯ ಪದವಾದ ಪರಿಷೆಯಿಂದ ಖ್ಯಾತವಾಗಿದೆ.

ಹೌದು... ಇಲ್ಲಿನ ಜನರೇಕೆ ಕಡಲೆಕಾಯಿ ಹೆಸರಲ್ಲಿ ಜಾತ್ರೆ ಮಾಡುತ್ತಾರೆ ಎಂದು ನೀವು ಪ್ರಶ್ನಿಸುತ್ತೀರಲ್ಲವೇ? ಇದೇ ಪ್ರಶ್ನೆ ನಮಗೂ ಎದುರಾಗಿತ್ತು. ಅದಕ್ಕೆ ಈ ಪ್ರದೇಶದಲ್ಲಿ ಜನಜನಿತವಾಗಿರುವ ಈ ಕತೆ ಉತ್ತರ ನೀಡುತ್ತದೆ.

ಬಸವಣ್ಣ ಬಂದಿದ್ದ ಕಡಲೆಕಾಯಿ ತಿಂದಿದ್ದ... : ಬೆಂಗಳೂರಿನ ಹೃದಯ ಭಾಗದಲ್ಲಿರುವ ಪ್ರದೇಶ ಬಸವನಗುಡಿ. bull temple, basavanagudi, ಬಸವನಗುಡಿ, ಬುಲ್ ಟೆಂಪಲ್, ದೊಡ್ಡ ಗಣಪ, ದೊಡ್ಡ ಗಣೇಶಈ ಪ್ರಸಿದ್ಧ ಪ್ರದೇಶದ ಅಂಚಿನಲ್ಲಿರುವುದೇ ಬಸವಣ್ಣನ ದೇಗುಲ. ಬಸವಣ್ಣನ ದೇವಸ್ಥಾನ ಇರುವ ಸ್ಥಳ ಹಿಂದೆ ಸುಂಕೇನ ಹಳ್ಳಿ ಎಂದು ಹೆಸರಾಗಿತ್ತು. ಇಲ್ಲಿ ಹೊಲ ಗದ್ದೆಗಳಿದ್ದವು.

ರೈತಾಪಿವರ್ಗದ ಜನ ಇಲ್ಲಿ ವಾಸಿಸುತ್ತಿದ್ದರು. ಇವರು ಪ್ರಧಾನವಾಗಿ ತಮ್ಮ ಹೊಲಗಳಲ್ಲಿ ಕಡಲೇ ಕಾಯಿ ಬೆಳೆಯುತ್ತಿದ್ದರು. ಸರ್ವರಿಗು ಸಮಪಾಲು, ಸರ್ವರದು ಸಹಬಾಳ್ವೆ ಎಂದು ಬದುಕುತ್ತಿದ್ದ ಆ ರೈತಾಪಿ ವರ್ಗ, ಕಡಲೆಕಾಯಿ ಫಸಲು ಬರುವ ಕಾರ್ತೀಕದಲ್ಲಿ ತಾವು ಬೆಳೆದ ಕಡಲೆಕಾಯಿಯನ್ನು ರಾಶಿ ಮಾಡಿ ಕಣದ ಪೂಜೆ ಮಾಡಿ ಮಾರನೆ ದಿನ ಸಮನಾಗಿ ಹಂಚಿಕೊಳ್ಳುತ್ತಿದ್ದರು. ಒಮ್ಮೆ ಹೀಗೆ ಕಣ ಮಾಡಿದ್ದ ಸಂದರ್ಭದಲ್ಲಿ ಗೂಳಿಯೊಂದು ಬಂದು ರಾಶಿ ರಾಶಿ ಕಡಲೆಕಾಯಿ ತಿಂದು ಹೋಗುತ್ತಿತ್ತಂತೆ.

ಈ ಗೂಳಿ ಅರ್ಥಾತ್ ಬಸವನ ಕಾಟ ತಾಳಲಾರದೆ ರೈತರು ಒಂದು ದಿನ ರಾತ್ರಿಯಿಡೀ ಕಾದಿದ್ದು ಬಡಿಗೆ ಹಿಡಿದು ಬಸವನ ಬಡಿಯಲು ಕಾದಿದ್ದರಂತೆ. ನಿರೀಕ್ಷೆಯಂತೆ ಬಸವ ಬಂದ, ಕಡಲೆಕಾಯಿ ತಿಂದ. ಇದನ್ನು ನೋಡಿ ಕೋಪಗೊಂಡ ರೈತರು, ತಾವು ತಂದಿದ್ದ ಬಡಿಗೆ ಹಿಡಿದು ಬಸವನ್ನು ಅಟ್ಟಿಸಿಕೊಂಡು ಹೋದರಂತೆ ಆಗ ರೈತರ ಹೊಡೆತ ತಪ್ಪಿಸಿಕೊಳ್ಳಲೆಂದು ಓಡಿದ ಬಸವ ಸುಂಕೇನಹಳ್ಳಿಯಿಂದ ಸ್ವಲ್ಪದೂರ ಓಡಿಬಂದು ಈಗ ಗುಡಿ ಇರುವ ಸ್ಥಳದಲ್ಲಿ ಬಂದು ಕಲ್ಲಾದನಂತೆ . ಈ ಸೋಜಿಗವನ್ನು ಕಣ್ಣಾರೆ ಕಂಡ ರೈತರಿಗೆ ಇದು ಸಾಮಾನ್ಯ ಗೂಳಿಯಲ್ಲ. ಶಿವನ ವಾಹನ ನಂದಿ ಎಂಬ ಸತ್ಯ ತಿಳಿಯಿತಂತೆ. ಕೈಲಾಸದಿಂದ ಧರೆಗಿಳಿದುಬಂದ ನಂದಿಕೇಶ್ವರನನ್ನೇ ಹೊಡೆದು ಎಂಥ ತಪ್ಪು ಮಾಡಿದೆವೆಂದು ಮರುಗಿದರಂತೆ. ಅರಿಯದೆ ತಾವು ಮಾಡಿದ ತಪ್ಪು ಮನ್ನಿಸೆಂದು ಪರಿಪರಿಯಾಗಿ ಬೇಡಿದರಂತೆ. ಅಂದಿನಿಂದ ರೈತರು ತಪ್ಪೊಪ್ಪಿಗೆಯಾಗಿ ಪ್ರತಿವರ್ಷ ಕಡಲೆಕಾಯಿ ಬೆಳೆ ಬಂದ ತತ್‌ಕ್ಷಣ ತಮ್ಮ ಮೊದಲ ಬೆಳೆಯನ್ನು ಈ ಕಲ್ಲಿನ ಬಸವಣ್ಣನಿಗೆ ತಂದು ಒಪ್ಪಿಸಿ ನೇವೇದ್ಯ ಮಾಡಿ, ಕ್ಷಮಿಸೆಂದು ಕೇಳಿ ನಂತರ ಮಾರಾಟ ಮಾಡುತ್ತಿದ್ದರಂತೆ. ಇಂದಿಗೂ ಈ ಪರಂಪರೆ ಅನೂಚಾನವಾಗಿ ನಡೆದುಕೊಂಡು ಬಂದಿದೆ.

Doddaganesha, ದೊಡ್ಡಗಣೇಶಈ ಜಾತ್ರೆಗೆ ಬಸವನ ಭಕ್ತರು ಬಂದು ಬಂದು ಕಡಲೇ ಕಾಯಿ ತಿಂದರೆ, ನಂದಿ ತೃಪ್ತನಾಗುತ್ತಾನೆಂಬುದು ಹಲವು ಹಿರಿಯರ ನಂಬಿಕೆ. ಭಕ್ತರು ತಿಂದು ಎಸೆವ ಸಿಪ್ಪೆಯನ್ನು ರಾತ್ರಿಯ ವೇಳೆ ಕಲ್ಲು ಬಸವ ನಿಜರೂಪ ತಾಳಿ ಆ ಸಿಪ್ಪೆಯನ್ನು ತಿನ್ನುತ್ತಾನೆ ಎಂದು ಇಂದಿಗೂ ಜನ ನಂಬಿದ್ದಾರೆ.

ಇಲ್ಲಿ ಮಾಗಡಿ ಕೆಂಪೇಗೌಡರ ಕಾಲದಲ್ಲಿ ಸುಂದರವಾದ ದೇವಾಲಯ ನಿರ್ಮಿಸಲಾಗಿದೆ.೧೫ ಅಡಿ ಎತ್ತರ ೨೦ ಅಡಿ ಉದ್ದದ ದೊಡ್ಡ ಬಸವಣ್ಣನ ಮೂರ್ತಿಯಿದೆ. ಕೆಳಗೆ ರಸ್ತೆಯ ಮಗ್ಗುಲಲ್ಲಿ ದೊಡ್ಡಗಣಪನ ಗುಡಿಇದೆ. ಪಕ್ಕದಲ್ಲೇ ಸುಂದರವಾದ ಕಹಳೆ ಬಂಡೆ (ಬ್ಯೂಗಲ್ ರಾಕ್) ಉದ್ಯಾನವಿದೆ. ಈ ಉದ್ಯಾನದಲ್ಲಿ ಧುಮ್ಮಿಕ್ಕುವ ಜಲಧಾರೆ, ಸಂಗೀತ ಕಾರಂಜಿಯೇ ಮೊದಲಾದ ಮನರಂಜನೆಯೂ ಇದೆ.

ಮುಖಪುಟ /ಲೇಖನಮಾಲೆ