ಮುಖಪುಟ /ಲೇಖನಮಾಲೆ 
 

ಹಂಪಿ ಬಳಿಯ ಜಂಬುನಾಥ ದೇವಾಲಯ

ವಿಶೇಷ ವರದಿ: ಪಿ.ಸತ್ಯನಾರಾಯಣ

Jambunatha templeಐತಿಹಾಸಿಕ ಹಿನ್ನಲೆಯ ಹಂಪಿ ಹಾಗೂ ವೈಜ್ಞಾನಿಕ ರಂಗಕ್ಕೆ ಅಮೂಲ್ಯ ಕೊಡುಗೆಯಾದ ತುಂಗಭದ್ರಾ ಜಲಾಶಯ ಇವರೆಡನ್ನು ಅಕ್ಕ ಪಕ್ಕದಲ್ಲಿ ಪಡೆದ ಹೊಸಪೇಟೆ ವಿಶ್ವಪರಂಪರೆ ಪಟ್ಟಿಯಲ್ಲಿದೆ. ಇಲ್ಲಿನ ಸಮೀಪದ ಲೋಹಾದ್ರಿಯ ನಡುವೆ ಜಂಬುನಾಥ ಸುಂದರ ಪ್ರಾಚೀನ ದೇವಾಲಯ. ಜಂಬುನಾಥ ಗುಡ್ಡ ಎಂದು ಕರೆಯಲ್ಪಡುವ ಈ ಬೆಟ್ಟದ ಅಧಿದೇವತೆ ಈಶ್ವರ. ದಶಕಗಳಿಂದ ಈ ಪ್ರದೇಶದಲ್ಲಿ ನಡೆಯುತ್ತಿರುವ ಗಣಿಗಾರಿಕೆಗೆ ನಲುಗಿರುವ ಪುರಾತನ ದೇಗುಲ ಇಂದು ವಿನಾಶದ ಅಂಚಿನಲ್ಲಿದೆ. ವಿಜಯನಗರ ಸಾಮ್ರಾಜ್ಯದೊಂದಿಗೆ ಸಂಬಂಧವುಳ್ಳ ಜಂಭುನಾಥ ದೇವಸ್ಥಾನ ಆ ಕಾಲದ ವಾಸ್ತುಶಿಲ್ಪದ ಉತ್ತಮ ಮಾದರಿ. ಪೌರಾಣಿಕ ಹಾಗೂ ಐತಿಹಾಸಿಕ ಹಿನ್ನಲೆಯ ಈ ದೇಗುಲ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ.

ಪಂಪಾ ಕ್ಷೇತ್ರಕ್ಕೆ (ಹಂಪಿ) ದಕ್ಷಿಣ ದ್ವಾರ ಎನ್ನುವ ಈ ಪ್ರದೇಶದಲ್ಲಿ ಜಾಂಬವಂತನು ಜಿತೇಂದ್ರಿಯಾಗಿ ಹತ್ತು ವರ್ಷಗಳ ಕಾಲ ತಪ್ಪಸ್ಸನ್ನಾಚರಿಸಿ ಪಂಪಾ ವಿರೂಪಾಕ್ಷನ ಕರುಣೆ ಪ್ರಾಪ್ತನಾದ ಪ್ರತೀತಿ ಇದೆ. ಚಂದ್ರಕವಿ (ಕ್ರಿ.ಶ.ಸಂ.೧೪೩೦) ಹಾಗೂ ಲಕ್ಕಣ್ಣ ದಂಡೇಶನ ಶಿವತತ್ವ ಚಿಂತಾಮಣಿಯಲ್ಲಿ ಈ ವಿಷಯ ಉಲ್ಲೇಖವಿದೆ. ಯುಗ ಬದಲಿಸಿದರೂ ಜಾಂಬವಂಥನ ತಪ ಮುಗಿಯಲಿಲ್ಲ. ತಪೋ ಜ್ವಾಲೆ ಮೂರು ಲೋಕಗಳನ್ನು ಸುಡ ತೊಡಗಿದಾಗ ಶಿವದರ್ಶನ ನೀಡಿ ಜಾಂಬವಂತನ ಜೊತೆಯಲ್ಲಿ ಈ ಬೆಟ್ಟದಲ್ಲಿ ಶಿವ ನೆಲಸಿದನೆಂದು ಹೇಳಲಾಗುತ್ತದೆ. ಐತಿಹಾಸಿಕ ಹಾಗೂ ಪೌರಾಣಿಕ ಹಿನ್ನಲೆಯ ಜಂಬುನಾಥ ಇಂದು Hospet Jambunatha hillsನಿಜಕ್ಕೂ ಅನಾಥವಾಗಿ ದೀನಸ್ಥಿತಿ ತಲುಪಿದೆ. ಅಭಿಷೇಕ ಪ್ರಿಯನಾದ  ಶಿವನಿಗೆ ಇಲ್ಲಿ ನಿತ್ಯವೂ ಶಿಲಾಭಿಷೇಕ ನಿರಂತರವಾಗಿ ನಡೆದಿದೆ. ಗಣಿಗಾರಿಕೆ  ನಡೆಸುವ ಜನ ಈ ಹಿಂದೆ ಪರ್ವತ ಗರ್ಭದಲ್ಲಿ ಮದ್ದಿಟ್ಟು ಸಿಡಿಸುತ್ತಿದ್ದರು.

ಈಗ ಬೃಹತ್ ಜೆಸಿಬಿ ಯಂತ್ರಗಳಿಂದ ಬೆಟ್ಟವನ್ನು ಅಗೆಯುತ್ತಿದ್ದು, ಅಪರೂಪದ ದೇಗುಲ ಶಿಥಿಲಗೊಂಡಿದೆ. ಪ್ರತಿವರ್ಷ ಏಪ್ರಿಲ್ ತಿಂಗಳಲ್ಲಿ ಹುಣ್ಣಿಮೆಯ ಮೊದಲ ದಿನ ಜಂಬುನಾಥನ ಜಾತ್ರೆ. ಈ ಜಾತ್ರೆ ಸಂದರ್ಭದಲ್ಲಿ ಆಂಧ್ರಪ್ರದೇಶ ಹಾಗೂ ಕರ್ನಾಟಕದ ಹಲವಾರು ಜಿಲ್ಲೆಗಳ ಲಕ್ಷಾಂತರ ಜನ ಸೇರುತ್ತಾರೆ. ಜಾತ್ರೆಯ ಮುನ್ನ ಬೆಟ್ಟದಲ್ಲಿರುವ ಬಿಸಿಲು ಕಾಣದ ಬಾವಿಯನ್ನು ತೊಳೆದು ಶಿವನ ಪೂಜೆಗೆ ಅಲ್ಲಿನ ನೀರನ್ನು ಮೀಸಲಿಡುವ ಅಪರೂಪದ ಪರಂಪರೆ ಇಲ್ಲಿ ಬೆಳೆದು ಬಂದಿದೆ. ಪರ್ವತ ಶ್ರೇಣಿಯ ಈ ಬಾವಿಯ ನೀರು ಖನಿಜ ಲವಣಾಂಶ ಹೊಂದಿದ್ದು ಆರೋಗ್ಯಕ್ಕೆ ಉತ್ತಮವಾಗಿದೆ. ಪ್ರೇಕ್ಷಣೀಯ ಪ್ರವಾಸಿ ಕೇಂದ್ರವಾಗಬೇಕಾದ ಜಂಬುನಾಥ ಗುಡ್ಡವೀಗ ಸದಾ ಗಣಿಗಾರಿಕೆ ಧೂಳಿನಿಂದ ದೇವಾಲಯ ಮೂಲ ಸ್ವರೂಪ ಕಳೆದುಕೊಂಡಿದೆ. ೧೯೯೫ರಲ್ಲಿ ಇಲ್ಲಿನ ಸ್ಥಳೀಯ ಭಕ್ತರಾದ ವೈದ್ಯ ದೇಸಾಯಿ ರಾಮಮೂರ್ತಿ, ತಿಪ್ಪೇಸ್ವಾಮಿ ಹಾಗೂ ಯುವನಾಗರೀಕ ವೇದಿಕೆ ಪ್ರಧಾನ ಕಾರ್ಯದರ್ಶಿ ಪಾಂಡುರಂಗ ಹವಲ್ದಾರ್ ಹಾಗೂ ಇತರರು ಇಲ್ಲಿ ನಡೆಯುವ ಗಣಿಗಾರಿಕೆ ವಿರೋಧ ವ್ಯಕ್ತಪಡಿಸಿದ್ದರು.

Jambunatha templeಅಂದು ವಿಧಾನ ಸಭೆ ಕಲಾಪದಲ್ಲಿ ಬಿಜೆಪಿಯ ಶಾಸಕರಾದ ದಿವಂಗತ ಶಂಕರಗೌಡರ ಪ್ರಶ್ನೆಗೆ ಉತ್ತರವಾಗಿ ಅಂದಿನ ಗಣಿ ಸಚಿವ ಎಸ್.ಡಿ.ಜಯರಾಂ ಸ್ಪೋಟಕ ಬಳಸಿ ಗಣಿಗಾರಿಕೆ ನಡೆಸದಂತೆ ೧೯೯೬ರಲ್ಲಿ ಗಣಿ ಮಾಲೀಕರಿಗೆ ಆದೇಶ ನೀಡಿದ್ದರು. ಸಾಲದೆನ್ನುವಂತೆ ಹೊಳಗುಂದಿ ಓ. ಸಿದ್ದಲಿಂಗಸ್ವಾಮಿಗಳು ಈ ಬಗ್ಗೆ ರಾಜ್ಯ ಹಾಗೂ ಕೇಂದ್ರ ಸರಕಾರದ ಗಮನ ಸಳೆದರು. ನಿರಂತರ ಹೋರಾಟದ ನಂತರ ಕಣ್ಣು ತೆರದ ಸರಕಾರ ಕ್ರಮ ಕೈಗೊಂಡಿತ್ತಾದರೂ ಜಂಬುನಾಥನಿಗೆ ಶೋಷಣೆ ತಪ್ಪಿಲ್ಲ. ಕಳೆದ ೧೦ವರ್ಷಗಳಿಂದ ಗಣಿಗಾರಿಕೆ ತೀವ್ರತೆಗೆ ದೇಗುಲ ಇನಷ್ಟು ನಲುಗಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರು ಅಂದು ವಿರೋಧ ಪಕ್ಷದ ನಾಯಕರಾಗಿದ್ದಾಗ ಸ್ಥಳೀಯರ ಮನವಿಗೆ ವಿಧಾನಸಭೆಯಲ್ಲಿ ದ್ವನಿಎತ್ತಿದ್ದರು. ಜಂಬುನಾಥ ದೇವಸ್ಥಾನವನ್ನು ಸರಕಾರ ರಕ್ಷಿಸಲು ಮುಂದಾಗಬೇಕೆಂದು ಅಂದಿನ ಮುಖ್ಯಮಂತ್ರಿ ಜೆ.ಹೆಚ್.ಪಾಟೇಲ್‌ರನ್ನು ಆಗ್ರಹಿಸಿದ್ದರು. ಹೊರ ರಾಜ್ಯದ ದೇವಸ್ಥಾನಗಳಿಗೆ ಲಕ್ಷಗಳಲ್ಲಿ ಕಾಣಿಕೆಗಳನ್ನು ನೀಡುವ  ಮುಖ್ಯಮಂತ್ರಿ ಯಡಿಯೂರಪ್ಪನವರು ಬರಿ ಗಣಿಧೂಳಿಂದ ಕಳೆಗುಂದಿರುವ ಪುರಾತನ ದೇಗುಲವನ್ನು ರಕ್ಷಿಸಲು ಮುಂದಾಗಬೇಕು ಎಂದು ಇಲ್ಲಿನ ಭಕ್ತರು ಆಗ್ರಹಿಸಿದ್ದಾರೆ. ದೇವಸ್ಥಾನಕ್ಕೆ ಧಕ್ಕೆಯಾದಂತೆ ಭಾವುಕ ಭಕ್ತರ ಭಾವನೆಗಳಿಗೆ ಧಕ್ಕೆಯಾಗದಿರಲಿ. .

ಮುಖಪುಟ;;1; /ಲೇಖನಮಾಲೆ