ಮುಖಪುಟ /ಲೇಖನಮಾಲೆ 
 

ಕ್ಲಬ್ ಫೂಟ್ ವ್ಯಾಧಿಗೆ ಇಲ್ಲಿದೆ ಚಿಕಿತ್ಸೆ

*ಚಿತ್ರ ಬರೆಹ - ಎಚ್.ಎಂ. ಮಹೇಂದ್ರ ಕುಮಾರ್

ನಿಮ್ಮ ಮಗು ಕ್ಲಬ್ ಫೂಟ್ ವ್ಯಾಧಿಯಿಂದ ನರಳುತ್ತಿದ್ದರೆ ಈ ಸುದ್ದಿಯ ಮಾಹಿತಿಯನ್ನು ತಪ್ಪದೇ ಓದಿ. ಅಥವಾ ನೀವು ಈ ವ್ಯಾಧಿಯಿಂದ ನರಳುತ್ತಿರುವ ಮಗುವಿನ ಮಾಹಿತಿ ಹೊಂದಿದ್ದರೆ ಕೆಳಗಿನ ವಿಳಾಸಕ್ಕೆ ಸಂಪರ್ಕಿಸಲು ತಿಳಿಸಿ ಆ ಮಗುವಿನ ಭವಿಷ್ಯಕ್ಕೆ ಹೊಸ ದಿಕ್ಕನ್ನು ತೋರಿ.

ಈ ಸುದ್ದಿ ಶಿಶುಮೂಳೆ ಶಾಸ್ತ್ರದಲ್ಲೇ ಅದ್ಭುತವಾದ ಆಶಾಕಿರಣ ಮೂಡಿಸುತ್ತಿದೆ. ಹುಟ್ಟಿನಿಂದಲೇ ಅಂಟಿಕೊಂಡಿದ್ದ ಮೂಳೆಯ ಜಾಡ್ಯಕ್ಕೆ ಶಾಶ್ವತ ಪರಿಹಾರವನ್ನು ಉಚಿತವಾಗಿ ನೀಡುತ್ತದೆ. ಅದೂ, ಸಾವಿರಾರು, ಲಕ್ಷಗಟ್ಟಲೆ ಹಣವನ್ನು ಖಾಸಗಿ ಸಂಸ್ಳೆಯೇ ಸಂಪೂರ್ಣವಾಗಿ ಭರಿಸಿ ಶಸ್ತ್ರ ಚಿಕಿತ್ಸೆ ಮಾಡಿಸಿ ಜಾಡ್ಯದಿಂದ ಸ್ವತಂತ್ರಗೊಳಿಸುತ್ತಿದೆ.

ಕ್ಲಬ್‌ಫೂಟ್ ಸಾವಿರಕ್ಕೊಂದು ಮಕ್ಕಳಲ್ಲಿ ಕಾಣಿಸುವ ಮೂಳೆಯ ವ್ಯಾಧಿ. ಮಗುವಿನ ಹುಟ್ಟಿನಿಂದಲೇ ಎರಡೂ ಪಾದಗಳು ಒಳಮುಖವಾಗಿ ತಿರುಚಿಕೊಂಡಿರುತ್ತವೆ. ಈ ವ್ಯಾಧಿಯಿಂದ ನರಳುವ ಮಗು ನಮ್ಮ ನಿಮ್ಮೆಲ್ಲರಂತೆ ಪಾದವನ್ನು ಮುಮ್ಮುಖವಾಗಿ ಇರಿಸುವುದಿಲ್ಲ. ಈ ಮಗುವಿನ ಪಾದಗಳು ಸದಾ ಒಳಮುಖಿ ಆಗಿರುತ್ತವೆ. ಕಾರಣ ಈ ಮಗು ಸದಾ ಪಾದಗಳ ಖಿನ್ನತೆಯನ್ನು ಎದುರಿಸುತ್ತಲೇ ಇರುತ್ತದೆ. ಸಭೆ, ಸಮಾರಂಭ, ಪ್ರಯಾಣ, ನಡಿಗೆ, ಓಟ ಸೇರಿ ಎಲ್ಲಾ ಸಂದರ್ಭಗಳಲ್ಲೂ ಕೂಡ ತನ್ನ ಗಮನವನ್ನು  ಸಾಮಾನ್ಯ ಪಾದಗಳ ಮೇಲೆ ಕೇಂದ್ರೀಕರಿಸುತ್ತಲೇ ಇರುತ್ತದೆ.

ನಾನು ಒಮ್ಮೆ ರಸ್ತೆಯಲ್ಲಿ ಹೋಗುತ್ತಿದ್ದಾಗ ಎರಡು ಪಾದಗಳನ್ನು ಒಳಕ್ಕೇ ಎಳೆದುಕೊಂಡು ಸಾಮಾನ್ಯ ವೇಗದಲ್ಲಿ ಓಡುತ್ತಿದ್ದ ಮಗುವನ್ನು ನೋಡಿ ಬೆರಗಾದೆ. ಈ ಮಗುವಿನ ಪಾದಗಳು ಹೀಗೇಕೆ? ಎಂಬ ಪ್ರಶ್ನೆಯಲ್ಲೇ ದಿನಗಳನ್ನು ಕಳೆದೆ. ನನ್ನ ಕಣ್ಣ ಎದುರಲ್ಲೇ ಅದೇ ರೀತಿಯ ಮಗು ಬಂದು ನಿಂತಾಗ ಆಶ್ಚರ್ಯಪಟ್ಟೆ. ಅನೇಕ

ದಿನಗಳಿಂದ ಕಾಡುತ್ತಿದ್ದ ನನ್ನ ಮನಸ್ಸಿಗೆ ಉತ್ತರ ಹುಡುಕವ ಕಾಲ ಕೂಡಿ ಬಂದಿತ್ತು. ಕೂಡಲೇ ಗೆಳೆಯ ವೈದ್ಯ ಡಾ. ಶಶಿಧರರೆಡ್ಡಿಯನ್ನು ಸಂಪರ್ಕಿಸಿ ಮಗುವಿನ ಚಿಕಿತ್ಸೆಗೆ ಕೋರಿದೆ ಎನ್ನುತ್ತಾರೆ ಗಣಿ ಉದ್ಯಮಿ ದಿನೇಶ್ ಕುಮಾರ್  ಸಿಂಘಿ.

ಡಾ. ಶಶಿಧರರೆಡ್ಡಿ ಅವರು ಮಾತನಾಡಿ ಬಳ್ಳಾರಿ ಜಿಲ್ಲೆ ಸೇರಿ ಬಹುತೇಕ ಕಡೆಗಳಲ್ಲಿ ಕಾಣಸಿಗುವ ಕ್ಲಬ್‌ಫೂಟ್ ವ್ಯಾಧಿಗೆ ಶಸ್ತ್ರ ಚಿಕಿತ್ಸೆ ದುಬಾರಿ ವೆಚ್ಚದ್ದು. ದಿನೇಶ್ ಅವರು ನನ್ನನ್ನು ಸಂಪರ್ಕಿಸಿದಾಗ ವ್ಯಾಧಿಯ ಮಾಹಿತಿ ನೀಡಿದೆ. ಅವರು ಕೂಡಲೇ ಈ ವ್ಯಾಧಿಯಿಂದ ನರಳುವ ಎಲ್ಲಾ ಮಕ್ಕಳಿಗೂ ಶಸ್ರ್ತ ಚಿಕಿತ್ಸೆ ನೀಡಿಸುವ ಯೋಜನೆಯನ್ನೇ ಪ್ರಾರಂಭಿಸಿ ಸಮಾಜಸೇವೆಗೆ ಮುಂದಾದರು ಎನ್ನುತ್ತಾರೆ.

ದಿನೇಶ್ ಅವರ ಪತ್ನಿ ಶ್ರೀಮತಿ ಸ್ನೇಹಲತ ಸಿಂಘಿ ಮಾತನಾಡಿ, ಪತಿಯ ಅಭಿಲಾಷೆಗೆ ಪೂರಕವಾಗಿ ಮಗ ಅನುರಾಗ್‌ನ ಹುಟ್ಟು ಹಬ್ಬದಂದೇ ಆತನ ಹೆಸರಿನಲ್ಲೇ ಫೌಂಡೇಶನ್ ಪ್ರಾರಂಭಿಸಿ, ಅಂದಿನಿಂದಲೇ ಶಸ್ತ್ರ ಚಿಕಿತ್ಸೆ ಪ್ರಾರಂಭಿಸಿದ್ದೇವೆ. ಆಡಿ ನಲಿದಾಡಬೇಕಾದ ಮಕ್ಕಳಲ್ಲಿ ನಗು ಕಾಣಲಿಕ್ಕಾಗಿ ಈ ಯೋಜನೆ ಅಡಿ ರಾಜ್ಯ ಅಥವಾ ಹೊರ ರಾಜ್ಯಗಳ ಮಕ್ಕಳಿಗೂ ಚಿಕಿತ್ಸೆ ನೀಡಲಾಗುತ್ತದೆ ಎನ್ನುತ್ತಾರೆ.

ಈ ಯೋಜನೆಗೆ ಸ್ಪೂರ್ತಿ ನೀಡಿ ಪ್ರಥಮ ಫಲಾನುಭವಿ ಆಗಿರುವ ಹೊಸಪೇಟೆ ತಾಲೂಕಿನ ಬೈಲುವದ್ದಿಗೇರಿಯ ಮಗು ನಾಗರಾಜನ ತಂದೆ ರವಿಚಂದ್ರ, ನನ್ನ ಮಗನಿಗೆ ಆಪರೇಶನ್ ಮಾಡಿಸ್ಲಿಕ್ಕೆ ಸಹಾಯ ಮಾಡ್ರಿ ಅಂತಾ ಅನೇಕ್ರನ್ನ ಕೇಳಿದ್ದೆ. ದಿನೇಶ್ ಅವರು ನನ್ನ ಮಗನ್ನ ನೋಡಿ ಕೂಡಲೇ ಸಹಾಯ ಮಾಡ್ಲಿಕ್ಕೆ ಒಪ್ಪಿದ್ರು. ಡಾ. ಶಶಿಧರ್ ಅವರೂ ಕೂಡ ಹೆಲ್ಪ್ ಮಾಡಿದ್ರು. ನನ್ನ ಮಗನಿಂದಲೇ ಒಂದು ಯೋಜನೆ ಪ್ರಾರಂಭ ಆಗಿದ್ದು ಸಾರ್ಥಕತೆ ಆಗಿದೆ ಎಂದು ಹರ್ಷ ವ್ಯಕ್ತಪಡಿಸುತ್ತಾರೆ.

ಕ್ಲಬ್‌ಫೂಟ್ ಚಿಕಿತ್ಸೆ ಪಡೆಯಲು ಆಸಕ್ತ ಪೋಷಕರು, ಮಗುವನ್ನು ಮೊದಲು ಡಾ. ಶಶಿಧರರೆಡ್ಡಿ ಅಥವಾ ಡಾ. ಸುಂದರೇಶ್, ಸಂಜೀವಿನಿ ಆಸ್ಪತ್ರೆ, ಕಪ್ಪಗಲ್ಲು ರಸೆ, ವೈ. ನಾಗೇಶಶಾಸ್ತ್ರಿಗಳ ನಗರ, ಎಸ್.ಜಿ. ಕಾಲೇಜು ಮುಂಭಾಗ, ಬಳ್ಳಾರಿ, ದೂರವಾಣಿ ೦೮೩೯೨ ೨೫೪೬೩೬, ೨೫೪೪೧೨ ಗೆ ಸಂಪರ್ಕಿಸಿ ಚಿಕಿತ್ಸೆಗೆ ಒಳಪಡಿಸಬೇಕು.

ವೈದ್ಯರು ಶಸ್ತ್ರ ಚಿಕಿತ್ಸೆಗೆ ಶಿಫಾರಸು ಮಾಡಿದಲ್ಲಿ ಅನುರಾಗ್ ಫೌಂಡೇಶನ್, ಕೇರಾಫ್ ಬಿಎಂಎಂ ಇಸ್ಪಾತ್ ಲಿಮಿಟೆಡ್, ಕಂಟೋನ್ಮೆಂಟ್, ಬಳ್ಳಾರಿ - ೫೮೩ ೧೦೩ ಗೆ ಸಂಪರ್ಕಿಸಿ. ದೂರವಾಣಿ ಸಂಖ್ಯೆ ೦೮೩೯೨ - ೨೪೨೯೮೨, ೨೪೨೯೮೩, ೨೪೨೯೮೪. ಮೊಬೈಲ್ ೦೯೭೪೧೩ ೫೭೨೦೦.

ಈ ಯೋಜನೆಗೆ ಆರೋಗ್ಯ ಸಚಿವ ಬಿ. ಶ್ರೀರಾಮುಲು, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಬಿ.ಕೆ. ಶ್ರೀನಿವಾಸಮೂರ್ತಿ ಶುಭಕೋರಿ ಚಾಲನೆ ನೀಡಿದ್ದಾರೆ.

ಮುಖಪುಟ /ಲೇಖನಮಾಲೆ