ಮುಖಪುಟ /ಲೇಖನ

ಪ್ಪು ಹಣಕ್ಕೆ ನಮ್ಮ ನಿಮ್ಮ ಕೊಡುಗೆ ಎಷ್ಟು?

ತೆರಿಗೆ ವಂಚಿಸಿದ ಯಾವುದೇ ಹಣವನ್ನು ಕಪ್ಪುಹಣವನ್ನಬಹುದು. ನಾವೂ ಕೂಡ ತಿಳಿದೋ ತಿಳಿಯದೆಯೋ ಕಾಳಧನಕ್ಕೆ ಸಾಕಷ್ಟು ಕೊಡುಗೆ ನೀಡಿದ್ದೇವೆ ಅಲ್ಲವೇ..

*ಟಿ.ಎಂ. ಸತೀಶ್

Moneyನವೆಂಬರ್ 8ರ ರಾತ್ರಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 500 ಮತ್ತು 1000 ರೂ. ಮುಖಬೆಲೆಯ ನೋಟುಗಳ ಅಧಿಕೃತ ಚಲಾವಣೆ ರದ್ದು ಮಾಡಿದ ತರುವಾಯ ದೇಶದಲ್ಲಿ ಕಪ್ಪು ಹಣದ ಬಗ್ಗೆ ಬಹುದೊಡ್ಡ ಚರ್ಚೆಯೇ ನಡೆಯುತ್ತಿದೆ. ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಏನೇನೂ ಪ್ರಯೋಜನವಿಲ್ಲ ಎನ್ನುವವರು ಕೆಲವರಾದರೆ, ಇಲ್ಲ ಈ ನಿರ್ಧಾರದಿಂದ ಕಪ್ಪು ಹಣ ಹೊರ ಬರುತ್ತದೆ. ಮುಂದಿನ ದಿನಗಳಲ್ಲಿ ಇದರಿಂದ ದೇಶಕ್ಕೇ ಒಳಿತಾಗಲಿದೆ ಎಂದು ಹಲವರು ನಂಬಿದ್ದಾರೆ.

ಈ ಮಧ್ಯೆ 500 ಹಾಗೂ 1000 ನೋಟು ಸಹ ಸರ್ಕಾರವೇ ಚಲಾವಣೆಗೆ ತಂದಿರುವ ಹಣ. ಹೀಗಾಗಿ ಯಾವುದೂ ಕಪ್ಪಲ್ಲ. ಕಪ್ಪುಹಣ ಎನ್ನುವುದು ಕಾಗದದ ನೋಟಲ್ಲಿ ಇಲ್ಲ. ಅದೊಂದು ಮನಸ್ಥಿತಿ. ಅದನ್ನು ಹತ್ತಿಕ್ಕಲು ಸಾಧ್ಯವೇ ಇಲ್ಲ, ಇದೊಂದು ಅರ್ಥಹೀನ ಕಸರತ್ತು, ಬಡಜನರು ತಮ್ಮ ಹಣಕ್ಕೆ ತಾವೇ ಸರತಿ ಸಾಲಲ್ಲಿ ನಿಲ್ಲುವಂತೆ ಮಾಡಿರುವ ವ್ಯರ್ಥ ಪ್ರಯತ್ನ ಎಂದು ಪ್ರತಿಪಾದಿಸುವ ಬುದ್ಧಿಜೀವಿಗಳೂ ಇದ್ದಾರೆ. ಎಲ್ಲ ಪಕ್ಷಗಳ ನಾಯಕರೂ ಕಪ್ಪುಹಣ ಹೊಂದಿದ್ದಾರೆ. ಎಲ್ಲ ಸರ್ಕಾರಗಳೂ ಭ್ರಷ್ಟಾಚಾರದಲ್ಲಿ ಮುಳುಗಿವೆ. ಹೀಗಾಗಿ ಯಾರಿಂದಲೂ ಈಗಿರುವ ವ್ಯವಸ್ಥೆ ಬದಲಾಯಿಸಲು ಸಾಧ್ಯವಿಲ್ಲ ಎಂದು ತಾವೂ ಹತಾಶ ಭಾವನೆ ಮೂಡಿಸಿಕೊಂಡು, ಇತರಲ್ಲೂ ಅದೇ ಭಾವನೆ ಬಿತ್ತಲು ಯತ್ನಿಸುತ್ತಿದ್ದಾರೆ. ಪ್ರಯತ್ನವನ್ನೇ ಮಾಡದೆ ಫಲ ಕಾಣಲು ಸಾಧ್ಯವಿಲ್ಲ. ಬೆಕ್ಕಿಗೆ ಗಂಟೆ ಕಟ್ಟೋರು ಯಾರು ಎಂದು ಸುಮ್ಮನೆ ಕುಳಿತವರು, ಕಟ್ಟಿರುವ ಗಂಟೆ ಕೀಳುವ ಕೆಲಸ ಮಾಡುವುದು ಸರಿಯಲ್ಲ.  

ಪುರಾಣದಲ್ಲಿ ಒಂದು ಉಲ್ಲೇಖ ಇದೆ. ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ. ಆದರೆ ಅದನ್ನು ಸಾಧಿಸುವ ಛಲ ಬೇಕು ಎಂದು ನಾರದ ಮಹರ್ಷಿಗಳು ಭಕ್ತ ಧ್ರುವನಿಗೆ ಹೇಳಿದ್ದರಂತೆ. ಧ್ರುವ ಪ್ರಯತ್ನಶೀಲನಾದ, ಜಯ ಸಾಧಿಸಿದ ಅಜರಾಮರನಾದ. ಹಾಗೆಯೇ ಭಾರತ ಇಂದು ಪೊಲಿಯೋ ಮುಕ್ತ ರಾಷ್ಟ್ರವಾಗಿದೆ. ಇದಕ್ಕೆ ಕಾರಣ ಜನಜಾಗೃತಿ ಮೂಡಿಸಿ, 5 ವರ್ಷದೊಳಗಿನ ಎಲ್ಲ ಮಕ್ಕಳಿಗೂ ನಿಯಮಿತವಾಗಿ ಅಭಿಯಾನದ ರೂಪದಲ್ಲಿ ಎರಡು ಹನಿ ಲಸಿಕೆ ಹಾಕಿದ್ದು. ಇಚ್ಛಾಶಕ್ತಿ ಇದ್ದರೆ ಎಲ್ಲವೂ ಸಾಧ್ಯ ಎಂಬುದಕ್ಕೆ ಇದಕ್ಕಿಂತ ಜ್ವಲಂತ ಉದಾಹರಣೆ ಬೇಕಿಲ್ಲ.

ನಾವು ನೀವೆಲ್ಲ ಭ್ರಷ್ಟಾಚಾರದ ವಿರುದ್ಧ, ಕಪ್ಪುಹಣದ ವಿರುದ್ಧ ಸಿಡಿದು ನಿಂತರೆ, ಕಾಲಧನಿಕರನ್ನು ಹತ್ತಿಕ್ಕುವುದು ಕಷ್ಟಸಾಧ್ಯವೇನೂ ಅಲ್ಲ. ಅವರು ಲಂಚ ಕೇಳುತ್ತಾರೆ ನಾವು ಕೊಡುತ್ತೇವೆ ಎಂದು ಜನರು, ಜನ ಕೊಡುತ್ತಾರೆ ನಾವು ತೆಗೆದುಕೊಳ್ಳುತ್ತೇವೆ ಎಂದು ಸರ್ಕಾರಿ ಸಿಬ್ಬಂದಿ ಹೇಳಿದರೆ ಭ್ರಷ್ಟಾಚಾರಕ್ಕೆ ಕೊನೆಯೇ ಇರುವುದಿಲ್ಲ. ಈಗ ತಮ್ಮ ಬಳಿ ಇದ್ದ ಕಪ್ಪುಹಣ ಕಳೆದುಕೊಂಡಿರುವವರು ದುಪ್ಪಟ್ಟು ಲಂಚ ಪಡೆಯುತ್ತಾರೆ ಅಷ್ಟೇ.

ನಮ್ಮಲ್ಲೆರ ಕೊಡುಗೆ:

ಅಂದ ಹಾಗೆ ಕಪ್ಪು ಹಣಕ್ಕೆ ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ನಾವೂ ದೊಡ್ಡ ಕೊಡುಗೆಯನ್ನೇ ನೀಡಿದ್ದೇವೆ. ದೇಶದಲ್ಲಿ ಒಟ್ಟಾರೆ 17 ಲಕ್ಷ ಕೋಟಿ ರೂಪಾಯಿ ಕಪ್ಪಹಣ ಇದೆ ಎಂದು ಅಂದಾಜು ಮಾಡಲಾಗಿದೆ. ಇಷ್ಟು ದೊಡ್ಡ ಪ್ರಮಾಣದ ಕಪ್ಪುಹಣ ಸೃಷ್ಟಿಯಲ್ಲಿ ನಮ್ಮ ಪಾಲೆಷ್ಟು ಯೋಚಿಸಿದ್ದೀರಾ..? ನಮ್ಮ ಪಾಲೂ ದೊಡ್ಡದಾಗೇ ಇದೆ. ಹೇಗೆನ್ನುತ್ತೀರಾ.. ಒಮ್ಮೆ ಯೋಚಿಸಿ ನೋಡಿ.

ನಾವು ಅಂಗಡಿಗೆ ಹೋಗುತ್ತೇವೆ. ದಿನನಿತ್ಯದ ವಸ್ತುಗಳನ್ನು ಖರೀದಿಸುತ್ತೇವೆ. ಎಷ್ಟಾಯಿತು ಎನ್ನುತ್ತೇವೆ. ಅಂಗಡಿಯಾತ ಒಂದು ಚಿಕ್ಕ ಚೀಟಿಯಲ್ಲೋ, ಇಲ್ಲ ನಾವೇ ಬರೆದುಕೊಟ್ಟ ದಿನಸಿ ಪದಾರ್ಥಗಳ ಪಟ್ಟಿಯಲ್ಲೋ ದರ ಬರೆದು ಇಷ್ಟು ಕೊಡಿ ಎನ್ನುತ್ತಾನೆ. ನಾವು ಕೊಡುತ್ತೇವೆ. ಅಲ್ಲಿಗೆ ವ್ಯವಹಾರ ಮುಗಿಯಿತು. ನಾವು ಬಿಲ್ ಕೇಳುವುದೂ ಇಲ್ಲ, ಅಂಗಡಿಯವರು ಕೊಡುವುದೂ ಇಲ್ಲ. ಹೀಗೆ ನಾವು ಕೊಟ್ಟ ಹಣ ಯಾವುದೇ ತೆರಿಗೆಗೆ ಒಳಪಡದೆ ಅಂಗಡಿಯಾತನ ಗಲ್ಲ ಸೇರುತ್ತದೆ. ಆತ ಕೊಟ್ಟಿದ್ದೇ ಲೆಕ್ಕ, ಕಟ್ಟಿದ್ದೆ ತೆರಿಗೆ. ಇಲ್ಲಿ ಎಷ್ಟು ಪ್ರಮಾಣದ ಕಪ್ಪುಹಣ ಸೃಷ್ಟಿಯಾಯಿತೋ ಬಲ್ಲವರಾರು?.

ಅದೆ ಟಿ.ವಿ., ಫ್ರಿಜ್, ಫ್ಯಾನ್, ಎ.ಸಿ, ಕಂಪ್ಯೂಟರ್, ಲ್ಯಾಪ್ ಟಾಪ್ ಇತ್ಯಾದಿ ಖರೀದಿಸಿದಾಗ ಬಿಲ್ ಪಡೆಯುತ್ತೇವೆ. ಕಾರಣ ಅದಕ್ಕೆ ವಾರಂಟಿ, ಗ್ಯಾರಂಟಿ ಇರುತ್ತದೆ. ಹೀಗಾಗಿ ಬಿಲ್ ಬೇಕೇ ಬೇಕು ಎಂದು ಕೇಳಿ ಪಡೆಯುತ್ತೇವೆ. ಆದರೆಬಟ್ಟೆಯಂಗಡಿಗೋ, ಸೀರೆ ಅಂಗಡಿಗೋ ಇಲ್ಲ ಚಿಕ್ಕಪುಟ್ಟ ಚಿನ್ನಾಭರಣದ ಮಳಿಗೆಗೋ ಹೋದಾಗ, ಅಂಗಡಿಯಾತ ಬಿಲ್ ಕೊಟ್ಟರೆ ಶೇ.14ರಷ್ಟು ವ್ಯಾಟ್ ಕೊಡಬೇಕಾಗುತ್ತದೆ ಎಂದರೆ, ಬಿಲ್ ಬೇಡ, ಡ್ಯಾಮೇಜ್ ಗೀಮೇಜ್ ಇದ್ದರೆ ಎಕ್ಸ್ ಚೆಂಜ್ ಮಾಡಿಸಲು ಒಂದು ಚೀಟಿಯಲ್ಲಿ ಬರೆದು ಸೀಲ್ ಹಾಕಿ ಕೊಡಿ ಸಾಕು ಎಂಬ ಉಚಿತ ಸಲಹೆಯನ್ನು ನಾವೇ ಕೊಟ್ಟು ಬಿಲ್ ಪಡೆಯದೇ ವ್ಯಾಪಾರ ಮಾಡಿ, ಸಾವಿರಾರು ರೂಪಾಯಿ ಕೊಟ್ಟು ಬರುತ್ತೇವೆ. ಈ ಹಣದಲ್ಲಿ  ಕೂಡ ಅದೆಷ್ಟೋ ಭಾಗ ತೆರಿಗೆ ತಪ್ಪಿಸಿ/ವಂಚಿಸಿ ಮಳಿಗೆಯ ಮಾಲಿಕನ ಕಬ್ಬಿಣದ ಪೆಟ್ಟಿಗೆಯನ್ನು ಸೇರಿ ಕಪ್ಪುಹಣವಾಗುತ್ತದೆ.

ಇನ್ನು ದೊಡ್ಡ ಪ್ರಮಾಣದಲ್ಲಿ ಕಪ್ಪುಹಣ ಸೃಷ್ಟಿಯಾಗುವ ಕ್ಷೇತ್ರ ರಿಯಲ್ ಎಸ್ಟೇಟ್ ಜಗತ್ತು. ರಾಜ್ಯದ ರಾಜಧಾನಿಯ ಉದಾಹರಣೆಯನ್ನೇ ತೆಗೆದುಕೊಳ್ಳೋಣ. ಬೆಂಗಳೂರು ಸುತ್ತಮುತ್ತಲ ಪ್ರದೇಶದಲ್ಲಿ ಭೂಮಿಗೆ ಬಂಗಾರದ ಬೆಲೆ ಇದೆ. ಇಲ್ಲಿ ಈಗಲೂ ಎಕರೆ ಲೆಕ್ಕದಲ್ಲಿ ಕೆಲವು ಭೂ ವ್ಯವಹಾರ ನಡೆಯುತ್ತದೆ. ಕೃಷಿಭೂಮಿಯ ನೋಂದಣಿ ದರ ಸಹಜವಾಗಿ ಕಡಿಮೆ ಇರುತ್ತದೆ. ಆದರೆ, ನಗರದ ಮಧ್ಯಭಾಗದಲ್ಲಿರುವ ಈ ಜಮೀನು ಚದರಡಿ ಲೆಕ್ಕದಲ್ಲಿ ಮಾರಾಟವಾದರೂ ನೋಂದಣಿ ಆಗುವುದು ಮಾತ್ರ ಎಕರೆ ಲೆಕ್ಕದಲ್ಲಿ. ಎಕರೆಗೆ  8-10 ಕೋಟಿ ರೂಪಾಯಿ ಮಾರುಕಟ್ಟೆ ಮೌಲ್ಯ ನೀಡಿ ಖರೀದಿಸುವ ರಿಯಲ್ ಎಸ್ಟೇಟ್ ಮಂದಿ, ನೋಂದಣಿ ಮಾಡಿಸುವುದು ಮಾತ್ರ ಮಾರ್ಗದರ್ಶಿ ದರದಂತೆ ಒಂದು ಅಥವಾ ಒಂದೂವರೆ ಕೋಟಿ ರೂಪಾಯಿಗೆ. ಆ ಒಂದು ಕೋಟಿಯನ್ನು ಚೆಕ್ ಅಥವಾ ಡಿಡಿ ಮೂಲಕ ನೀಡಿ, ಉಳಿದ ಹಣವನ್ನು ನಗದಾಗಿ ನೀಡುತ್ತಾರೆ. ಈ ನಗದು ವ್ಯವಹಾರದಲ್ಲಿ 8-9 ಕೋಟಿ ತೆರಿಗೆ ತಪ್ಪಿಸಿದ ಕಪ್ಪುಹಣವಾಗುವುದಿಲ್ಲವೇ.

ಇದು ಶ್ರೀಸಾಮಾನ್ಯ ಖರೀದಿಸುವ ಮನೆ, ಫ್ಲಾಟ್ ವಿಚಾರದಲ್ಲೂ ಅನ್ವಯಿಸುತ್ತದೆ. 50-55 ಲಕ್ಷಕ್ಕೆ ಮನೆ ಖರೀದಿಸುವವರು 30-35 ಲಕ್ಷಕ್ಕೆ ನೋಂದಣಿ ಮಾಡಿಸುತ್ತಾರೆ. ಹೀಗೆ 30 ಲಕ್ಷಕ್ಕೆ ಮಾಡಿಸಿದರೆ, ನೋಂದಣಿ ಶುಲ್ಕ ಮತ್ತು ಮುದ್ರಾಂಕ ಶುಲ್ಕ ಒಂದೆರೆಡು ಲಕ್ಷ ಉಳಿಯುತ್ತದೆ ಎಂಬುದು ಒಂದು ಲೆಕ್ಕಾಚಾರವಾದರೆ, 50ಲಕ್ಷಕ್ಕಿಂತ ಅಧಿಕ ಮೊತ್ತಕ್ಕೆ ನೋಂದಣಿ ಮಾಡಿಸಲು ಪ್ಯಾನ್ ನಂಬರ್ ಕೊಡಬೇಕು. ಆಗ ತೆರಿಗೆ ವ್ಯಾಪ್ತಿಗೆ ಬರುತ್ತೇವೆ ಎಂಬ ಭಯ. ಹೀಗಾಗಿ ಇಲ್ಲಿ 20-25 ಲಕ್ಷ ಕಪ್ಪು ಹಣವಾಗಿ ಚಲಾವಣೆಯಲ್ಲಿರುತ್ತದೆ. ಗೊತ್ತಿದ್ದೂ ಎಷ್ಟೋ ಬಾರಿ ನಾವೆಲ್ಲರೂ ಇಂಥ ವಹಿವಾಟಿನಲ್ಲಿ ಭಾಗಿಗಳಾಗಿ ಹೋಗಿರುತ್ತೇವೆ. ಇದು ಜಗತ್ತಿಗೇ ತಿಳಿದ ಬಹಿರಂಗ ನಗ್ನ ಸತ್ಯ.

ಮನೆ ನಿರ್ಮಾಣ ಸಾಮಗ್ರಿ ಖರೀದಿಯಲ್ಲೂ ಕೂಡ ಸಾಕಷ್ಟು ಕಪ್ಪುಹಣ ಸೃಷ್ಟಿಯಾಗುತ್ತದೆ. ಬಹುತೇಕರು ಮನೆ ನಿರ್ಮಿಸುವಾಗ ಇಟ್ಟಿಗೆ, ಸಿಮೆಂಟ್, ಉಕ್ಕು, ಮರದ ಬಾಗಿಲು, ಕಿಟಕಿ, ಗ್ರಾನೈಟ್, ವೆಟ್ರಿಫೈಡ್ ಟೈಲ್ಸ್, ನಲ್ಲಿಗಳು, ಕಮೋಡ್, ವಾಷ್ ಬೇಸಿನ್, ಪೈಪ್, ವಿದ್ಯುತ್ ವೈರ್, ಬಣ್ಣ ಇತ್ಯಾದಿ ಎಲ್ಲವನ್ನೂ ಬಿಲ್ ರಹಿತವಾಗಿಯೇ ಖರೀದಿಸುತ್ತಾರೆ. ಹೀಗೆ ಲಕ್ಷಾಂತರ ರೂಪಾಯಿಯ ವಸ್ತುಗಳ ಖರೀದಿ ಅಂಗಡಿಯಾತ ಕೊಡುವ ಕೈಬರಹದ ಲೆಕ್ಕಾಚಾರದಲ್ಲಿ ನಡೆದಿರುತ್ತದೆ. ಅಂಗಡಿಯವರು ಗ್ರಾಹಕರಿಗೆ ಬಿಲ್ ಬೇಕೆಂದರೆ ಶೇ.14ರಿಂದ 20ರಷ್ಟು ಮಾರಾಟ ತೆರಿಗೆ (ಸೇಲ್ಸ್ ಟ್ಯಾಕ್ಸ್) ಕಟ್ಟಬೇಕಾಗುತ್ತದೆ, ಅದನ್ನು ನೀವೇ ಭರಿಸಬೇಕು ಎನ್ನುತ್ತಾರೆ. ಅಂದರೆ ಒಂದು ಲಕ್ಷದ ಖರೀದಿಗೆ 14ಸಾವಿರದಿಂದ 20 ಸಾವಿರ ಹೆಚ್ಚುವರಿಯಾಗಿ ನೀಡಬೇಕು ಎಂದು ಜನ ಅವರು ಬರೆದುಕೊಡುವ ಬಿಳಿಹಾಳೆಯ ಬಿಲ್ ಗೇ ತೃಪ್ತರಾಗುತ್ತಾರೆ. ಈ ಭೀತಿಯ ಲಾಭ ಪಡೆಯುವ ಬಂಡವಾಳಶಾಹಿಗಳು ಶ್ರೀಸಾಮಾನ್ಯ ಅಧಿಕೃತವಾಗಿ ಸಾಲ ಸೋಲ ಮಾಡಿ, ಬಡ್ಡಿ ಕಟ್ಟಿ ಬ್ಯಾಂಕ್ ನಿಂದ ತರುವ ಲಕ್ಷಾಂತರ ರೂಪಾಯಿಗಳ ಹಣಕ್ಕೆ ತೆರಿಗೆ ತಪ್ಪಿಸಿ ಕಪ್ಪುಹಣವಾಗಿ ಪರಿವರ್ತಿಸಿಕೊಳ್ಳುತ್ತಾರೆ.

ಸಂಬಳದಾರರು ತಾವು ದುಡಿಯುವ ಹಣಕ್ಕೆ ಆದಾಯ ತೆರಿಗೆ ಕಟ್ಟುತ್ತಾರೆ. ಅವರು ತೆರಿಗೆ ತಪ್ಪಿಸಲು ಸಾಧ್ಯವೇ ಇಲ್ಲ. ಆದರೆ ಅಧಿಕೃತ ಬಿಲ್ ನೀಡದ ಅಂಗಡಿ, ಮಳಿಗೆ ಮಾಲೀಕರು, ಲಕ್ಷಾಂತರ ರೂಪಾಯಿ ಸೇವಾ ಶುಲ್ಕ ಪಡೆಯುವ ವೈದ್ಯರು, ಎಂಜಿನಿಯರ್, ವಕೀಲರೇ ಮೊದಲಾದ ಸೇವಾಕ್ಷೇತ್ರದಲ್ಲಿರುವ ಹಲವರು ತಮಗೆ ಎಷ್ಟು ಬೇಕೋ ಅಷ್ಟು ಆದಾಯ ತೋರಿಸಿ, ತೆರಿಗೆ ಪಾವತಿಸಿ, ಉಳಿದ ಹಣಕ್ಕೆ ತೆರಿಗೆ ವಂಚಿಸಿ ಗಂಟು ಮಾಡುತ್ತಾರೆ. ಇಂಥ ಕಪ್ಪುಹಣ ಸೃಷ್ಟಿಯಲ್ಲಿ ವೈದ್ಯರಿಗೆ,  ಅಂಗಡಿ ಮಾಲೀಕರಿಗೆ, ಮನೆ ನಿರ್ಮಿಸುವ ಎಂಜಿನಿಯರ್ ಗಳಿಗೆ ಬಿಲ್ ಪಡೆಯದೆ ಹಣ ಪಾವತಿಸುವ ನಮ್ಮ ಪಾಲೂ ಇರುತ್ತದೆ ಅಲ್ಲವೆ.

ಹೀಗಾಗಿ ನಾವೆಲ್ಲರೂ 10 ರೂಪಾಯಿ ಉಳಿಸಿ ಕಾಳಧನಿಕರಿಗೆ 100 ರೂಪಾಯಿ ಕಪ್ಪು ಹಣ ಮಾಡಿಕೊಳ್ಳಲು ಅವಕಾಶ ನೀಡದೆ, ಅಂಗಡಿಯಲ್ಲಿ ಸೂಜಿ ಖರೀದಿಸಿದರೂ ಅಧಿಕೃತ ಬಿಲ್ ನೀಡುವಂತೆ ಒತ್ತಾಯಿಸಿದರೆ, ದೊಡ್ಡ ಮೊತ್ತದ ವಹಿವಾಟಿಗೆ ಅವಕಾಶ ಇರುವ ಕಡೆ ಚೆಕ್ ಮತ್ತು ಡಿಡಿ, ಆರ್.ಟಿ.ಜಿ.ಎಸ್. ಮೂಲಕ ಪಾವತಿಸಿದರೆ, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಬಳಸಿದರೆ ಕಪ್ಪುಹಣ ಚಲಾವಣೆಗೆ ಕಡಿವಾಣ ಹಾಕಲು ಸಾಧ್ಯ. ಇದಕ್ಕಾಗಿ ನಾವು ಮೊದಲು ಪ್ರಾಮಾಣಿಕರಾಗುವುದೇ ಪರಿಹಾರ ಅಲ್ಲವೇ.

 ಬೀರಬಲ್ ಪ್ರತಿಪಾದಿಸಿದ ಪ್ರಾಮಾಣಿಕರು..

ನಮ್ಮ ದೇಶದಲ್ಲಿ ಎಷ್ಟು ಮಂದಿ ಪ್ರಾಮಾಣಿಕರಿದ್ದಾರೆ ಎಂದು ಒಮ್ಮೆ ಅಕ್ಬರ್ - ಬೀರಬಲ್ ಗೆ ಕೇಳಿದನಂತೆ. ಆಗ ಬೀರ್ ಬಲ್ ಹುಡುಕಿದರೆ ಒಬ್ಬರೋ ಇಬ್ಬರೋ ಸಿಗಬಹುದು ಅಷ್ಟೇ ಎಂದು ಉತ್ತರ ಕೊಟ್ಟನಂತೆ. ಇದರಿಂದ ಕುಪಿತನಾದ ಅಕ್ಬರ್ ಹಾಗಾದರೆ ನಮ್ಮ ರಾಜ್ಯದಲ್ಲಿರುವವರೆಲ್ಲಾ ಬಹುತೇಕ ಅಪ್ರಾಮಾಣಿಕರೇ. ಇದು ನೀನು ನನ್ನ ಜನತೆಗೆ ಮಾಡುತ್ತಿರುವ ಅವಮಾನ ಇದನ್ನು ನಿರೂಪಿಸು ಎಂದು ಆಜ್ಞಾಪಿಸಿದನಂತೆ. ಸರಿ ಎಂದ ಬೀರಬಲ್ಪುರ ಜನರೆಲ್ಲಾ ಒಬ್ಬೊಬ್ಬರಾಗಿ ಬಂದು ಇಂದು ರಾತ್ರಿ ಅರಮನೆ ಮುಂದೆ ಇಟ್ಟಿರುವ ದೊಡ್ಡ ಹಂಡೆಯಲ್ಲಿ ಒಂದೊಂದು ಲೋಟ ಹಾಲು ತಂದು ಹಾಕಬೇಕುನೀವು ಹಾಲು ಹಾಕುವುದನ್ನು ಬೇರೆಯವರು ನೋಡದಂತೆ ಹಾಕಬೇಕು ಎಂದು ರಾಜಾಜ್ಞೆಯಾಗಿದೆ ಎಂದು ಡಂಗೂರ ಸಾರಿಸಿದನಂತೆ. ಅದರಂತೆ ಊರಿನ ಎಲ್ಲರೂ ರಾತ್ರಿ ಒಬ್ಬೊಬ್ಬರಾಗಿ ಮುಚ್ಚಿದ ಲೋಟದಲ್ಲಿ ಹಾಲು ತಂದು ಹಾಕಿ ಹೋದರಂತೆ. ಊರವರೆಲ್ಲಾ ಹಾಲು ಹಾಕಿ ಹೋದ ಬಳಿಕ ಅಕ್ಬರ್ ಹಾಗೂ ಬೀರ್ ಬಲ್ ಇಬ್ಬರೂ ಬಂದು ಹಂಡೆಗೆ ಕಟ್ಟಿದ್ದ ಬಟ್ಟೆ ತೆಗೆದು ನೋಡಿದಾಗ ಅದರಲ್ಲಿ ಭರ್ತಿ ನೀರುತ್ತು. ಹಾಲೇ ಇರಲಿಲ್ಲ. ಆಗ ಬೀರಬಲ್ ಹೇಳಿದನಂತೆ. ನೋಡಿದಿರಾ ಜಹಾಪನ ಬೇರೆಯವರು ಹಾಲು ಹಾಕಿರುತ್ತಾರೆ. ನಾನು ಒಂದು ಲೋಟ ನೀರು ಹಾಕಿದರೆ ಏನಾಗತ್ತೆ. ಯಾರಿಗೆ ತಿಳಿಯತ್ತೆ ಅಂತ ಎಲ್ಲರೂ ನೀರೇ ಹಾಕಿದ್ದಾರೆ. ಈಗ ನೀವೇ ಹೇಳಿ ಎಷ್ಟು ಜನ ಪ್ರಾಮಾಣಿಕರಿದ್ದಾರೆ ಎಂದನಂತೆ.

ತೆರಿಗೆ, ಲಂಚದ ವಿಚಾರದಲ್ಲಿ ಇದು ಎಲ್ಲರಿಗೂ ಅನ್ವಯಿಸುತ್ತದೆ. ನಾನೊಬ್ಬ ತೆರಿಗೆ ಕಟ್ಟದಿದ್ದರೆ ಏನಂತೆ, ನಾನೊಬ್ಬ ಲಂಚ ಕೊಡದಿದ್ದರೆ ಭ್ರಷ್ಟಾಚಾರ ನಿಂತು ಹೋಗುತ್ತದೆಯೇ ಎಂದು ನಾವೂ ಅದೇ ಹೆಜ್ಜೆ ತುಳಿದರೆ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆಯೇ ಹೊರತು ಸುಧಾರಿಸಲು ಸಾಧ್ಯವಿಲ್ಲ. ಹೀಗಾಗಿ ನಾವು ಯಾರು ನೋಡಲಿ ಬಿಡಲಿ, ನೀರು ಹಾಕುವ ಬದಲು ಹಾಲು ಹಾಕುವಷ್ಟು ಪ್ರಾಮಾಣಿಕರಾಗಬೇಕು ಅಲ್ಲವೇ.


ಮುಖಪುಟ /ಲೇಖನ