ಮುಖಪುಟ /ಲೇಖನ

ಬ್ಲಾಕ್ ಮೇಲ್ ಬ್ಲಾಕ್ ಮೇಲ್

*ಸಾತ್ವಿಕ

ಇತ್ತೀಚಿನ ದಿನಗಳಲ್ಲಿ  ಯಾರ ಬಾಯಲ್ಲಿ ಕೇಳಿದರೂ ಇ-ಮೇಲ್ ವಿಚಾರವೇ... ಆದಾಗ್ಯೂ ದಿನ ನಿತ್ಯ ಪತ್ರಿಕೆಗಳಲ್ಲಿ  ಬ್ಲಾಕ್ ಮೇಲ್ ವಿಚಾರಗಳೂ ಸುಳಿಯುವುದನ್ನು ನಾವು ಕಾಣುತ್ತೇವೆ.

 ಬ್ಲಾಕ್ ಮೇಲ್ ಈ ವಿಶ್ವಕ್ಕೆ ಬಹಳ ಹಳೆಯದು. ಪುರಾಣೇತಿಹಾಸಗಳ ಕಾಲದಿಂದಲೂ ಬ್ಲಾಕ್ ಮೇಲ್ ಅವ್ಯಾಹತವಾಗಿದೆ. ನನ್ನ ತಪಸ್ಸಿಗೆ ನೀ ಮೆಚ್ಚಿ ಪ್ರತ್ಯಕ್ಷನಾದ ಮೇಲೆ ನಿನ್ನ ಮಡದಿ ಪಾರ್ವತಿಯನ್ನೇ ನನಗೆ ವರವಾಗಿ ಕೊಡು ಇಲ್ಲವಾದರೆ, ವಚನಭ್ರಷ್ಟನಾಗಿ ಹಿಂತಿರುಗು ಎಂದು ರಾವಣಾಸುರ ಪರಶಿವನಿಗೇ ಬ್ಲಾಕ್ ಮೇಲ್ ಮಾಡಿದ್ದನೆನ್ನುತ್ತವೆ ಕಥೆಗಳು.

 ಡಾ.ರಾಜ್‌ಕುಮಾರ್ ಅವರನ್ನು ಅಪಹರಿಸಿದ್ದ  ಕಾಡುಗಳ್ಳ ವೀರಪ್ಪನ್ ತಿರುವಳ್ಳವರ್ ಪ್ರತಿಮೆ ಅನಾವರಣ, ತಮಿಳನ್ನು ದ್ವಿತೀಯ ಭಾಷೆ ಮಾಡಬೇಕು... ಇಂತಿಷ್ಟು ರೂಪಾಯಿ ಒತ್ತೆ ಹಣ ಡಬೇಕು ಎಂದು ಕ್ಯಾಸೆಟ್ ಕಳುಹಿಸಿ ಬ್ಲಾಕ್ ಮೇಲ್ ಮಾಡಿದ್ದು ಈಗ ಇತಿಹಾಸ.

 ಕಂದಹಾರ್ ವಿಮಾನ ಅಪಹರಣವೇ ಮೊದಲಾದ ಹೈಜಾಕ್ ಪ್ರಕರಣಗಳಲ್ಲೂ  ಬ್ಲಾಕ್ ಮೇಲ್ ನಡೆದಿದೆ. ಮಾಜಿ ಗೃಹ ಸಚಿವರ ಪುತ್ರಿಯನ್ನು  ಅಪಹರಿಸಿ ಜೈಲಿನಲ್ಲಿರುವ ಕೈದಿಗಳ ಬಿಡುಗಡೆಗೆ ಬ್ಲಾಕ್ ಮೇಲ್ ಮಾಡಿದ್ದೂ ನಿಮಗೆ ಗೊತ್ತಲ್ಲ.

  ಸ್ವಾರಸ್ಯಕರ ಬ್ಲಾಕ್‌ಮೇಲ್ ಪ್ರಕರಣ ೧೯೯೦ರಲ್ಲಿ ನಡೆದಿತ್ತು. ೧೪ ವರ್ಷದ ಬಾಲಕಿಯ ಮೇಲೆ ಅಮಾನುಷವಾಗಿ ಅತ್ಯಾಚಾರ ಮಾಡಿಕೊಲೆ ಮಾಡಿದ ಆರೋಪಿ ಧನಂಜಯ್‌ಚಟರ್ಜಿಗೆ  ಕೋರ್ಟ್ ಗಲ್ಲು ಶಿಕ್ಷೆ ಕಾಯಂ ಮಾಡಿತ್ತು.  ಆ ತೀರ್ಪು ಹೊರಬಿದ್ದಿದ್ದೇ ತಡ  ಗಲ್ಲು ಶಿಕ್ಷೆ ಜಾರಿ ಮಾಡುವ ನೌಕರ ತನ್ನ ಮಗನಿಗೆ ಸರ್ಕಾರಿ ನೌಕರಿ ಕೊಟ್ಟರೆ ಮಾತ್ರ ತಾನು ಆಪರಾಧಿಯನ್ನು ಗಲ್ಲಿಗೆ ಹಾಕುವುದಾಗಿ ಇಲ್ಲವಾದರೆ ನಾನು ಆ ಕೆಲಸ ಮಾಡಲ್ಲ ಅಂತ ಪಟ್ಟು ಹಿಡಿದನಂತೆ. ಕಾನೂನಿನ ರೀತ್ಯ ಗಲ್ಲಿಗೆ ಹಾಕಲು ನೇಮಕ ಗೊಂಡ ಹಾಗೂ ಅಧಿಕಾರ ಪಡೆದ ಆ ವ್ಯಕ್ತಿಯ ಹೊರತಾಗಿ ಬೇರೆಯವರು ಆ ಕೆಲಸ ಮಾಡಿದರೆ ಅದು ಅಪರಾಧವಾಗುತ್ತದೆ. ಹೀಗಾಗಿ ವಿಧಿ ಇಲ್ಲದೆ ಆ ಗಲ್ಲು ಶಿಕ್ಷೆ ಜಾರಿ ಮಾಡುವ ನೌಕರನ ಬೇಡಿಕೆಯ ಈಡೇರಿಸಲು ಆತನ ಮಗನಿಗೆ ತಾತ್ಕಾಲಿಕ ಉದ್ಯೋಗ ನೀಡಲಾಗಿತ್ತು. .

 ಈ ಎಲ್ಲ ಘಟನೆಗಳ ನಡುವೆಯೇ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಧನಂಜಯ ಚಟರ್ಜಿ ತನಗೆ ಕ್ಷಮಾದಾನ ನೀಡುವಂತೆ ಕೋರಿ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದ, ಹೀಗಾಗಿ ಆತನ ಗಲ್ಲು ಶಿಕ್ಷೆ ದಿನಾಂಕ ನಿಗದಿ ಆಗಿರಲಿಲ್ಲ. ಈ ಮಧ್ಯೆ ೧೯೯೫ರಲ್ಲಿ ಅಂದಿನ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್‌ಕಲಾಂ ತಿರಸ್ಕರಿಸಿದರು.

 ಹೀಗಾಗಿ ಧನಂಜಯನಿಗೆ ಗಲ್ಲು  ಕಾಯಂ ಆಯಿತು.. ಗಲ್ಲು ಶಿಕ್ಷೆ ಜಾರಿ ಮಾಡುವ  ವ್ಯಕ್ತಿ ಮತ್ತೊಮ್ಮೆ  ಬೇಡಿಕೆ ಮುಂದಿಟ್ಟ.  ತಾತ್ಕಾಲಿಕವಾಗಿ ತನ್ನ ಮಗಗೆ ನೀಡಲಾಗಿರುವ ಕೆಲಸವನ್ನು ಕಾಯಂ ಮಾಡಬೇಕು ಇಲ್ಲವಾದರೆ ತಾನು ನೇಣು ಹಾಕಲ್ಲ ಅಂತ ಬ್ಲಾಕ್ ಮೇಲ್ ಮಾಡಿದ್ದ. ಇದಕ್ಕೆ ಅಲ್ಲವೇ ಹೇಳೋದು ಉರಿದ ಮನೆಯಲ್ಲಿ ಹಿರಿದ ಗಳವೇ ಲಾಭ ಅಂತ.  ಪಕ್ಕದ ಮನೆಗೆ ಬೆಂಕಿ ಬಿದ್ದಾಗ ಕೆಲವರು ಅದರಲ್ಲಿ ಚಳಿ ಕಾಯಿಸಿಕೊಳ್ಳುತ್ತಾರೆ. ಮತ್ತೆ ಕೆಲವರು ಅದರಲ್ಲಿ  ಸಿಗರೇಟ್ ಹಚ್ಚಿಕೊಳ್ಳುತ್ತಾರೆ.  ಒಟ್ಟಿನಲ್ಲಿ  ಬ್ಲಾಕ್ ಮೇಲ್  ಇ-ಮೇಲ್‌ಗಿಂಥ ಹೆಚ್ಚು ವ್ಯಾಪಕವಾಗಿದೆ.

 ರಾಜ್ಯದಲ್ಲಿ ಕೂಡ ಭೂ ಹಾಗೂ ಅಕ್ರಮ ಡಿನೋಟಿಫಿಕೇಷನ್ ಹಗರಣದಲ್ಲಿ ಜೈಲಿಗೆ ಹೋಗಿ ಜಾಮೀನಿನ ಮೇಲೆ ಬಿಡುಗಡೆ ಆಗಿರುವ ಯಡಿಯೂರಪ್ಪ ಅವರು ತಮ್ಮನ್ನು ಮತ್ತೆ ಮುಖ್ಯಮಂತ್ರಿ ಮಾಡಿ ಇಲ್ಲವಾದರೆ ಪಕ್ಷ ಬಿಡುತ್ತೇನೆ, ಸರ್ಕಾರ ಉರುಳಿಸುತ್ತೇನೆ ಎಂದು ಹೈಕಮಾಂಡ್‌ಗೆ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ.

 ಮನೆಗಳಲ್ಲಿ ಕೂಡ  ಎಷ್ಟೋ ಸಾರಿ ಮಕ್ಕಳು, ಮಡದಿ ಕೂಡ ಬ್ಲಾಕ್ ಮೇಲ್ ಮಾಡೋದುಂಟು. ನಿಮ್ಮ ಬದುಕಿನಲ್ಲಿ ಸಹ ಇಂಥ ಬ್ಲಾಕ್‌ಮೇಲ್ ಅನುಭವವಿದೆ ಅಲ್ಲವೇ?


ಮುಖಪುಟ /ಲೇಖನ