ಮುಖಪುಟ /ಲೇಖನ

ದೇಶಪ್ರೇಮದ ಸ್ಫೂರ್ತಿ ಮೂಡಿಸುವ ಮಹತ್ವದ ತೀರ್ಪು

ಸಿನಿಮಾ ಪ್ರದರ್ಶನಕ್ಕೆ ಮುನ್ನ ರಾಷ್ಟ್ರಗೀತೆಯನ್ನು ಕಡ್ಡಾಯವಾಗಿ ಹಾಕಬೇಕು, ಈ ಸಂದರ್ಭದಲ್ಲಿ ರಾಷ್ಟ್ರಧ್ವಜ ಪರದೆಯ ಮೇಲೆ ರಾರಾಜಿಸಬೇಕು, ಜನ ಎದ್ದು ನಿಂತು ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಗೆ ಗೌರವ ಸೂಚಿಸಬೇಕು ಎಂದು ಸುಪ್ರೀಂಕೋರ್ಟ್ ನೀಡಿರುವ ತೀರ್ಪು ನಿಜಕ್ಕೂ ಮಹತ್ವದ್ದು...

*ಟಿ.ಎಂ. ಸತೀಶ್

National Flagಅದು 1974-75ನೇ ಇಸವಿ. ನನಗಾಗ 8-9 ವರ್ಷ. ನನಗೆ ಇನ್ನೂ ಚೆನ್ನಾಗಿ ನೆನಪಿದೆ.  ನಮ್ಮೂರಿಗೆ ಬರುತ್ತಿದ್ದ ಟೂರಿಂಗ್ ಟಾಕೀಸ್ (ಸಂಚಾರಿ ಚಿತ್ರ ಮಂದಿರ)ನಲ್ಲಿ ಆಗ ಹಳೆಯ ಕನ್ನಡ ಚಲನಚಿತ್ರಗಳನ್ನಷ್ಟೇ ಪ್ರದರ್ಶಿಸುತ್ತಿದ್ದರು. ಈ ಸಿನಿಮಾ ಪ್ರದರ್ಶನಕ್ಕೂ ಮುನ್ನ ರಾಷ್ಟ್ರಗೀತೆ ಮೊಳಗುತ್ತಿತ್ತು. ಆಬಾಲವೃದ್ಧರಾದಿಯಾಗಿ ಎಲ್ಲರೂ ಎದ್ದುನಿಂತು ಗೌರವ ಸೂಚಿಸುತ್ತಿದ್ದರು. ಜೈಹಿಂದ್ ಎಂದಾಗ ತಮಗೆ ಅರಿವಿಲ್ಲದೆ ತಮ್ಮ ಬಲಗೈ ಅನ್ನು ಹಣೆಯ ಮೇಲಿಟ್ಟು ವಂದನೆ ಸಲ್ಲಿಸುತ್ತಿದ್ದರು.

ಬಳಿಕ ಕೇಂದ್ರ ಸರ್ಕಾರ ಇಲ್ಲ ರಾಜ್ಯ ಸರ್ಕಾರದ ವಾರ್ತಾ ಇಲಾಖೆಯು ಸಿದ್ಧಪಡಿಸಿದ 5-10 ನಿಮಿಷಗಳ ಸಾಕ್ಷ್ಯಚಿತ್ರ (ಡಾಕ್ಯುಮೆಂಟರಿ ಫಿಲಂ) ಹಾಕಲಾಗುತ್ತಿತ್ತು. ಸ್ವಾತಂತ್ರ್ಯ ಸಂಗ್ರಾಮ, ದಂಡಿ ಸತ್ಯಾಗ್ರಹ, 1965 ಮತ್ತು 1971ರ ಭಾರತ-ಪಾಕ್ ಯುದ್ಧ, ಉಪಗ್ರಹ ಉಡಾವಣೆ, ಗಣರಾಜ್ಯೋತ್ಸವದ ಪೆರೇಡ್ ಸೇರಿದಂತೆ ದೇಶದ ಹಿರಿಮೆ ಗರಿಮೆ ಸಾರುವ ಕಪ್ಪು ಬಿಳುಪಿನ ಕಿರುಚಿತ್ರಗಳು ಮೊದಲಿಗೆ ಪ್ರದರ್ಶನಗೊಳ್ಳುತ್ತಿದ್ದವು. ಆ ಮೂಲಕ ಮನರಂಜನೆಗಾಗಿ ಚಲನಚಿತ್ರ ನೋಡಲು ಬರುವ ಜನರಿಗೆ ಅದ್ಭುತ ಮಾಹಿತಿಯೂ ಲಭಿಸುತ್ತಿತ್ತು.

ಶಿಕ್ಷಿತರು, ಅರೆ ಶಿಕ್ಷಿತರು, ಅಶಿಕ್ಷಿತರು ಎಲ್ಲ ವರ್ಗದ ಜನರನ್ನೂ ತಲುಪುವ ದೃಶ್ಯ-ಶ್ರವ್ಯ ಮಾಧ್ಯಮದ ಮೂಲಕ ದೇಶದ ಜನರಿಗೆ ದೇಶದ ಸಾಧನೆಯ ಪರಿಚಯ ಆಗುತ್ತಿತ್ತು. ದೇಶದ ಬಗ್ಗೆ ಹೆಮ್ಮೆ ಮೂಡುತ್ತಿತ್ತು. ದೇಶಭಕ್ತಿ ಅರಿವಿಲ್ಲದೆ ಅಂತರ್ಗತವಾಗುತ್ತಿತ್ತು.

ಆದರೆ 1980ರ ದಶಕದ ನಂತರ ಈ ಪರಿಪಾಠ ಅದೇಕೋ ನಿಂತು ಹೋಯಿತು. ಈಗ ಮತ್ತೆ ಅಂಥ ಒಂದು ಕಾಲ ಕೂಡಿ ಬಂದಿದೆ. ಚಲನಚಿತ್ರ ಪ್ರದರ್ಶನಕ್ಕೂ ಮುನ್ನ ರಾಷ್ಟ್ರಗೀತೆ ಹಾಕಲು ನಿರ್ದೇಶಿಸಬೇಕು ಮತ್ತು ಅದಕ್ಕೆ ಅಗತ್ಯವಾದ ನಿಯಮ ಮತ್ತು ಶಿಷ್ಟಾಚಾರ ರೂಪಿಸಬೇಕು ಎಂದು ಕೋರಿ ಶ್ಯಾಮ್ ನಾರಾಯಣ್ ಎಂಬುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸರ್ವೋನ್ನತ ನ್ಯಾಯಾಲಯ ಪುರಸ್ಕರಿಸಿದೆ.

ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಮತ್ತು ಅಮಿತಾವ್ ರಾಯ್ ಅವರನ್ನೊಳಗೊಂಡ ಪೀಠ ದೇಶಾದ್ಯಂತ ಚಲನಚಿತ್ರ ಮಂದಿರಗಳಲ್ಲಿ ಚಿತ್ರ ಪ್ರದರ್ಶನಕ್ಕೂ ಮುನ್ನ ರಾಷ್ಟ್ರಗೀತೆ ಹಾಕಬೇಕು, ಆ ಸಂದರ್ಭದಲ್ಲಿ ಪರದೆಯಲ್ಲಿ ರಾಷ್ಟ್ರಧ್ವಜ ರಾರಾಜಿಸಬೇಕು, ಜನರು ಎದ್ದುನಿಂತು ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಗೆ ಗೌರವ ಸೂಚಿಸಬೇಕು ಎಂದು ನಿರ್ದೇಶನ ನೀಡಿದೆ. ಇದಕ್ಕೆ ಅಗತ್ಯವಾದ ನಿಯಮಗಳನ್ನು ರೂಪಿಸಿ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ತಲುಪಿಸಬೇಕು, ಒಂದು ವಾರದೊಳಗೆ ಈ ಆದೇಶ ಜಾರಿಯಾಗಬೇಕು ಎಂದೂ ನ್ಯಾಯಪೀಠ ಸ್ಪಷ್ಟಪಡಿಸಿದೆ.

ಜನರಲ್ಲಿ ನಮ್ಮ ದೇಶ, ನಮ್ಮ ನಾಡು ಎಂಬ ಭಾವನೆ ಮೂಡಬೇಕು. ದೇಶಾಭಿಮಾನ ಇರಬೇಕು. ಇದಕ್ಕೆ ಇಂಥ ಕ್ರಮ ಸಹಕಾರಿ ಎಂದೂ ಅಭಿಪ್ರಾಯಪಟ್ಟಿದೆ. ರಾಷ್ಟ್ರಗೀತೆ ಮತ್ತು ರಾಷ್ಟ್ರಧ್ವಜವನ್ನು ಗೌರವಿಸುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ ಎಂಬುದನ್ನೂ ಪೀಠ ಒತ್ತಿ ಹೇಳಿದೆ.

ಕೇಂದ್ರ ಸರ್ಕಾರ ಕೂಡ ಸುಪ್ರೀಂಕೋರ್ಟ್ ಆದೇಶವನ್ನು ಸ್ವಾಗತಿಸಿದೆ. ದೇಶಭಕ್ತಿ ಇರುವ ಎಲ್ಲ  ನಾಗರಿಕರೂ ಸುಪ್ರೀಂಕೋರ್ಟ್ ನ ಈ ಆದೇಶವನ್ನು ಮುಕ್ತಕಂಠದಿಂದ ಸ್ವಾಗತಿಸಿದ್ದಾರೆ.

ನಾವು ಪ್ರಾಥಮಿಕ ಶಾಲೆ, ಪ್ರೌಢಶಾಲೆಯಲ್ಲಿ ಓದುತ್ತಿದ್ದಾಗ, ಗಾಂಧಿಟೋಪಿ ಧರಿಸುತ್ತಿದ್ದೆವು. ಶಾಲೆಗಳಲ್ಲಿ ಬೆಳಗ್ಗೆ ನಮ್ಮನ್ನು ತರಗತಿವಾರು ಸಾಲಿನಲ್ಲಿ ನಿಲ್ಲಿಸಿ ಕಡ್ಡಾಯವಾಗಿ ರಾಷ್ಟ್ರಗೀತೆ ಹಾಡಿಸುತ್ತಿದ್ದರು. ನಾವು ಶಾಲೆಗೆ ಬರುವಾಗ ತಡವಾದರೆ, ರಾಷ್ಟ್ರಗೀತೆ ಆರಂಭವಾಗಿದ್ದರೆ ನಾವು ಎಲ್ಲಿರುತ್ತಿದ್ದೆವೋ ಅಲ್ಲೇ ನಿಂತು ರಾಷ್ಟ್ರಗೀತೆಗೆ ಗೌರವ ಸಲ್ಲಿಸುತ್ತಿದ್ದೆವು. ಆ ಪ್ರದೇಶದಲ್ಲಿ ಓಡಾಡುತ್ತಿದ್ದ ಊರ ಜನರು ಕೂಡ ರಾಷ್ಟ್ರಗೀತೆ ಮುಗಿಯುವ ತನಕ ನಿಂತು, ಗೌರವ ವಂದನೆ ಸಲ್ಲಿಸಿ ನಂತರ ತಮ್ಮ ಕೆಲಸಕ್ಕೆ ತೆರಳುತ್ತಿದ್ದರು. ಅವರಿಗೆ ಯಾರೂ ಎದ್ದು ನಿಲ್ಲಿ ಎಂದು ಹೇಳುತ್ತಿರಲಿಲ್ಲ. ಆದರೆ ಅವರೇ ಸ್ವಯಂ ಪ್ರೇರಿತರಾಗಿ ಗೌರವ ಸೂಚಿಸುತ್ತಿದ್ದರು.  

1980-90ರ ದಶಕದವರೆಗೂ ಟಿವಿಗಳಲ್ಲಿ ರಾಷ್ಟ್ರಗೀತೆ ಬಂದರೂ ಹಿರಿಯರು ಎದ್ದು ನಿಲ್ಲುತ್ತಿದ್ದರು. ಅದನ್ನು ನೋಡು ಮಕ್ಕಳೂ ಕಲಿಯುತ್ತಿದ್ದರು. ಇದು ಸಾಂಪ್ರದಾಯಿಕವಾಗಿ ಬಂದ ನಡವಳಿಕೆಯಾಗಿತ್ತು. ರಾಷ್ಟ್ರದ ಬಗ್ಗೆ ಅವರಿಲ್ಲಿ ಇರುವ ಗೌರವ ಆಗಿತ್ತು. ಆದರೆ ಇತ್ತೀಚೆಗೆ ಹಣದ ವ್ಯಾಮೋಹ ಹೆಚ್ಚಾಗಿ ಜನರೆಲ್ಲಾ ದುಡ್ಡಿನ ಹಿಂದೆ ಬಿದ್ದು, ದೇಶ, ಪ್ರಾಮಾಣಿಕತೆ, ದೇಶಭಕ್ತಿ, ರಾಷ್ಟ್ರಪ್ರೇಮ ಎಂಬ ಪದಗಳನ್ನು ಹುಡುಕುವ ಸ್ಥಿತಿ ಬಂದಿದೆ. ಈ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ನೀಡಿರುವ ಈ ತೀರ್ಪು ನಿಜಕ್ಕೂ ಸಕಾಲಿಕ ಮತ್ತು ಅತ್ಯಂತ ಮಹತ್ವದ್ದು.

ನಮ್ಮ ನಡೆ ನುಡಿಯಿಂದ ನಮ್ಮ ಗುಣಾವಗುಣ ತಿಳಿಯುತ್ತದೆ. ನಮ್ಮ ಸ್ವಭಾವದಿಂದ ನಮ್ಮ ವ್ಯಕ್ತಿತ್ವ ಏನೆಂಬುದನ್ನು ಇನ್ನೊಬ್ಬರು ಅರಿಯುತ್ತಾರೆ. ನಮ್ಮ ಸಂಸ್ಕೃತಿಯಲ್ಲಿ ಭಾರತ ಮಾತೆಯನ್ನು ತಾಯಿಯ ಸ್ಥಾನದಲ್ಲಿಟ್ಟು ಗೌರವಿಸುತ್ತೇವೆ. ರಾಷ್ಟ್ರಕವಿ ಕುವೆಂಪು ಅವರು ಭಾರತ ಜನನಿಯ ತನು ಜಾತೆ ಜಯಹೇ ಕರ್ನಾಟಕ ಮಾತೆ ಎಂದರು. ಇದು ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ನಾವು ನಾಡಿಗೆ, ಮಹಿಳೆಗೆ ಕೊಡುವ ಗೌರವದ ಸಂಕೇತವಾಗಿದೆ. ಚಲನಚಿತ್ರ ಮಂದಿರಗಳಲ್ಲಿ ರಾಷ್ಟ್ರಗೀತೆ ಮೊಳಗಿದಾಗ ಹೇಗೂ ಬಾಗಿಲುಮುಚ್ಚಿದೆ ಯಾರೂ ನೋಡುವುದಿಲ್ಲ ಎಂದು ಕುಳಿತುಕೊಳ್ಳದೆ ಎದ್ದು ನಿಲ್ಲಿ. ನಮ್ಮ ರಾಷ್ಟ್ರಧ್ವಜ, ರಾಷ್ಟ್ರಗೀತೆಗೆ ಗೌರವ ಸೂಚಿಸಿ, ಇದು ಕಾನೂನಿಗೆ ಹೆದರಿ ಮಾಡುವ ಕ್ರಮ ಆಗಬಾರದು. ನಮ್ಮ ಹೃದಯಾಂತರಾಳದಿಂದ ಮನಃಪೂರ್ವಕವಾಗಿ ನಮಗೆ ಜನ್ಮಕೊಟ್ಟ ಮಾತೃಭೂಮಿಗೆ ನಾವು ಸಲ್ಲಿಸುತ್ತಿರುವ ಗೌರವ ಎಂದು ಭಾವಿಸಿ ಮಾಡಬೇಕು. ಇದು ನಮ್ಮ ಕರ್ತವ್ಯ ಎಂದು ತಿಳಿಯಬೇಕು, ರಾಷ್ಟ್ರಧ್ವಜ, ರಾಷ್ಟ್ರಗೀತೆಯನ್ನು ಗೌರವಿಸುವುದು ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಬೇಕು ಅಲ್ಲವೇ.

ಶ್ರೀರಾಮ ದೇವರ ದೇಶಪ್ರೇಮ..

lord ramaಇದು ರಾಮಾಯಣದ ಒಂದು ಪ್ರಸಂಗ, ಮಂದರೆಯ ತಂತ್ರದಿಂದ ಶ್ರೀರಾಮ ವನವಾಸಿಯಾಗುತ್ತಾನೆ. ಆದರೆ ರಾಮನ ಸೋದರ ಭರತ, ಶ್ರೀರಾಮನ ಪಾದುಕೆಯನ್ನೇ ಸಿಂಹಾಸನದಲ್ಲಿಟ್ಟು ರಾಜ್ಯಭಾರ ಮಾಡುತ್ತಾನೆ. ವನವಾಸಿ ರಾಮನ ಧರ್ಮಪತ್ನಿ ಸೀತಾಮಾತೆಯನ್ನು ರಾವಣ ಅಪಹರಿಸುತ್ತಾನೆ. ಸಮುದ್ರದ ಮೇಲೆ ಲಂಕೆಗೆ ಸೇತುವೆ ಕಟ್ಟಿ ಕಪಿಸೈನ್ಯದೊಂದಿಗೆ ಲಗ್ಗೆ ಇಟ್ಟು,ಯುದ್ಧಮಾಡಿ ತ್ರೇತಾಯುಗಪುರುಷ ಶ್ರೀರಾಮ ರಾಕ್ಷಸ ರಾವಣನ ಸಂಹಾರ ಮಾಡುತ್ತಾನೆ. ಸಾತ್ವಿಕನಾದ ವಿಭೀಷಣನಿಗೆ ಪಟ್ಟಕಟ್ಟಿ ಅಯೋಧ್ಯೆಗೆ ಹಿಂತಿರುಗಲು ತೀರ್ಮಾನಿಸುತ್ತಾನೆ. ಆಗ ಲಕ್ಷ್ಮಣ ಹೇಳುತ್ತಾನೆ. ಅಣ್ಣಾ, ಕ್ಷತ್ರಿಯ ಧರ್ಮದ ರೀತ್ಯ ನೀನು ರಾವಣನನ್ನು ಕೊಂದು, ಯುದ್ಧ ಗೆದ್ದ ಬಳಿಕ ಈ ಸ್ವರ್ಣ ಲಂಕೆ ನಿನ್ನದೇ ಆಯಿತು. ನಾವೇಕೆ ಮತ್ತೆ ಅಯೋಧ್ಯೆಗೆ ಹೋಗಬೇಕು. ನಮ್ಮ ರಾಜ್ಯ ನಮಗೆ ಕೊಡು ಎಂದು ಭರತನನ್ನು ಏಕೆ ಕೇಳಬೇಕು. ಹೇಗೂ ಚಿನ್ನದ ಲಂಕೆ ಇಲ್ಲೇ ರಾಜ್ಯಭಾರ ಮಾಡಿಕೊಂಡು ಇದ್ದು ಬಿಡೋಣ ಅನ್ನುತ್ತಾನೆ.

ಆಗ ಶ್ರೀರಾಮ ಹೇಳುತ್ತಾನೆ. ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ ಎಂದು. ಅಂದರೆ ಜನ್ಮಕೊಟ್ಟ ತಾಯಿ, ಜನ್ಮಕೊಟ್ಟ ಭೂಮಿ ಸ್ವರ್ಗಕ್ಕೆ ಸಮಾನ ಎಂದು. ಇದು ನಿಜವಾದ ರಾಷ್ಟ್ರಪ್ರೇಮ. ನಮ್ಮ ತಾಯಿ ಹರಿದ ಸೀರೆ ಉಟ್ಟಿಹಳು ಎಂದು, ರೇಷ್ಮೆ ಸೀರೆ ಉಟ್ಟ ಪಕ್ಕದ ಮನೆಯವರನ್ನು ಅಮ್ಮ ಎನ್ನಲು ಸಾಧ್ಯವೇ. ತಾಯಿ ತಾಯಿಯೇ.. ಅಂತೆಯೇ ರಾಷ್ಟ್ರವೂ ನಮ್ಮ ತಾಯಿ. ರಾಷ್ಟ್ರಕ್ಕೆ ರಾಷ್ಟ್ರಗೀತೆಗೆ ಆತ್ಮಪೂರ್ವಕವಾಗಿ ಗೌರವ ಸಲ್ಲಿಸೋಣ..


ಮುಖಪುಟ /ಲೇಖನ