ಮುಖಪುಟ /ಲೇಖನ

2000 ರೂ. ನೋಟಿನ ಸಾಚಾತನ ಪತ್ತೆಗೆ ಸಾಕಷ್ಟು ಯಂತ್ರಗಳಿವೆಯೇ?

ಬ್ಯಾಂಕ್ ಸಿಬ್ಬಂದಿ ಖೋಟಾ ನೋಟು ಎಂದು 2 ಸಾವಿರದ ನೋಟು ಹರಿದು ಹಾಕಿದರೆ ಬಡ ಗ್ರಾಹಕರ ಪಾಡೇನು?

* ಟಿ.ಎಂ.ಸತೀಶ್
2000 Rs. Note, security features of the newly-launched Rs. 2,000 notes

ಕೇಂದ್ರ ಸರ್ಕಾರ 500, 1000 ರೂ. ಮುಖಬೆಲೆಯ ನೋಟುಗಳ ಚಲಾವಣೆ ರದ್ದು ಮಾಡಿದ ತರುವಾಯ ಹೊರ ಬಂದ ಹೊಸ ಗುಲಾಬಿ ಬಣ್ಣದ  ಆಕರ್ಷಕ 2 ಸಾವಿರ ರೂಪಾಯಿ ನೋಟಿಗಾಗಿ ಕಾತರಿಸುತ್ತಿದ್ದ ಜನರಲ್ಲಿ ಬಹುತೇಕರು ಇಂದು ಆ ನೋಟನ್ನು ಮುಟ್ಟಲೂ ಹಿಂಜರಿಯುವ ಸ್ಥಿತಿ ನಿರ್ಮಾಣವಾಗಿರುವುದು ನಿಜಕ್ಕೂ ಆತಂಕಕಾರಿ ಬೆಳವಣಿಗೆ.

ಹೊಸ 2 ಸಾವಿರ ರೂ. ನೋಟು ಸಿಕ್ಕರೆ ಸಾಕು ಎಂದು ಬ್ಯಾಂಕ್ ನಲ್ಲಿ ಸರತಿ ಸಾಲಲ್ಲಿ ನಿಂತು ಹಣ ಪಡೆದು, ಸೆಲ್ಫಿ ತೆಗೆಸಿಕೊಂಡು ಸಾಮಾಜಿಕ ತಾಣಗಳಲ್ಲಿ ಹಾಕಿ ಆನಂದಪಟ್ಟಿದ್ದ ಬಹುತೇಕ ಮಂದಿಯೇ ಇಂದು 2 ಸಾವಿರ ನೋಟು ಕೊಟ್ಟರೆ ನಾ ಒಲ್ಲೆ ಎನ್ನುತ್ತಿದ್ದಾರೆ.

ಕೇವಲ 20 ದಿನದಲ್ಲಿ ಇಷ್ಟು ದೊಡ್ಡ ಆತಂಕ ಎದುರಾಗಿದ್ದಾದರೂ ಏಕೆ?

ಹೊಸ ರೂ. 2000 ಮುಖಬೆಲೆಯ ಖೋಟಾ ನೋಟು ಮುದ್ರಿಸಿ ಚಲಾವಣೆ ಮಾಡುತ್ತಿದ್ದ ಜಾಲವನ್ನು ಪಂಜಾಬ್ ಪೊಲೀಸರು ಭೇದಿಸಿದ್ದಾರೆ. ವಶಪಡಿಸಿಕೊಂಡಿರುವ ಈ ಖೋಟಾ ನೋಟುಗಳು ಗುಣಮಟ್ಟದಲ್ಲಿ ಉತ್ತಮವಾಗಿದ್ದು, ಅಸಲಿ ಯಾವುದು ನಕಲಿ ಯಾವುದು ಎಂದು ತತ್ ಕ್ಷಣಕ್ಕೆ ತಿಳಿಯುವುದು ಕಷ್ಟ ಎಂದು ಪೊಲೀಸ್ ಅಧಿಕಾರಿಗಳೇ ಹೇಳಿದ್ದಾರೆ. ಜೊತೆಗೆ ಈಗಾಗಲೇ 3 ಕೋಟಿ ರೂಪಾಯಿಯಷ್ಟು ಹಣ ಚಲಾವಣೆ ಆಗಿದೆ ಎಂಬ ಸುದ್ದಿ ಶ್ರೀಸಾಮಾನ್ಯನಲ್ಲಿ ಆತಂಕ ಮೂಡಿಸಿದೆ.

ತನ್ನ ಬಳಿ ಇರುವ 2000 ರೂ. ನೋಟು ನಕಲಿ ಎಂದು ಬ್ಯಾಂಕ್ ಗಳ ಕ್ಯಾಷ್ ಕೌಂಟರ್ ಸಿಬ್ಬಂದಿ ಹರಿದು ಹಾಕಿದರೆ ಗತಿ ಏನು ಎಂಬ ಚಿಂತೆ ಈಗ ಶ್ರೀಸಾಮಾನ್ಯರನ್ನು ಕಾಡುತ್ತಿದೆ.

ಹೊಸ 2 ಸಾವಿರ ರೂ. ಮೌಲ್ಯದ ನೋಟು ಬಂದು 20 ದಿನವಷ್ಟೇ ಕಳೆದಿದೆ. 120 ಕೋಟಿ ಜನಸಂಖ್ಯೆಯ ಭಾರತದಲ್ಲಿ ಶೇ.10ರಷ್ಟು ಮಂದಿಯೂ ಈ ನೋಟನ್ನು ಬಳಸಿಲ್ಲ. ಹೀಗಾಗಿ ಅದರ ಗಾತ್ರ, ಆಕಾರ, ಭದ್ರತೆಯ ಅಂಶಗಳ ಯಾವ ಪರಿಚಯವೂ ಹೆಚ್ಚಿನ ಜನರಿಗೆ ಇಲ್ಲ. ಹೀಗಾಗಿ ಅಸಲಿ ನಕಲಿ ನೋಟು ಮತ್ತು ನಕಲಿ ನೋಟುಗಳ ನಡುವಿನ ವ್ಯತ್ಯಾಸ ಕಂಡು ಹಿಡಿಯುವುದು ಶ್ರೀಸಾಮಾನ್ಯನಿಗೆ ಕಷ್ಟಸಾಧ್ಯ. ಹೋಗಲಿ ಬ್ಯಾಂಕ್ ಗಳಲ್ಲಾದರೂ 2000 ರೂ ಮುಖಬೆಲೆಯಯ ಹೊಸ ನೋಟುಗಳ ಸಾಚಾತನ ಪತ್ತೆಗೆ ಯಂತ್ರಗಳನ್ನು ಅಳವಡಿಸಲಾಗಿದೆಯೇ? ಎಂಬ ಪ್ರಶ್ನೆ ಎದುರಾಗಿದೆ.

ಈ ಹಿಂದೆ ನೋಟುಗಳ ಅಸಲಿಯೋ ನಕಲಿಯೋ ಎಂದು ತಿಳಿಯಲು ಬ್ಯಾಂಕ್ ಗಳು ಬಳಸುತ್ತಿರುವ ಅಲ್ಟ್ರಾವಯಲೆಟ್ ರೇಸ್ (ನೀಲಿ ಬಣ್ಣದ ಲೈಟ್) ಹರಿಸಿ ನೋಡುವ ವಿಧಾನವನ್ನೇ ಈ ನೋಟುಗಳ ಸಾಚಾತನ ಅರಿಯಲೂ ಬಳಸಲಾಗುತ್ತಿದೆ. ರಿಜರ್ವ್ ಬ್ಯಾಂಕ್ 2000 ರೂ, ಮುಖಬೆಲೆಯ ನೋಟುಗಳಲ್ಲಿ ಹೆಚ್ಚಿನ  ಸುರಕ್ಷತೆ ಮಾನದಂಡಗಳನ್ನು ಅಳವಡಿಸಿದೆ. ಅದರ ಬಗ್ಗೆ ಮಾಹಿತಿಯನ್ನೂ ನೀಡಿದೆ. ಆದರೂ ಅದು ಹೆಚ್ಚು ಜನರಿಗೆ ಪರಿಚಯವಾಗಿಲ್ಲ. 

ಈ ಮಧ್ಯೆ ಮೋದಿ ಕಿನೋಟ್  ಎಂಬ ಹೆಸರಿನ ಮೊಬೈಲ್ ಆಪ್ ಅನ್ನು ತಮ್ಮ ಮೊಬೈಲ್ ಗೆ ಅಳವಡಿಸಿಕೊಂಡಿರುವ ಅನೇಕರು ಅದನ್ನು ಹೊಸ 2000 ರೂ ಮೌಲ್ಯದ ನೋಟಿನ ಮೇಲೆ ಇಡುತ್ತಾರೆ, ಆಗ ಮೋದಿ ಅವರ ಭಾಷಣ ಬರುತ್ತದೆ. ಹೀಗಾಗಿ ಇದು ಸಾಚಾ ನೋಟು ಎಂದು ತೃಪ್ತಿ ಪಡುತ್ತಿದ್ದಾರೆ. ಆದರೆ, ಇದು ವದಂತಿ ಮಾತ್ರ. ನೋಟಿನ ಝೆರಾಕ್ಸ್ ಮೇಲೆ ಈ ಆಪ್ ಇಟ್ಟರೂ ಮೋದಿ ಅವರ ಭಾಷಣ ಬರುತ್ತದೆ, ಅಷ್ಟೇಕೆ ಗೂಗಲ್ ಸರ್ಚ್ ನಲ್ಲಿ ಹುಡುಕಿದಾಗ ನಮ್ಮ ಕಂಪ್ಯೂಟರ್ ಪರದೆ ಮೇಲೆ ಮೂಡುವ ಹೊಸ ನೋಟಿನ ಮಾದರಿ ಚಿತ್ರದ ಮೇಲೆ ಈ ಆಪ್ ಇಟ್ಟರೂ ಮೋದಿ ಭಾಷಣ ಬರುತ್ತದೆ. ಹೀಗಾಗಿ ನೋಟಿನ ನಿಖರತೆ, ಸಾಚಾತನ ಅರಿಯಲು ಇದು ಮಾರ್ಗವಲ್ಲ.

ಇನ್ನು ಬಹುತೇಕ ಬ್ಯಾಂಕ್ ಗಳ ಕ್ಯಾಷ್ ಕೌಂಟರ್ ಸಿಬ್ಬಂದಿ ಖೋಟಾ ನೋಟು ಕಂಡರೆ, ಸುಮ್ಮನೆ ಸಮಸ್ಯೆ ಏಕೆ ಮೈಮೇಲೆ ಎಳೆದುಕೊಳ್ಳಬೇಕು ಎಂದು ನೋಟು ಹರಿದು ಹಾಕುತ್ತಾರೆ. ಕೆಲವು ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಮಾತ್ರ  ಅಂಥ ನೋಟನ್ನು ಮುಟ್ಟುಗೋಲು ಹಾಕಿಕೊಂಡು ನಕಲಿ ನೋಟು ಸ್ವೀಕರಿಸಲಾಗಿದೆ ಎಂದು ಸ್ವೀಕೃತಿ ಕೊಡುತ್ತಾರೆ. ಪದೇ ಪದೇ ಒಬ್ಬನೇ ವ್ಯಕ್ತಿಯಿಂದ ಇಂಥ ನೋಟುಗಳು ಬಂದರೆ ರಿಜರ್ವ್ ಬ್ಯಾಂಕ್, ಪೊಲೀಸ್ ತನಿಖೆ ಆಗುತ್ತದೆ. ನೋಟಿನ ಮೂಲ ಹುಡುಕಲಾಗುತ್ತದೆ. ನೋಟನ್ನು ಹರಿದು ಹಾಕಿದರೂ, ಮುಟ್ಟುಗೋಲು ಹಾಕಿಕೊಂಡರೂ ಗ್ರಾಹಕನಿಗೆ ನಷ್ಟ ಆಗುತ್ತದೆ. ತಾನು ಮಾಡದ ತಪ್ಪಿಗೆ ಆತ ನಷ್ಟ ಅನುಭವಿಸುತ್ತಾನೆ.

ನಾವು ಗೊತ್ತಿಲ್ಲದೆ ಸ್ವೀಕರಿಸುವ ಇಂಥ 2 ಸಾವಿರ ರೂ. ನೋಟನ್ನು ಬ್ಯಾಂಕ್ ಸಿಬ್ಬಂದಿ ಇಲ್ಲವೇ ನೀರಿನ ಬಿಲ್, ವಿದ್ಯುತ್ ಬಿಲ್ ಸ್ವೀಕರಿಸುವ ಕೌಂಟರ್ ನಲ್ಲಿ ಹರಿದು ಹಾಕಿದರೆ ನಮ್ಮ ಪಾಡೇನು? ನಮ್ಮ ಕಷ್ಟಾರ್ಜಿತವಾದ ಹಣ ಕ್ಷಣ ಮಾತ್ರದಲ್ಲಿ ಮಣ್ಣುಪಾಲಾಗುತ್ತದೆ ಆಗ ನಮಗೆ ಪರಿಹಾರ ಏನು ಎಂದು ಶ್ರೀಸಾಮಾನ್ಯರು ಅದರಲ್ಲೂ ಬಡ ಜನರು ಪ್ರಶ್ನಿಸುತ್ತಿದ್ದಾರೆ.
ಇದೇ ಭೀತಿಯಿಂದ ಮಾರುಕಟ್ಟೆಗಳಲ್ಲಿ, ಅಂಗಡಿ, ಮಳಿಗೆ ಮಾಲೀಕರು, ಹಾಲಿನ ವ್ಯಾಪಾರಿಗಳು 2 ಸಾವಿರ ಮೌಲ್ಯದ ಹೊಸ ನೋಟು ಸ್ವೀಕರಿಸಲು ಹಿಂಜರಿಯುತ್ತಿದ್ದಾರೆ. ಮೊದಲೇ ನೋಟಿನ, ಚಿಲ್ಲರೆ ಸಮಸ್ಯೆಯಿಂದ ಕಂಗೆಟ್ಟಿರುವ ಜನಕ್ಕೆ ಇದು ಮತ್ತೊಂದು ಆಘಾತ ನೀಡಿದೆ. ಜನರಲ್ಲಿ 2 ಸಾವಿರದ ಹೊಸ ನೋಟಿನ ಬಗ್ಗೆ ದಿಗಿಲು ಹೆಚ್ಚಾದರೆ ಅದು ನೋಟಿನ ಬಿಕ್ಕಟ್ಟನ್ನು ಮತ್ತಷ್ಟು ಉಲ್ಬಣಗೊಳಿಸುತ್ತದೆ. ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಆಗುತ್ತದೆ. ಈ ಬಗ್ಗೆ ಕೇಂದ್ರ ಸರ್ಕಾರ, ರಿಜರ್ವ್ ಬ್ಯಾಂಕ್ ತುರ್ತು ಕ್ರಮ ಕೈಗೊಂಡು ಮಾಧ್ಯಮಗಳಲ್ಲಿ ಜಾಹೀರಾತು ನೀಡುವ ಮೂಲಕ ಹೊಸ ನೋಟಿನ ಸುರಕ್ಷತೆಯ ಅಂಶಗಳ ಬಗ್ಗೆ ಜನ ಜಾಗೃತಿ ಮೂಡಿಸುವುದು ಅಗತ್ಯ. 

2000 Rs. Note, security features of the newly-launched Rs. 2,000 notes

ಹೊಸ 2 ಸಾವಿರ ರೂ. ನೋಟಿನ ಸುರಕ್ಷತೆಗಳು.

ಮುಂಭಾಗ:

1.   ಹೊಸ 2 ಸಾವಿರ ರೂ ನೋಟನ್ನು ಬೆಳಕಿಗೆ ಅಡ್ಡಲಾಗಿ ಹಿಡಿದರೆ ಎಡ ಭಾಗದಲ್ಲಿರುವ ಪಾರದರ್ಶಕ ಜಾಗದಲ್ಲಿ 2000 ಎಂಬ ಅಂಕಿಗಳು ಕಾಣುತ್ತವೆ.

2.   ನೋಟನ್ನು ಸ್ವಲ್ವ ಒರೆ ಮಾಡಿದಾಗ ಕೆಳಭಾಗದಲ್ಲಿರುವ ಚಿತ್ತಾರದಲ್ಲಿ 2 ಸಾವಿರ ಬಿಂಬ ಕಾಣುತ್ತದೆ.

3.   ದೇವನಾಗರಿಯಲ್ಲಿ ನೋಟಿನ ಮೌಲ್ಯ ಇದೆ.

4.   ಮಧ್ಯದಲ್ಲಿ ಮಹಾತ್ಮಾಗಾಂಧಿ ಅವರ ಚಿತ್ರವಿದೆ.

5.   ಸಣ್ಣದಾಗಿ ಆರ್.ಬಿ.ಐ ಮತ್ತು 2000 ಎಂಬುದನ್ನು ನೋಡಬಹುದು.

6.   ಸುರಕ್ಷತೆಯ ಬಹು ಬಣ್ಣದ ದಾರದಲ್ಲಿ ಆರ್.ಬಿ.ಐ. ಮತ್ತು 2000 ಎಂಬುದು ಕಾಣುತ್ತದೆ.

7.   ದಾರದ ಪಕ್ಕದಲ್ಲಿ ಗೌರ್ನರ್ ಸಹಿ ಮತ್ತು ಆರ್.ಬಿ.ಐ. ಲಾಂಛನ ಇದೆ.

8.   ಮೇಲ್ಭಾಗದಲ್ಲಿರುವ ರಿಜರ್ವ್ ಬ್ಯಾಂಕ್ ಆಫ್ ಇಂಡಿಯಾ ಎಂಬ ಇಂಗ್ಲಿಷ್ ಅಕ್ಷರಗಳು ಹಾಗೂ  
   
ಕೆಳಭಾಗದಲ್ಲಿ ಹಸಿರು ಬಣ್ಣದಲ್ಲಿರುವ 2000ರೂ. ಅಂಕಿಯ ನಡುವಿನ ಖಾಲಿ ಜಾಗದಲ್ಲಿ
    ಮಹಾತ್ಮಾಗಾಂಧಿಜೀ ಅವರ ವಾಟರ್ ಮಾರ್ಕ್ ಚಿತ್ರ ಮತ್ತು 2000 ಅಂಕಿ ಕಾಣಿಸುತ್ತದೆ.

9.   ಕೆಳ ಬಲಭಾಗದಲ್ಲಿ ನೋಟಿನ ಸಂಖ್ಯೆ ಇದ್ದು, ಇದು ಎಡದಿಂದ ಬಲಕ್ಕೆ ದೊಡ್ಡದಾಗುತ್ತಾ ಹೋಗಿರುತ್ತದೆ.

10.  ಬಲ ಕೆಳಭಾಗದಲ್ಲಿ ಹಸಿರು ಬಣ್ಣದಲ್ಲಿ ರೂಪಾಯಿ ಸಂಕೇತ ಮತ್ತು 2000 ಅಂಕಿ ಇದ್ದು, ಇದನ್ನು
     ಬಣ್ಣಬದಲಾಗುವ ಶಾಯಿಯಿಂದ ಮುದ್ರಿಸಲಾಗಿದೆ.

11.  ಅದರ ಪಕ್ಕದಲ್ಲಿ ಅಶೋಕ ಸ್ತಂಭದ ಸಿಂಹ ಲಾಂಛನವಿದೆ. 

ದೃಷ್ಟಿ ದೋಷ ಇರುವ ದಿವ್ಯಾಂಗದವರಿಗಾಗಿ

12.    2000 ಎಂಬ ಉಬ್ಬು ಅಕ್ಷರ ಮುದ್ರಿಸಲಾಗಿದೆ.

13. ಸ್ಪರ್ಶಿಸಿ ತಿಳಿಯಬಹುದಾದ ಏಳು ಓರೆ ರೇಖೆಗಳನ್ನು ಅಳವಡಿಸಲಾಗಿದೆ

ಹಿಂಬದಿಯಲ್ಲಿರುವ ಗುರುತುಗಳು...

14.  ನೋಟು ಮುದ್ರಣವಾದ ವರ್ಷ ಎಡ ಮೇಲ್ತುದಿಯಲ್ಲಿದೆ.

15. ಕೆಳ ಎಡ ತುದಿಯಲ್ಲಿ ಸ್ವಚ್ಛಭಾರತ ಅಭಿಯಾನದ ಲಾಂಛನ ಮತ್ತು ಘೋಷಣೆ ಇದೆ.

16. ವಿವಿಧ ಭಾಷೆಗಳಲ್ಲಿ ನೋಟಿನ ಮೌಲ್ಯವನ್ನು ಮುದ್ರಿಸಲಾಗಿದೆ.

17. ಮಂಗಳಯಾನದ ಚಿತ್ರವಿದೆ.


ಮುಖಪುಟ /ಲೇಖನ