ಮುಖಪುಟ /ಸಾಧಕರು    

ಹಾಡು ಮುಗಿಸಿದ ಗಾನಗಾರುಡಿಗ ಸಿ.ಅಶ್ವತ್ಥ್
ಅಗಲಿದ ಹಿರಿಯ ಗಾಯಕ ಅಶ್ವತ್ಥ್ ಅವರ ಬಗ್ಗೆ ಯುವ ಸುಗಮಸಂಗೀತಗಾರ ಉಪಾಸನಾ ಮೋಹನ್ ಬರೆದ ಲೇಖನ

* ಉಪಾಸನಾ ಮೋಹನ್

ಸಿ. ಅಶ್ವತ್ಥ್, C. Ashwathಸಂಗೀತ ಲೋಕದಲ್ಲಿ ಆಡು ಮುಟ್ಟದ ಸೊಪ್ಪಿಲ್ಲಎಂಬ ಗಾದೆ  ಸಿ.ಅಶ್ವತ್ಥ್ ಅವರಿಗೆ ಹೆಚ್ಚು ಅನ್ವಯಿಸುತ್ತಿತ್ತು. ಅಶ್ವತ್ಥ್ ಈಜದ ಸಂಗೀತ ಕ್ಷೇತ್ರವೇ ಇಲ್ಲ ಎಂದರೆ ತಪ್ಪಾಗಲಾರದು. ರಂಗ ಸಂಗೀತ, ಚಿತ್ರ ಸಂಗೀತ, ಭಕ್ತಿ ಸಂಗೀತ, ಸುಗಮ ಸಂಗೀತ, ವಚನ ಗಾಯನ ... ಹೀಗೆ ವಿವಿಧ ರಂಗಗಳಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿರುವ ಅಶ್ವತ್ಥ್ ಸುಗಮ ಸಂಗೀತದ ದಿಗ್ಗಜರಾದ ಬಾಳಪ್ಪ ಹುಕ್ಕೇರಿ, ಪಿ. ಕಾಳಿಂಗರಾವ್ಮೈಸೂರು ಅನಂತಸ್ವಾಮಿಯವರ ನಂತರದ ಸ್ಥಾನವನ್ನು ಅಲಂಕರಿಸಿದವರು. ಸುಗಮ ಸಂಗೀತಕ್ಕೆ ಹೊಸ ಆಯಾಮವನ್ನು ನೀಡಿ ಪ್ರಸಿದ್ದಿಗೊಳಿಸಿದ ಸರದಾರ.

ಅಶ್ವತ್ಥ್ ಮೊದಲು ಆರಿಸಿಕೊಂಡಿದ್ದು ನಾಟಕ ರಂಗವನ್ನು. ಹಲವು ನಾಟಕಗಳ ಹಿಮ್ಮೇಳಕ್ಕೆ ದನಿಯಾದ ಅಶ್ವತ್ಥ್ , ನಂತರದ ದಿನಗಳಲ್ಲಿ ಸಂಯೋಜನೆಯ ಕಡೆಯೂ ಒಲವು ಹರಿಸಿದರು. ಇವರು ಸಂಗೀತ ನೀಡಿದ ಮೊದಲ ನಾಟಕ ಸ್ಮಶಾನ ಕುರುಕ್ಷೇತ್ರ .ಅಂದು ಈ ನಾಟಕದ ಗೀತೆಗಳು ಜನಪ್ರಿಯವಾಗಿದ್ದಷ್ಟೇ ಅಲ್ಲ, ಅಶ್ವತ್ಥ್‌ರಿಗೆ ಖ್ಯಾತಿಯನ್ನೂ ನೀಡಿತು. ಹೀಗೆ ಅಲ್ಲಲ್ಲಿ ಒಂದೊಂದು ಗೀತೆಗಳಿಗೆ ಸಂಗೀತ ನೀಡುತ್ತಿದ್ದ ಸಮಯದಲ್ಲಿ ಇವರಿಗೆ ಪ್ರಸಿದ್ದ ನಾಟಕಕಾರ ಗಿರೀಶ್ ಕಾರ್ನಾಡರ ಹಯವದನ ನಾಟಕಕ್ಕೆ ಸಂಗೀತ ನಿರ್ದೇಶನ ಮಾಡಲು ಕರೆಬಂದಿತು. ಅಶ್ವತ್ಥ್ ೮ ಗೀತೆಗಳನ್ನು ಸಂಯೋಜಿಸಿದರು. ನಾಟಕಕ್ಕೆ ಪೂರಕವಾಗಿದ್ದ ಈ ಗೀತೆಗಳು ಇಂದೂ ಕೂಡ ಬಳಕೆಯಲ್ಲಿವೆ ಹಾಗೂ ಪ್ರಸಿದ್ಧಿ ಹೊಂದಿವೆ. ಹೀಗೆ ತಮ್ಮ ಸಂಗೀತ ರಥವನ್ನು ನಡೆಸಿಕೊಂಡು ಬಂದ ಅಶ್ವತ್ಥ್..

ಬಿರುಕು ವಿಠ್ಠಲ ಮುಂತಾದ ನಾಟಕಗಳಿಗೆ ಸಂಗೀತ ನಿರ್ದೇಶನ ಮಾಡಿ ಹಾಡಿದರು. ನಂತರದಲ್ಲಿ ಬಹಳಷ್ಟು ಹೆಸರು ತಂದುಕೊಟ್ಟ ನಾಟಕ ಮಾಸ್ತಿಯವರಕಾಕನ ಕೋಟೆ. ಈ ನಾಟಕದ ಗೀತೆಗಳನ್ನು ಹಲವು ಸಂಗೀತಗಾರರು ಸಂಯೋಜಿಸಿದ್ದರೂ ಅಶ್ವತ್ಥರ ಸಂಯೋಜನೆಯ ಗೀತೆಗಳು ಹೆಚ್ಚು  ಜನಪ್ರಿಯವಾಗಿ ಪ್ರಸಿದ್ಧಿ ಪಡೆದವು. ಜನಪದ ಸೊಗಡಿನ ಲೇಪನವನ್ನು ಸೂಕ್ತ ರೀತಿಯಲ್ಲಿ ಲೇಪಿಸಿದ್ದ ಅಶ್ವತ್ಥ್ ಪ್ರೇಕ್ಷಕರಿಗೆ ಪ್ರಿಯವಾದರು. ಮುಂದೆ ಕಾಕನ ಕೋಟೆ ಚಲನ ಚಿತ್ರವಾದಾಗ ಅದರಲ್ಲೂ ಅಶ್ವತ್ಥರ ಸಂಯೋಜನೆಗಳನ್ನೇ ಬಳಸಿಕೊಳ್ಳಲಾಯಿತು. ಈ ಚಿತ್ರದಲ್ಲಿ ಮೂಡಿ ಬಂದ ನೇಸಾರಾ ನೊಡು ನೇಸರ ನೊಡು ಗೀತೆ ಅಶ್ವತ್ಥ್‌ರಿಗೆ ಉತ್ತಮ ನೆಲೆ ತಂದುಕೊಟ್ಟಿತು. ಮುಂದೆ ಕಾರ್ನಾಡರ ತುಘಲಕ್ ಪಿ.ಲಂಕೇಶರ ಸಂಕ್ರಾಂತಿ, ಡಾ.ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರ ಅನುವಾದಿತ ನಾಟಕ ಮೃಚ್ಛಕಟಿಕ, ರಾಷ್ಟ್ರಕವಿ ಕುವೆಂಪುರವರ ಬಿರುಕು,ರಕ್ತಾಕ್ಷಿ ನಾಟಕಗಳಲ್ಲದೆ ಮೂಕಬಲಿ, ಸ್ವರ್ಗಸ್ತ, ಮಾರೀಚನ ಬಂಧುಗಳು, ಸ್ಥಿತಿ ಗತಿ,ತಾರಕ್ಕ ಬಿಂದಿಗೆ ಹೀಗೆ ೩೦ ಕ್ಕೂ ಹೆಚ್ಚು ನಾಟಕಗಳಿಗೆ ಸಂಗೀತ ನಿರ್ದೇಶನ ಮಾಡಿದ ಕೀರ್ತಿ ಅಶ್ವತ್ಥರಿಗೆ ಸಲ್ಲುತ್ತದೆ.

 ಕಾಕನ ಕೋಟೆ ಚಿತ್ರದಿಂದ ಚಲನ ಚಿತ್ರ ರಂಗಕ್ಕೆ ಪಾದಾರ್ಪಣೆ ಮಾಡಿದ ಅಶ್ವತ್ಥ್  ತಮ್ಮ ಹೊಸತನ ಹಾಗೂ  ಕ್ರಿಯಾಶೀಲತೆಯಿಂದ ಎಲ್ಲರ ಮನ ಗೆದ್ದರು.ಕಾಕನಕೋಟೆ ಚಿತ್ರದ ಎಲ್ಲ ಗೀತೆಗಳೂ ಜನಪ್ರಿಯವಾದವು. ಹೀಗೆ ಚಿತ್ರರಂಗದಲ್ಲಿ ಖ್ಯಾತಿ ಗಳಿಸಿದ ಅಶ್ವತ್ಥ್ ಸ್ಪಂದನಚಿತ್ರದ ಸಂಗೀತ ಸಂಯೋಜನೆಗಾಗಿ ರಾಜ್ಯ ಪ್ರಶಸ್ತಿ ಪಡೆದರು. ಮುಂದೆ ಹಲವಾರು ಚಿತ್ರಗಳಲ್ಲಿ  ತಮ್ಮ ಛಾಪು ಮೂಡಿಸಿದ ಅಶ್ವತ್ಥ್ ಏನೇ ಬರಲಿ ಪ್ರೀತಿ ಇರಲಿ, ಆಲೆಮನೆ, ನಾರದ ವಿಜಯ, ಭೂಲೋಕದಲ್ಲಿ ಯಮರಾಜ,ಕಾಂಚನ ಮೃಗ, ಸಿಂಹಾಸನ, ಶಂಖನಾದ,   ಸಂತ ಶಿಶುನಾಳ ಷರೀಫದಿಂದ  ಹಿಡಿದು   ಸಿಂಗಾರೆವ್ವ ದವರೆಗೆ ಬಹಳಷ್ಟು ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿ ಚಲನಚಿತ್ರ ರಂಗದಲ್ಲಿ ಕ್ರಿಯಾಶೀಲ  ಸಂಗೀತ ಸಂಯೋಜಕರೆಂಬ ಹೆಸರು ಪಡೆದರು. ಇತ್ತೀಚಿನ ದಿನಗಳಲ್ಲಂತೂ ದೂರದರ್ಶನ ಹಾಗು ಖಾಸಗಿ ಟಿ.ವಿ. ಚಾನೆಲ್‌ಗಳಲ್ಲಿ  ಮೂಡಿಬರುತ್ತಿರುವ ಹಲವಾರು ಧಾರಾವಾಹಿಗಳ  ಶೀರ್ಷಿಕೆ ಗೀತೆಗಳು ಎಲ್ಲರ ಬಾಯಲ್ಲೂ ಗುನುಗುತ್ತಿವೆ. ಅಶ್ವತ್ಥ್  ಅವರು ಸಂಗೀತ ನೀಡಿರುವ ರಂಗಗೀತೆ ಹಾಗು ಚಲನ ಚಿತ್ರಗಳೆಲ್ಲವೂ ಬಹುತೇಕ ಭಾವಗೀತೆಗಳ ಧಾಟಿಯಲ್ಲಿದ್ದು, ಇದು ಭಾವಗೀತೆಗಳ ಬಗ್ಗೆ ಅಶ್ವತ್ಥ್‌ರಿಗಿರುವ ಒಲವಿಗೆ ಸಾಕ್ಷಿಯಾಗಿವೆ.  ಹೀಗಾಗೇ ಅಶ್ವತ್ಥ್‌ರ ಗೀತೆಗಳು ಇತರ ಸಂಗೀತ ಸಂಯೋಕರ ಗೀತೆಗಳಿಗಿಂಥ  ಭಿನ್ನವಾಗಿ ನಿಲ್ಲುತ್ತವೆ.

Upasana mohan with Dr. C. Ashwath, ಸಿ.ಅಶ್ವತ್ಥ್ ರೊಂದಿಗೆ ಲೇಖಕ, ಗಾಯಕ ಉಪಾಸನಾ ಮೋಹನ್ತಾವು ಉದ್ಯೋಗದಲ್ಲಿದ್ದ ಐ.ಟಿ.ಐ ನ ಕನ್ನಡ ಸಂಘದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದ ಅಶ್ವತ್ಥ್ ಕುವೆಂಪು, ಬೇಂದ್ರೆ, ಗೋಪಾಲಕೃಷ್ಣ ಅಡಿಗ, ಕೆ.ಎಸ್.ನರಸಿಂಹ ಸ್ವಾಮಿಯವರ ಕವಿತೆಗಳಿಗೆ ರಾಗ ಹಾಕಿ ಸಮೂಹ ಗಾಯನದಲ್ಲಿ ಹಾಡಿಸುತ್ತಾ ತಾವೂ ಹಾಡುತಿದ್ದರು. ಅಂದು ಆ ಕನ್ನಡ ಸಂಘದಲ್ಲಿ ಅಶ್ವತ್ಥರ ಗೀತೆಗಳಿಗೆ  ಮೊದಲ ಸ್ಥಾನ. 1970ರ ದಶಕದಲ್ಲಿ  ಬೆಂಗಳೂರಿನ ಆಕಾಶವಾಣಿಯಲ್ಲಿ ಎಂ.ಎಸ್.ಐ.ಎಲ್. ಪ್ರಾಯೋಜಕತ್ವದಲ್ಲಿ  ಪ್ರಸಾರವಾಗುತ್ತಿದ್ದ ನಿತ್ಯೋತ್ಸವ (ಲಘು ಸಂಗೀತ ಕಾರ್ಯಕ್ರಮ)ಕ್ಕಾಗಿ ಕೆಲವು ಗೀತೆಗಳನ್ನು ಸಂಯೋಜಿಸಿ, ಹಾಡಲು ಅಶ್ವತ್ಥರಿಗೆ ಕರೆ ಬಂದಿತು. ಈ ಅವಕಾಶವನ್ನು ಅಶ್ವತ್ಥ್ ಸವಾಲಾಗಿ ಸ್ವೀಕರಿಸಿದರು. ಏಕೆಂದರೆ ಆ ಕಾರ್ಯಕ್ರಮದಲ್ಲಿ ಕರ್ನಾಟಕ ಕಲಾತಿಲಕ, ಸುಗಮ ಸಂಗೀತದ ದೊರೆ ಮೈಸೂರು ಅನಂತ ಸ್ವಾಮಿಯವರ ಸಂಯೋಜನೆ ಕೂಡ ಬಿತ್ತರವಾಗಲಿತ್ತು. ಹಲವಾರು ಸಂಯೋಜಕರ ನಡುವೆ ತಮ್ಮ ಗೀತೆಯನ್ನು ಪ್ರಖ್ಯಾತಿಗೊಳಿಸುವ ಹೊಣೆ ಅಶ್ವತ್ಥರ ಹೆಗಲ ಮೇಲಿತ್ತು. ಮನದಲ್ಲಿ ಅಳುಕಿದ್ದರೂ  ತಮ್ಮ ಸಂಯೋಜನೆಯ ಬಗ್ಗೆ ಎಲ್ಲಿಲ್ಲದ ನಂಬಿಕೆ. ಆ ಕಾರ್ಯಕ್ರಮಕ್ಕಾಗಿ ಇವರು ಆರಿಸಿಕೊಂಡಿದ್ದು  ಸಂತ ಶಿಶುನಾಳ ಶರೀಫರ ಕೋಡಗನ ಕೊಳಿ ನುಂಗಿತ್ತಾ, ತರವಲ್ಲ ತೆಗಿ ನಿನ್ನ ತಂಬೂರಿ ಬಿದ್ದಿಯಬ್ಬೇ ಮುದುಕಿ, ಡಾ.ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರ ತೂರಿ ಬಾ ಜಾರಿ ಬಾ, ಯಾವುದೀ ಹೊಸ ಸಂಚು ಮೊದಲಾದ ಕವಿತೆಗಳನ್ನು. ಈ ಗೀತೆಗಳೆಲ್ಲಾ  ಬಾನುಲಿಯಲ್ಲಿ  ಬಿತ್ತರವಾಗ ತೊಡಗಿದಂತೆ, ಬಹುಬೇಗ ಪ್ರಸಿದ್ಧಿ ಪಡೆದವು.  ತರವಲ್ಲ ತಗಿ.. ಗೀತೆಯಂತೂ ಮನೆಮಾತಾಯ್ತು.  ಅಶ್ವತ್ಥರ ಸಂಯೋಜನೆಗಳನ್ನು ಮರು ಪ್ರಸಾರ ಮಾಡುವಂತೆ ಕೋರಿಕೆಯ ಮಹಾಪೂರವೇ ಬಂತು.  ತಮ್ಮ  ವಿಭಿನ್ನ ಧಾಟಿಯ ಸಂಗೀತದಿಂದಲೇ ಮನಗೆದ್ದ ಸಿ. ಅಶ್ವತ್ಥ್  ಆಕರ್ಷಣೆಯ ಕೇಂದ್ರ ಬಿಂದುವಾದರು.

19೭೦ ರ ದಶಕ ಸುಗಮ ಸಂಗೀತ ಧ್ವನಿ ಸುರುಳಿಯ ಕ್ರಾಂತಿಯುಗ. ಮೈಸೂರು ಅನಂತ ಸ್ವಾಮಿಯವರ ಸಂಯೋಜನೆಯ ನಿಸಾರ್ ಅಹಮದ್‌ರ ಕವಿತೆಗಳ ಗುಚ್ಛನಿತ್ಯೋತ್ಸವ ಬಿಡುಗಡೆಯಾಗಿ ಅದರ ಎಲ್ಲ ಗೀತೆಗಳು  ಝೇಂಕರಿಸುತ್ತಿದ್ದವು. ಇದನ್ನು ಗಮನಿಸಿದ ಅಶ್ವತ್ಥ್ ತಾವೂ ಕೂಡ ತಮ್ಮ ಸಂಯೋಜನೆಯ ಧ್ವನಿ ಸುರಳಿಯೊಂದನ್ನು ಹೊರತರಲು ನಿರ್ಧರಿಸಿದರು. ಆದರೆ ಯಾವ ರೀತಿಯ ಹಾಡುಗಳನ್ನು ಹೊರತಂದರೆ ನಿತ್ಯೋತ್ಸವ ಧ್ವನಿ ಸುರುಳಿಗಿಂತ ಭಿನ್ನವಾಗಿರುತ್ತದೆ ಎಂಬ ಪ್ರಶ್ನೆ ಅವರನ್ನು ಬಹುವಾಗಿ ಕಾಡಿತು. ಆಗ ಅಶ್ವತ್ಥ್ ನೆರವಿಗೆ ಬಂದವರು ಕವಿ ಲಕ್ಷ್ಮೀನಾರಾಯಣ ಭಟ್ಟರು.

 ಉತ್ತರ ಕರ್ನಾಟಕ ಭಾಗದಲ್ಲಿ ಜನಪ್ರಿಯವಾಗಿದ್ದ  ಶಿಶುನಾಳ ಶರೀಫರ ಗೀತೆಗಳನ್ನು ಸಂಗ್ರಹಿಸಿ  ಪುಸ್ತಕ ರೂಪದಲ್ಲಿ ಹೊರತಂದಿದ್ದ, ಭಟ್ಟರು, ನಿಮ್ಮ ಧ್ವನಿಗೆ ಹಾಗೂ ಸಂಯೋಜನೆಗೆ ಇವು ಹೆಚ್ಚು ಸೂಕ್ತ, ಇದನ್ನೇ  ಧ್ವನಿಸುರುಳಿಗೆ ಅಳವಡಿಸಿ ಎಂದು ಸಲಹೆ ನೀಡಿದರು. ಅಶ್ವತ್ಥರಿಗೂ ಈ ಸಲಹೆ ಸರಿಯಾಗಿ ಕಂಡಿತು. ಈ ಮೊದಲೇ ಎಂ.ಎಸ್.ಐ.ಎಲ್ ಕಾರ್ಯಕ್ರಮಕ್ಕಾಗಿ ಸಂಯೋಜಿಸಿದ್ದ ಕೆಲವು ಗೀತೆಗಳ ಜೊತೆಗೆ ಮತ್ತಷ್ಟು ಕವಿತೆಗಳನ್ನು ಹೊಂದಿಸಿ ಶಿಶುನಾಳ ಶರೀಫರ ಗೀತೆಗಳ ಕ್ಯಾಸೆಟ್ಟನ್ನು ಹೊರತಂದರು. ಬೆಳಗಾಗುವುದರೊಳಗೆ ಈ ಧ್ವನಿಸುರುಳಿ  ಸೂಪರ್ ಹಿಟ್ ಆಯಿತು. ಅಂದು ಈ ಧ್ವನಿಸುರುಳಿಯಿಂದ ಹೊಸ ಅಲೆಯೊಂದು ಸೃಷ್ಟಿಯಾಗಿ ದಾಖಲೆಯನ್ನು ನಿರ್ಮಿಸಿತು. ಇದರ ಗೀತೆಗಳಿಗೆ ಜಾನಪದದ ಸೊಗಡನ್ನು ಸಮರ್ಥವಾಗಿ ಲೇಪಿಸಿ ಕೇಳುಗರಿಗೆ ಹತ್ತಿರವಾಗುವ ರೀತಿಯಲ್ಲಿ ಸಂಯೋಜಿಸಿದ್ದರು ಅಶ್ವತ್ಥ್. ಆ ಗೀತೆಗಳು ಇಂದಿಗೂ ಜನಪ್ರಿಯ. ಜೀವಂತ. ಮುಂದೆ ಸಾಲು ಸಾಲಾಗಿ ಧ್ವನಿ ಸುರುಳಿಗಳು ಬರಲಾರಂಭಿಸಿದವು. ಅಶ್ವತ್ಥ್ ತಮ್ಮ ಸಂಯೋಜನೆಗಳ ವಿವಿಧ ಮಜಲುಗಳನ್ನು ತೋರಲಾರಂಭಿಸಿದರು. ಅದರಲ್ಲೂ ಮೆಸೂರು ಮಲ್ಲಿಗೆಯ ಕವಿ ಕೆ.ಎಸ್.ನರಸಿಂಹ ಸ್ವಾಮಿಯವರ ದಾಂಪತ್ಯ ಗೀತೆಗಳಲ್ಲಿರುವ ವಿವಿಧ ಘಟ್ಟಗಳಿಗೆ ವಿವಿಧ ಸ್ವರಗಳನ್ನು ಪೋಣಿಸಿ ಗೀತೆಗಳನ್ನು ವೆಭವೀಕರಿಸಿದ ಹೆಗ್ಗಳಿಕೆ ಅಶ್ವತ್ಥರದು.ಒಂದಿರುಳು ಕನಸಿನಲಿ, ನಿನ್ನೊಲುಮೆಯಿಂದಲೇ,ಅಕ್ಕಿ ಆರಿಸುವಾಗ, ರಾಯರು ಬಂದರು ಮಾವನ ಮನೆಗೆ ಮುಂತಾದ ಗೀತೆಗಳು ಜನಪ್ರಿಯತೆಯ ಉತ್ತುಂಗಕ್ಕೇರಿದವು. ಕವಿ ಲಕ್ಷ್ಮೀನಾರಾಯಣ ಭಟ್ಟರ ದೀಪಿಕಾ ಹಾಗು ಬಿ.ಆರ್. ಲಕ್ಷ್ಮಣರಾಯರ ಸುಬ್ಬಾ ಭಟ್ಟರ ಮಗಳೆ ಧ್ವನಿ ಸುರಳಿಗಳಂತೂ ಬಿಸಿ ದೋಸೆಯಂತೆ ಮಾರಾಟವಾದದ್ದು ದಾಖಲೆಯೇ ಸರಿ.

ಅಶ್ವತ್ಥ್  ಹುಟ್ಟಿದ್ದು ೨೯ ನೇ ಡಿಸೆಂಬರ್೧೯೩೯ರಂದು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದು ಭಾರತೀಯ ದೂರವಾಣಿ ಕಾರ್ಖಾನೆಯಲ್ಲಿ ಕೆಲಸಕ್ಕೆ ಸೇರಿ ೨೭ ವರ್ಷ ಸೇವೆ ಸಲ್ಲಿಸಿದರು. ವಿಧ್ವಾನ್ ದೇವಗಿರಿ ಶಂಕರ ರಾವ್ ಜೋಶಿ ಅವರಲ್ಲಿ ಹಿಂದೂಸ್ತಾನಿ ಸಂಗೀತವನ್ನು ಕಲಿತರು. ಸುಗಮ ಸಂಗೀತ ಕ್ಷೇತ್ರದ ಮೇರು ಶಿಖರಕ್ಕೇರಿದ ಅಶ್ವತ್ಥ್ ೧೯೮೮ ರಲ್ಲಿ  ಸುಗಮ ಸಂಗೀತದ ಸ್ವರೂಪವನ್ನು ವಿವರಣೆ ಸಹಿತ ನೀಡಿ ಸುಗಮ ಸಂಗೀತ ಎಂಬ ಪುಸ್ತಕವನ್ನು ಪ್ರಕಟಿಸಿದರು. ೧೫೫ ಪ್ರಸಿದ್ಧ ಗೀತೆಗಳ ಜೊತೆಗೆ ಸ್ವರವನ್ನೂ ಧಾಖಲಿಸಿ ಸ್ವರಮಾಧುರಿ ಎಂಬ ಪುಸ್ತಕವನ್ನು ೧೯೯೭ರಲ್ಲಿ ಪ್ರಕಟಿಸಿದರು. ಪ್ರಸಿದ್ಧ ಕಲಾವಿದರನ್ನೋಳಗೊಂಡ ಸಂಸ್ಥೆ ಧ್ವನಿಯನ್ನು ಹುಟ್ಟುಹಾಕಿ ಹಲವು ವೈಭವಪೂರಿತ ಕಾರ್ಯಕ್ರಮಗಳನ್ನು ನಡೆಸಿದರು. ಅಶ್ವತ್ಥರ ಸಂಗೀತ ಸಾಧನೆಗಾಗಿ ೧೯೮೫ ರಲ್ಲಿ ಕರ್ನಾಟಕ ಸಂಗೀತ ಅಕಾಡೆಮಿ ಪ್ರಶಸ್ತಿ, ೧೯೮೬ ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, ೧೯೯೭ ರಲ್ಲಿ  ಪ್ರತಿಷ್ಠಿತ ಸಂತ ಶಿಶುನಾಳ ಶರೀಫ ಪ್ರಶಸ್ತಿ ಲಭಿಸಿದವು. ಅಶ್ವತ್ಥರ ಬಗ್ಗೆ ಬರೆಯಲು ಕೂತರೆ ೧೦೦ ಪುಟದಷ್ಟು ಬರೆದರೂ ಮುಗಿಯದು. ಇವರ ಸಾಧನೆ ಅಷ್ಟು ಅಗಾಧವಾದುದು. ಅಲ್ಲದೆ ಇವರ ಗುಣಗಾನ ಮಾಡಲು ಕೂತರೆ ಪದಗಳೇ ಸಿಗಲಾರದು.

 ಅಶ್ವತ್ಥ್ ಸ್ವಭಾವತಃ ಮೂಡಿ.ಕೆಲವೊಮ್ಮೆ ಎದುರಿಗಿರುವ ವ್ಯ್ಯಕ್ತಿ ನಮಸ್ಕಾರ ಎಂದರೂ ನೋಡದ ಇವರು, ಮತ್ತೆ ಕೆಲವೊಮ್ಮೆ ಅದೇ ವ್ಯಕ್ತಿ ಮಾತನಾಡಿಸದೇ ಸುಮ್ಮನಿದ್ದರೂ ತಾವೇ ಮೇಲೆ ಬಿದ್ದು  ಮಾತನಾಡಿಸುವ ವಿಚಿತ್ರವ್ಯಕ್ತಿ. ಯಾವುದೇ ಯೋಚನೆ ಬಂದರೆ ಪಟ್ಟುಬಿಡದೆ ಹುಚ್ಚರಂತೆ ತಲೆ ಕೆಡಿಸಿಕೊಂಡು ಸಾಧಿಸುವ ಛಲಗಾರ. ಆಂತರ್ಯದಲ್ಲಿ ಬೇರೇ ಕಲಾವಿದರ ಗುಣಮಟ್ಟದ ಬಗ್ಗೆ ಮೆಚ್ಚುಗೆಯಿದ್ದರೂ ಹೊರಗೆ ತೋರ್ಪಡಿಸದೆ ಕೇವಲ ಆಪ್ತರಲ್ಲಿ ಮಾತ್ರ ಮನದಿಂಗಿತವನ್ನು ವ್ಯಕ್ತಪಡಿಸುವ ಸ್ವಭಾವದವರು. ಅದೇಕೋ ಇವರಿಗೆ ಹೊಗಳು ಭಟ್ಟರ ಬಗ್ಗೆ ಎಲ್ಲಿಲ್ಲದ ಅಕ್ಕರೆ. ಇಂಥವರನ್ನು ನಂಬಿ ಅದೆಷ್ಟು ಬಾರಿ ಮೋಸಹೋಗಿದ್ದಾರೋ ಲೆಕ್ಕವೇ ಇಲ್ಲ. ಇಷ್ಟೆಲ್ಲಾ ಗುಣಾವಗುಣದ ನಡುವೆಯೂ ಇವರ ಕೆಲಸದ ಬಗ್ಗೆ ಎರಡು ಮಾತಿಲ್ಲ.  ಸುಗಮ ಸಂಗೀತಕ್ಕಾಗಿ ಅಶ್ವತ್ಥ್ ನೀಡಿರುವ ಕೊಡುಗೆ ಅನನ್ಯ. ಬೆಂಗಳೂರು ಅರಮನೆ ಆವರಣದಲ್ಲಿ ಪ್ರಥಮ ಬಾರಿಗೆ ನಡೆದ ಕನ್ನಡವೇ ಸತ್ಯ ಕಾರ್ಯಕ್ರಮ ಮರೆಯಲಾಗದ ಕ್ಷಣ.ಅಶ್ವತ್ಥ್ ಅವರ ದಿವ್ಯಾತ್ಮಕ್ಕೆ ಭಗವಂತ ಚಿರಶಾಂತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.

ಮುಖಪುಟ /ಸಾಧಕರು