ಮುಖಪುಟ /ಗಾದೆ

ಗಾದೆ : ಕಳೆದು ಹೋದ ಹೊತ್ತು, ಒಡೆದ ಮುತ್ತು ಮರಳಿ ಸಿಗದು

ಇದು ಹೇಳಿ ಕೇಳಿ ಪರೀಕ್ಷಾ ಸಮಯ. ವಿದ್ಯಾರ್ಥಿಗಳು ಇಂದು ಸಮಯ ವ್ಯರ್ಥ ಮಾಡಿದರೆ, ಮುಂದೆ ಪರಿತಪಿಸಬೇಕಾಗುತ್ತದೆ. ಓದುವಾಗ ಓದದೆ ಸಮಯ ವ್ಯರ್ಥ ಮಾಡುವ ಜಾಯಮಾನದ ಮಕ್ಕಳಿಗಂತೂ ಈ ಗಾದೆ ಬಹುವಾಗೇ ಅನ್ವಯಿಸುತ್ತದೆ.
ಮುತ್ತು ಸಾಗರ ಗರ್ಭದಲ್ಲಿ ಕಡಲ ಚಿಪ್ಪಿನಲ್ಲಿ ಸಿಗುವ ಒಂದು ಬೆಲೆ ಬಾಳುವ ರತ್ನ. ಅತ್ಯಂತ ಸೂಕ್ಷ್ಮವಾದ ಮುತ್ತು ಕೈ ಜಾರಿತೆಂದರೆ ಹೋಳಾಗಿ ಹೋಗುತ್ತದೆ. ಒಡೆದು ಹೋದ ಮುತ್ತನ್ನು ಮತ್ತೆ ಅಂಟಿಸುವುದು ಸಾಧ್ಯವಿಲ್ಲದ ಮಾತು. ಇಲ್ಲ ಸಾರ್ ನಾವು ಪೆವಿಕ್ವಿಕ್, ಕ್ವಿಕ್‌ಫಿಕ್ಸ್ ಹಾಕಿ ಅಂಟಿಸುತ್ತೇವೆ ಎಂದು ಯಾರಾದರೂ ಹೇಳಿದರೆ ಅಕಸ್ಮಾತ್ ಅದು ಸಾಧ್ಯವಾದರೂ ಮುತ್ತಿಗೆ ಬೆಲೆ ಮಾತ್ರ ಇರುವುದಿಲ್ಲ.
ಮುತ್ತು ಒಡೆಯೆತೆಂದು ಹಣ ಕೊಟ್ಟು ಮತ್ತೊಂದು ಮುತ್ತು ತರಬಹುದಾದರೂ, ಕಳೆದು ಹೋದ ಹೊತ್ತನ್ನು ಮಾತ್ರ ಕೋಟಿ ರೂಪಾಯಿ ಕೊಟ್ಟರೂ ಮರಳಿ ತರಲು ಸಾಧ್ಯವೇ ಇಲ್ಲ. ಈಗ ನಾವು ನೋಡುತ್ತಿರುವ ಈ ಕ್ಷಣ ವರ್ತಮಾನ, ಕಳೆದ ಒಂದೇ ಒಂದು ನಿಮಿಷ ಅಥವಾ ಕ್ಷಣದ ಹಿಂದೆ ನಡೆದದ್ದು ಭೂತಕಾಲ. ಈ ಕ್ಷಣದ ನಂತರದ್ದು ಭವಿಷ್ಯ. ಭವಿಷ್ಯ ಏನೆಂಬುದು ಯಾರಿಗೂ ಗೊತ್ತಿಲ್ಲ. ಭೂತಕಾಲ ಏನೆಂಬುದು ಎಲ್ಲರಿಗೂ ಗೊತ್ತು. ವರ್ತಮಾನ ನಮ್ಮ ಕೈಯಲ್ಲೇ ಇದೆ. ವರ್ತಮಾನದಲ್ಲಿ ಸಿಕ್ಕ ಸಮಯವನ್ನು ಸೂಕ್ತವಾಗಿ ಬಳಸಿಕೊಳ್ಳುವುದೇ ಜಾಣತನ.
ನಿನ್ನೆಯನ್ನು ನಾವು ಯಾವುದೇ ಕಾರಣಕ್ಕೂ ತರಲು ಸಾಧ್ಯವಿಲ್ಲ. ಅದಾಗಲೇ ಕಾಲಗರ್ಭದಲ್ಲಿ ಲೀನವಾಗಿ ಹೋಗಿದೆ. ಇತಿಹಾಸದ ಪುಟಗಳನ್ನು ಸೇರಿ ಹೋಗಿದೆ. ವಿದ್ಯಾರ್ಥಿಗಳೇ ನೀವು ನಿನ್ನೆ ಕಳೆದ ಸಮಯವನ್ನು ಏನೇ ಮಾಡಿದರೂ ತರಲು ಸಾಧ್ಯವಿಲ್ಲ. ಹೀಗಾಗಿ ಇರುವ ಸಮಯವನ್ನು ಸೂಕ್ತವಾಗಿ ಬಳಸಿಕೊಂಡು ಚೆನ್ನಾಗಿ ಓದಿದರೆ ಪರೀಕ್ಷೆಯಲ್ಲಿ ಅದರ ಫಲ ನಿಮಗೆ ಸಿಕ್ಕೇ ಸಿಗುತ್ತದೆ. ಅದು ಬಿಟ್ಟು ಮಧ್ಯಾಹ್ನ ಓದಿದರಾಯಿತು. ಸಂಜೆ ಓದಿದರಾಯಿತು. ನಾಳೆ ಓದಿದರಾಯಿತು ಎಂದು ಮುಂದೂಡುತ್ತಾ ಹೋದರೆ ಓದಬೇಕಾದ್ದು ಬೆಟ್ಟದಷ್ಟಾಗುತ್ತದೆ. ಪರೀಕ್ಷೆ ಹತ್ತಿರವಾದಂತೆ ನಿಮ್ಮಲ್ಲಿ ದುಗುಡ, ಟೆನ್ಷನ್ ಹೆಚ್ಚುತ್ತಾ ಹೋಗುತ್ತದೆ. ಆ ಒತ್ತಡದಲ್ಲಿ ನೀವು ಹಿಂದೆ ಓದಿದ್ದೂ ಮರೆತು ಹೋಗಬಹುದು. ಹೀಗಾಗಿ ಸಮಯ ವ್ಯರ್ಥ ಮಾಡಬೇಡಿ. ಕಳೆದು ಹೋದ ಸಮಯ ಖಂಡಿತಾ ಮರಳಿ ಬರುವುದಿಲ್ಲ. ನೆನಪಿರಲಿ.
ಲೇಟ್ ಲತೀಫನ ಕಥೆ ನಿಮಗೆ ಗೊತ್ತಲ್ಲ. ಲತೀಫ ನಿತ್ಯ ಶಾಲೆಗೆ ತಡವಾಗಿ ಬರುತ್ತಿದ್ದ. ಊಟ ಮಾಡುವುದು, ತಿಂಡಿ ತಿನ್ನುವುದು, ಓದುವುದು ಎಲ್ಲವನ್ನೂ ಅವನು ತಡ ಮಾಡುತ್ತಿದ್ದ. ಹೀಗಾಗಿ ಅವನನ್ನು ಎಲ್ಲರೂ ಲೇಟ್ ಲತೀಫ ಎಂದೇ ಅಣಕಿಸುತ್ತಿದ್ದರು. ಬೇಸಿಗೆಯ ರಜೆಯಲ್ಲಿ ಅವನ ಮನೆಯವರೆಲ್ಲರೂ ಉತ್ತರ ಭಾರತ ಪ್ರವಾಸ ಹೊರಟಿದ್ದರು. ಲತೀಫ ಎಂದಿನಂತೆ ತಡವಾಗಿ ಎದ್ದು ತಡವಾಗಿ ಸಿದ್ಧನಾಗುತ್ತಿದ್ದ. ಮನೆಗೆ ಅನತಿ ದೂರದಲ್ಲೇ ರೈಲು ನಿಲ್ದಾಣ. ರೈಲು ಹೊರಡುವ ಸಮಯವಾಯಿತೆಂದು ಅವನ ತಂದೆ, ತಾಯಿ, ಅಣ್ಣ, ತಮ್ಮ ಎಲ್ಲ ರೈಲ್ವೆ ನಿಲ್ದಾಣದತ್ತ ಹೊರಟರು. ಬೇಗ ರಡಿಯಾಗಿ ಬಾ ಇಲ್ಲವಾದರೆ ಅಜ್ಜ -ಅಜ್ಜಿಯ ಜೊತೆಯಲ್ಲೇ ಇರು ಎಂದು ಹೇಳಿ ಹೊರಟರು. ಲತೀಫ ನಿಲ್ದಾಣಕ್ಕೆ ಹೋಗುವ ಹೊತ್ತಿಗೆ ರೈಲು ಹೊರಟಾಗಿತ್ತು. ಉತ್ತರ ಭಾರತ ನೋಡುವ ಅವಕಾಶದಿಂದ ಲತೀಫ ವಂಚಿತನಾದ.

ಮುಖಪುಟ /ಇನ್ನೂ ಹೆಚ್ಚಿನ ಗಾದೆ ಕತೆಗೆ ಕ್ಲಿಕ್ ಮಾಡಿ