ಮುಖಪುಟ /ಗಾದೆ

ಗಾದೆ : ಕೂತು ತಿನ್ನುವವನಿಗೆ ಕುಡಿಕೆ ಹೊನ್ನೂ ಸಾಲದು

ಇದು ಬಹು ಅರ್ಥಗರ್ಭಿತವಾದ ಹಾಗೂ ನೀತಿಯುಕ್ತವಾದ ಗಾದೆ. ಹಣ ಇದೆ ಎಂದು ದುಡಿಯದೆ ಇರುವ ಹಣವನ್ನು ಕೂತು ಖರ್ಚು ಮಾಡುತ್ತಿದ್ದರೆ ಅದು ಕರಗುತ್ತದೆಯೇ ಹೊರತು ವೃದ್ಧಿಯಾಗುವುದಿಲ್ಲ. ಕೊನೆಗೊಂದು ದಿನ ಇರುವ ಹಣವೆಲ್ಲಾ ಬರಿದಾಗಿ ಸಂಕಷ್ಟ ಎದುರಾಗುತ್ತದೆ ಎಂಬುದನ್ನು ಈ ಗಾದೆ ಬಿಂಬಿಸುತ್ತದೆ.
ಈ ಗಾದೆ ಕೇಳಿದೊಡನೆಯೇ ಹೂತಿಟ್ಟ ನಿಧಿಯ ಕತೆ ನೆನಪಾಗುತ್ತದೆ. ಒಬ್ಬ ಶ್ರೀಮಂತ ರೈತನಿಗೆ ೪ ಮಂದಿ ಮಕ್ಕಳು. ತಂದೆ ಮಾಡಿಟ್ಟ ಆಸ್ತಿ ಇದೆ ಎಂದು ಅವರು ಉಂಡಾಡಿ ಗುಂಡರಂತೆ ಅಲೆಯುತ್ತಾ ಇದ್ದ ಹಣವನ್ನೆಲ್ಲಾ ಖರ್ಚು ಮಾಡುತ್ತಿದ್ದರು. ತಂದೆ ನಿತ್ಯ ಅವರಿಗೆ ಕಷ್ಟ ಪಟ್ಟು ದುಡಿಯಿರಿ, ಇಲ್ಲವಾದರೆ ಮುಂದೊಂದು ದಿನ ಪರಿತಪಿಸಬೇಕಾಗುತ್ತದೆ ಎಂದು ಹೇಳಿ ಹೇಳಿ ಸಾಕಾಗಿದ್ದರು. ಆದರೂ ಮಕ್ಕಳಾರೂ ಮಾತು ಕೇಳುತ್ತಿರಲಿಲ್ಲ. ಅಪ್ಪನನ್ನೇ ಬೈಯುತ್ತಾ ಅಪ್ಪ ಮಾಡಿಟ್ಟ ಆಸ್ತಿಯನ್ನು ಕರಗಿಸುತ್ತಿದ್ದರು. ಮಕ್ಕಳ ಕಾರಣದಿಂದ ರೈತ ಕೂಡಿಟ್ಟ ಹಣವೆಲ್ಲಾ ಬರಿದಾಗಿತ್ತು. ಕೊನೆಗೆ ೧೦ ಎಕರೆ ಭೂಮಿ ಮಾತ್ರ ಉಳಿಯಿತು. ಇದೇ ಕೊರಗಲ್ಲಿ ರೈತ ಹಾಸಿಗೆ ಹಿಡಿದ. ತಾನು ಸತ್ತ ಬಳಿಕ ತನ್ನ ಮಕ್ಕಳ ಗತಿ ಏನು? ಎಂಬ ಕೊರಗು ಅವನನ್ನು ಕಾಡ ತೊಡಗಿತು.
ಮರಣ ಶಯ್ಯೆಯಲ್ಲಿದ್ದ ರೈತ ತನ್ನ ಕೊನೆ ದಿನಗಳನ್ನು ಎಣಿಸುತ್ತಿದ್ದ... ಒಂದು ದಿನ ತನ್ನ ಮಕ್ಕಳನ್ನೆಲ್ಲಾ ಕರೆದು ರೈತ ಹೇಳಿದ ಮಕ್ಕಳೇ ನೀವು ಮುಂದೆ ತೊಂದರೆ ಅನುಭವಿಸಬಾರದು ಎಂದು ನಮ್ಮ ೧೦ ಎಕರೆ ಹೊಲದಲ್ಲಿ ಒಂದಿಷ್ಟು ನಿಧಿ ಹೂತಿಟ್ಟಿದ್ದೇನೆ. ಅದನ್ನು ತೆಗೆದುಕೊಂಡು ನೀವು ಸುಖವಾಗಿರಿ ಎಂದು ಹೇಳಿ ಸಾವನ್ನಪ್ಪಿದ.
ತಂದೆಯನ್ನು ಬೈಯುತ್ತಿದ್ದ ಮಕ್ಕಳು ನೋಡಿದ್ಯಾ ನಮ್ಮಪ್ಪ ನಮಗಾಗಿ ನಿಧಿ ಇಟ್ಟಿದ್ದಾನೆ...ಬನ್ನಿ ನಿಧಿ ತಗಂಡು ಮಜವಾಗಿ ಇರೋಣ ಎಂದು ಗುದ್ದಲಿ, ಸಲಿಕೆ, ಹಾರೆ ಹಿಡಿದು ಹೊಲಕ್ಕೆ ಹೋದರು. ಅಷ್ಟು ವಿಶಾಲವಾದ ಹೊಲದಲ್ಲಿ ನಿಧಿ ಎಲ್ಲಿದೆ ಎಂದು ತಿಳಿಯುವುದು ಹೇಗೆ ದಿನವೂ ಹೊಲ ಅಗೆದು ಅಗೆದು ಸುಸ್ತಾದರು.. ಎಲ್ಲೂ ನಿಧಿ ಸಿಗಲಿಲ್ಲ. ಒಂದು ದಿನ ಹೊಲದ ಪಕ್ಕದಲ್ಲಿ ಕೂತು ಅಪ್ಪನನ್ನು ಬೈಯುತ್ತಿದ್ದ ಮಕ್ಕಳನ್ನು ನೋಡಿದ ಪಕ್ಕದ ಹೊಲದ ರೈತ ಹೇಳಿದ.. ಅಲ್ಲಯ್ಯ ನಿಮ್ಮಪ್ಪ ಮಾಡಿಟ್ಟ ಹಣ ಎಲ್ಲಾ ನೀವೇ ಖರ್ಚು ಮಾಡಿದಿರಿ.. ಹೇಗೂ ಹೊಲ ಎಲ್ಲಾ ಅಗೆದಿದ್ದೀರೀ... ಮಳೆ ಬರುವ ಸೂಚನೆಯೂ ಇದೆ.. ಒಂದಿಷ್ಟು ಬೀಜ ಬಿತ್ತಿ... ಒಳ್ಳೆ ಬೆಳೆ ಬರುತ್ತದೆ. ಆಗ ಅದು ನಿಮಗೆ ದೊಡ್ಡ ಹಣವನ್ನೇ ಕೊಡುತ್ತದೆ. ಅದಕ್ಕಿಂಥ ನಿಧಿ ಬೇಕಾ?
ಮಕ್ಕಳು ಹೇಗೂ ಹೊಲ ಅಗೆದಿದ್ದೇವಲ್ಲ ಎಂದು ಬೀಜ ಬಿತ್ತನೆ ಮಾಡಿದರು. ಚೆನ್ನಾಗಿ ಮಳೆಯೂ ಬಂತು, ಒಳ್ಳೆ ಬೆಳೆಯೂ ಬಂತು.. ಮಕ್ಕಳಿಗೆ ಶ್ರಮದ ಬೆಲೆ ಅರಿವಾಯ್ತು. ಅಂದಿನಿಂದ ಉತ್ತಮ ರೈತರಾಗಿ ಬಾಳಿದರು.

ಮುಖಪುಟ /ಇನ್ನೂ ಹೆಚ್ಚಿನ ಗಾದೆ ಕತೆಗೆ ಕ್ಲಿಕ್ ಮಾಡಿ