ಮುಖಪುಟ /ಗಾದೆ

ಗಾದೆ : ಅಜ್ಜಿ ಕೋಳಿ ಕೂಗಿದ್ರೇನಾ ಬೆಳಗಾಗೋದು

ನಾನೇ.. ನನ್ನಿಂದಲೇ... ನಾನಿಲ್ಲದಿದ್ದರೆ ಈ ಜಗತ್ತೇ ಇಲ್ಲ ಎಂದು ತಿಳಿದಿರುವ ಜನರ ಸಂಖ್ಯೆ ಕಡಿಮೆ ಏನಿಲ್ಲ. ನಾನಿಲ್ಲದಿದ್ದಿದ್ರೆ ಏನಾಗ್ತಿತ್ತು ಗೊತ್ತಾ? ನಾನಿದ್ದಿದ್ದಕ್ಕೆ ಸರಿ ಹೋಯ್ತು... ಇಂಥ ಮಾತುಗಳನ್ನು ನಾವು ಪದೆ ಪದೇ ಕೇಳುತ್ತಲೇ ಇರುತ್ತೇವೆ. ಇಂಥ ಮಾತುಗಳು ಬಂದಾಗ ಎದುರಿಗಿರುವ ಕೆಲವರು ಸಾಕು ಸುಮ್ಮನಿರಯ್ಯ ನಿನ್ನ ಬಡಾಯಿ... ಏನು ಅಜ್ಜಿ ಕೋಳಿ ಕೂಗಿದ್ರೇನಾ ಬೆಳಗಾಗೋದು... ಎಂದು ಗಾದೆ ಹೇಳಿ ಬಿಡುತ್ತಾರೆ. ಈ ಒಂದು ಗಾದೆ... ಸಾವಿರ ಪದಗಳಲ್ಲಿ ಹೇಳಲಾಗದನ್ನು ಹೇಳುವ ಮೂಲಕ ಜಂಭದ ಕೋಳಿಯ ಬಾಯಿ ಮುಚ್ಚಿಸುತ್ತದೆ.
ಅಂದಹಾಗೆ ಈ ಗಾದೆಯ ಅರ್ಥವೇನು? ಅದನ್ನು ವಿವರಿಸುವುದಕ್ಕಿಂತ ಆ ಗಾದೆಯಿಂದಲೇ ಹುಟ್ಟಿಕೊಂಡಿರುವ ನೀತಿ ಕತೆ ಹೇಳುವುದೇ ಸುಲಭ.
ಒಂದು ಊರಿನಲ್ಲಿ ಒಬ್ಬಳು ಮುದುಕಿ ಇದ್ದಳು. ಆ ಮುದುಕಿಯ ಬಳಿ ಒಂದು ಕೋಳಿ ಇತ್ತು. ಅಗ್ಗಿಷ್ಟಿಕೆಯೂ ಇತ್ತು. (ಹಿಂದೆ ಈಗಿನಂತೆ ಬೆಂಕಿ ಪೊಟ್ಟಣ ಇರಲಿಲ್ಲ. ಆಗ ಕೆಂಡವನ್ನು ಸಂಗ್ರಹಿಸಿಡಲು ಅಗ್ಗಿಷ್ಟಿಕೆ ಇರುತ್ತಿತ್ತು. ಬೆಳಗ್ಗೆ ಊರ ಜನರು ಅಗ್ಗಿಷ್ಟಿಕೆ ಇರುವವರ ಮನೆಯಿಂದ ಬೆಂಕಿ ತೆಗೆದುಕೊಂಡು ಹೋಗಿ ತಮ್ಮ ಮನೆಯಲ್ಲಿ ಒಲೆ ಉರಿಸುತ್ತಿದ್ದರು). ಆ ಮುದುಕಿ ಬಳಿ ಇದ್ದ ಕೋಳಿ ಎಲ್ಲ ಕೋಳಿಗಳಂತೆ ಸೂರ‍್ಯ ಹುಟ್ಟುವ ಹೊತ್ತಿನಲ್ಲಿ ಕೂಗುತ್ತಿತ್ತು. ಅಜ್ಜಿ ತನ್ನ ಕೋಳಿ ಕೂಗಿದರೆ ಬೆಳಗಾಗುವುದು ಎಂದು ತಿಳಿದಿದ್ದಳು. ತನ್ನ ಕೋಳಿ ಇಲ್ಲ ಅಂದ್ರೆ ಈ ಊರಿನಲ್ಲಿ ಬೆಳಕೆ ಆಗೋಲ್ಲ. ತನ್ನ ಅಗ್ಗಿಷ್ಟಿಕೆ ಇಲ್ಲ ಅಂದ್ರೆ ಈ ಊರಿನಲ್ಲಿ ಯಾರ ಮನೆಯಲ್ಲೂ ಒಲೆಯೇ ಉರಿಯಲ್ಲ ಎಂದು ತಿಳಿದಿದ್ದಳು. ಇದರಿಂದ ತುಂಬಾ ಜಂಭ ಮಾಡುತ್ತಿದ್ದಳು. ಒಂದು ದಿನ ಊರ ಗೌಡ ಅಜ್ಜಿ ನೀನು ಹೀಗೆ ಜಂಭ ಮಾಡಬಾರದು ಎಂದು ಹೇಳಿದನೆಂದು ಸಿಟ್ಟು ಮಾಡಿಕೊಂಡ ಅಜ್ಜಿ ಊರಿನ ಜನರಿಗೆ ಬುದ್ಧಿ ಕಲಿಸುವುದಾಗಿ ಮನದಲ್ಲೇ ತೀರ್ಮಾನಿಸಿ ರಾತ್ರೋ ರಾತ್ರಿ ತನ್ನ ಕೋಳಿಯನ್ನು ಕಂಕುಳಲ್ಲಿ ಕಟ್ಟಿಕೊಂಡು ಅಗ್ಗಿಷ್ಟಿಕೆ ಹಿಡಿದುಕೊಂಡು ಊರು ಬಿಟ್ಟು ಹತ್ತಾರು ಮೈಲಿ ದೂರ ನಡೆದು ಹೋಗಿ ಮರವೊಂದರ ಕೆಳಗೆ ಸುಸ್ತಾಗಿ ಕೂತಳು.
ಕೋಳಿ ಮುಂಜಾನೆ ಎಂದಿನಂತೆ ಕೂಗಿತು. ಬೆಳಕು ಹರಿಯಿತು. ಓಹ್ಹೋ.. ಇಲ್ಲಿ ನನ್ನ ಕೋಳಿ ಕೂಗಿದ್ದರಿಂದ ಬೆಳಕಾಗಿದೆ. ಆ ಊರಿನ ಜನ ಕತ್ತಲಲ್ಲಿ ಒದ್ದಾಡುತ್ತಿರುತ್ತಾರೆ ಎಂದು ಭೀಗುತ್ತಾ ಕುತಿದ್ದಳು. ಸೂರ್ಯ ನೆತ್ತಿಯ ಮೇಲೆ ಬರುವ ಹೊತ್ತಿಗೆ ತನ್ನೂರಿನ ಪರಿಚಿತನೊಬ್ಬ ಗಾಡಿಯಲ್ಲಿ ಬರುತ್ತಿರುವುದನ್ನು ಕಂಡು.. ಗಾಡಿ ನಿಲ್ಲಿಸಿ ಕೇಳಿದಳು. ಏನಯ್ಯ ಇವತ್ತು ನಿನ್ನೂರಲ್ಲಿ ಬೆಳಕಾಯಿತಾ? ಊರ ಜನ ಒಲೆ ಹಚ್ಚಿದರಾ? ರೈತ ಕೇಳಿದ ಏಕಜ್ಜಿ.. ದಿನ ಬೆಳಗಾಗುವಂತೆ ಇವತ್ತೂ ಬೆಳಗಾಯಿತು. ನೀನು ಊರಲಿಲ್ಲದ್ದು ನೋಡಿ ಬಿದುರಿಗೆ ಬಿದಿರು ಉಜ್ಜಿ ಬೆಂಕಿ ಸೃಷ್ಟಿಸಿದೆವು. ಊರೆಲ್ಲಾ ಒಲೆ ಉರೀತಿದೆ ಎಂದ. ಆಗ ಅಜ್ಜಿಗೆ ಅಚ್ಚರಿ ಆಯಿತು. ಅಲ್ಲ... ನನ್ನ ಕೋಳಿ ಕೂಗದೆ ನಿಮ್ಮೂರಲ್ಲಿ ಬೆಳಗಾಯಿತಾ ಎಂದು ಕೇಳಿದಳು. ಅಯ್ಯೋ ಹುಚ್ಚು ಮುದುಕಿ... ಬೆಳಗಾಗುವ ಹೊತ್ತಿಗೆ ಕೋಳಿ ಕೂಗುತ್ತದೆಯೇ ಹೊರತು, ಕೋಳಿ ಕೂಗಿದ್ದಕ್ಕೆ ಬೆಳಗಾಗಲ್ಲ.. ನಮ್ಮೂರಿಗೆ ಬೆಳಗಾಗಬಾರದು ಎಂದು ಇಲ್ಲಿ ಬಂದು ಕೂತಿದ್ದೀಯಾ.. ಹುಚ್ಚು ಮುದುಕಿ ಎಂದು ನಗುತ್ತಾ ಹೊರಟು ಹೋದ. ಅಜ್ಜಿಯ ಜಂಭ ಇಳಿಯಿತು. ತನ್ನ ತಪ್ಪಿನ ಅರಿವಾಯಿತು. ಮಕ್ಕಳೇ.. ಅದಕ್ಕೇ ಹಿರಿಯರು ಹೇಳುವುದು.. ಎಲ್ಲಕ್ಕೂ ನಾನೆ.. ನನ್ನಿಂದ ಎನ್ನುವ ಅಹಂಕಾರ ಯಾವುದೇ ಕಾರಣಕ್ಕೂ ಬರಬಾರದು
.

ಮುಖಪುಟ /ಇನ್ನೂ ಹೆಚ್ಚಿನ ಗಾದೆ ಕತೆಗೆ ಕ್ಲಿಕ್ ಮಾಡಿ