ಮುಖಪುಟ /ನಮ್ಮಹಬ್ಬಗಳು    

ಭಾಗ್ಯದಾ ಲಕ್ಷ್ಮೀ ಬಾರಮ್ಮ... ವರಮಹಾಲಕ್ಷ್ಮೀ ಹಬ್ಬದ ವ್ರತ ವಿಚಾರ...
ಶ್ರಾವಣ ಮಾಸ ಶುಕ್ಲ ಪಕ್ಷದ ಹುಣ್ಣಿಮೆಯ ಹಿಂದಿನ ಶುಕ್ರವಾರವೇ ಲಕ್ಷ್ಮೀ ವ್ರತ.

*ಟಿ.ಎಂ.ಸತೀಶ್

ನಮಸ್ತೇಸ್ತು ಮಹಾ ಮಾಯೆ ಶ್ರೀಪೀಠೆ ಸುರಪೂಜಿತೆ
ಶಂಖಚಕ್ರಗದಾ ಹಸ್ತೆ ಮಹಾಲಕ್ಷ್ಮೀ ನಮೋಸ್ತುತೆ..

Varamahalakshmi poojaಕಮಲನಯನೆ, ಕಮಲವದನೆ, ಕಮಲನಾಭನರಸಿಯಾದ ಧನದೇವತೆ ಲಕ್ಷ್ಮಿಯನ್ನು ಪೂಜಿಸದವರು ಈ ಜಗದಲ್ಲಿ ಅತಿ ವಿರಳ. ಲಕ್ಷ್ಮಿಯ ಪೂಜಿಸದವರು ಇಲ್ಲವೇ ಇಲ್ಲ ಎಂದೂ ಹೇಳಬಹುದು. ನಿತ್ಯವೂ ಭಕ್ತರು ಲಕ್ಷ್ಮಿಯನ್ನು ಪೂಜಿಸುತ್ತಾರಾದರೂ, ಲಕ್ಷ್ಮಿಯ ಪೂಜೆಗೆಂದೇ ನಿರ್ದಿಷ್ಟ ದಿನವೊಂದಿದೆ. ಅದುವೇ ಶ್ರಾವಣ ಶುಕ್ರವಾರ. ಶ್ರಾವಣ ಮಾಸದಲ್ಲಿ ಹುಣ್ಣಿಮೆಯ ಹಿಂದಿನ ಶುಕ್ರವಾರವೇ (ಸಾಮಾನ್ಯವಾಗಿ ಎರಡನೇ ಅಥವಾ ಮೂರನೇ) ವರಮಹಾಲಕ್ಷ್ಮೀಯ ಹಬ್ಬ. ಈ ಹಬ್ಬವನ್ನು ಕೆಲವರು ವ್ರತವಾಗಿ ಆಚರಿಸುತ್ತಾರೆ. ಈ ವ್ರತ ಸಕಲ ಐಶ್ವರ್ಯ ಪ್ರದವಾದದ್ದು ಎಂಬುದು ನಂಬಿಕೆ.

ವತ್ರ ಇತಿಹಾಸ : ಹಿಂದೆ ಕುಂಡಿನೀ ನಗರದಲ್ಲಿ ಚಾರುಮತಿಯೆಂಬ ಬ್ರಾಹ್ಮಣ ಸ್ತ್ರೀಯು ಅತ್ಯಂತ ಬಡತನದಿಂದ ಜೀವನ ಸಾಗಿಸುತ್ತಿದ್ದಳು. ಸದಾ ಪತಿಯನ್ನು ಪೂಜಿಸುತ್ತಾ ಇದ್ದ ಆಕೆ ಮಹಾಸಾಧ್ವಿ. ಈಕೆಯ ಸುಶೀಲ ಗುಣವನ್ನು ಮೆಚ್ಚಿದ ಲಕ್ಷ್ಮೀಯು ಆಕೆಯ ಸ್ವಪ್ನದಲ್ಲಿ ಕಾಣಿಸಿಕೊಂಡು ಶ್ರಾವಣಮಾಸದ ಶುಕ್ಲಪಕ್ಷದಲ್ಲಿ ಪೂರ್ಣಿಮೆಯ ಹಿಂದಿನ ಶುಕ್ರವಾರ ಯಾರು ತನ್ನನ್ನು ಭಕ್ತಿಯಿಂದ ಪೂಜಿಸುತ್ತಾರೋ ಅವರಿಗೆ ಅಷ್ಟೈಶ್ವರ್ಯಗಳು ದೊರಕುತ್ತವೆ ಎಂದು ವ್ರತದ ಮಹಿಮೆ ತಿಳಿಸುತ್ತಾಳೆ.

ಅದರಂತೆ ಚಾರುಮತಿಯು ಸ್ವಪ್ನದಲ್ಲಿ ವರಮಹಾಲಕ್ಷ್ಮೀ ತಿಳಿಸಿದಂತೆ ಪೂಜೆಯನ್ನು ಮಾಡಿ, ಅಷ್ಟ ವೈಭವ ಪಡೆದು ಸುಖಶಾಂತಿ ನೆಮ್ಮದಿಯಿಂದ ಬದುಕುತ್ತಾಳೆ. ಈ ವ್ರತವನ್ನು ಸ್ತ್ರೀಯರಾಗಲೀ, ಪುರುಷರಾಗಲೀ ಮಾಡಬಹುದು.

ವ್ರತ ವಿಧಾನ : ವ್ರತದ ದಿನ ಮಧ್ಯಾಹ್ನ ಅಭ್ಯಂಜನ ಮಾಡಿ, ಶುದ್ಧವಸ್ತ್ರ ಧರಿಸಿ, ಮನೆಯಲ್ಲಿ ದೇವರನ್ನು ಕೂರಿಸುವ ಸ್ಥಳವನ್ನು ಶುದ್ಧಗೊಳಿಸಿ, ರಂಗವಲ್ಲಿಯಿಂದ ಅಲಂಕರಿಸಿ, ಪಂಚವರ್ಣದ ಪದ್ಮವನ್ನು ಬರೆದು ಅದರಲ್ಲಿ ತಾಮ್ರ ಪಲ್ಲವಗಳಿಂದ ಕೂಡಿದ ಕಳಶವಿಟ್ಟು ವರಮಹಾಲಕ್ಷ್ಮೀದೇವಿಯ ಪ್ರಾಣಪ್ರತಿಷ್ಠೆ ಮಾಡಿ, ವಿ ವಿಧಾನಗಳಿಂದ ಕಲ್ಪೋಕ್ತವಾಗಿ ಪೂಜಿಸುತ್ತಾರೆ. ಸಂಜೆ ಲಕ್ಷ್ಮೀ ಪಾದದ ರಂಗವಲ್ಲಿಯನ್ನು ಮನೆಯ ಮುಂಬಾಗಿಲಿನ ಹೊಸ್ತಿಲಿಂದ ಹಿಡಿದು, ದೇವರ ಮನೆಯವರೆಗೂ ಹಾಕಿ, ಹೆಜ್ಜೆಯ ಮೇಲೆ ಹೆಜ್ಜೆಯ ಇಟ್ಟು ಬಾರಮ್ಮ ಎಂದು ಲಕ್ಷ್ಮೀಯನ್ನು ಕರೆಯುತ್ತಾರೆ.

ದೇವಿಯನ್ನು ಪದ್ಮಾಸನೆ ಎಂಬ ಮಂತ್ರದಿಂದ ಸರ್ವೋಪಚಾರದಿಂದ ಸಂತುಷ್ಟಗೊಳಿಸುತ್ತಾರೆ. ಫಲ, ದಕ್ಷಿಣೆ, ಉಪಾಯನಾದಿಗಳನ್ನು ಯೋಗ್ಯ ಬ್ರಾಹ್ಮಣನಿಗೆ ದಾನ ಮಾಡುತ್ತಾರೆ. ಸುವಾಸಿನಿಯರನ್ನು ಕರೆದು ಮಂಗಳದ್ರವ್ಯ ನೀಡಿ ಪುರಸ್ಕರಿಸುತ್ತಾರೆ. ಬ್ರಾಹ್ಮಣ ದಂಪತಿಗಳಿಗೆ ಊಟ ಹಾಕಿ, ಫಲತಾಂಬೂಲ ನೀಡುತ್ತಾರೆ. ಆನಂತರ ವ್ರಥ ಕಥೆಯನ್ನು ಓದುತ್ತಾರೆ. ಲಕ್ಷ್ಮೀಯ ಕೃಪೆಗೆ ಪಾತ್ರರಾಗುತ್ತಾರೆ. ಲಕ್ಷ್ಮಿಯು ಸರ್ವರಿಗೂ ಸನ್ಮಂಗಳವನ್ನುಂಟು ಮಾಡಲಿ.

ಮುಖಪುಟ /ನಮ್ಮಹಬ್ಬಗಳು