ಮುಖಪುಟ /ನಮ್ಮಹಬ್ಬಗಳು    

ಕಣ್ಮನ ತಣಿಸುವ ವಸಂತನ ಋತುವಿಲಾಸ
ಆರು ಋತುಗಳಲ್ಲಿ ಶ್ರೇಷ್ಠನಾದ ವಸಂತ ನೀಡುವ ಆನಂತ ವರ್ಣಿಸಲಸ
ದಳ

*ಟಿ.ಎಂ.ಸತೀಶ್

ಚೈತ್ರದ ಚಿಗುರು,ಚೈತ್ರ -ವೈಶಾಖ ವಸಂತಋತು
ಜ್ಯೇಷ್ಠ - ಆಷಾಢ ಗ್ರೀಷ್ಮಋತು
ಶ್ರಾವಣ- ಭಾದ್ರಪದ ವರ್ಷಋತು
ಆಶ್ವಯುಜ - ಕಾರ್ತೀಕ ಶರದ್ರುತು
ಮಾರ್ಗಶಿರ - ಪುಷ್ಯ ಹೇಮಂತಋತು
ಮಾಘ- ಫಾಲ್ಗುಣ ಶಿಶಿರಋತು
 

ಈ ಪೈಕಿ ವಸಂತ ಋತುಗಳ ರಾಜ. ವಸಂತ ಬಂದ ಋತುಗಳ ರಾಜಾ ತಾ ಬಂದ ಚಿಗುರನು ತಂದ...., ವಸಂತ ಮಾಸ.. ಶೃಂಗಾರ ಮಾಸ.. ಎಂದು ಕವಿಗಳು ಬಣ್ಣಿಸಿದ್ದಾರೆ. ಶಿಶಿರದ ಚಳಿಗೆ ಮುದುಡಿದ ಮನಕ್ಕೆ ಹೊಸ ಚಿಗುರಿನ ನವಚೇತನ ವೀವ ವಸಂತ ನೀಡುವ ಆನಂದ ವರ್ಣಿಸಲಸದಳ.

ಮಾಘ - ಫಾಲ್ಗುಣದ ಚಳಿಗೆ ಮುದುಡಿ, ಎಲೆಗಳು ಉದುರಿ ನಿಸ್ತೇಜವಾದ ಗಿಡ-ಮರಗಳಲ್ಲಿ ಹೊಸ ಚಿಗುರು ಒಡೆದು, ತಿಳಿ ಹಸಿರು ಕಣ್ಮನಗಳನ್ನು ಸೆಳೆಯುತ್ತದೆ. ಮನಸ್ಸಿಗೆ ಹೊಸ ಬಗೆಯ ಆನಂದವನ್ನೂ ಆಹ್ಲಾದವನ್ನೂ ನೀಡುತ್ತದೆ. ಈ ಸಂಭ್ರಮಕ್ಕೆ ಹಿಮ್ಮೇಳವೋ ಎಂಬಂತೆ ಮಾಮರದಿ ಅಡಗಿ ಕೋಗಿಲೆಗಳು ಪಂಚಮಸ್ವರದಲ್ಲಿ ಚೈತ್ರನಿಗೂ - ವಸಂತನಿಗೂ ಸ್ವಾಗತ ಕೋರುತ್ತವೆ. ಹೊಂಗೆ ಹೂವ ತೊಂಗಲಲ್ಲಿ ಭೃಂಗದ ಸಂಗೀತವೂ ತೇಲಿ ಬರುತ್ತದೆ.

ಮಷ್ಟಿ - ಸಮಷ್ಟಿಯ ಕಲ್ಪನೆಗೆ ನಿಲುಕದ ಕಾಲ ತನ್ನ ಕರ್ತವ್ಯವನ್ನು ಚಾಚೂ ತಪ್ಪದೆ ಮುಗಿಸಿ, ಮತ್ತೊಂದು ಸುತ್ತು ಹಾಕುತ್ತದೆ. ಹೊಸ ವರ್ಷದ ಸಂಭ್ರಮ ಮತ್ತೆ ಚಿಗುರುತ್ತದೆ. ಮಾವೂ, ಬೇವಿನ ಮರದಲ್ಲಿ ಚಿಗುರೊಡೆಯುತ್ತದೆ. ಹೂವೆಲ್ಲಾ.. ಕಾಯಾಗಿ, ಕಾಯೆಲ್ಲ ಹಣ್ಣಾಗಿ ಮಾರ್ಪಡುತ್ತದೆ. ಈ ಎಲ್ಲ ಸಂಭ್ರಮಕ್ಕೆ ಪ್ರಕೃತಿಯೂ ಸಿಂಗಾರಗೊಳ್ಳುತ್ತದೆ.

Flowerಹಸಿರು ಎಲೆ - ಕೆಂಪು ಹೂಗಳಿಂದ ಕಂಗೊಳಿಸುತ್ತಿರುವ ಪ್ರಕೃತಿ - ಭೂದೇವಿ ಹಸಿರು ಸೀರೆಯನುಟ್ಟು - ಕೆಂಪು ರವಿಕೆಯ ತೊಟ್ಟು ಕಂಗೊಳಿಸುತಿಹಳೆಂಬ ಪರಿಕಲ್ಪನೆಯನ್ನು ಮೂಡಿಸುತ್ತದೆ.. ತನ್ನ ಮತ್ತೊಂದು ಸುತ್ತು ಮುಗಿಸಿದ ಕಾಲನ ಚಲನೆಯಲ್ಲಿ ಚೈತ್ರದ ಸಂಭ್ರಮದ ಜೊತೆಗೆ ವರ್ಷದ ಮೊದಲ ಹಬ್ಬ ಯುಗಾದಿಯೂ ಬರುತ್ತದೆ.

ಈ ಹೊತ್ತು ಯುಗಾದಿಯ ಸಂಭ್ರಮ: ಹೊಸ ವರ್ಷದ ಮೊದಲ ಹಬ್ಬದ ಸಂಭ್ರಮ ತಮಗರಿವಿಲ್ಲದೆಯೇ ಜನಮಾನಸದಲ್ಲಿ ಮನೆ ಮಾಡುತ್ತದೆ. ಋತುಪರಿವರ್ತನೆಯ ಈ ಸಕಾಲದಲ್ಲಿ ಚಿರುಗಿದ ಹಸಿರೆಲೆ, Bevubella, ಬೇವುಬೆಲ್ಲ... ಯುಗಾದಿ ಆಚರಣೆಅರಳಿದ ಹೂ-ಮೊಗ್ಗು -ಕಾಯಿಗಳು ಹೊಸ ಉಲ್ಲಾಸ ಮೂಡಿಸಿ, ಮುಂದಿನ ಭವಿಷ್ಯ ಹಸನಾಗುವುದೆಂಬ ಭರವಸೆ- ಕಲ್ಪನೆ ಮೂಡಿಸಿವೆ. ಸುಂದರ ನಾಳೆಗಳ ನೆನೆಯುತ್ತ ಇಂದು ಹಬ್ಬವನಾಚರಿಸಲು ಮನಸ್ಸು ತುಡಿಯುತ್ತಿದೆ.

ಮನೆಯ ಮುಂಬಾಗಿಲು ಹಸಿರು ಮಾವಿನೆಲೆಯಿಂದ ಕಂಗೊಳಿಸುತ್ತಿದ್ದರೆ, ಬದುಕಿನಲ್ಲಿ ಎದುರಾಗುವ ಕಷ್ಟ -ಸುಖಗಳ ಸಂಕೇತವಾದ ಬೇವು-ಬೆಲ್ಲ ಸಿಹಿ ಕಹಿ ಮಿಶ್ರಿತವಾಗಿ ಬದುಕಿನ ಚಲನೆಗೆ ಹೊಸ ಶಕ್ತಿ ನೀಡಿದೆ. ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ.

ವರ್ಷದ ಮೊದಲ ಹಬ್ಬ ಯುಗಾದಿಯೂ ಅದರ ಆಚರಣೆಯೂ

ಮುಖಪುಟ /ನಮ್ಮಹಬ್ಬಗಳು