ಮುಖಪುಟ /ನಮ್ಮಹಬ್ಬಗಳು    

ಸರ್ವಕಾಲಕ್ಕೂ ಶ್ರೀರಾಮನೇ ಆದರ್ಶ
ಮಾರ್ಚ್ 28ರಂದು ಶ್ರೀರಾಮನವಮಿ,
 ಮರ್ಯದಾ ಪುರುಷೋತ್ತಮನ ನೆನೆಯಲು ಇದಕ್ಕಿಂತ ಸುಸಮಯ ಮತ್ತೊಂದಿದೆಯೇ
?

*ಟಿ.ಎಂ.ಸತೀಶ್

Lord ramaಸಂಪ್ರದಾಯಸ್ಥರ ನಡುವೆ ಮಾತುಕತೆ ನಡೆಯುತ್ತಿದ್ದಾಗ ಆದರ್ಶದ ಮಾತು ಬಂದರೆ ತಟ್ಟನೆ ಬರುವ ಹೆಸರು ಶ್ರೀರಾಮ ದೇವರದು. ತಂದೆ ತಾಯಿಯರು ತಮ್ಮ ಮಕ್ಕಳಿಗೆ ಶ್ರೀಕೃಷ್ಣನ ವೇಷ ತೊಡಿಸಿ, ಫೋಟೋ ತೆಗೆಸುತ್ತಾರಾದರೂ, ಆದರ್ಶದ ವಿಷಯ ಬಂದಾಗ ಶ್ರೀರಾಮನಂತೆ ಬಾಳು ಎಂದೇ ಹೇಳುವುದು ಸಾಮಾನ್ಯವಾದ ಸಂಗತಿ.

ಶ್ರೀರಾಮನೆಂದರೂ, ಶ್ರೀಕೃಷ್ಣನೆಂದರೂ, ನಾರಾಯಣನೇ. ತ್ರೇತಾಯುಗದಲ್ಲಿ ರಾಮನಾಗಿ ಅವತರಿಸಿದ ಶ್ರೀಮನ್ನಾರಾಯಣ, ದ್ವಾಪರದಲ್ಲಿ ಶ್ರೀಕೃಷ್ಣನಾಗಿ ಬಂದ.

ಕೃತಯುಗ, ತ್ರೇತಾಯುಗ, ದ್ವಾಪರ ಹಾಗೂ ಕಲಿಯುಗ. ಈ ನಾಲ್ಕೂ ಯುಗದಲ್ಲಿ ತನ್ನ ಮಹಿಮೆಯನ್ನು ಸಾರಿರುವ ನಾರಾಯಣ ಶ್ರೀರಾಮಾವತಾರದಲ್ಲೇ ಹೆಚ್ಚು ಹತ್ತಿರವಾದದ್ದು. ಮರ್ಯಾದಾ ಪುರುಷೋತ್ತಮ, ಏಕಪತ್ನಿ ವ್ರತಸ್ಥ, ನ್ಯಾಯಶೀಲ, ನ್ಯಾಯಪರನಾಗಿ ಬಾಳಿದ ಶ್ರೀರಾಮ ಮಾನವನಾಗಿ ಹುಟ್ಟಿ, ಮನುಷ್ಯತ್ವದೊಂದಿಗೆ ಹೇಗೆ ಬಾಳಬೇಕು ಎಂಬುದನ್ನು ಇಡೀ ಮನುಕುಲಕ್ಕೇ ತಿಳಿಸಿಕೊಟ್ಟ ಆದರ್ಶ ಪ್ರಾಯ.

ನಮಗೆಲ್ಲಾ ತಿಳಿದಿರುವಂತೆ ಇರುವುದು ನಾಲ್ಕು ಯುಗ. ಮೊದಲನೆಯದು ಕೃತ ಯುಗ. ಇದು ಸತ್ಯಯುಗ. ಹೀಗಾಗೇ ಜನ ಈ ಯುಗದಲ್ಲಿ ತಮ್ಮ ತಪ್ಪನ್ನು ತಾವೇ ಅರ್ಥ ಮಾಡಿಕೊಂಡು, ತಿದ್ದಿಕೊಂಡು ಬದುಕುತ್ತಿದ್ದರು.

ನಂತರದ್ದು ತ್ರೇತಾಯುಗ. ಇದು ಧರ್ಮಯುಗ ಈ ಯುಗದಲ್ಲಿ ಗುರುವಿನ ಮಾರ್ಗದರ್ಶನದಲ್ಲಿ ಜನ ತಮ್ಮ ತಪ್ಪನ್ನು ಅರಿತು ತಿದ್ದಿ ನಡೆದರು. ತ್ರೇತಾಯುಗದಲ್ಲಿ ಜನಿಸಿದ ಶ್ರೀರಾಮ ಗುರುವಾಗಿ, ದೊರೆಯಾಗಿ, ಆದರ್ಶಪ್ರಾಯನಾಗಿದ್ದ.

ನಂತರ ಬಂದದ್ದು ದ್ವಾಪರಯುಗ. ಈ ಯುಗದಲ್ಲಿ ಜನ ಸ್ವಲ್ಪ ಬದಲಾಗಿದ್ದರು. ಇಲ್ಲಿ ತಮ್ಮ ತಪ್ಪನ್ನು ತಾವೇ ಅರ್ಥ ಮಾಡಿಕೊಳ್ಳುವ, ಅರ್ಥವಾದರೂ ಅದನ್ನು ತಿದ್ದಿಕೊಳ್ಳುವ ಮನೋಸ್ಥಿತಿ ಜನರಲ್ಲಿರಲಿಲ್ಲ. ಗುರು ಹಿರಿಯರ ಆದರ್ಶ ಪಾಲನೆಯೂ ಜನರಲ್ಲಿಲ್ಲವಾಗಿತ್ತು. ಸಾಮ, ದಾನಕ್ಕೆ ಅಲ್ಲಿ ಅವಕಾಶವಿರಲಿಲ್ಲ. ಚತುರೋಪಾಯದಂತೆ ಆಗ ಉಳಿದಿದ್ದು ಭೇದ, ದಂಡನೆಯೇ. ಹೀಗಾಗಿ ಆ ಯುಗದಲ್ಲಿ ಜನ್ಮತಳೆದ ಶ್ರೀಕೃಷ್ಣ ಪರಮಾತ್ಮ ದುಷ್ಟರನ್ನು ಶಿಕ್ಷಿಸಿ ಶಿಷ್ಠರನ್ನು ರಕ್ಷಿಸಿದ. ಧರ್ಮ ಸಂಸ್ಥಾಪನೆಯನ್ನು ಮಾಡಿದ.

ಈಗ ನಾವಿರುವುದು ಕಲಿಯುಗ. ಕಲಿಯುಗದಲ್ಲಿ ಜನರಿಗೆ ದಂಡನೆಯ ಭೀತಿಯೂ ಇಲ್ಲ, ದೈವ ಭಯವೂ ಇಲ್ಲ. ಈ ಯುಗದಲ್ಲಿ ಶ್ರೀಶಂಕರಾಚಾರ್ಯರು, ಶ್ರೀ ಮಧ್ವಾಚಾರ್ಯರು, ಶ್ರೀರಾಮಾನುಜಾಚಾರ್ಯರು, ಜಗಜ್ಯೋತಿ ಬಸವೇಶ್ವರರು, ಅಕ್ಕ ಮಹಾದೇವಿ, ಸ್ವಾಮಿ ವಿವೇಕಾನಂದರು, ಶ್ರೀರಾಮಕೃಷ್ಣ ಪರಮಹಂಸರೇ ಮೊದಲಾದವರು ಆದರ್ಶ ಪ್ರಾಯರು. ಇವರು ತಮ್ಮ ಸಾಂಘಿಕ ಶಕ್ತಿಯಿಂದ, ತಮ್ಮ ಸಿದ್ಧಾಂತಗಳಿಂದ ಯುಗಪರಿವರ್ತನೆಯ ಕಾರ್ಯ ಮಾಡಿದರು. ಮನಃಪರಿವರ್ತನೆಯ ಕಾರ್ಯ ಮಾಡಿದರು.

ಆದರೆ, ಈ ಮಹಾ ಮಹಿಮರ ತತ್ವಾದರ್ಶಗಳಿಂದ, ಭೋದನೆಗಳಿಂದ ಪ್ರಭಾವಿತರಾಗಿ ನೀತಿಮಾರ್ಗದಲ್ಲಿ, ಮುಕ್ತಿಮಾರ್ಗದಲ್ಲಿ ಸಾಗಿದವರು ಪ್ರಾಜ್ಞರು ಮಾತ್ರ.

ಕಲಿಯುಗದಲ್ಲಿ ದೈವಭೀತಿ ಕಡಿಮೆಯಾಗಿದೆ. ರಾಜ ಭೀತಿ ಇಲ್ಲವೇ ಇಲ್ಲವಾಗಿದೆ. ಕಾನೂನಿನಲ್ಲಿರುವ ಎಲ್ಲ ಕಾಯ್ದೆ ಕಟ್ಟಳೆಗಳಲ್ಲಿರುವ ಲೋಪ ಹುಡುಕಿ ತಪ್ಪಿಸಿಕೊಳ್ಳುವ ಮನೋವೃತ್ತಿ ಬೆಳೆಯುತ್ತಿದೆ. ಅತ್ಯಾಚಾರ, ಅನಾಚಾರ, ಭ್ರಷ್ಟಾಚಾರಗಳು ತಾಂಡವವಾಡುತ್ತಿವೆ.

ಪ್ರಸಕ್ತ ನಮ್ಮ ಜೊತೆಯಲ್ಲಿ ಬದುಕುತ್ತಿರುವವನ್ನು ನಾವು ಆದರ್ಶ ಎಂದು ಪರಿಗಣಿಸುವ ಪರಿಸ್ಥಿತಿಯೇ ಇಲ್ಲವಾಗಿದೆ. ಮಹಾತ್ಮಾ ಗಾಂಜಿ, ವಿನೋಬಾ ಭಾವೆಯಂಥ ಆದರ್ಶಪ್ರಾಯರು ಹುಡುಕಿದರೂ ಸಿಗದ ಸ್ಥಿತಿ. ಹಾಗಾದರೆ ಮುಂದಿನ ಜನಾಂಗಕ್ಕೆ ಯಾರು ಆದರ್ಶ.

ಇಂದಿನ ಮಕ್ಕಳನ್ನು ನಾವು ನಿಮಗಾರು ಆದರ್ಶ ಎಂದು ಕೇಳಿದರೆ, ಸಿನಿಮಾ ತಾರೆಯರ ಹೆಸರನ್ನೋ ಇಲ್ಲ ಕ್ರಿಕೆಟ್ ತಾರೆಯರ ಹೆಸರನ್ನೋ ಹೇಳುತ್ತಾರೆ.

ಆದರೆ, ಭಾವಿ ಭಾರತದ ಪ್ರಜೆಗಳಾದ ಇಂದಿನ ಮಕ್ಕಳು ಸಚ್ಚಾರಿತ್ರ್ಯ ಬೆಳೆಸಿಕೊಳ್ಳಬೇಕಾದರೆ, ಅವರು ಸುಸಂಪನ್ನರಾಗಬೇಕಾದರೆ, ಸುಶೀಲರಾಗಬೇಕಾದರೆ, ಮತ್ತೊಬ್ಬರಿಗೆ ಆದರ್ಶಪ್ರಾಯರಾಗಿ ಬದುಕಬೇಕಾದರೆ, ಅವರಿಗೂ ಯಾರಾದರೂ ಆದರ್ಶ ಇರಲೇಬೇಕು.

ಅಂಥ ಆದರ್ಶ ಯಾರು? ಸರ್ವ ಕಾಲಕ್ಕೂ, ಸರ್ವರಿಗೂ ಆದರ್ಶನಾದವೇ ಶ್ರೀರಾಮ. ಪಾಲಕರು ಶ್ರೀರಾಮದೇವರ ಕಥೆಯನ್ನು ತಮ್ಮ ಮಕ್ಕಳಿಗೆ ತಿಳಿಸಿಕೊಟ್ಟರೆ, ಶಾಲಾ, ಕಾಲೇಜು ಹಂತದಲ್ಲಿ ಶ್ರೀವಾಲ್ಮಿಕಿ ವಿರಚಿತ ರಾಮಾಯಣ ಅಧ್ಯಯನಕ್ಕೆ ಅವಕಾಶ ಕೊಟ್ಟರೆ, ಕಲುಶಿತವಾಗುತ್ತಿರುವ ಯುವ ಮನಸ್ಸುಗಳು ಮತ್ತೆ ಸಮಾಜದ ಮುಖ್ಯವಾಹಿನಿಯಲ್ಲಿ ಪ್ರವಹಿಸಲು ಸಾಧ್ಯ. ಧರ್ಮ, ನ್ಯಾಯ, ನಿಷ್ಠೆ, ಭಕ್ತಿ, ಸ್ವಾಮಿಭಕ್ತಿಗಳ ಪರಿಚಯ ಮುಗ್ಧ ಮನಸ್ಸಿಗೆ ಆಗಲು ಸಾಧ್ಯ.

ಹೌದು ರಾಮನೇಕೆ ಎಲ್ಲಕಾಲಕ್ಕೂ, ಎಲ್ಲರಿಗೂ ಆದರ್ಶ. ರಾಮನಲ್ಲೇನು ಅಂಥ ವಿಶೇಷ ? ಎಂಬ ಪ್ರಶ್ನೆ ಬಂದರೂ ಅಚ್ಚರಿ ಇಲ್ಲ.

ಯಾರು ಎಷ್ಟೇ ಪ್ರಯತ್ನ ಪಟ್ಟರೂ ಶ್ರೀರಾಮನಾಗಲು ಸಾಧ್ಯವೇ ಇಲ್ಲ. ಕಾರಣ ಶ್ರೀರಾಮ ಏಕಮೇವ ಅದ್ವಿತೀಯ. ನಾವು ಶ್ರೀರಾಮದೇವರ ತತ್ವಾದರ್ಶನಗಳನ್ನು ತಿಳಿದು, ಅವರಂತೆ ನಡೆಯಲು ಪ್ರಯತ್ನಿಸಿದರೆ, ಖಂಡಿತಾ ಮನುಷ್ಯರಂತೂ ಆಗಲು ಸಾಧ್ಯ. ಮಾನವತೆಯ ಅರ್ಥ ತಿಳಿಯಲು ಸಾಧ್ಯ. ಈ ಭೂಮಿಯಲ್ಲಿ ಹುಟ್ಟಿದ ಋಣ ತೀರಿಸಲು ಸಾಧ್ಯ.

ನಾವೇಕೆ ರಾಮನಾಗಲು ಸಾಧ್ಯವಿಲ್ಲ ಎನ್ನುತ್ತೀರಾ? ಇದಕ್ಕೆ ರಾಮಾಯಣದ ಒಂದು ಪ್ರಸಂಗದಿಂದಲೇ ಉತ್ತರ ಕೊಡುವುದು ಸೂಕ್ತ.

ರಾಮಾಯಣ ಎಂದೊಡನೆ ನಮಗೆ ನೆನಪಿಗೆ ಬರುವುದು ರಾಮ ಹಾಗೂ ರಾವಣ. ರಾವಣ ಎಂದರೆ ಯಾರು? ಎಲ್ಲರನ್ನೂ, ಎಲ್ಲವನ್ನೂ ಹರಣ ಮಾಡತಕ್ಕಂತವನೇ ರಾವಣ. ಎಲ್ಲರನ್ನೂ ರಮಿಸತಕ್ಕಂತವನು ರಾಮ. ಅವರಿಬ್ಬರ ಹೆಸರಲ್ಲೇ ರಾಮ - ರಾವಣರ ವ್ಯಕ್ತಿತ್ವವೇ ಅಡಗಿದೆ.

ಸೀತಾಮಾತೆಯನ್ನು ರಾವಣ ಲೋಕಮಾತೆ ಎಂದು ಅರಿಯದೆ ಅಪಹರಿಸಿದ್ದು ನಿಮಗೂ ಗೊತ್ತು. ಹೀಗೆ ಕಳ್ಳ ಸನ್ಯಾಸಿಯ ವೇಷದಲ್ಲಿ ಬಂದು ಸೀತಾಮಾತೆಯನ್ನು ಅಪಹರಿಸಿದ ರಾವಣ ಆಕೆಯನ್ನು ಅಶೋಕವನದಲ್ಲಿ ಕೂಡಿಟ್ಟ. ಆದರೆ, ಎಂದೂ ರಾವಣ ಸೀತಾಮಾತೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಲಿಲ್ಲ. ಬಲವಂತ ಮಾಡಲಿಲ್ಲ. ಅದಕ್ಕೆ ಕಾರಣವೂ ಇತ್ತು.

ಅಪ್ಸರೆಯೊಬ್ಬಳನ್ನು ಬಲಾತ್ಕರಿಸಿದ ರಾವಣನಿಗೆ ಆಕೆ, ಮತ್ತಾವುದೇ ಪರಸ್ತ್ರೀಯನ್ನು ನೀನು ಬಲವಂತ ಪಡಿಸಿದರೆ, ಅಂದೇ ನಿನ್ನ ತಲೆ ಒಡೆದು ಸಹಸ್ರ ಹೋಳಾಗುತ್ತದೆ ಎಂದು ಶಾಪವಿತ್ತಿದ್ದಳು. ಆ ಶಾಪ ಸೀತಾ ಮಾತೆಯನ್ನು ಸಂರಕ್ಷಿಸಿತ್ತು.

ಹೀಗಾಗೇ ರಾವಣ ಸೀತೆಯನ್ನು ತನ್ನನ್ನು ಮದುವೆಯಾಗು. ನೀನಾಗಿ ನನ್ನ ವಶವಾಗು ಎಂದು ಕೋರುತ್ತಿದ್ದನೇ ಹೊರತು ಬಲವಂತ ಮಾಡಲಿಲ್ಲ. ನಾನಾ ಪರಿಯಾಗಿ ಪ್ರಾರ್ಥಿಸಿದರೂ ಸೀತೆ ಕೇಳದಿದ್ದುದು ರಾವಣನಿಗೆ ಚಿಂತೆ ತಂದಿತ್ತು. ಇಂಥ ಸಂದರ್ಭದಲ್ಲಿ ರಾವಣನ ಮಂತ್ರಿ ಸಲಹೆ ಕೊಟ್ಟ. ಮಹಾಪ್ರಭು ನೀವು ಕಾಮರೂಪ ವಿದ್ಯೆಯಲ್ಲಿ ಪ್ರವೀಣರು. ಯಾವುದೇ ಸಂದರ್ಭದಲ್ಲಿ ಯಾರದೇ ರೂಪ ಧರಿಸಬಲ್ಲ ಸಮರ್ಥರು. ನೀವು ರಾಮರೂಪ ಧರಿಸಿ, ಸೀತೆಯನ್ನು ವಂಚಿಸಿ, ನಿಮ್ಮ ಮನೋಭಿಷ್ಠ ಪೂರೈಸಿಕೊಳ್ಳಿ .

ಆಗ ರಾವಣ ಹೇಳುತ್ತಾನೆ. ಅಯ್ಯೋ ಮಂಕೆ. ಇದೇನು ನನಗೆ ಗೊತ್ತಿಲ್ಲದ ವಿಚಾರ ಅಂದುಕೊಂಡ್ಯಾ ನಾನೂ ನಿನಗಿಂಥ ಮೊದಲೇ ಇಂಥ ಪ್ರಯತ್ನ ಮಾಡಿದ್ದೆ. ರಾಮನ ರೂಪವನ್ನೂ ತಾಳಿದ್ದೆ. ಆದರೆ, ಆ ರೂಪವನ್ನು ಹೊಂದಿದ ಕೂಡಲೇ ನನ್ನಲ್ಲಿ ಯಾವುದೇ ವಿಕೃತ ಭಾವನೆಗಳೇ ಬರಲಿಲ್ಲ. ನನ್ನಲ್ಲಿ ಸತ್ವಗುಣ ಆವರಿಸುತ್ತಿತ್ತು. ನಾನು ಸಾತ್ವಿಕನಾಗಿ ಹೋಗಿದ್ದೆ. ಸೀತೆ ಪರಸ್ತ್ರೀ. ಆಕೆ ಮಹಾಪತಿವ್ರತೆ. ಆಕೆಯನ್ನು ಕಣ್ಣೆತ್ತಿಯೂ ನೋಡಬಾರದೆಂಬ ಭಾವನೆ ಮೂಡಿತ್ತು. ಹೀಗಾಗಿ... ನನಗೆ ಆ ಸಲಹೆ ಬಿಟ್ಟು ಬೇರಿದ್ದರೆ ಹೇಳು ಎಂದ.

ಅಂದರೆ, ಶ್ರೀರಾಮದೇವರ ರೂಪ ತಳೆದ ಮಾತ್ರಕ್ಕೇ ಸಕಲ ದುರ್ಗುಣಗಳೂ ಇದ್ದ ರಾಕ್ಷಸನಿಗೇ ಸಾತ್ವಿಕ ಗುಣ ಪ್ರಾಪ್ತಿಯಾಗುತ್ತದೆ ಎಂದ ಮೇಲೆ, ನಾವು ಶ್ರೀರಾಮನ ತತ್ವಾದರ್ಶಗಳನ್ನು ಓದಿ, ತಿಳಿದು, ಅದರಲ್ಲಿ ಅಣುವಷ್ಟು ಪಾಲಿಸಲು ಪ್ರಯತ್ನಿಸಿದರೂ ನಮ್ಮಲ್ಲಿ ಸದ್ಗುಣಗಳು ಮೊಳಕೆಯೊಡೆಯದಿದ್ದೀತೆ?

ಹೀಗಾಗೇ ಹಿರಿಯರು, ತಿಳಿದವರು ಪ್ರತಿ ಹಂತದಲ್ಲೂ ಶ್ರೀರಾಮ ಚಂದ್ರನಂತೆ ಬಾಳು ಎಂದು ಹರಸುವುದು.

ಶ್ರೀರಾಮದೇವರ ವ್ಯಕ್ತಿತ್ವವೇ ಅಂಥದ್ದು, ಅವರ ಮಹಿಮೆಯೇ ಅದು. ಶ್ರೀರಾಮ ಮಂತ್ರದಲ್ಲೇ ಪ್ರಚಂಡ ಶಕ್ತಿ ಅಡಗಿದೆ. ಇದನ್ನು ನಿರೂಪಿಸುವ ಪ್ರಸಂಗವೂ ಒಂದಿದೆ. ರಾವಣನಿಗೆ ದೂತರು ಸುದ್ದಿಯೊಂದನ್ನು ತಂದು ಹೇಳುತ್ತಾರೆ. ಅಯ್ಯಾ ರಾವಣ, ಕಪಿಗಳು ಲಂಕೆಗೆ ಸೇತುವೆ ಕಟ್ಟುತ್ತಿದ್ದಾರೆ. ಕಲ್ಲಿನ ಮೇಲೆ ಶ್ರೀರಾಮ, ಜಯರಾಮ ಎಂದು ಬರೆದು ಸಾಗರಕ್ಕೆ ಎಸೆಯುತ್ತಿದ್ದಾರೆ. ಆ ಕಲ್ಲು ತೇಲುತ್ತಿದೆ.

ಆಗ ರಾವಣ ಹೇಳುತ್ತಾನೆ. ಇದ್ಯಾವ ದೊಡ್ಡ ವಿಷಯ. ನಾನೂ ಕಲ್ಲು ತೆಗೆದು ಸಮುದ್ರಕ್ಕೆ ಎಸೆದರೆ ಅದೂ ತೇಲುತ್ತದೆ. ಎಲ್ಲರಿಗೂ ಆಶ್ಚರ್ಯ ಆಗುತ್ತದೆ. ಆಗ ರಾವಣ ಎಲ್ಲರನ್ನು ಸಾಗರದ ತೀರಕ್ಕೆ ಕರೆದೊಯ್ದು, ಒಂದು ಕಲ್ಲು ತೆಗೆದು ಸಮುದ್ರಕ್ಕೆ ಎಸೆದಾಗ ಅದು ತೇಲುತ್ತದೆ. ಎಲ್ಲರೂ ರಾಮನಿಗೆ ರಾವಣನೇನೂ ಕಡಿಮೆ ಇಲ್ಲ ಎಂದು ಜಯಘೋಷ ಮಾಡುತ್ತಾರೆ.

ಆದರೆ ಅದರ ಒಳಗುಟ್ಟೇ ಬೇರೆಯಾಗಿರುತ್ತದೆ. ರಾವಣ ಘಾತುಕ. ರಾವಣ ಎಸೆದ ಕಲ್ಲು ಹೇಗೆ ತೇಲಲು ಸಾಧ್ಯ. ಈ ಮರ್ಮ ಅರಿಯಲು ರಾವಣನ ಮಡದಿ ಮಂಡೋದರಿ ಏಕಾಂತದಲ್ಲಿದ್ದಾಗ ಪರಿಪರಿಯಾಗಿ ಬೇಡಿ ವಿಷಯ ತಿಳಿಯುತ್ತಾಳೆ.

ಆಗ ರಾವಣ ಹೇಳುತ್ತಾನೆ. ಪ್ರಿಯೆ ನಾನು ಕಲ್ಲು ತೇಲುವಂತೆ ಮಾಡದಿದ್ದರೆ, ನನ್ನ ಸೈನಿಕರೆಲ್ಲರಿಗೂ ನನ್ನ ಮೇಲೆ ವಿಶ್ವಾಸವೇ ಹೋಗಿ ಬಿಡುತ್ತಿತ್ತು. ಅವರು ಯುದ್ಧಕ್ಕೆ ಹಿಂಜರಿಯುತ್ತಿದ್ದರು. ಅವರಲ್ಲಿ ಆತ್ಮಸ್ಥೈರ್ಯ ತುಂಬಲು ನಾನು ಅನಿವಾರ್ಯವಾಗಿ ಈ ಪರೀಕ್ಷೆಗೆ ಕೈಹಾಕಲೇ ಬೇಕಾಯಿತು.

ಆಗ ಮಂಡೋದರಿ ಕೇಳುತ್ತಾಳೆ. ಅದೆಲ್ಲಾ ಸರಿ. ಆದರೆ, ನೀವು ಸಮುದ್ರಕ್ಕೆ ಹಾಕಿದ ಕಲ್ಲು ತೇಲಿದ್ದರ ಗುಟ್ಟೇನು? ಆಗ ರಾವಣ ಹೇಳುತ್ತಾನೆ. ಅದು ನನಗೂ ಗೊತ್ತಿತ್ತು. ನಾನು ಹಾಕಿದ ಕಲ್ಲು ಮುಳುಗ ಬೇಕೇ ಹೊರತು ತೇಲಲು ಸಾಧ್ಯವಿಲ್ಲ. ಹೀಗಾಗಿ ನಾನು ಕಲ್ಲನ್ನು ಸಮುದ್ರಕ್ಕೆ ಹಾಕುವ ಮುನ್ನ ಈ ಕಲ್ಲು ತೇಲದಿದ್ದರೆ ಶ್ರೀರಾಮ ಚಂದ್ರನ ಮೇಲಾಣೆ ಎಂದು ಹೇಳಿ ಹಾಕಿದೆ. ಕಲ್ಲು ತೇಲಿತು. ರಾಮನಾಮದಲ್ಲಿ ಅಂಥ ಬಲವಿದೆ. ಆತ ಸರ್ವಶಕ್ತ. ಆದರೆ, ನಾನು ಸೀತಾಪಹರಣ ಮಾಡಿದ್ದೇನೆ. ನನ್ನ ತಪ್ಪಿಗೆ ಪ್ರಾಯಶ್ಚಿತ್ತ ಆಗಲೇಬೇಕು. ನಾನು ಯುದ್ಧ ಮಾಡುತ್ತೇನೆ ಎಂದು ಹೇಳುತ್ತಾನೆ.

ಅಂದರೆ ಶತ್ರುವಾದ ರಾವಣನಿಗೂ ರಾಮನ ಮಹಿಮೆ ತಿಳಿದಿತ್ತು. ಅಂಥದರಲ್ಲಿ ನಾವು ರಾಮನ ಪೂಜಿಸದಿದ್ದರೆ ಅದು ಸರಿಯಾದೀತೆ?

ಮುಖಪುಟ /ನಮ್ಮಹಬ್ಬಗಳು