ಮುಖಪುಟ /ನಮ್ಮಹಬ್ಬಗಳು    

ದೀಪಾವಳಿಯ ಸಡಗರಕ್ಕೆ ಪಟಾಕಿ ಎರವಾಗದಿರಲಿ
ಪಟಾಕಿ ಹಚ್ಚುವಾಗ ಮಕ್ಕಳೇ ಹುಷಾರ್

*ವಾಗ್ಮಿತ್ರ

ದೀಪಾವಳಿ ಎಂದರೆ ಮಕ್ಕಳಿಗೆ ಪ್ರಾಣ. ಸಂಜೆಯ ಮಬ್ಬುಗತ್ತತಲ್ಲಿ ಅಥವಾ ರಾತ್ರಿಯ ಕಡು ಕತ್ತಲಲ್ಲಿ ಸುರುಸುರುಬತ್ತಿ ಹಚ್ಚಿ, ಅದನ್ನು ಗಿರಿಗಿರಿ ತಿರುಗಿಸುತ್ತಾ ಬೆಳಕಿನಲ್ಲಿ ವಿವಿಧ ಚಿತ್ತಾರ ಮೂಡಿಸಿ ಸಂಭ್ರಮಿಸಲು ತುದಿಗಾಲಲ್ಲಿ ನಿಂತಿರುತ್ತಾರೆ. ರಾಕೆಟನ್ನು ಮುಗಿಲಿನತ್ತ ಚಿಮ್ಮಿಸಿ ಪಕ್ಕದ ಮನೆಯ ಪುಟ್ಟನ ರಾಕೆಟ್‌ಗಿಂತ ತನ್ನ ರಾಕೆಟ್ ಎತ್ತರಕ್ಕೆ ಹೋಯಿತು ಎಂದು ಜಂಭಪಡಲು ಹಾತೊರೆಯುತ್ತಾರೆ.

ಬಿರುಸಿನ ಕುಡಿಕೆ (ಫ್ಲವರ್‌ಪಾಟ್), ಸವೆನ್‌ಸೌಂಡ್ಸ್, ಡಬಲ್ ಸೌಂಡ್ಸ್, ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಗೆ ಬಂದಿರುವ ಮುಗಿಲಿನಲ್ಲೇ ನಕ್ಷತ್ರ ಲೋಕ ನಿರ್ಮಿಸುವ ತರಹೇವಾರಿ ೭ ಕಲರ್ಸ್, ೧೦೦ ಕಲರ್ಸ್ ಅಥವಾ ಹಂಡ್ರೆಡ್ ಶಾಟ್ಸ್ ಇತ್ಯಾದಿ ಪಟಾಕಿಗಳನ್ನು ಸಿಡಿಸಿ ಮನೆ ಮಂದಿಯನ್ನೆಲ್ಲಾ ಕರೆದು ತೋರಿಸಲು ಕಾಯುತ್ತಿರುತ್ತಾರೆ.

ಅಪ್ಪ ಹಬ್ಬಕ್ಕೆಂಟು ದಿನ ಮೊದಲೇ ತಂದಿಟ್ಟ ಪಟಾಕಿಯ ಡಬ್ಬವನ್ನು ಕದ್ದು ಕದ್ದು ನೋಡುತ್ತಾ ಪಟಾಕಿ ಹೊಡೆಯಲು ಹಾತೊರೆಯುತ್ತಾರೆ. ಪಟಾಕಿ ಹಚ್ಚಿದಾಗ ಸಿಗುವ ಆನಂದ ವರ್ಣನಾತೀತ. ಮಕ್ಕಳಿಗೆ ಸಹಜವಾಗಿಯೇ ಪಟಾಕಿ ಆನಂದ ತರುತ್ತದೆ. ಆದರೆ, ಕೊಂಚ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ. 

ಪಟಾಕಿ ಹಚ್ಚುವಾಗ ಮಕ್ಕಳು ಕಡ್ಡಾಯವಾಗಿ ಕೆಲವು ಸೂಚನೆಗಳನ್ನು ಪಾಲಿಸಲೇ ಬೇಕು. ಪಟಾಕಿಗಳು ಸಿಡಿದು ಕೈಸುಟ್ಟುಕೊಂಡ, ಕಣ್ಣು ಕಳೆದುಕೊಂಡವರ ಸಂಖ್ಯೆ ನೂರಾರು... ನೂರಾರೇನು ಸಾವಿರಾರು.. ಲಕ್ಷಾಂತರ ಎಂದರೂ ತಪ್ಪಾಗುವುದಿಲ್ಲ.

ಹೀಗಾಗಿ ಮಕ್ಕಳು ಪಟಾಕಿ ಹೊಡೆಯುವಾಗ ದೊಡ್ಡವರು ಜೊತೆಯಲ್ಲಿರುವುದು ಅತ್ಯಗತ್ಯ. ಜೊತೆಗೆ ಮಕ್ಕಳೂ ಈ ಕೆಳಕಂಡ ನಿಯಮ ಪಾಲಿಸಿದರೆ ಅಪಾಯ ತಪ್ಪಿಸಲು ಸಾಧ್ಯ.

 • ಪಟಾಕಿ ಹಚ್ಚುವಾಗ ಮಕ್ಕಳಿಗೆ ಹತ್ತಿಯ ಬಟ್ಟೆಗಳನ್ನೇ ತೊಡಿಸುವುದು ಉತ್ತಮ. ಸಿಲ್ಕ್ ಹಾಗೂ ಪಾಲಿಯೆಸ್ಟರ್ ಬಟ್ಟೆಗಳು ಬೆಂಕಿ ಕಿಡಿಗೆ ತತ್‌ಕ್ಷಣವೇ ಸ್ಪಂದಿಸುತ್ತವೆ.

 • ಅರ್ಧ ಉರಿದು ಆರಿದ ಪಟಾಕಿಗಳತ್ತ ಹೋಗುವುದು ತಪ್ಪು, ಉರಿಯದ ಪಟಾಕಿಗಳ ಮದ್ದನ್ನೆಲ್ಲಾ ಸೇರಿಸಿ ಅದಕ್ಕೆ ಬೆಂಕಿ ಹಚ್ಚಿ ಜ್ವಾಲೆ ಬರುವಂತೆ ಮಾಡುವುದು ಮಹಾ ತಪ್ಪು

 • ಪಟಾಕಿಯನ್ನು ಕೈಯಲ್ಲಿ ಹಿಡಿದು ಹಚ್ಚುವುದು ಮಹಾಪರಾಧ - ಅನಾಹುತಕ್ಕೆ ಇದು ದಾರಿ ಮಾಡಿಕೊಡುತ್ತದೆ.

 • ಬಿರುಸಿನ ಕುಡಿಕೆ ಅರ್ಥಾತ್ ಪ್ಲವರ್ ಪಾಟ್ ಹಚ್ಚುವಾಗ ಅದನ್ನು ನೆಲದ ಮೇಲಿಟ್ಟು ಸುರುಸುರುಬತ್ತಿ (ಸ್ಪಾರ್ಕಲರ್ಸ್) ನೆರವಿನಿಂದ ಹಚ್ಚುವುದು ಕಡ್ಡಾಯ.

 • ಸಿಡಿಯುವ ಪಟಾಕಿ ಹೊಡೆಯುವಾಗ ಮದ್ದಿನ ತುದಿಯನ್ನು ಕಿತ್ತು, ಉದ್ದನೆಯ ಊದುಬತ್ತಿಯಿಂದ ಹಚ್ಚುವುದು ಕ್ಷೇಮಕರ. ಬೆಂಕಿ ಪೊಟ್ಟಣದಿಂದ ಕಡ್ಡಿ ಗೀರಿ ಪಟಾಕಿ ಹೊಡೆಯುವುದು ಅಪಾಯಕಾರಿ.

 • ಚಿಕ್ಕ ಮಕ್ಕಳ ಕೈಗೆ ಆನೆ ಪಟಾಕಿ, ಲಕ್ಷ್ಮೀಪಟಾಕಿ, ಬಾಂಬ್ ಸಿಗದಂತೆ ಎಚ್ಚರ ವಹಿಸುವುದು ಅಗತ್ಯ. ಪಟಾಕಿಗಳ ಪೊಟ್ಟಣ ಪಕ್ಕದಲ್ಲಿಟ್ಟುಕೊಂಡು ಪಟಾಕಿ ಹಚ್ಚುವುದು ಬೇಡ.

 • ರಾಕೆಟ್ ಹಚ್ಚುವಾಗ ಬಾಟಲಿಗಳನ್ನು ಬಳಸುವುದು ಅತ್ಯುತ್ತಮ. ಕೈಯಲ್ಲಿ ಹಿಡಿದು ರಾಕೆಟ್ ಬಿಡುವುದು. ರಸ್ತೆಯಲ್ಲಿ ಮಲಗಿಸಿ ರಾಕೆಟ್ ಹಚ್ಚುವುದು ಅಪಾಯ ತರುತ್ತದೆ.

 • ಗುಡಿಸಲು, ಒಣಹುಲ್ಲು, ಬೆಂಕಿಗೆ ಸ್ಪಂದಿಸುವ ವಸ್ತುಗಳು, ಪಟಾಕಿ ಮಳಿಗೆಗಳು ಇರುವ ಕಡೆ ಪಟಾಕಿ ಹೊಡೆಯುವುದು ಅಗ್ನಿ ಆಕಸ್ಮಿಕಕ್ಕೆ ಆಸ್ಪದ ನೀಡುತ್ತದೆ.

 • ಆಸ್ತಮ, ಡಸ್ಟ್, ಸ್ಮೋಕ್ ಅಲರ್ಜಿ ಇರುವ ಮಕ್ಕಳಿಗೆ ಪಟಾಕಿಯ ಹೊಗೆ, ಘಾಟು ರೋಗ ಉಲ್ಬಣಿಸುವ ಕಾರಣ ಅಂಥ ಮಕ್ಕಳನ್ನು ಹಾವಿನ ಬಾಲ, ಪೆನ್ಸಿಲ್ ಇತ್ಯಾದಿ ಹೆಚ್ಚು ಧೂಮ ಬರುವ ಪಟಾಕಿ ಹಚ್ಚುವ ಸ್ಥಳದಿಂದ ದೂರ ಇರುವಂತೆ ನೋಡಿಕೊಳ್ಳುವುದು ಉತ್ತಮ.

 • ಪಟಾಕಿಯ ಮದ್ದು, ಪಟಾಕಿಗಳಲ್ಲಿರುವ ಗಂಧಕ ಇತ್ಯಾದಿ ಪಟಾಕಿ ಹಚ್ಚುವ ವೇಳೆ ಕೈಗೆ ಅಂಟಿರುತ್ತದೆ. ಅದು ಉದರ ಸೇರಿದರೆ ಅಪಾಯ. ಹೀಗಾಗಿ ಪಟಾಕಿಯೆಲ್ಲಾ ಹಚ್ಚಿ ಮುಗಿದ ಮೇಲೆ ಸೋಪಿನಿಂದ ಶುಭ್ರವಾಗಿ ಕೈ ತೊಳೆದು ಊಟ ಮಾಡಬೇಕು.

 • ಆನೆ ಪಟಾಕಿ, ಲಕ್ಷ್ಮೀ ಪಟಾಕಿ, ಆಟಂಬಾಂಬ್‌ಗಳ ಮೇಲೆ ಕರಟ, ತಗಡಿನ ಡಬ್ಬ ಇತ್ಯಾದಿ ಮುಚ್ಚಿ ಪಟಾಕಿ ಹೊಡೆಯುವುದು ಅಪಾಯವನ್ನು ಆಹ್ವಾನಿಸಿದಂತೆ. ಅವು ಸಿಡಿದು ಅಕ್ಕ ಪಕ್ಕದಲ್ಲಿರುವವರಿಗೆ ಗಾಯ ಮಾಡಬಹುದು. ಪಟಾಕಿ ಹಚ್ಚುವವರು ಕೂಡ ಕೈಕಾಲು ಸುಟ್ಟಿಕೊಳ್ಳುವ, ಕಣ್ಣು ಕಳೆದುಕೊಳ್ಳುವ ಅಪಾಯ ಇದೆ. ಹೀಗಾಗಿ ಇಂಥ ಹುಚ್ಚು ಸಾಹಸ ಬೇಡ.

 • ೧೦೦ ವಾಲಾ, ೧೦೦೦ ವಾಲಾ ಇತ್ಯಾದಿ ದೀರ್ಘಕಾಲ ಉರಿಯುವ, ಸಿಡಿಯುವ ಪಟಾಕಿಗಳನ್ನು ಬಯಲಲ್ಲಿ ಹಚ್ಚುವುದು ಕ್ಷೇಮ, ಸಾಧ್ಯವಾದಷ್ಟೂ ರಸ್ತೆಯಲ್ಲಿ ಅದೂ ವಾಹನ ದಟ್ಟಣೆ ಇರುವ ರಸ್ತೆಗಳಲ್ಲಿ ಪಟಾಕಿ ಹೊಡೆಯುವುದನ್ನು ನಿಯಂತ್ರಿಸಿ.

 • ಸುರುಸುರುಬತ್ತಿಗಳನ್ನು ಗಿರಿಗಿರಿ ತಿರುಗಿಸುವಾಗ ಎಚ್ಚರ ಅಗತ್ಯ ಅದು ಕೈ ಚಾರಿದರೆ, ತಲೆಯ ಮೇಲೋ, ಇಲ್ಲ ಅಕ್ಕ ಪಕ್ಕದಲ್ಲಿ ನಿಂತ ಮಕ್ಕಳ ಮೇಲೋ ಬೀಳುವ ಅಪಾಯ ಇರುತ್ತದೆ. ಸುರುಸುರುಬತ್ತಿ ಉರಿದಾದ ಮೇಲೆ ದೂರದಲ್ಲಿ ಎಸೆಯುವುದು ಉತ್ತಮ. ಇಲ್ಲವೇ ಬೇರೆಯವರು ಅದರ ಮೇಲೆ ಕಾಲಿಟ್ಟು ಸುಟ್ಟುಕೊಳ್ಳುತ್ತಾರೆ. ಪಟಾಕಿ ಹೊಡೆಯುವಾಗ ಚಪ್ಪಲಿ ಧರಿಸುವುದು ಕ್ಷೇಮ.

 • ಹೆಚ್ಚು ಶಬ್ದ ಬರುವ ಪಟಾಕಿಗಳು ಶ್ರವಣದೋಷ ತರುವ ಅಪಾಯವಿರುವ ಕಾರಣ, ಅಂಥ ಪಟಾಕಿ ಬಳಕೆ ಬೇಡವೇ ಬೇಡ.

 • ಅಕಸ್ಮಾತ್ ಪಟಾಕಿ ಹೊಡೆಯುವಾಗ ಸುಟ್ಟಗಾಯಗಳಾದರೆ ತಕ್ಷಣವೇ ಶುಭ್ರವಾದ ತಣ್ಣೀರಿನಿಂದ ತೊಳೆಯಿರಿ. ನಂತರ ಬರ್ನಾಲ್ ಹಚ್ಚಿ. ಸುಟ್ಟಗಾಯ ತೀವ್ರವಾಗಿದ್ದರೆ ಕೂಡಲೇ ವೈದ್ಯರ ಬಳಿಕೆ ಕರೆದೊಯ್ಯಿರಿ.

ಮುಖಪುಟ /ನಮ್ಮಹಬ್ಬಗಳು