ಮುಖಪುಟ /ನಮ್ಮಹಬ್ಬಗಳು    

ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮನು ತಾನೇ...  ಅಮ್ಮಂದಿರ ದಿನ
 
ಹೆತ್ತು ಹೊತ್ತು ಸಾಕಿ ಸಲಹಿದ ತಾಯಿಯ ನೆನೆಯಲು ತಾಯಂದಿರ ದಿನಕ್ಕಿಂತ ಮಿಗಿಲಾದ ದಿನಬೇಕೇ?

*ಎಚ್.ಎನ್.ವೆಂಕಟೇಶ್.

ತಾಯಂದಿರ ದಿನ, ಮಾತೆಯರ ದಿನ, ಅಮ್ಮಂದಿರ ದಿನ, Mothers dayನಮ್ಮ ಹಿಂದೂ ಧರ್ಮ, ಪುರಾಣ, ವೇದೋಪನಿಷತ್ತುಗಳಲ್ಲಿ ಪ್ರಥಮ ವಂದಿತ ಗಣಪನಾದರೆ, ಪ್ರಥಮ ವಂದಿತೆ ತಾಯಿ. ಮಾತೃದೇವೋ ಭವ, ಪಿತೃದೇವೋ ಭವ, ಆಚಾರ್ಯ ದೇವೋಭವ, ಅತಿಥಿ ದೇವೋ ಭವ.. ಎನ್ನುವಾಗ ತಾಯಿ ದೇವಿಯನ್ನು ಮೊದಲು ವಂದಿಸಿ ನಂತರದ ಇತರರಿಗೆ ಸ್ಥಾನ ನೀಡಲಾಗಿದೆ. 

ತಾಯಿಗಿಂತ ದೇವರಿಲ್ಲ, ಉಪ್ಪಿಂಗಿತ ರುಚಿಯಿಲ್ಲ ಎಂಬ ಗಾದೆ ಮಾತುಗಳೇ ಇವೆ. ಈ ಜಗದಲ್ಲಿ ಸಹಸ್ರಾರು ಕೆಟ್ಟ ಮಕ್ಕಳು ದೊರಕ ಬಹುದು ಆದರೆ, ಕೆಟ್ಟ ತಾಯಿ ಮಾತ್ರ ಇರಲಾರಳು ಎಂಬುದು ಅನುಭಾವ. ಕಂದನ ಹೆತ್ತು ಹೊತ್ತು, ಸಲಹುವ ತಾಯಿ, ತನ್ನ ಕಂದ ಉನ್ನತೋನ್ನತ ಹುದ್ದೆಗೆ ಏರಿದಂತೆಲ್ಲ ಹಿರಿದು ಹಿಗ್ಗುವ ಜೀವಿ. 

ತಾಯಿ ಮಮಕಾರದ ಸಾಕಾರ ಮೂರ್ತಿ, ನಾವು ಸಾಮಾನ್ಯವಾಗಿ ನಮ್ಮಮ್ಮನಿಗೆ ಕೊನೆ ಮಗನ್ನ ಕಂಡ್ರೇನೇ ಪ್ರೀತಿ, ನನ್ನ ಬಗ್ಗೆ ಅಷ್ಟಕ್ಕಷ್ಟೇ ಎನ್ನುವ ಮಾತಾಡುತ್ತೇವೆ. ಆದರೆ, ತಾಯಿಗೆ ಎಲ್ಲ ಮಕ್ಕಳೂ ಒಂದೇ, ಆಕೆಗೆ ಎಲ್ಲ ಮಕ್ಕಳೂ ಕಣ್ಣುಗಳಿದ್ದಂತೆ. ತಾಯಿ ಎಂದೂ ಒಂದು ಕಣ್ಣಿಗೆ ಸುಣ್ಣ, ಮತ್ತೊಂದು ಕಣ್ಣಿಗೆ ಬೆಣ್ಣೆ ಹಚ್ಚಲಾರಳು. 

ತಾಯಿಯ ಹೃದಯ ಬಹು ಮೃದು, ಮಮಕಾರದ ಹಿಮವತ್ಪರ್ವತ. ಮಾತೃ ಹೃದಯದ ಬಗ್ಗೆ ಒಂದು ಜನಪ್ರಿಯ ಕಥೆ ಇದೆ... 

ನಿನ್ನ ತಾಯಿಯನ್ನು ಕೊಂದು ಆಕೆಯ ಹೃದಯವನ್ನು ತಂದು ನನಗೆ ಕೊಟ್ಟರೆ ಮಾತ್ರ, ನಾನು ನಿನ್ನ ನ್ನು ಮದುವೆ ಆಗುವೆ ಎಂದು ಪ್ರಿಯತಮೆಯೊಬ್ಬಳು ಹಠ ಹಿಡಿಯುತ್ತಾಳೆ.

ತನ್ನ ಪ್ರಿಯತಮೆಯನ್ನು ಮೆಚ್ಚಿಸಿ, ಮದುವೆಯಾಗಲು ಆ ಹುಚ್ಚು ಪ್ರೇಮಿ, ಮನೆಗೆ ಹೋಗಿ ತಾಯಿಯನ್ನು ಕೊಂದು, ಆಕೆಯ ಎದೆಸೀಳಿ ಹೃದಯ ಕಿತ್ತುಕೊಂಡು ಆತುರಾತುರವಾಗಿ ತನ್ನ ಇನಿಯೆಯ ಬಳಿಗೆ ಓಡಿದನಂತೆ. 

ಹೀಗೆ ಓಡುತ್ತಿದ್ದಾಗ ಅವ, ಕಲ್ಲೆಡವಿ ಕೆಳಗೆ ಬಿದ್ದ. ಆಗ ತಾಯಿಯ ಹೃದಯ ಕೇಳಿತಂತೆ. ಏನು ಮಗು ಜೋರಾಗಿ ಬಿದ್ದೆಯಾ? ನೋವಾಯಿತೆ? ಅಯ್ಯೋ ಪಾಪ ಎಂದು ಮಮ್ಮಲ ಮರುಗಿತಂತೆ. ಆ ಹುಚ್ಚು ಪ್ರೇಮಿಗೆ ಆಗ ಮಾತೃವಾತ್ಸಾಲ್ಯದ ಬೆಲೆ ತಿಳಿಯಿತು. ಆದರೆ, ಅಷ್ಟೊತ್ತಿಗಾಗಲೇ ಕಾಲ ಮಿಂಚಿತ್ತು. 

ತಾ ಹೆತ್ತ ಕೂಸು, ತನಗೆ ಎಷ್ಟೇ ಅನ್ಯಾಯ ಮಾಡಿದರೂ, ತಾಯಿ ತನ್ನ ಕಂದಮ್ಮನ ಹಿತಕ್ಕಾಗಿ ಮಿಡಿಯುತ್ತಾಳೆ, ತಾಯಿ ಸ್ವಾರ್ಥರಹಿತವಾದ ಮಮಕಾರ ಮೂರ್ತಿ. ತಾನು ಹೊಟ್ಟೆ ಬಟ್ಟೆ ಕಟ್ಟಿಯಾದರೂ ಆಕೆ, ತನ್ನ ಮಕ್ಕಳನ್ನು ಸಾಕುತ್ತಾಳೆ, ತಾನು ಅರೆಹೊಟ್ಟೆ ತಿಂದರೂ, ಮಕ್ಕಳಿಗೆ ಹೊಟ್ಟೆ ತುಂಬಾ ಉಣಬಡಿಸುತ್ತಾಳೆ. ಇಷ್ಟೆಲ್ಲಾ ಮಾಡಿದ ತಾಯಿಯನ್ನೂ ಮಕ್ಕಳು ಮರೆಯುವುದು ನಿಜಕ್ಕೂ ದುರ್ದೈವ.

ಅದಕ್ಕೇ ಹಿರಿಯರು ಹೇಳೋದು... ಒಬ್ಬ ತಾಯಿ ಹತ್ತು ಮಕ್ಕಳನ್ನೂ ಸಾಕುತ್ತಾಳೆ. ಆದರೆ, ಹತ್ತು ಮಕ್ಕಳು ಒಬ್ಬ ತಾಯಿಯನ್ನು ಸಾಕಲು ಹಿಂಜರಿಯುತ್ತಾರೆ. ವಾತ್ಸಲ್ಯ ಮಯಿಯಾದ ತಾಯಿಯನ್ನು ಆನಂದವಾಗಿರುವಂತೆ ನೋಡಿ ಕೊಳ್ಳುವುದು ಪ್ರತಿಯೊಬ್ಬ ಮಗನ ಕರ್ತವ್ಯ. ಆ ಅಂದಹಾಗೆ ಏಳೇಳು ಜನ್ಮ ಎತ್ತಿದರೂ ತಾಯಿಯ ಋಣ ಮಾತ್ರ ತೀರಿಸಲು ಸಾಧ್ಯವೇ ಇಲ್ಲ. ಇಂದಾದರೂ, ತಾಯಿಯ ನೆನೆಯೋಣ, ನಮಗರಿವಿಲ್ಲದೆ ತಪ್ಪ ಮಾಡಿದ್ದರೆ ತಿದ್ದಿಕೊಳ್ಳೋಣ. ತಾಯಿಯ ಮಮತೆಯ ಅಮೃತ ಸವಿಯುತ್ತಾ ನೂರ್ಕಾಲ ಬಾಳೋಣ.

ಮುಖಪುಟ /ನಮ್ಮಹಬ್ಬಗಳು