ಮುಖಪುಟ /ನಮ್ಮಹಬ್ಬಗಳು    

ಶ್ರಾವಣದಿ ಸುಮಂಗಲಿಯರು ಶ್ರದ್ಧಾಭಕ್ತಿಯಿಂದ ಆಚರಿಸುವ ಮಂಗಳಗೌರಿ ವ್ರತ
ಮಾಂಗಲ್ಯ ರಕ್ಷಣೆಗೆ ಮಾನಿನಿಯರು ಆಚರಿಸುವ ವ್ರತವಿದು

Gokarna_gowriಹಿಂದೂ ಧರ್ಮದ ಆಚರಣೆಯ ರೀತ್ಯ ಸುಮಂಗಲಿಯರು, ಅದರಲ್ಲೂ ಕನ್ನಡನಾಡಿನ ಹೆಣ್ಣುಮಕ್ಕಳು ಶ್ರಾವಣ ಮಾಸದ ಎಲ್ಲ ಮಂಗಳವಾರಗಳಂದು ಶ್ರದ್ಧಾಭಕ್ತಿಯಿಂದ ಆಚರಿಸು ವ್ರತವೇ ಮಂಗಳಗೌರಿ ವ್ರತ. ಮದುವೆಯಾದ ಮೊದಲ ಐದು ವರ್ಷಗಳ ಕಾಲ ಮಂಗಳಗೌರಿ ವ್ರತವಾಚರಿಸಿ, ಕೊನೆಯ ವರ್ಷ ತಾಯಿಗೆ ಕೊಬ್ಬರಿ, ಬೆಲ್ಲ, ಬಳೆ ಬಿಚ್ಚಾಲೆ, ಕುಪ್ಪಸ, ಸೀರೆಯೇ ಮೊದಲಾದ ಮಂಗಳದ್ರವ್ಯದ ಬಾಗಿನ ನೀಡುವುದು ವಾಡಿಕೆ. ಶಕ್ತರು ಬೆಳ್ಳಿ ಅಥವಾ ಚಿನ್ನಾಭರಣಗಳನ್ನೂ ನೀಡುತ್ತಾರೆ.

ಬಾಗಿನ ನೀಡುವ ಮೊದಲು ಮಂಗಳದ್ರವ್ಯವನ್ನು ಗೌರಿಯ ಮುಂದೆ ಇಟ್ಟು, ಕಲ್ಪೋಕ್ತಕ್ರಮದಲ್ಲಿ ಪೂಜಿಸಿ ವ್ರತಕಥೆಯನ್ನು ಓದುತ್ತಾರೆ. ಕತೆ ಓದುವ ಸಮಯದಲ್ಲಿ ಮಗುಚುವ ಕೈಯನ್ನು ತಂಬಿಟ್ಟಿನ ಆರತಿಯ ದೀಪದ ಮೇಲೆ ಹಿಡಿದು ಕಾಡಿಗೆ ಮಾಡಿಕೊಂಡು ಕಣ್ಣುಗಳಿಗೆ ಹಚ್ಚಿಕೊಳ್ಳುತ್ತಾರೆ.

ಇದಕ್ಕೂ ಮುನ್ನ ತಟ್ಟೆಯೊಂದರಲ್ಲಿ ಅಕ್ಕಿ ಹಾಕಿ, ಅದರ ಮೇಲೆ ಕಳಶವಿಟ್ಟು, ಕಳಶದಲ್ಲಿ ಅಕ್ಷತೆಕಾಳು, ದಕ್ಷಿಣೆ, ನಾಣ್ಯ, ನೀರು ಹಾಗೂ ವಿಳ್ಯದ ಎಲೆ ಇಟ್ಟು, ಕಳಶದ ಮುಂದೆ ಪುಟ್ಟ ಕನ್ನಡಿ ಇಟ್ಟು ಮೊದಲು ಗಣಪತಿ ವಿಗ್ರಹ ಪೂಜಿಸಿ, ಒಂದು ಅಚ್ಚು ಬೆಲ್ಲದ ಮೇಲೆ ಅರಿಶಿನದ ಗೌರಿ ಮಾಡಿ, ಅದಕ್ಕೆ ಚಂದ್ರ, ಕುಂಕುಮ, ಹೂ ಪತ್ರೆಗಳಿಂದ ಪೂಜಿಸಿ, ದೇವರ ಮುಂದೆ ಐದೈದು ವಿಳ್ಳೆಯದೆಲೆ, ಐದು ಬಟ್ಟಲ ಅಡಿಕೆ, ಕೊಬ್ಬರಿ ಹೋಳು ಅಥವಾ ಗಿಟಕು, ಹಾಗೂ ತ್ರಿಕೋನಾಕಾರವಾಗಿ ಮಡಚಿದ ಕುಪ್ಪಸದ ಬಟ್ಟೆ ಇಟ್ಟು ದೇವಿಯ ಆವಾಹನೆ ಮಾಡಿ, ಮಂಗಳಗೌರಿಯ ಪೂಜೆ ಮಾಡುತ್ತಾರೆ.

ತಮಗೆ ಮಂಗಳವನ್ನುಂಟು ಮಾಡುವಂತೆ ಪ್ರಾರ್ಥಿಸುವ ಮಾನಿನಿಯರು, ತಮ್ಮ ಮಾಂಗಲ್ಯ ಭಾಗ್ಯ ಕಾಪಾಡುವಂತೆ ಕೋರುತ್ತಾರೆ. ಶ್ರಾವಣಮಾಸದಲ್ಲಿ ಎಲ್ಲ ಮಂಗಳವಾರಗಳಂದೂ ಈ ವ್ರತ ಆಚರಿಸುತ್ತಾರೆ. ಆನಂತರ ಕಡಲೆಬೇಳೆ ಇಲ್ಲವೆ, ಹೆಸರು ಬೇಳೆ ಕೊಸಂಬರಿ ಮಾಡಿ, ಬಾಳೆಹಣ್ಣು ಇಲ್ಲವೆ ತೆಂಗಿನಕಾಯಿಯನ್ನು ಇಟ್ಟು ಐದು ಜನ ಮುತ್ತೈದೆಯರಿಗೆ ಕುಂಕುಮ ಕೊಡುತ್ತಾರೆ. ಕೆಲವರು ಮೊರದ ಬಾಗಿನವನ್ನೂ ನೀಡುತ್ತಾರೆ.

ಮುಖಪುಟ /ನಮ್ಮಹಬ್ಬಗಳು