ಮುಖಪುಟ /ನಮ್ಮಹಬ್ಬಗಳು    

ವಿಜಯನಗರದ ಮಹಾನವಮಿ ದಿಬ್ಬ

*ಚಿತ್ರ ಲೇಖನ: ಪಿ.ಸತ್ಯನಾರಾಯಣ, ಹೊಸಪೇಟೆ.

Mahanavamidibbaಬಹಳ ಹಿಂದೆ ಧಾರ್ಮಿಕ ಆಚರಣೆ ಮಾತ್ರವಾಗಿದ್ದ ವಿಜಯದಶಮಿ ಹಬ್ಬ ವಿಜಯನಗರದ ಅರಸರ ಕಾಲದಲ್ಲಿ ನಾಡಹಬ್ಬವಾಗಿ ಮನ್ನಣೆ ಪಡೆಯಿತು. ಅರಸರು ನಾಡಹಬ್ಬದ ಸಂಭ್ರಮವನ್ನು ಬಳಸಿಕೊಂಡು ಸಾಮ್ರಾಜ್ಯದ ಸಂಪತ್ತು, ಸಾರ್ವಭೌಮತ್ವ ಸೇನಾ ಶಕ್ತಿ, ನಾಡಿನ ಪ್ರತಿಭೆ ಹಾಗೂ ಪ್ರತಿಷ್ಠೆಯನ್ನು ಜಗತ್ತಿಗೇ ಪರಿಚಯಿಸುವ ಮಹತ್ಕಾರ್ಯ ಮಾಡಿದರು ಎಂದು ಈ ಎಲ್ಲ ಘಟನಾವಳಿಗಳನ್ನು ಪ್ರತ್ಯಕ್ಷ ಕಂಡ ವಿದೇಶೀ ಪ್ರವಾಸಿಗರು ತಮ್ಮ ಬರಹಗಳಲ್ಲಿ ದಾಖಲಿಸಿದ್ದಾರೆ.

ದಸರ ಆಚರಣೆಗಾಗಿ ಮಹಾ ಮಂಟಪವನ್ನು ಕಟ್ಟಿ ವಿಜಯಸೌಧ ಎಂದು ರಾಯರು ಕರೆಯುತ್ತಿದ್ದರು. ಇದು ಅರಸರ ವಿಜಯದಶಮಿ ಹಬ್ಬದಾಚರಣೆಯ ಕೇಂದ್ರ ಬಿಂದುವಾಗಿತ್ತು. ಈ ಸೌಧದ ಅವಶೇಷಗಳು ಇಂದಿಗೂ ಇಲ್ಲಿ ತಮ್ಮ ಗತವೈಭವದ ಕಥೆಯನ್ನು ಹೇಳುತ್ತಲಿವೆ. ಮಹಾನವಮಿ ದಿಬ್ಬ ವಿಜಯ ಮಂಟಪ ಇದಕ್ಕೆ ಸಾಕ್ಷಿಯಾಗಿದೆ. ರಾಜ ಪ್ರಾಂಗಣದಲ್ಲಿ ಪಶ್ಚಿಮಾಭಿ ಮುಖವಾಗಿ ನಿರ್ಮಸಲಾಗಿರುವ ಈ ಮೂರು ಸ್ತರದ ಉನ್ನತವಾದ ಮಹನವಮಿದಿಬ್ಬವು ಸುಮಾರು 8 ಮೀಟರ್‌ನಷ್ಟು ಎತ್ತರವಾಗಿದ್ದು, 35ಚ.ಮೀ ಚತರುಸ್ತವವಾಗಿದೆ. ಈ ವೇದಿಕೆಯ ಪೂರ್ವ, ಪಶ್ಚಿಮ ಹಾಗೂ ದಕ್ಷಿಣ ದಿಕ್ಕಿನಲ್ಲಿ ಪ್ರವೇಶ ಸೋಪಾನವಿದ್ದು, ಈ ಸೋಪಾನಗಳಿಗೆ ಗಜ ಶಾರ್ದೂಲಗಳಿಂದ ಅಲಂಕೃತ ಕಂಟಾಂಜನವಿದೆ. ಪಶ್ಚಿಮದ ಸೋಪಾನಗಳನ್ನು ಕಟ್ಟಡದ ಮಧ್ಯಭಾಗದಲ್ಲಿ ಬರುವಂತೆ ಅಳವಡಿಸಿದ್ದು, ಪೂರ್ವಭಾಗದ ಸೋಪಾನಗಳು ಒಂದು ದ್ವಾರ ಅಂತರ್ಗತ ಕೋಣೆಯಿಂದ ಹೊರಬರುತ್ತವೆ. ವೇದಿಕೆಯ ಪ್ರತಿಯೊಂದು ತಳವು ಅಂದವಾಗಿ ಕೆತ್ತಲ್ಪಟ್ಟ ಕುಮುದಗಳನ್ನು ಹೊಂದಿರುವುದಲ್ಲದೆ, ಕೆಳಸ್ತರದಲ್ಲಿ ಸಮಕಾಲಿನ ಸಮಾಜಿಕ, ಸಾಂಸ್ಕೃತಿಕ ಸೂಚಿಸುವ ಲಘು ಉಬ್ಬು ಶಿಲ್ಪಗಳ ಪಟ್ಟಿಕೆಗಳಿವೆ.

ವೇದಿಕೆಯ ಮೇಲ್ಬಾಗದಲ್ಲಿ ಸುಸಜ್ಜಿತವಾಗಿ ಜೋಡಿಸಲ್ಪಟ್ಟ ಸ್ತಂಭ ಪೀಠದ ಕಲ್ಲುಗಳು ದೊರೆತ್ತಿದ್ದು, ಅಂದಿನ ಕಾಲದಲ್ಲಿ ವಿಶಾಲವಾದ ಉನ್ನತವಾದ ಕಟ್ಟಡಗಳು ಇಲ್ಲಿದ್ದವು ಎಂಬ ಕುರುಹುಗಳಾಗಿವೆ. ಹಬ್ಬದ ದಿನಗಳಲ್ಲಿ ವಿಜಯನಗರದ ಅರಸರು ಈ ವೇದಿಕೆಯಿಂದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಸಮಾರಂಭಗಳಲ್ಲಿ ಭಾಗವಹಿಸುತ್ತಿದ್ದರೆಂದು ಸಮಕಾಲೀನ ಇತಿಹಾಸಕಾರರು ಉಲ್ಲೇಖಿಸಿದ್ದಾರೆ.

ಅರಸರ ಆಚರಣೆ :ನವರಾತ್ರಿ ಒಂಬತ್ತು ದಿನಗಳಲ್ಲಿ ವಿಜಯನಗರ ಮಹಾ ರಾಜಧಾನಿ ಇಡೀ ಹಂಪಿ ಪಟ್ಟಣ ರಾರಾಜಿಸುತ್ತಿತ್ತು. ಹತ್ತನೇಯ ದಿನ ವಿಜಯದಶಮಿಯಂದು ಅರಸರು ದಿನವಿಡೀ ಉಪವಾಸವಿದ್ದು, ವಿಧಿವತ್ತಾವಾಗಿ ಆಚರಿಸುತ್ತಿದ್ದರು. ವಿಜಯಸಾಧನೆಯ ಸಂಕೇತವಾಗಿದ್ದ ತಮ್ಮ ಶಕ್ತಿ, ಸಾಹಸ, ಸಂಪತ್ತುಗಳನ್ನು ವಿಜೃಂಭಣೆಯಿಂದ ಕೊನೆಯ ದಿನ ಪ್ರದರ್ಶಿಸಿ, ದಶಮಿ ದಿನವನ್ನು ಅರ್ಥಪೂರ್ಣಗೊಳಿಸುತ್ತಿದ್ದರು. ಒಂಬತ್ತು ದಿನಗಳನ್ನು ವಿಜಯದಶಮಿ ಉತ್ಸವಕ್ಕಾಗಿ ಮೀಸಲಿಡುತ್ತಿದ್ದ ಅರಸರು, ಬೆಳಗಿನ ಅರ್ಧ ದಿನವನ್ನು ಪೂಜೆ, ಯಜ್ಞ, ಯಾಗ, ಬಲಿ ಮುಂತಾದವಕ್ಕೂ ಮಧ್ಯಾಹ್ನದ ಉಳಿದರ್ಧವನ್ನು ವೈಭವ ಪ್ರದರ್ಶನಕ್ಕೂ ವಿನಿಯೋಗಿಸಿಕೊಳ್ಳುತ್ತಿದ್ದರು. ಬೆಳಗಿನ ಪೂಜೆಯು ವಿಜಯಸೌಧದ ಮೇಲೆ ಕಟ್ಟಿದ ಪಟಗುಡಿಯಲ್ಲಿ ಆರಂಭಗೊಳ್ಳುತ್ತಿತ್ತು. ಗಜರಾಜ, ರಾಜಶ್ವಗಳ ಪೂಜೆ, ಕುರಿಕೋಣಗಳ ಬಲಿ, ಯಜ್ಞ ಯಾಗಾದಿಗಳ ಆಚರಣೆಗಳನ್ನು ಒಳಗೊಂಡ ಆಚರಣೆಯಲ್ಲಿ ಪುರೋಹಿತರ ಮಾರ್ಗದರ್ಶನ, ಪರಿವಾರದವರ ಸಹಯೋಗ ಅರಸರಿಗೆ ಇರುತ್ತಿತ್ತು.

ಅರಸರು ಆ ದಿನದಂದು ಆಹಾರ ಸೇವಿಸುತ್ತಿರಲ್ಲಿಲ್ಲ. ರಾತ್ರಿಯ ಕಾರ್ಯಕ್ರಮಗಳೆಲ್ಲ ಮುಗಿದ ನಂತರವೇ ಉಪವಾಸ ಮುರಿದು ಅವನು ಉಪಾಹಾರ ಸೇವಿಸುತ್ತಿದ್ದರು. ಎರಡನೆಯ ಸುತ್ತಿನ ಕಾರ್ಯಕ್ರಮವು ಮಧ್ಯಾಹ್ನ 3ಕ್ಕೆ ಆರಂಭವಾಗಿ ಮಧ್ಯರಾತ್ರಿವರಗೆ ಮುಂದುವರೆಯುತ್ತಿತ್ತು. ರಾಜವೈಭವ, ಸೇನಾಶಕ್ತಿ, ಕಲೆ ಮತ್ತು ಸಾಹಸ ಪ್ರದರ್ಶನ ಕಾರ್ಯಕ್ರಮಗಳಲ್ಲಿ ರಾಜ್ಯದ ಅತ್ಯಂತ ಪ್ರತಿಷ್ಠಿತ ವರ್ಗದವರು, ನಿಪುಣ ಕಲಾವಿದರು, ಆಪ್ತಪರಿವಾರವು, ಅಧೀನ ಅರಸರು, ದಂಡನಾಯಕರು, ಬ್ರಾಹ್ಮಣರು ಚತುರ ಕ್ರೀಡಾಪಟುಗಳು ನಿಷ್ಣಾತ ನಾಟ್ಯ ಸಂಗೀತ ವಾದ್ಯವೃಂದಗಳ, ವಿಶೇಷ  ಗೌರವಾನ್ವಿತರು ವಿದೇಶಿಯರು ಪಾಲ್ಗೊಳ್ಳುತ್ತಿದ್ದರು. ಆದರೆ, ಅರಸರ ಅಂಗರಕ್ಷಕರನ್ನು ಬಿಟ್ಟು ಬೇರಾವ ಆಯುಧಧಾರಿ ಈ ಅಂಗಳದೊಳಗೆ ಕಾಲಿಡುವಂತಿರಲಿಲ್ಲ. ಅಲ್ಲದೆ, ಆವರಣದೊಳಗೆ ನಡೆಯುತ್ತಿದ್ದ ಹಬ್ಬದಾಚಣೆಯ ದೃಶ್ಯಭಾಗ್ಯವು ಜನ ಸಮಾನ್ಯನಿಗೆ ಗಗನಕುಸುಮವಾಗಿತ್ತು. ಏಕಂದರೆ ಅರಮನೆಯ ಆಹ್ವಾನವಿಲ್ಲದವರಾರಿಗೂ ಈ ಅಂಗಳದಲ್ಲಿ ಪ್ರವೇಶವಿರಲಿಲ್ಲ. ದಸರೆಯ ಉತ್ಸವ ಕಾಲದಲ್ಲಿ ರಾಜ್ಯದ ಸಾಮಂತರೆಲ್ಲರೂ ತಮ್ಮ ಸೈನ್ಯವನ್ನು ಕರೆತಂದು ಅರಸನೆದರು ಪ್ರದರ್ಶಿಸುತ್ತಿದ್ದರು. ಸಮರ್ಥರಿಗೆ ಪುರಸ್ಕಾರ, ಮೋಸಗಾರರಿಗೆ ಅಸಮರ್ಥರಿಗೆ ಶಿಕ್ಷೆ ಈ ದಶಮಿಯ ಕಾರ್ಯಕ್ರಮದ ಪ್ರಧಾನ ಗುರಿಯಾಗಿತ್ತು.

ದಶಮಿದಿನದ ಸೇನಾ ಪರಿವೀಕ್ಷಣಾ ಕಾರ್ಯಕ್ರಮವು ಮಹಾರಾಜಧಾನಿ ಪಟ್ಟಣದ ಆರೆಂಟು ಮೈಲು ವಿಸ್ತಾರದ ಪ್ರದೇಶದಲ್ಲಿ ನಡೆಯುತ್ತಿತ್ತು. ಸೈನ್ಯ ಪ್ರದರ್ಶನಕ್ಕಾಗಿ ವಿಶೇಷ ಅಟ್ಟಗಳನ್ನು ನಿರ್ಮಸಲಾಗುತ್ತಿತ್ತು. ಗಜ, ಅಶ್ವ, ಕಾಲ್ದಳ ಬಿಲ್ಲಾಳು ಹಾಗೂ ತುರು ಕರು ಪಡೆಗಳು ತಮ್ಮ ಪಶುಗಳನ್ನು ವಿಶೇಷವಾಗಿ ಅಲಂಕರಿಸಿ, ಮಹಾರಾಜಧಾನಿ ಪಟ್ಟಣದ ದಂಡನಾಯಕರು ತಾವು ಸಿಂಗರಿಸಿಕೊಂಡು ಥಳ ಥಳ ಹೊಳೆಯುವ ಆಯುಧಗಳನ್ನು ಹಿಡಿದು ನಿಂತ ಶಿಸ್ತಿನ ಸೊಬಗನ್ನು ಸ್ವತಃ ವಿದೇಶಿ ಪ್ರವಾಸಿಗರನ್ನು ಮೆಚ್ಚುಕೆ ವ್ಯಕ್ತಪಡಿಸಿ ಇತಿಹಾಸ ಪುಟಗಳಲ್ಲಿ ದಾಖಲಿಸಿದ್ದಾರೆ. ಸಜ್ಜಾದ ಠೀವಿಯನ್ನು ವೀಕ್ಷಿಸಲು ಬರುತ್ತಿದ್ದ ಅರಸನ ಮುಂದೆ ಮೈಯಲ್ಲ ಅಲಂಕರಿಸಿಕೊಂಡ ಆನೆಗಳು, ಅವುಗಳ ಹಿಂದೆ 20ಜೊತೆ ಪಲ್ಲಣಪೋಷಿತ ರಾಜಾಶ್ವಗಳಿರುತ್ತಿದ್ದವು.  ವಿರೂಪಾಕ್ಷ ವಿಗ್ರಹನ್ನೊಳಗೊಂಡ ರಜತ ಸಿಬಿಕೆಯನ್ನು ಹೊತ್ತ ಹದಿನಾರು ಜನ ಬೋವಿಗಳೊಡನೆ ಪಡೆಯಾಳುಗಳು ಮಾಡುತ್ತಿದ್ದ ಜಯಕಾರದ ಆರ್ಭಟ, ಕೊನೆಯುತ್ತಿದ್ದ ಅಶ್ವಗಳ ಹೇಷಾರವ, ಗಜಘಟಾಳಿಯ ಘರ್ಜನೆ, ಬೆಟ್ಟ ಕಣಿವೆಗಳನೆಲ್ಲಾ ನಡುಗುಟ್ಟಿಸುವಂತ್ತಿತ್ತು. ಸಿಡಿಸಿದ ಬಾಣಬಿರುಸು, ಮದ್ದುಗುಂಡು, ಪೆಟಲು ರಾಟಳಗಳಿಂದ ತೂರಿಬಂದ ಅಗ್ನಿಪುಷ್ಪಗಳ ಸುರಿಮಳೆ ಸೊಬಗನ್ನು ಎಂತವರನ್ನು ಮಂತ್ರಮಗ್ನರಾಗಿಸಿತ್ತು ಎಂದು ಇತಿಹಾಸ ಪುಟಗಳಲ್ಲಿ ಪ್ರವಾಸಿಗರು ಬರೆದಿಟ್ಟಿದ್ದಾರೆ. ಇಂತಹ ಅನೇಕ ದಾಖಲೆಗಳನ್ನು ಅಧ್ಯಯನ ಹಾಗೂ ಸಂಶೋಧನೆಗಳಿಂದ ಪುಸ್ತಕ ರೂಪದಲ್ಲಿ ಹೊರತಂದು ಹಂಪಿ ವಿಜಯನಗರ ವೈಭವವನ್ನು ಪ್ರತಿಯೊಬ್ಬ ಒದುಗರಿಗೆ ಕೈಗೆಟುಗುವಂತೆ ಮಾಡಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಅಭಿನಂಧನೆ ಸಲ್ಲಲೇಬೇಕು.

ಮುಖಪುಟ /ನಮ್ಮಹಬ್ಬಗಳು