ಮುಖಪುಟ /ನಮ್ಮಹಬ್ಬಗಳು    

ಮಗನಿಗೆ ಮೊದಲೇ ಬರುವ ಗೌರಮ್ಮ

ವಾಗ್ಮಿತ್ರ

Gowri Ganeshaಮದುವೆಯಾದ ಹೆಣ್ಣು ಮಕ್ಕಳಿಗೆ ತವರು ಮನೆ ಎಂದರೆ ಬಲು ಪ್ರೀತಿ. ತಾಯಿದ್ರೆ ತವರು ಹೆಚ್ಚು, ತಂದಿದ್ರ ಬಳಗ ಹೆಚ್ಚು ಎಂಬ ಮಾತೇ ಇದೆ. ಮದುವೆಯಾಗಿ ಬೇರೆ ಊರಿಗೆ ಹೋಗಿ ಇಲ್ಲವೇ ಬೇರೆ ಮನೆಯಲ್ಲಿ ಪತಿಯೊಂದಿಗೆ ಸಂಸಾರ ಮಾಡುವ ಹೆಣ್ಣು ಮಕ್ಕಳು ವರ್ಷಕ್ಕೊಮ್ಮೆಯಾದರೂ ತವರಿಗೆ ಹೋಗಲಿ ಎಂಬುದು ಗೌರಿ ಹಬ್ಬದ ಸಂಕೇತ ಎಂದರೆ ತಪ್ಪಲ್ಲ.

ಗೌರಿ ಎಂಬುದು ಶಿವನ ಸತಿ ಪಾರ್ವತಿಯ ಮತ್ತೊಂದು ನಾಮ. ಪಾರ್ವತಿಯ ತಂದೆ ಪರ್ವತರಾಜ. ಅಂದರೆ ಹಿಮಾಲಯವಿರುವ ಭಾರತ (ಭೂಲೋಕ). ಶಿವನನ್ನು ವರಿಸಿ ಕೈಲಾಸದಲ್ಲಿ ನೆಲೆಸಿಹ ಗೌರಿ ವರ್ಷಕ್ಕೊಮ್ಮೆ ತವರಿಗೆ (ಭೂಮಿಗೆ) ಬಂದು ಪೂಜೆ ಸ್ವೀಕರಿಸಿ, ಹೆಣ್ಣು ಮಕ್ಕಳಿಂದ ಬಾಗಿನ ಪಡೆದು ಸಂತೃಪ್ತಳಾಗಿ ಕೈಲಾಸಕ್ಕೆ ಹೋಗುತ್ತಾಳೆ ಎಂಬುದು ನಂಬಿಕೆ.

ಗೌರಿ ಮಂಗಳ ದಾಯಿನಿ. ಹೀಗಾಗೇ ಆಕೆಗೆ ಮಂಗಳಗೌರಿ ಎಂದೂ ಕರೆಯುತ್ತಾರೆ. ಹಿಂದೂ ಸಂಪ್ರದಾಯದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಮದುವೆಗೆ ಮುನ್ನ ವಧುವಿನಿಂದ ಗೌರಿ ಪೂಜೆ ಮಾಡಿಸುವುದೂ ರೂಢಿಯಲ್ಲಿದೆ.

Gowri, Gokarnaಮದುವೆಯಾದ ಹೆಣ್ಣು ಮಕ್ಕಳು ಪ್ರತಿ ವರ್ಷ ಭಾದ್ರಪದ ಶುಕ್ಲ ತೃತೀಯ (ತದಿಗೆ)ಯ ದಿನ ಗೌರಿ ಹಬ್ಬವನ್ನು ಆಚರಿಸುತ್ತಾರೆ.  ಮದುವೆಯಾದ ಮೊದಲ ವರ್ಷ ಹೆಣ್ಣು ಮಕ್ಕಳು ತಮ್ಮ ತವರಿಗೇ ಹೋಗಿ ಗೌರಿ ಹಬ್ಬ ಆಚರಿಸುವುದು ವಾಡಿಕೆಯಾಗಿದೆ. ಈ ಹಬ್ಬಕ್ಕೆ ಸಾಮಾನ್ಯವಾಗಿ ಮಗಳು ಮಾತ್ರ ತವರಿಗೆ ಹೋಗುತ್ತಾಳೆ. ಅಳಿಯ ಹೋಗುವುದಿಲ್ಲ. ಅಳಿಯ ತನ್ನ ಮನೆಯಲ್ಲೇ ಗಣಪನ ಪೂಜೆ ಮಾಡಲಿ ಎಂದು ಬೆಳ್ಳಿಯ ಗಣಪನ ವಿಗ್ರಹ ನೀಡುವ ಸಂಪ್ರದಾಯವೂ ಕೆಲವೆಡೆ ಇದೆ. ಗತಿಗೆಟ್ಟ ಅಳಿಯ ಗೌರಿ ಹಬ್ಬಕ್ಕೆ ಹೋದ ಎಂಬ ಗಾದೆಯೂ ಕರ್ನಾಟಕದಲ್ಲಿ ಪ್ರಚಲಿತವಾಗಿದೆ.

ಗಣಪನಿಗೆ ಒಂದು ದಿನ ಮೊದಲೇ ತವರಿಗೆ ಬರುವ ಗೌರಿಯನ್ನು ಆದರದಿಂದ ಬರಮಾಡಿಕೊಂಡು ಪೂಜಿಸಲು ಸುಮಂಗಲಿಯರು ಕಾತರಿಸುತ್ತಾರೆ. ಗೌರಿಯ ಪೂಜೆ ಮಾಡಿದರೆ ತಮ್ಮ ಮಾಂಗಲ್ಯ ಗಟ್ಟಿಯಾಗಿರುತ್ತದೆ ಎಂಬುದು ಜೊತೆಗೆ ತಮ್ಮ ಮನೋ ಕಾಮನೆಗಳೆಲ್ಲವೂ ಈಡೇರುತ್ತದೆ ಎಂಬುದು ಮಾನಿನಿಯರ ನಂಬಿಕೆ.

ಭಾದ್ರಪದ ತದಿಗೆಯ  ದಿನ ಮನೆಯಲ್ಲಿ ಮಂಟಪ ನಿರ್ಮಿಸಿ ಬಾಳೆ ಕಂದು, ಮಾವಿನ ತೋರಣ ಕಟ್ಟಿ ಅಲಂಕಾರ ಮಾಡಿ, ಮಣ್ಣಿನ, ಚಿನ್ನದ, ಬೆಳ್ಳಿಯ ಇಲ್ಲವೇ ಹರಿಶಿನದ ಗೌರಿಯನ್ನು ಕೂರಿಸಿ, ಕಂಕಣ ಧರಿಸಿ ಹೂವು, ಪತ್ರೆ, ಗೆಜ್ಜೆ ವಸ್ತ್ರದಿಂದ  ಪೂಜಿಸುತ್ತಾರೆ. ಪೂಜೆಯ ಬಳಿಕ ಉಪಾಯನದಾನವನ್ನು ನೀಡಿ, ಮುತ್ತೈದೆಯರಿಗೆ ಬಳೆ, ಬಿಚ್ಚಾಲೆ, ಕಣ, ಬೇಳೆ, ಬೆಲ್ಲ, ತೆಂಗಿನಕಾಯಿ ಇತ್ಯಾದಿ ತುಂಬಿದ ಮೊರದ ಬಾಗಿನ ನೀಡುತ್ತಾರೆ. ಗಣಪನ ಪೂಜೆಯ ಬಳಿಕ ವಿಸರ್ಜನೆ ಮಾಡಿ ಗಣಪನೊಂದಿಗೆ ಗೌರಿಯನ್ನೂ ನೀರಿನಲ್ಲಿ ಬಿಡುತ್ತಾರೆ. 

ಮುಖಪುಟ /ನಮ್ಮಹಬ್ಬಗಳು