ಮುಖಪುಟ /ನಮ್ಮಹಬ್ಬಗಳು    

ಗೋಕಲಾಷ್ಟಮಿ ಅಥವಾ ಕೃಷ್ಣಾಷ್ಟಮಿಯ ವ್ರತ ಕಥಾಸಾರ
 ದಶಾವತಾರಿ ಶ್ರೀಕೃಷ್ಣ ಜನ್ಮಾಷ್ಟಮಿ

Lord Krishna, ಕೃಷ್ಣ ಜನ್ಮಾಷ್ಟಮಿ, ಕೃಷ್ಣ ಭಗವಾನ್ಗೋಕಲಾಷ್ಟಮಿ, ದಶಾವತಾರಿ ಶ್ರೀಕೃಷ್ಣ ಪರಮಾತ್ಮನು ಜನಿಸಿದ ದಿನ. ದುಷ್ಟ ಸಂಹಾರಕ್ಕಾಗಿ, ಶಿಷ್ಟ ರಕ್ಷಣೆಗಾಗಿ ದ್ವಾಪರ ಯುಗದಲ್ಲಿ ಜನ್ಮತಳೆದ ನಾರಾಯಣನು ಶ್ರೀಕೃಷ್ಣಾವತಾರದಲ್ಲಿ ಭಗವದ್ಗೀತೆಯ ಮೂಲಕ ಅತ್ಯಮೂಲ್ಯ ಜೀವನ ಸತ್ಯಗಳನ್ನೂ, ಬದುಕಿನ ಸಾರವನ್ನೂ ಜಗತ್ತಿಗೇ ಸಾರಿದ್ದಾನೆ.

ಇಂತಹ ಮಹಾನುಭಾವನ ಜನ್ಮದಿನದಂದು ವ್ರತ ಆಚರಿಸುವವರು ಸ್ನಾನಾದಿಗಳ ಬಳಿಕ ನಿರಾಹಾರದಿಂದ ತುಳಸೀಮಿಶ್ರಿತ ನೀರನ್ನು ತಲೆಯ ಮೇಲೆ ಪ್ರೋಕ್ಷಸಿಕೊಂಡು, ಆನಂತರ ವ್ರತಾಚರಣೆ ಮಾಡಬೇಕು. ಈ ವ್ರತಾಚರಣೆಯಿಂದ ಜನ್ಮಜನ್ಮಗಳ ಪಾಪವು ಪರಿಹಾರವಾಗುತ್ತದೆ ಎಂದು ಪುರಾಣಗಳು ಹೇಳುತ್ತವೆ.

ಅಂದು ಕಳಶಪೂಜೆ, ಶಂಖಪೂಜೆ, ಪೀಠ ಪೂಜೆ ಮಾಡಿ, ಬಂಗಾರದಲ್ಲಾಗಲೀ, ಬೆಳ್ಳಿಯಿಂದಾಗಲೀ, ತಾಮ್ರದಿಂದಾಗಲೀ ಇಲ್ಲವೇ ಮಣ್ಣಿನಿಂದ ಮಾಡಿದ ಶ್ರೀಕೃಷ್ಣನ ಮೂರ್ತಿಯನ್ನು ಪೂಜಿಸುತ್ತಾರೆ. ಆಚಮನ, ದಧಿಕ್ಷೀರ, ಮಧುಪರ್ಕಾದಿಗಳಿಂದ ಪಂಚಾಮೃತ ಸ್ನಾನವನ್ನೂ, ನಾರಿಕೇಲದಿಂದ ಫಲೋದಕ ಸ್ನಾನವನ್ನೂ ಮಾಡಿಸಿ ಅರ್ಚಿಸುತ್ತಾರೆ.

Lord krishnaಆನಂತರ ಶ್ರೀಕೃಷ್ಣನಿಗೆ ಪೀತಾಂಬರಾದಿ ವಸ್ತ್ರಗಳಿಂದ, ಗಂಧ ಮೌಲ್ಯಾದಿ, ಅಕ್ಷತೆಯಿಂದ ಹಾಗೂ ಒಡವೆ ವಸ್ತ್ರಗಳಿಂದ ಸಿಂಗರಿಸಿ ಪೂಜಿಸುತ್ತಾರೆ. ಇದೇ ಸಮಯದಲ್ಲಿ ಶ್ರೀಕೃಷ್ಣನ ಜೊತೆ ಬಲಭದ್ರ, ದೇವಕಿ, ವಾಸುದೇವ, ರೋಹಿಣಿ, ಸುಭದ್ರೆ, ಯಶೋಧೆ, ದುರ್ಗಾದಿ ದೇವತೆಗಳನ್ನೂ ಪೂಜಿಸುತ್ತಾರೆ.

ಭವರೋಗದಿಂದ ದಾಟಿಸುವ ಭಗವಂತನಾದ ಶ್ರೀಕೃಷ್ಣ ಪರಮಾತ್ಮನನ್ನು ಧೂಪ, ದೀಪಾರತಿಗಳಿಂದಲೂ ಪೂಜಿಸುತ್ತಾರೆ. ಅರ್ಘ್ಯವನ್ನೂ ನೀಡುತ್ತಾರೆ. ಆನಂತರ ಯೋಗ್ಯ ಬ್ರಾಹ್ಮಣರಿಗೆ ಫಲದಕ್ಷಿಣಾದಿಗಳನ್ನು ನೀಡಿ ಸತ್ಕರಿಸುತ್ತಾರೆ. ತುಪ್ಪದಿಂದ ಕರಿದ ವಿವಿಧ ಬಗೆಯ ತಿಂಡಿ ತಿನಿಸುಗಳನ್ನು ಶ್ರೀಕೃಷ್ಣನಿಗೆ ನೈವೇದ್ಯ ಮಾಡುತ್ತಾರೆ. ಈ ರೀತಿ ಶ್ರೀಕೃಷ್ಣನ ಪೂಜಿಸುವವರು ಸಕಲ ಇಷ್ಟಾರ್ಥಗಳನ್ನೂ ಪಡೆಯುತ್ತಾರೆ.

ದಶಾವತಾರದ  ಕಿರುಪರಿಚಯ

ಮುಖಪುಟ /ನಮ್ಮಹಬ್ಬಗಳು