ಮುಖಪುಟ /ನಮ್ಮಹಬ್ಬಗಳು    

ವಿಶ್ವವಂದಿಪನೀ ಗಣಪ.... ಗಣಪನಿಲ್ಲದ ಮನೆಯೂ ಇಲ್ಲ, ಗ್ರಾಮವೂ ಇಲ್ಲ...

ಗಣಪ ಭಾರತದಲ್ಲಷ್ಟೇ ಅಲ್ಲ, ಹೊರದೇಶಗಳಲ್ಲೂ ನೆಲೆಸಿದ್ದಾನೆ. ಗಣಪ ಅನಾರ್ಯ ಸಂಪ್ರದಾಯದಿಂದ ಆರ್ಯದೇವ ಸಂಸ್ಕಾರ ಪಡೆದದ್ದು ಇಂದಿಗೂ ಬಿಡಿಸಲಾಗದ ಒಗಟು..

*ಜಯಲಕ್ಷ್ಮೀಸುತ

Dodda Ganesha, Basavanagudi, kannadaratna.com, ಕನ್ನಡರತ್ನ, ದೊಡ್ಡ ಗಣೇಶ, kannadaratna satish, T.M.Satish, ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭಾ
ನಿರ್ವಘ್ನಂ ಕುರು ಮೇ ದೇವ ಸರ್ವ ಕಾಯೇಷು ಸರ್ವದಾ

ವಿಘ್ನ ನಿವಾರಕ, ವಿಜಯ ಪ್ರದಾಯಕ ಗಣಪ, ಪ್ರತಿವರ್ಷ ಭಾದ್ರಪದ ಶುಕ್ಲ ಚೌತಿಯಂದು ಮನೆಮನೆಗೂ ಆಗಮಿಸಿ, ಪೂಜೆಯ ಸ್ವೀಕರಿಸುತ್ತಾನೆ. ಸಂಕಷ್ಟಗಳನ್ನೆಲ್ಲಾ ಪರಿಹರಿಸುವ ಗಣಪ ವಿದ್ಯಾದಿದೇವನೂ ಹೌದು. ಹೀಗಾಗಿ ಮಕ್ಕಳು ವಿದ್ಯಾಗಣಪನನ್ನೂ, ಸಿರಿಸಂಪತ್ ಬಯಸುವವರು ಸಂಪತ್ ಗಣಪನನ್ನೂ, ಕಾರ್ಯದಲ್ಲಿ ಜಯ ಪಡೆಯ ಬಯಸುವವರು ವಿಜಯ ವಿನಾಯಕನನ್ನೂ... ಹೀಗೆ ನಾನಾ ರೂಪಗಳಲ್ಲಿ ಗಣಪನ ಪೂಜಿಸುತ್ತಾರೆ.

ಗಣಪನ ಮೂರ್ತಿಯಿಲ್ಲದ ಮನೆಯಿಲ್ಲ, ಗಣಪನಿಲ್ಲದ ಗ್ರಾಮವಿಲ್ಲ. ಗಣಪ ಭಾರತದಲ್ಲಷ್ಟೇ ಅಲ್ಲ ವಿದೇಶಗಳಲ್ಲೂ ಬೀಡು ಬಿಟ್ಟಿದ್ದಾನೆ. ನೇಪಾಳ, ಚೀನಾ, ತುರ್ಕಿಸ್ಥಾನ, ಟಿಬೆಟ್, ಬರ್ಮಾ, ಸಯಾಂ, ಇಂಡೋನೇಸಿಯಾ, ಶ್ರೀಲಂಕಾ, ಜಾವಾ, ಸುಮಾತ್ರ, ಕಾಂಬೋಡಿಯಾ, ಬಾಲಿ, ಬೋರ್ನಿಯೋ, ಥೈಲ್ಯಾಂಡ್, ಜಪಾನ್, ಅಮೆರಿಕಾ, ಇಂಗ್ಲೆಂಡ್ ಮೊದಲಾದ ಕಡೆಗಳಲ್ಲೂ ಗಣಪನ ದೇವಾಲಯಗಳಿವೆ.

ಚೀನಾ, ಸಯಾಂ, ಟಿಬೆಟ್, ಜಾವಾ, ಸುಮಾತ್ರ, ಜಪಾನ್‌ನಲ್ಲಿರುವ ಗಣಪನ ಮೂರ್ತಿಗಳು ಜಗದ್ವಿಖ್ಯಾತಾವಾಗಿವೆ. ಗ್ರೀಕರು ಡರ್ಮಿನಸ್ ಹೆಸರಿನಲ್ಲೂ, ರೋಮನರು ಜಾನಸ್ ದೇವತೆಯ ಹೆಸರಲ್ಲಿ ವಿಘ್ನನಿವಾರಣೆಗೆ ದೇವರನ್ನು ಪೂಜಿಸುತ್ತಿದ್ದರು. ಈಜಿಪ್ಷನನ್ನರು ಕೂಡ ಗುನೇಸ್ (ಗುನೀಸ್) ಎಂಬ ದೇವರನ್ನು ಪೂಜಿಸುತ್ತಿದ್ದರು. ಈ ದೇವತೆಗೂ, ನಮ್ಮ ಗಣೇಶನ ಹೆಸರಿಗೂ ಬಹುತೇಕ ಸಾಮ್ಯವಿದೆ. ಮೆಕ್ಸಿಕೋ, ಪೆರು, ಅಮೆರಿಕಾ, ಇನ್ಕಾಗಳಲ್ಲೂ ಗಣಪನ ಪೂಜೆ ನಡೆಯುತ್ತಿದ್ದ ಸಂಗತಿ ಪ್ರಚಲಿತವಾಗಿದೆ. ಬ್ಯಾಂಕಾಕಿನ ದೇವಾಲಯದಲ್ಲಿ ಸುಂದರವಾದ ಕಂಚಿನ ಗಣಪನ ವಿಗ್ರಹವಿದೆ.

ಮಂಗೋಲಿಯಾದಲ್ಲಿ ನಾರ್-ಥಾನ್‌ನ ಐನೂರು ದೇವತೆಗಳಲ್ಲಿ ನೃತ್ಯರೂಪಿ ಗಣಪನೂ ಒಬ್ಬ. ಖೋಟಾನ್‌ನ ಸ್ತೂಪಗಳಲ್ಲಿ ಗಣಪನ ಆಕೃತಿ ಇದೆ. ಕಾಬೂಲಿಗೆ ಹತ್ತು ಮೈಲಿ ದೂರದಲ್ಲಿರುವ ಸಕರ್‌ಧರ್‌ನಲ್ಲಿ ಗಣಪನ ವಿಗ್ರಹವೇ ಸಿಕ್ಕಿದೆ.

ಶಂಕರ ವಂದಿತ : ಗಣಪನ ಪೂಜೆ ಇಂದು ನಿನ್ನೆಯದಲ್ಲ. ಇದಕ್ಕೆ ಪುರಾಣೇತಿಹಾಸವಿದೆ. ವೈದಿಕ ಯುಗದಲ್ಲಿ ಅಂದರೆ ಸುಮಾರು ೮ ಸಾವಿರ ವರ್ಷಗಳ ಹಿಂದೆ ಗಣಪನ ಪರಿಕಲ್ಪನೆ ಇರುವ ಬಗ್ಗೆ ಹೇಳಿಕೆಗಳಿವೆ. ಗಣಪತಿಯ ಹೆಸರು ವೇದಿಕ ವಾಙ್ಮಯದಲ್ಲೂ ಸಿಗುತ್ತದೆ. ದ್ರಾವಿಡ, ಆರ್ಯರ ಕಾಲದಲ್ಲೂ ಗಣಪನಿದ್ದನೆಂದೂ ಹೇಳುವವರಿದ್ದಾರೆ. ಸರಿ ಸುಮಾರು ೮ನೇ ಶತಮಾನದಲ್ಲಿಯೇ ಟಿಬೆಟ್ ಹಾಗೂ ನೇಪಾಳದಲ್ಲಿ ಗಣಪತಿಯ ಆರಾಧನೆ ಪ್ರಚಲಿತವಾಗಿತ್ತು ಎಂಬ ಮಾಹಿತಿ ಇದೆ.

ಆದಿ ಶಂಕರಾಚಾರ್ಯರು ಆರನೇ ಶತಮಾನದ ಉತ್ತರಾರ್ಧದಲ್ಲಿ ಗಣಪನ ಪೂಜೆಗೆ ಸ್ಥಾನ ಒದಗಿಸಿದ್ದಾರೆಂಬ ಉಲ್ಲೇಖಗಳಿವೆ. ಆದರೆ, ಜನಗಳ ಕಲ್ಪನೆಯಲ್ಲಿ ಗಣಪ ಬೆಳೆದು ಬಂದ ದಾರಿಯ ಬಗ್ಗೆ ಸ್ಪಷ್ಟ ಚಿತ್ರಣವಿಲ್ಲ. ಸಾಹಿತ್ಯ ಖಂಡಗಳಲ್ಲಿ, ಪುರಾಣಗಳಲ್ಲಿ, ಶಿಲ್ಪದಲ್ಲಿ, ತಾಂತ್ರಿಕ ಪ್ರಕ್ರಿಯೆಯಲ್ಲಿ, ಪೂಜಾ ಪರಿಕಲ್ಪನೆಗಳಲ್ಲಿ ಗಣಪತಿಯ ಸ್ವರೂಪ, ಸ್ವಭಾವಗಳ ವಿಚಾರವಾಗಿ ಹಲವಾರು ವಿವರಗಳು ದೊರಕುತ್ತವೆ. ಆದರೆ, ಕಾಲದ ದೃಷ್ಟಿಯಿಂದ ಕಲ್ಪನೆಯ ವಿಕಾಸ ಹೀಗೆಯೇ ಆಯಿತು ಎಂದು ಹೇಳುವುದು ಕಷ್ಟ.

ವಾಸ್ತವವಾಗಿ ನಮ್ಮ ದೇಶದಲ್ಲಿ ಪ್ರಚಲಿತವಿರುವ ಯಾವುದೇ ಪದ್ಧತಿಗೆ ಮೂಲವನ್ನು ಋಗ್ವೇದದಲ್ಲಿ ಹುಡುಕುವುದು ವಾಡಿಕೆ. ವೈದಿಕ ಋಷಿಗಳು ಗಣಪನ ಪೂಜಿಸುತ್ತಿದ್ದರೆ? ವೈದಿಕ ದೇವತೆಗಳ ಗೋಷ್ಠಿ ದೊಡ್ಡದು, ಆದರೂ ಗಜಮುಖನಾದ, ಪ್ರಲಂಬಜಠರನಾದ, ರುದ್ರಪುತ್ರನಾದ ಗಣಪತಿಯು ಇದರಲ್ಲಿ ಸೇರಿಲ್ಲ. ರುದ್ರನೇನೋ ದೇವತೆಯೇ, ಆದರೆ, ಅವನ ಸಂಸಾರದ ಚಿತ್ರ ಇಲ್ಲಿ ಅಸ್ಪಷ್ಟವಾಗಿದೆ. ಈ ಅಂಶಗಳನ್ನು ಪ್ರೊ. ಎಸ್.ಕೆ. ರಾಮಚಂದ್ರರಾಯರು ತಮ್ಮ ಒಂದು ಅಧ್ಯಯನ ಲೇಖನದಲ್ಲಿ ಪ್ರಸ್ತಾಪಿಸಿದ್ದಾರೆ.

ರಾಯರ ಪ್ರಕಾರ ಗಣಗಳಿಗೆ ಒಡೆಯನೆಂಬ ಅರ್ಥದಲ್ಲಿ ಗಣಪತಿಯ ಉಲ್ಲೇಖ ಬರುತ್ತದೆ. ಋಗ್ವೇದದ ಎರಡನೇ ಮಂಡಲದಲ್ಲಿ ಈ ಶ್ಲೋಕವಿದೆ...

ಗಣಾನಾಂ ತ್ವ ಗಣಪತಿ ಗುಮ್ ಹವಾಮಹೇ
ಕವಿಂ ಕವೀನಾಂ ಉಪಮಶ್ರವಸ್ತಮಂ
,
ಜ್ಯೇಷ್ಠರಾಜಂ ಬ್ರಹ್ಮಣಾಂ ಬ್ರಹ್ಮಣಸ್ಪತ
ಆ ನಃ ಶೃಣನ್ನೂತಿಭಿಃ ಸೀದ ಸಾಧನಂ.

ಇಲ್ಲಿ ಗಣಪತಿಯೆಂದರೆ ನಮ್ಮ ಇಂದಿನ ಕಲ್ಪನೆಯ ಗಣಪತಿಯಲ್ಲ. ಭಾಷ್ಯಾಕಾರರಾದ ಸಾಯಣಾಚಾರ್ಯರ ಪ್ರಕಾರ ಗಣಪತಿಯು ಬ್ರಹ್ಮಣಸ್ಪತಿ. ಬ್ರಹ್ಮವೆಂದರೆ ಮಂತ್ರ, ಮಂತ್ರಿಗಳಿಗೆ ಒಡೆಯನಾದವನು ಬ್ರಹ್ಮಣಸ್ಪತಿ. ಈ ವೈದಿಕ ಮಂತ್ರವು ಬ್ರಹ್ಮಣಸ್ಪತಿ ಅಥವಾ ಬೃಹಸ್ಪತಿಯನ್ನು ಕುರಿತದ್ದು.

ಹೀಗಾದರೆ, ಗಣಪತಿಯ ಕಲ್ಪನೆಯ ಬೆಳವಣಿಗೆಯನ್ನು ಅರ್ಥಮಾಡಿಕೊಳ್ಳಲು ಈ ಮಂತ್ರವು ನೆರವು ನೀಡುತ್ತದೆಯೇ? ಇಲ್ಲಿ ಹೇಳಲಾಗಿರುವ ಗಣಪನಿಗೂ ನಮ್ಮ ಗಣಪನಿಗೂ ಸಂಬಂಧವೇನೂ ಇಲ್ಲ. ಗಣಪತಿಯೆನ್ನುವ ವ್ಯವಹಾರವೇ ಮುಖ್ಯವಲ್ಲ. ಆದರೆ, ಗಣಗಳಿಗೆ ಒಡೆಯನೊಬ್ಬನಿರುವ ಕಲ್ಪನೆಯು ವೈದಿಕ ವಾಙ್ಮಯದಲ್ಲಿ ಕಾಣುತ್ತದೆ. ಋಗ್ವೇದದ ೧೦ನೇ ಮಂಡಲದಲ್ಲಿಯೂ ಗಣಪತಿಯ ಪ್ರಸ್ತಾಪವಿದೆ. ಇಲ್ಲಿ ದೇವಗಣಗಳಿಗೆ ಒಡೆಯನಾದ ಇಂದ್ರನೇ ಗಣಪತಿ.

ವೈದಿಕ ದೇವತೆಯಾದ ರುದ್ರನಿಗೂ ಗಣಪತಿಗೂ ಸಂಬಂಧವನ್ನು ಸೂಚಿಸುವ ಒಂದು ಮಾತು ಶುಕ್ಲ ಯಜುರ್ವೇದದಲ್ಲಿ ದೊರೆಯುತ್ತದೆ. ರುದ್ರನ ಗಣಗಳಿಗೆ ಒಡೆತನ (ರುದ್ರಸ್ಯ ಗಾಣಾಪತ್ಯಂ) ವನ್ನು ಹೇಳುವ ಮಾತು ಇದು. ವೈದಿಕ ವಾಙ್ಮಯದಲ್ಲಿ ಗಣವೆಂಬ ಪದವನ್ನು ಜನಗಳ ಸಮೂಹ, ದೇವಗೋಷ್ಠಿ, ಮಂತ್ರಗಳ ಸಮೂಹ ಎನ್ನುವ ಅರ್ಥದಲ್ಲಿ ಬಳಸಲಾಗಿದೆ ಎಂಬುದನ್ನು ಗಮನಿಸಬೇಕು.

ಯಜುರ್ವೇದದ ಮತ್ತೊಂದು ಸಂದರ್ಭದಲ್ಲಿ ಗಣಪತಿಯ ಪ್ರಸ್ತಾಪವಿದೆ. ಕುದುರೆಯನ್ನು ವಸು ರೂಪಿಯಾದ ಗಣಪತಿಯೆಂದು ವ್ಯವಹರಿಸಿರುವ ಸಂದರ್ಭವದು. ಅಶ್ವಮೇಧಯಾಗದ ವೇಳೆ ಯಜಮಾನನ ಹೆಂಡತಿಯು, ಎಂದರೆ ರಾಣಿಯು, ಮೇಧವಾದ ಅಶ್ವದ ಪಕ್ಕದಲ್ಲಿ ಮಲಗಿಕೊಂಡು ಮುಂದಿನ ಮಂತ್ರ ಹೇಳಬೇಕೆಂಬ ವಿಧಿಯಿದೆ.

ಗಣಾನಾಂ ತ್ವಾ ಗಣಪತಿಂ ಹವಾಮಹೇ
ಪ್ರಯಾಣಾಂ ತ್ವಾ ಪ್ರಿಯಪತಿಂ ಹವಾಮಹೇ
ನಿಧೀನಾಂ ತ್ವಾ ನಿಧಿಪತಿಂ ಹವಾಮಹೇ
ವಸೋ ಮಮ ಅಹಮಜಾನಿ
ಗರ್ಭಧಮತ್ವಮಜಾಸಿ ಗರ್ಭಧಂ

ಎಂಬಲ್ಲಿ ಕೂಡ ಗಣಪತಿ, ಪ್ರಿಯಪತಿ, ನಿಧಿಪತಿ ಎನಿಸಿಕೊಳ್ಳುವ ವಸುವು ಕುದುರೆಯೇ. ಈ ಮಂತ್ರದ ಅಭಿಮಾನೀದೇವತೆಯು ಅಶ್ವದೇವತೆ. ಇಲ್ಲಿಯ ಗಣಪತಿಯು ಸ್ತ್ರೀಗಣಗಳಿಗೆ ಒಡೆಯ, ಪಾಲಕ ಎನ್ನುವ ಅರ್ಥವಿದೆ. ಅಂದರೆ ಇಂದಿನ ಗಣಪನ ಕಲ್ಪನೆ ಅದಲ್ಲ ಎಂದು ಕೆಲವರ ವಾದ.

ಹಾಗಾದರೆ ಗಣಪನ ಕಲ್ಪನೆ ಮೂಡಿದ್ದು ಯಾವಾಗ ಎಂಬುದಕ್ಕೆ ಉತ್ತರ ಕ್ರಿಸ್ತಶಕದ ಆರಂಭದ ದೆಸೆಯಲ್ಲಿ ಎಂಬುದು. ಪ್ರಾಚೀನ ಧರ್ಮಸೂತ್ರ, ಗೃಹಸೂತ್ರಗಳಲ್ಲಿ ಕಾರ್ಯಾರಂಭಕ್ಕೆ ಮುನ್ನ ಗಣಪತಿಯ ಪೂಜೆ ಮಾಡಬೇಕು ಎಂಬ ಉಲ್ಲೇಖವಿಲ್ಲ. ಇಂತಹ ವಿಧಿ ಮೊದಲು ಕಾಣಸಿಗುವುದು ಗೋಭಿಲಸ್ಮೃತಿಯಲ್ಲಿ. ಇದರ ಕಾಲ ಕ್ರಿಸ್ತಾಬ್ದದ ಮೊದಲ ವರ್ಷಗಳೇ. ಎಲ್ಲ ಸಂಸ್ಕಾರಗಳಿಗೂ ಮೊದಲು ಗಣಾಧಿಪನ ಪೂಜೆ ಮಾಡಬೇಕೆಂಬ ಪ್ರಸ್ತಾಪ ಇಲ್ಲಿ ಬರುತ್ತದೆ. ಮುಂದೆ ಮೈದಳೆದ ಬೌಧಾಯನ ಸೂತ್ರದಲ್ಲಿ ವಿನಾಯಕನಿಗೆ ಮೋದಕ ಮತ್ತು ಅಪೂಪಗಳನ್ನು ಸಮರ್ಪಣೆ ಮಾಡುವ ಉಲ್ಲಖವಿದೆ. ಇಲ್ಲಿ ವಿನಾಯಕನನ್ನು ಭೂತನಾಥ. ಹಸ್ತಿಮುಖ, ವಿಘ್ನೇಶ್ವರ ಎಂದು ಬಣ್ಣಿಸಲಾಗಿದೆ.

ಮೂರನೇ ಶತಮಾನದ ಸುಮಾರಿಗೆ ಸಿದ್ಧವಾದ ಯಾಜ್ಞವಲ್ಕ್ಯಸ್ಮೃತಿಯಲ್ಲಿ ರುದ್ರನೂ ಬ್ರಹ್ಮನೂ ಗಣಗಳ ವ್ಯವಹಾರವನ್ನು ನಿರ್ವಹಿಸುವ ನಾಲ್ಕು ಮಂದಿ ವಿನಾಯಕರನ್ನು ನಿರ್ಮಿಸಿದರೆನ್ನುವ ಪ್ರಸ್ತಾಪವಿದೆ. ಗಣಪತಿಗೆ ವಿನಾಯಕನೆನ್ನುವ ಹೆಸರುಗಳು ಪ್ರಾಚೀನವಾಗಿವೆ.

ಗೌರೀ ಸುತನೀ ಗಣಪ : ವರಾಹ ಪುರಾಣದಲ್ಲಿ ಕೂಡ ಗಣಪನ ಪ್ರಸ್ತಾಪವಿದೆ. ವಾಸ್ತವವಾಗಿ ವಿನಾಯಕನನ್ನು ಶಿವಪುತ್ರ ಎನ್ನುವುದಕ್ಕಿಂತಲೂ ಗೌರಿಸುತ ಎಂದೇ ಕರೆಯುವುದು ವಾಡಿಕೆ. ಗೌರಿ-ಗಣಪನಿಗೆ ಇರುವ ಸಂಬಂಧ ಪುರಾಣಗಳಲ್ಲೂ ಮಹತ್ವ ಪಡೆದಿದೆ. ಗೌರಿ ಪೂಜೆಯ ಸಮಯದಲ್ಲಿ ಗಣಪತಿಗೆ ಪೂಜೆ ಸಲ್ಲುತ್ತದೆ. ಆದರೆ, ಶಿವರಾತ್ರಿಗೂ ಗಣೇಶ ಚತುರ್ಥಿಗೂ ಯಾವುದೇ ನಂಟು ಕಾಣಬರುವುದಿಲ್ಲ.

ಸ್ಕಾಂದ ಪುರಾಣಗಳಲ್ಲಿಯೂ ಗಣಪನ ಪ್ರಸ್ತಾಪವಿದೆ. ಧರ್ಮರಾಯ ಕುರುಕ್ಷೇತ್ರ ಯುದ್ಧಕ್ಕೆ ಮುನ್ನ ಜಯ ಸಾಧಿಸುವ ಸಲುವಾಗಿ ವಿನಾಯಕ ವ್ರತ ನಡೆಸಿದ ಪ್ರಸ್ತಾಪವಿದೆ. ಚೌತಿಯ ಚಂದ್ರನ ದರ್ಶನ ಮಾಡಿದ ತಪ್ಪಿಗೆ ಶಮಂತಕ ಮಣಿ ಕದ್ದ ಆರೋಪಕ್ಕೆ ಶ್ರೀಕೃಷ್ಣ ಪರಮಾತ್ಮನೇ ಗುರಿಯಾದ ಪ್ರಸ್ತಾಪಗಳೂ ಇವೆ.

ಗಣಪ ವಟು, ಬ್ರಹ್ಮಚಾರಿ. ಆದರೆ ಅವನಿಗೆ ಸಿದ್ಧಿ, ಬುದ್ಧಿ ಎಂಬ ಇಬ್ಬರು ಹೆಂಡತಿಯರು ಎಂಬ ಪ್ರಸ್ತಾಪವೂ ಒಂದೆರಡು ಕಡೆ ಇದೆ. ವ್ಯಾಸಮಹರ್ಷಿಗಳಿಗೆ ಗಣಪ ಶೀಘ್ರಲಿಪಿಕಾರನಾಗಿ ಮಹಾಭಾರತ ಸಿದ್ಧಪಡಿಸದ ಕಥೆಯೂ ಪ್ರಚಲಿತ. ಆದರೆ, ಮಹಾಭಾರದ ಆದಿಪರ್ವದಲ್ಲೇ ಬರುವ ಈ ಪ್ರಸಂಗ ಪ್ರಕ್ಷಿಪ್ತ ಭಾಗವೆಂಬುದು ಕೆಲವು ಪಂಡಿತರ ಅನಿಸಿಕೆ.

ಗಣಪನಿಗೆ ನಾನಾ ರೂಪಗಳುಂಟು. ಗಣಪನಿಗೆ ಯಾವ ವೇಷ ತೊಡಿಸಿದರೂ ಆತ ಲಕ್ಷಣವಾಗೇ ಕಾಣುತ್ತಾನೆ. ಗಣಪನನ್ನು ಬರೆಯುವಷ್ಟು ಸುಲಭವಾಗಿ ಮತ್ತಾವ ದೇವರನ್ನೂ ಬರೆಯಲು ಸಾಧ್ಯವಿಲ್ಲ. ಅಂತೆಯೇ ಗಣಪನ ಮೂರ್ತಿಯಲ್ಲಿ ಇರುವ ಸೊಗಸು ಮತ್ತಾವ ದೇವರ ವಿಗ್ರಹದಲ್ಲೂ ಕಾಣುವುದಿಲ್ಲ. ಉದ್ದನೆಯ ಸೊಂಡಿಲು, ಡೊಳ್ಳುಹೊಟ್ಟೆ, ಮುರಿದ ಹಲ್ಲು, ಸಣ್ಣ ಕಣ್ಣು, ಅಗಲವಾದ ಕಿವಿ, ಆನೆಯ ಮುಖ.. ಆ ಪರಿಕಲ್ಪನೆಯೇ ಒಂದು ವಿಶೇಷ.

ಬಹುರೂಪಿ : ಗಣಪ ಇಂದು ನಾನಾ ಆಕಾರದಲ್ಲಿ ಪೂಜಿಸಲ್ಪಡುತ್ತಾನೆ. ಗಣಪ ಮೂಷಿಕ ವಾಹನನಾದರೂ, ಅವನನ್ನು ಸಿಂಹವಾಹನನನ್ನಾಗಿ, ಮಯೂರ ವಾಹನನ್ನಾಗಿ, ವೃಷಭವಾಹನನ್ನಾಗಿ ಮಾಡಿ ಭಕ್ತರು ಆನಂದ ಪಡುತ್ತಾರೆ. ವಾಸ್ತವವಾಗಿ ಗಣಪ ಅನಾರ್ಯ ಸಂಪ್ರದಾಯಕ್ಕೆ ಸೇರಿದ ಗ್ರಾಮದೇವತೆ. ಆದರೆ ಉತ್ತರೋತ್ತರದಲ್ಲಿ ಆರ್ಯ ದೇವತೆಗಳ ಸಂಸ್ಕಾರವನ್ನು ಪಡೆದಿದ್ದಾನೆ. ಇದು ಬಿಡಿಸಲಾಗದ ಒಗಟಾಗಿ ನಿಂತಿದೆ.

ಆದರೆ, ಮಹಾ ಮಹಿಮನಾದ ಗಣಪನಿಗೆ ಪ್ರಾಚೀನ ಭಾರತ ಸಾಹಿತ್ಯದಲ್ಲಿ ಬಗೆಬಗೆಯಾದ ನಿರೂಪಣೆಗಳಿವೆ. ವೇದ, ಗಣಪತ್ಯುಪನಿಷತ್, ಯೋಗ, ತಂತ್ರ, ಪುರಾಣ, ವೈದಿಕ ಗ್ರಂಥಗಳಲ್ಲಿ ಮಿಗಿಲಾಗಿ ಜೈನ, ಬೌದ್ಧಧರ್ಮಗಳ ಕಥಾಸಾರದಲ್ಲೂ ಗಣಪನ ಪ್ರಸ್ತಾಪವಿದೆ. 

ಗಣಪನಿಗೆ ನಾನಾ ಹೆಸರುಗಳಿವೆ. ಪಿಂಗಳ ಗಣಪತಿ, ಊರ್ಧ್ವ ಗಣಪತಿ, ಹೇರಂಬ ಗಣಪತಿ, ಉಚ್ಛಿಷ್ಟ ಗಣಪತಿ, ಶಕ್ತಿ ಗಣಪತಿ, ಶಿವಶಕ್ತಿ ಗಣಪತಿ, ತುಷ್ಟಗಣಪತಿ, ಗಜವದನ, ಗಜಮುಖ, ಅಷ್ಟಮಹಿಷಿ ಗಣಪತಿ, ಪ್ರಸನ್ನ ಗಣಪತಿ, ಹರಿದ್ರಾ ಗಣಪತಿ, ಮಹಾ ಗಣಪತಿ, ವರದ ಗಣಪತಿ, ವಾತಾಪಿ ಗಣಪತಿ.... ಹೀಗೆ ಪಟ್ಟಿ ದೊಡ್ಡದಾಗುತ್ತಾ ಸಾಗುತ್ತದೆ. ಒಟ್ಟಾರೆ ವಕ್ರತುಂಡನಾದ ಗಣಪ ವಿಘ್ನ ನಿವಾರಕ . ಇವ ಕಪಿತ್ಥ ಜಂಬೂಫಲ ಸಾರಭಕಕ. ಭಾದ್ರಪದ ಶುಕ್ಲ ಚೌತಿಯ ದಿನವಾದ ಇಂದು ನಾವು ಗಣಪನ ಪೂಜೆ ಮಾಡೋಣ. ಸಕಲ ಸೌಭಾಗ್ಯಗಳನ್ನು ಪಡೆಯೋಣ. 

ಮುಖಪುಟ /ನಮ್ಮಹಬ್ಬಗಳು