ಮುಖಪುಟ /ನಮ್ಮಹಬ್ಬಗಳು    

ಶ್ರಾವಣದ ಸಂಭ್ರಮಕ್ಕೆ ಸ್ವಾಗತ ಕೋರುವ ಭೀಮನ ಅಮಾವಾಸ್ಯೆ
ಜ್ಯೋತಿರ್ಭೀಮೇಶ್ವರ ವ್ರತ ವಿಚಾರ....

Lord Shiva Parvatiಸಾಮಾನ್ಯವಾಗಿ ಆಷಾಢದಲ್ಲಿ ಯಾವುದೇ ಶುಭಕಾರ್ಯ ಮಾಡುವುದಿಲ್ಲವಾದರೂ, ಆಷಾಢದ ಅಮಾವಾಸ್ಯೆಯ ದಿನ ಜ್ಯೋತಿರ್ಭೀಮೇಶ್ವರ ವ್ರತ ಎಂದು ಸಡಗರದಿಂದ ಹಬ್ಬವನ್ನು ಆಚರಿಸುತ್ತಾರೆ. ಇದಕ್ಕೆ ಪತಿ ಸಂಜೀವಿನಿ ವ್ರತ ಎಂದೂ ಹೆಸರುಂಟು. ಪತಿಗೆ ದೀರ್ಘಾಯುಷ್ಯವನ್ನು ಕರುಣಿಸುವಂತೆ, ತಮ್ಮನ್ನು ದೀರ್ಘ ಸುಮಂಗಲಿಯಾಗಿ ಹರಸುವಂತೆ ಕೋರಿ ಶಿವನನ್ನು ಪೂಜಿಸುವ ಹಬ್ಬವೇ ಭೀಮನ ಅಮಾವಾಸ್ಯೆ. 

ಈ ಹಬ್ಬಕ್ಕೆ ಪತಿ ಸಂಜೀವಿನಿ ವ್ರತ ಎಂದು ಹೆಸರು ಬಂದ ಬಗ್ಗೆ ಒಂದು ಕಥೆ ಇದೆ. ಆಸೆಬುರುಕನಾಗಿದ್ದ ಬ್ರಾಹ್ಮಣನೊಬ್ಬ, ಹಣಕ್ಕಾಗಿ ತನ್ನ ಮಗಳ ಮದುವೆಯನ್ನು ಮೃತಪಟ್ಟಿದ್ದ ರಾಜಕುಮಾರನ ಶವದೊಂದಿಗೆ ಮಾಡಿ ಬಿಡುತ್ತಾನೆ. ಸುರಿಯುತ್ತಿದ್ದ ಮಳೆಯಲ್ಲಿ, ಶವವನ್ನೂ, ಶವವನ್ನು ವರಿಸಿದ ವಧುವನ್ನೂ ರಾಜ ಪರಿವಾರದವರು ನದಿ ತೀರದಲ್ಲಿ ಬಿಟ್ಟು ಹೋಗುತ್ತಾರೆ.

ಗಾಡಾಂಧಕಾರದಲ್ಲಿ ಪತಿಯ ಶವದ ಮುಂದೆ ಕುಳಿತು ರೋಧಿಸುತ್ತಿದ್ದ ಆ ಸಾಧ್ವಿ, ಮರಳಿನಲ್ಲಿ ಶಿವಲಿಂಗ ಮಾಡಿ, ದೀಪ ಹಚ್ಚಿ ಪೂಜಿಸುತ್ತಾಳೆ. ಅವಳ ಭಕ್ತಿಗೆ ಮೆಚ್ಚಿದ ಶಿವಪಾರ್ವತಿಯರು ಪ್ರತ್ಯಕ್ಷಳಾಗಿ ಅವಳ ಪತಿಗೆ ಜೀವದಾನ ನೀಡುತ್ತಾರೆ. ಆ ದಂಪತಿಗೆ ರಾಜ್ಯವೂ ಪ್ರಾಪ್ತಿಯಾಗಿ ಸುಖಶಾಂತಿ ನೆಮ್ಮದಿಯಿಂದ ಜೀವಿಸುತ್ತಾರೆ. ಅಮಾವಾಸ್ಯೆಯ ದಿನ ಆ ಸಾಧ್ವಿ ತನ್ನ ಪತಿಯನ್ನು ಬದುಕಿಸಿಕೊಳ್ಳಲು ನಡೆಸಿದ ಪೂಜೆಯೇ ಜ್ಯೋತಿರ್ ಭೀಮೇಶ್ವರ ವ್ರತ ಎಂದು ಹಿರಿಯರು ಹೇಳುತ್ತಾರೆ.

ವ್ರತಾಚಾರಣೆಯ ಹಿನ್ನೆಲೆಯ ಬಗ್ಗೆ ಒಂದು ಐತಿಹ್ಯ ಇದೆ. ... ಕುಂಡಿನಿ ಪಟ್ಟಣದಲ್ಲಿ ಪತಿಭಕ್ತಳೂ, ಶಾಸ್ತ್ರಜ್ಞಳೂ, ನಿರ್ಮಲ ಮನದವಳೂ ಆದ ಚಾರುಮತಿ ಎಂಬ ಸಾಧ್ವಿ ಇರುತ್ತಾಳೆ. ಈ ಬ್ರಾಹ್ಮಣ ಸಾಧ್ವಿಗೆ ಮಹಾಲಕ್ಷ್ಮಿ ಕನಸಿನಲ್ಲಿ ಕಾಣಿಸಿಕೊಂಡು ತನ್ನನ್ನು ನಿರ್ದಿಷ್ಟ ಪ್ರಕಾರವಾಗಿ ಪೂಜಿಸಲು ತಿಳಿಸುತ್ತಾಳೆ.

 ಅದರಂತೆ ಚಾರುಮತಿ ಮಂಗಳಸ್ನಾನ ಮಾಡಿ, ಅಕ್ಕಿಯಿಂದ ಪರಿವೃತವಾದ ಕಲಶದಲ್ಲಿ ವರಲಕ್ಷ್ಮಿಯನ್ನು ಆವಾಹನೆ ಮಾಡಿ, ಕಲ್ಪೋಕ್ತ ಪ್ರಕಾರ ಸಂಧ್ಯಾಕಾಲದಲ್ಲಿ ಅರ್ಚಿಸಿ, ಬಲಗೈಗೆ ದಾರ ಕಟ್ಟಿಕೊಂಡು ತುಪ್ಪದಿಂದ ಮಾಡಿದ ಭಕ್ಷ್ಯಗಳನ್ನು ಬ್ರಾಹ್ಮಣರಿಗೆ ನಿವೇದಿಸಿ, ಸುಹಾಸಿನಿಯರಿಗೆ ದಕ್ಷಿಣೆ ಸಹಿತ ತಾಂಬೂಲ ನೀಡಿ ವ್ರತವಾಚರಿಸುತ್ತಾಳೆ. ಇದರ ಫಲವಾಗಿ ಅವಳು ಸಕಲ ಸೌಭಾಗ್ಯ ಪಡೆಯುತ್ತಾಳೆ. ಹೀಗಾಗಿ ಇದೇ ಪ್ರಕಾರವಾಗಿ ಸುಹಾಸಿನಿಯರು ಈ ವ್ರತವಾಚರಿಸುತ್ತಾರೆ.

 ಈ ಪ್ರಕಾರವಾಗಿ ಭೀಮನ ಅಮಾವಾಸ್ಯೆಯ ದಿನ ಹೆಣ್ಣು ಮಕ್ಕಳು ಮತ್ತು ಸುಮಂಗಲಿಯರು ಮಂಗಳಸ್ನಾನ ಮಾಡಿ, ಮಂಟಪ ನಿರ್ಮಿಸಿ, ಅದರಲ್ಲಿ ಧಾನ್ಯರಾಶಿ ಮಾಡಿ, ಅದರ ಮೇಲೆ ದೀಪವನ್ನಿಟ್ಟು, ಗೋಧಿಹಿಟ್ಟಿನಿಂದ ಮಾಡಿದ ಭಕ್ಷ್ಯವನ್ನು ನೈವೇದ್ಯ ಮಾಡಿ ಈಶ್ವರನನ್ನು ಆರಾಧಿಸುತ್ತಾರೆ. ಹೊಸಿಲ ಮೇಲೆ ಭಂಡಾರ ಇಟ್ಟು ಸೋದರರಿಂದ ಒಡೆಸುವ ಪದ್ಧತಿಯೂ ಮೈಸೂರಿನ ಸಂಪ್ರದಾಯಸ್ಥ ಬ್ರಾಹ್ಮಣರ ಮನೆಯಲ್ಲಿ ಇದೆ. 

 

ಮುಖಪುಟ /ನಮ್ಮಹಬ್ಬಗಳು