ಮುಖಪುಟ /ನಮ್ಮಹಬ್ಬಗಳು    

ಆಯುಧಪೂಜೆ ಎಂಬ ವಿಶಿಷ್ಟ ಆಚರಣೆ

*ಟಿ.ಎಂ.ಸತೀಶ್

Ayudhapoojaಮೈಸೂರು ದಸರೆಯ ಕಾಲದಲ್ಲಿ ಮಹಾನವಮಿ ಅತಿ ದೊಡ್ಡ ಹಬ್ಬ. ಶರನ್ನವರಾತ್ರಿಯ ೯ ದಿನಗಳ ಪೈಕಿ ೯ನೇ ದಿನವಾದ ನವಮಿ ಅತ್ಯಂತ ಮಹತ್ವ ಪಡೆದುಕೊಂಡಿದೆ. ಮೈಸೂರು ಅರಸರು, ವಿಜಯನಗರದರಸರು ಅಂದು ತಮ್ಮ ಶಸ್ತ್ರಾಗಾರದಲ್ಲಿದ್ದ ಎಲ್ಲ ಶಸ್ತ್ರಾಸ್ತ್ರಗಳಿಗೆ, ವಾಹನಗಳಿಗೆ, ರಥ, ಖಡ್ಗ, ಕುದುರೆ, ಆನೆಗಳಿಗೆ ವಿಶೇಷವಾಗಿ ಪೂಜೆ ಸಲ್ಲಿಸಿ, ತಮ್ಮನ್ನು ಆಪತ್ಕಾಲದಲ್ಲಿ ರಕ್ಷಿಸುವ ಈ ಎಲ್ಲಕ್ಕೂ ಕೃತಜ್ಞತೆ ಸಲ್ಲಿಸುತ್ತಿದ್ದರು.

ಇಂಥ ಒಂದು ವಿಶಿಷ್ಟ ಸಂಪ್ರದಾಯವನ್ನು ಮತ್ತೆಲ್ಲೂ ನೋಡಲು ಸಾಧ್ಯವೇ ಇಲ್ಲ. ನಮ್ಮನ್ನು ವರ್ಷವಿಡೀ ನಾವು ಬಯಸಿದ ಸ್ಥಳಕ್ಕೆ ಕರೆದೊಯ್ಯುವ ವಾಹನಗಳಿಗೆ ಅದೂ ನಿರ್ಜೀವ ವಸ್ತುಗಳಿಗೆ ಪೂಜೆ ಸಲ್ಲಿಸುವುದು ಕರ್ನಾಟಕದಲ್ಲಿ ಮಾತ್ರವೇ ಸಾಧ್ಯ. ಅಂಥ ಶ್ರೀಮಂತ ಸಂಸ್ಕೃತಿಯ ನೆಲೆ ಕರ್ನಾಟಕಕ್ಕಿದೆ.

ಅಶ್ವಾರೂಢರಾದ ಮೈಸೂರು ಅರಸರಾದ ಶ್ರೀ ಜಯಚಾಮರಾಜ ಒಡೆಯರ್, Mysore king Sri Chamaraja wodeyar on his Houseಮೈಸೂರು ಮಹಾರಾಜರು ದಸರಾ ಮಹೋತ್ಸವದ ೧೦ ದಿನಗಳ ಉತ್ಸವದ ೯ನೇ ದಿನ ಅಂದರೆ ಮಹಾನವಮಿಯ ದಿನವನ್ನು ಆಯುಧಪೂಜೆ ಎಂದೇ ಆಚರಿಸುತ್ತಿದ್ದರು. ತಮ್ಮನ್ನು ಶತ್ರುಗಳಿಂದ ರಕ್ಷಿಸಲು ನೆರವಾಗುತ್ತಿದ್ದ ಆಯುಧಗಳಿಗೆ ಪೂಜೆ ಮಾಡುತ್ತಿದ್ದ ಕಾರಣ ಈ ಉತ್ಸವಕ್ಕೆ ಆಯುಧಪೂಜೆ ಎಂದೇ ಹೆಸರು ಬಂದಿದೆ. ಅಂದು ಕೇವಲ ಆಯುಧಗಳಿಗಷ್ಟೇ ಅಲ್ಲದೆ, ತಮಗೆ ಯುದ್ಧದಲ್ಲಿ ಮತ್ತು ದೈನಂದಿನ ಕಾರ್ಯದಲ್ಲಿ ನೆರವಿಗೆ ಬರುತ್ತಿದ್ದ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು, ಎತ್ತಿನ ಗಾಡಿ, ರಥ, ಆನೆ ಗಾಡಿ, ಕುದುರೆಗಾಡಿಗಳಿಗೂ ಪೂಜೆ ಸಲ್ಲಿಸುತ್ತಿದ್ದರು. ಬಳಿಕ ಪಟ್ಟದ ಕುದುರೆ ಏರಿ ಸವಾರಿಯನ್ನೂ ಮಾಡುತ್ತಿದ್ದರು ಎಂದು ಮೈಸೂರಿನ ಹಿರಿಯರು ಹೇಳುತ್ತಾರೆ. ಇಂದಿಗೂ ಅನೂಚಾನವಾಗಿ ಅದೇ ಪರಂಪರೆ ಮೈಸೂರು ಅರಮನೆಯಲ್ಲಿ  ನಡೆದುಕೊಂಡು ಬಂದಿದೆ.

ಮೈಸೂರು ಸೀಮೆಯಲ್ಲಿ ಇಂದಿಗೂ ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ಇರುವ ಚಾಕು, ಕತ್ತರಿಯೇ ಮೊದಲಾದ ಆಯುಧಗಳಿಗೆ ಪೂಜೆ ಸಲ್ಲಿಸಿ, ತಮ್ಮ ಬಳಿ ಇರುವ ವಾಹನಗಳಿಗೆ ಯಥಾಶಕ್ತಿ ಪೂಜೆ ಸಲ್ಲಿಸುತ್ತಾರೆ. ಅಂಗಡಿ, ಮಳಿಗೆಗಳಲ್ಲಿ ಕೂಡ ತಕ್ಕಡಿಯಿಂದ ಹಿಡಿದು ಎಲ್ಲ ಸಾಧನ ಸಲಕರಣೆಗಳಿಗೆ ಪೂಜೆ ಸಲ್ಲಿಸುವುದು ವಾಡಿಕೆ.

ವಾಹನ ಮಾಲಿಕರು ನವಮಿಯ ದಿನ ತಮ್ಮ ವಾಹನಗಳನ್ನು ತೊಳೆದು, ಒರೆಸಿ, ಸಿಂಗರಿಸಿ, ಹೂ, ಕುಂಕುಮ, ಅರಿಶಿನದಿಂದ ಪೂಜಿಸಿ, ಅದಕ್ಕೆ ನಿಂಬೆ ಹಣ್ಣು ಇಲ್ಲವೆ ಕುಂಬಳ ಕಾಯಿ ಒಡೆದು ಇದನ್ನೇ ಬಲಿಯಾಗಿ ಸ್ವೀಕರಿಸಿ ತಮಗೆ ಸನ್ಮಂಗಳವನ್ನುಂಟು ಮಾಡುವಂತೆ ಪ್ರಾರ್ಥಿಸುತ್ತಾರೆ.

Huvu, kandu, kumbalaಸಾರಿಗೆ ವಾಹನ ಚಾಲಕರು, ತಮ್ಮ ವಾಹನಗಳಿಗೆ ಹೂವಿನಿಂದ ಬಗೆ ಬಗೆಯ ಅಲಂಕಾರ ಮಾಡುತ್ತಾರೆ. ಚಿತ್ತಾರದ ಬಣ್ಣದ ಕಾಗದ ಅಂಟಿಸಿ ಸಿಂಗರಿಸುತ್ತಾರೆ. ತಮ್ಮ ಗೆಳೆಯನಿಗಿಂಥ ತಾನು ಚೆನ್ನಾಗಿ ವಾಹನ ಸಿಂಗರಿಸಬೇಕೆನ್ನುವ ಪೈಪೋಟಿಯೂ ನಡೆಯುತ್ತದೆ. ಕೆಲವು ವಾಹನ ಚಾಲಕರಂತೂ ತಮ್ಮ ವಾಹನದ ಗಾಜುಗಳನ್ನು ಕೂಡ ಹೂವಿನಿಂದ ಮುಚ್ಚಿ ಬಿಡುತ್ತಾರೆ. ರಸ್ತೆಯೇ ಕಾಣದಂತೆ ಹೂವಿನಿಂದ ಅಲಂಕಾರ ಮಾಡಿ ಅಪಾಯವನ್ನು ಆಹ್ವಾನಿಸುವ ಸಾಧ್ಯತೆಯೂ ಈ ಪೈಪೋಟಿಯಲ್ಲಿ ಇಲ್ಲದಿಲ್ಲ.

ಕೆಲವರು ತಮ್ಮ ವಾಹನಗಳಿಗೆ ಪ್ರಾಣಿ ಬಲಿಯನ್ನೂ ಕೊಡುತ್ತಾರೆ. ಸರ್ಕಾರ ವಾಹನಗಳಿಗೆ ಪ್ರಾಣಿ ಬಲಿ ಕೊಡುವುದನ್ನು ನಿಷೇಧಿಸಿದೆ. ಆದಾಗ್ಯೂ, ಕೋಳಿ, ಕುರಿಗಳು ಯಥೇಚ್ಚವಾಗಿ ವಾಹನಗಳಿಗೆ ಬಲಿಯಾಗುತ್ತವೆ. ಗ್ರಾಮೀಣ ಪ್ರದೇಶಗಳಲ್ಲಿ ಆಯುಧಪೂಜೆ ಸಲುವಾಗಿ ಮಾಂಸದ ಚೀಟಿ ಹಾಕುವುದೂ ಉಂಟು.

ಆದರೆ, ಸಾತ್ವಿಕರು, ತಮ್ಮ ಈ ಬಲಿ ಪೂಜೆಗೆ ನಿಂಬೆ ಹಣ್ಣು ಹಾಗೂ ಕುಂಬಳಕಾಯಿಯನ್ನು ಮಾತ್ರ ಆಶ್ರಯಿಸುತ್ತಾರೆ. ಹೀಗಾಗೆ ಇಂದು ರಸ್ತೆ ರಸ್ತೆಗಳಲ್ಲಿ ಮಾವಿನ ಸೊಪ್ಪು, ಬಾಳೆಕಂದು, ಕುಂಬಳಕಾಯಿಯ ದರ್ಬಾರು ನಡಯುತ್ತದೆ. ಮಾರುಕಟ್ಟೆ ಪ್ರದೇಶದ ಇಕ್ಕೆಲಗಳಲ್ಲಿ ಕುಂಬಳಕಾಯಿ, ಬಾಳೆಕಂದು ತಮ್ಮ ರಾಜ್ಯಭಾರ ಮಾಡುತ್ತವೆ.

ಪ್ರಿಂಟಿಂಗ್ ಪ್ರೆಸ್‌ಗಳು, ಗ್ಯಾರೇಜ್‌ಗಳು, ವಾಹನ ಮಾರಾಟ ಮಾಡುವ ಷೋರೂಂಗಳು ಸುಣ್ಣ ಬಣ್ಣಗಳಿಂದ ಕಂಗೊಳಿಸುತ್ತಿವೆ. ಬಾಳೆಕಂದು, ಮಾವಿನಸೊಪ್ಪು, ಹೂವಿನಿಂದ ಅಲಂಕೃತಗೊಂಡಿವೆ. ಚಿನ್ನಾರಿ ಕಾಗದದ ಅಲಂಕಾರ ಮನಸೂರೆಗೊಳ್ಳುತ್ತಿದೆ.

ಮುಖಪುಟ /ನಮ್ಮಹಬ್ಬಗಳು