ಮುಖಪುಟ /ಸಿನಿಮಾ   

ಅಭಿನಯ ಸರಸ್ವತಿ ಬಿ. ಸರೋಜಾದೇವಿ ಅವರಿಗೆ ಜೀವಿತಾವಧಿ ಸಾಧನೆಯ ರಾಷ್ಟ್ರೀಯ ಪ್ರಶಸ್ತಿ
ಚತುರ್ಭಾಷಾ ತಾರೆ ಸರೋಜಾದೇವಿ ಅವರ ಸಾಧನೆಯ ಪರಿಚಯ

ನವದೆಹಲಿ: ಬಹುಭಾಷಾ ತಾರೆ, ಅಭಿನಯ ಸರಸ್ವತಿ ಬಿ. ಸರೋಜಾದೇವಿ ಅವರಿಗೆ 2006ನೇ ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರತಿಭಾ ದೇವಿಸಿಂಗ್ ಪಾಟೀಲ್ ಜೀವಿತಾವಧಿ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿದರು.

ಪ್ರಶಸ್ತಿಯು 10 ಲಕ್ಷ ರೂಪಾಯಿ ನಗದು ಹಾಗೂ ಮಾನಪತ್ರವನ್ನು ಒಳಗೊಂಡಿದೆ.

ಕನ್ನಡ ಚಿತ್ರರಂಗದ ಭೀಷ್ಮ ಹೊನ್ನಪ್ಪ ಭಾಗವತರ್ ಅವರ ಮಹಾಕವಿ ಕಾಳಿದಾಸ ಚಿತ್ರದ ಮೂಲಕ ೧೯೫೫ರಲ್ಲಿ ಕನ್ನಡ ಚಿತ್ರರಂಗ ಪ್ರವೇಶಿಸಿದ ಬಿ. ಸರೋಜಾದೇವಿ ತಮ್ಮ ಅಭಿನಯ ಕೌಶಲದಿಂದ ಬಹುಬೇಗ ಚತುರ್ಭಾಷಾ ತಾರೆಯಾದವರು.

ಚನ್ನಪಟ್ಟಣ ತಾಲೂಕಿನ ದಶಾವರ ಗ್ರಾಮದ ಬಡಕುಟುಂಬದಲ್ಲಿ ಜನಿಸಿದ ಸರೋಜಾದೇವಿ ಅವರಿಗೆ ಬಾಲ್ಯದಿಂದಲೇ ಲಲಿತಕಲೆಗಳ ಬಗ್ಗೆ ಆಸಕ್ತಿ ಇತ್ತು. ಇವರಲ್ಲಿದ್ದ ಪ್ರತಿಭೆಯನ್ನು ಮೊದಲು ಗುರುತಿಸಿದವರು ಹೊನ್ನಪ್ಪ ಭಾಗವತರು. ೧೯೫೫ರಲ್ಲಿ ಚಿತ್ರರಂಗ ಪ್ರವೇಶಿಸಿದ ಸರೋಜಾದೇವಿ ಅವರು, ೮೦ರ ದಶಕದವರೆಗೂ ದಕ್ಷಿಣಭಾರತದ ಚಿತ್ರೋದ್ಯಮದಲ್ಲಿ ಸುಭದ್ರ ಸ್ಥಾನ ಉಳಿಸಿಕೊಂಡವರು.

ರಾಜ್‌ಕುಮಾರ್, ಕಲ್ಯಾಣ್‌ಕುಮಾರ್, ಎ. ನಾಗೇಶ್ವರರಾವ್, ಉದಯಕುಮಾರ್, ಎನ್.ಟಿ. ರಾಮರಾವ್, ಜೆಮಿನಿ ಗಣೇಶನ್, ಶಿವಾಜಿಗಣೇಶನ್, ಎಂ.ಜಿ. ರಾಮಚಂದ್ರನ್, ದಿಲೀಪ್ ಕುಮಾರ್, ರಾಜೇಂದ್ರಕುಮಾರ್, ಶಮ್ಮೀಕಪೂರ್, ಸುನಿಲ್‌ದತ್ ಮೊದಲಾದವರೊಂದಿಗೆ ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಚಿತ್ರಗಳಲ್ಲಿ ನಟಿಸಿರುವ ಸರೋಜಾದೇವಿ ಅವರಿಗೆ ಸಂಗಮ್ ಚಿತ್ರದಲ್ಲಿ ಹಿಂದಿ ಚಿತ್ರರಂಗದ ಮೇರುನಟ, ಷೋ ಮ್ಯಾನ್ ರಾಜ್‌ಕಪೂರ್ ಅವರೊಂದಿಗೆ ನಟಿಸುವ ಅವಕಾಶ ಕೈತಪ್ಪಿದ ಬಗ್ಗೆ ನೋವಿದೆ.

ಸಂಗಮ್‌ನಲ್ಲಿ ವೈಜಯಂತಿ ಮಾಲಾ ನಿರ್ವಹಿಸಿದ ನಾಯಕಿಯ ಪಾತ್ರಕ್ಕೆ ಮೊದಲು ಆಫರ್ ಬಂದಿದ್ದೇ ಸರೋಜಾದೇವಿ ಅವರಿಗೆ, ಆದರೆ, ಮೇರಿ ಮನ್‌ಕಿ ಗಂಗಾ, ತೇರಿ ಮನ್ ಜಮುನಾ ಕಾ ಬೋಲು ರಾಧಾ ಬೋಲು ಸಂಗಮ್ ಹೋತಾಹೈ ನಹೀ.. ಹಾಗೂ ಮೈ ಕ್ಯಾಕರು ರಾಮ್ ಮುಜೇ ಬುಡ್ಡಾ ಮಿಲ್‌ಗಯಾ ಹಾಡಿಗೆ ಈಜುಡುಗೆ ಹಾಗೂ ಬಿಕನಿ ತೊಟ್ಟು ನರ್ತಿಸುವ ದೃಶ್ಯದಲ್ಲಿ ಪಾಲ್ಗೊಳ್ಳಲು ಸರೋಜಾದೇವಿ ಬಿಲ್‌ಖುಲ್ ಒಪ್ಪದ ಕಾರಣ ಆ ಅವಕಾಶ ವೈಜಯಂತಿ ಪಾಲಾಯ್ತು.

ಕಿತ್ತೂರಿರಾಣಿ ಚೆನ್ನಮ್ಮನ ಪಾತ್ರದಲ್ಲಿ, ನೀವೇನು ಉತ್ತಿರ, ಬಿತ್ತಿರಾ, ಬೆಳೆಬೆಳೆದಿರಾ? ನಿಮಗೇಕೆ ಕೊಡಬೇಕು ಕಪ್ಪ .. ಎಂದು ಬ್ರಿಟಿಷ್ ಅಕಾರಿಯ ಬೆವರಿಳಿಸಿದ ಸರೋಜಾದೇವಿಯವರನ್ನು ಆ ಪಾತ್ರದಲ್ಲಿ ಊಹಿಸಿಕೊಳ್ಳುವುದೂ ಕಷ್ಟಸಾಧ್ಯ. ಸರೋಜಾದೇವಿ ಅವರ ತಾಯಿ ರುದ್ರಮ್ಮ ಕೂಡ ಈ ಪಾತ್ರ ಬೇಡವೇ ಬೇಡ ಎಂದರು. ಹೀಗಾಗೆ ಸರೋಜಾದೇವಿ ಅವರು ಗಂಭೀರಪಾತ್ರಗಳ ಮೂಲಕವೇ ಮುಕ್ಕೋಟಿ ಕನ್ನಡಿಗರ ಮನಗೆದ್ದರು.

ಆಷಾಡಭೂತಿ, ಶ್ರೀರಾಮಪೂಜಾ, ಕಚ ದೇವಯಾನಿ, ರತ್ನಗಿರಿ ರಹಸ್ಯ, ಕೋಕಿಲವಾಣಿ, ಸ್ಕೂಲ್‌ಮಾಸ್ಟರ್, ಪಂಚರತ್ನ, ಲಕ್ಷ್ಮೀಸರಸ್ವತಿ, ಚಿಂತಾಮಣಿ, ಭೂಕೈಲಾಸ, ಅಣ್ಣತಂಗಿ, ಜಗಜ್ಯೋತಿ ಬಸವೇಶ್ವರ, ಕಿತ್ತೂರುರಾಣಿ ಚೆನ್ನಮ್ಮ, ಅಮರಶಿಲ್ಪಿ ಜಕಣಾಚಾರಿ, ಕಥಾಸಾಗರ, ಬಬ್ರುವಾಹನ, ಭಾಗ್ಯವಂತರು, ಕಿತ್ತೂರುಚೆನ್ನಮ್ಮ, ದೇವಸುಂದರಿ, ವಿಜಯನಗರದ ವೀರಪುತ್ರ, ಮಲ್ಲಮ್ಮನ ಪವಾಡ, ಶ್ರೀಕೃಷ್ಣರುಕ್ಮಿಣಿ ಸತ್ಯಭಾಮ, ಪೂರ್ಣಿಮಾ, ಗೃಹಿಣಿ, ಪಾಪಪುಣ್ಯ, ಸಹಧರ್ಮಿಣಿ, ಶ್ರೀನಿವಾಸಕಲ್ಯಾಣ, ಚಾಮುಂಡೇಶ್ವರಿ ಮಹಿಮೆ, ಚಿರಂಜೀವಿ, ಶನಿಪ್ರಭಾವ ಮೊದಲಾದ ಚಿತ್ರಗಳ ಮೂಲಕ ಭಾರಿ ಜನಪ್ರಿಯತೆ ಗಳಿಸಿದರು.

೧೯೬೭ರಲ್ಲಿ ಎಂಜಿನಿಯರ್ ಶ್ರೀಹರ್ಷ ಅವರನ್ನು ವರಿಸಿದ ಸರೋಜಾದೇವಿ ೧೯೬೯ರಲ್ಲಿ ರಷ್ಯ ಸರ್‍ಕಾರದ ಆಮಂತ್ರಣದ ಮೇರೆಗೆ ರಷ್ಯದಲ್ಲಿ ನಡೆದ ೪ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿದ್ದರು. ತಮ್ಮ ಹುಟ್ಟೂರಿನಲ್ಲಿ ಶಾಲೆಯೊಂದನ್ನೂ ಕಟ್ಟಿಸಿರುವ ಸರೋಜಾದೇವಿ ಅವರ ಕಲಾಸೇವೆಯನ್ನು ಪರಿಗಣಿಸಿ ೧೯೬೯ರಲ್ಲಿ ಇವರಿಗೆ ಕೇಂದ್ರ ಸರಕಾರ ಪದ್ಮಶ್ರೀ ಹಾಗೂ ೯೨ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. ಪ್ರಸ್ತುತ ಜೀವಿತಾವಧಿ ಸಾಧನೆಯ ರಾಷ್ಟ್ರೀಯ ಪ್ರಶಸ್ತಿ ಮುಡಿಗೇರಿದೆ. ಅಭಿನಯ ಸರಸ್ವತಿ ಬಿ. ಸರೋಜಾದೇವಿ ಅವರಿಗೆ ಅಭಿನಂದನೆಗಳು.

ಮುಖಪುಟ /ಸಿನಿಮಾ