ಮುಖಪುಟ /ಸಿನಿಮಾ   

ಅತ್ಯುತ್ತಮ ಅಭಿನೇತ್ರಿ ಎಂ.ವಿ.ರಾಜಮ್ಮ
ಬಿ.ಆರ್. ಪಂತಲು - ರಾಜಮ್ಮನವರ ತಾರಾಜೋಡಿ 2 ದಶಕಗಳ ಕಾಲ ಮನೆಮಾತಾಗಿತ್ತು...

Rajammaನಾಟಕ - ಸಿನಿಮಾಗಳಿಂದ ಸ್ತ್ರೀಯರು ದೂರವಿದ್ದ ಕಾಲವದು. ಹೀಗಾಗಿ ಸುಬ್ಬಯ್ಯನಾಯ್ಡು, ರಾಜ್‌ಕುಮಾರ್, ನಾಗೇಂದ್ರರಾವ್ ಮೊದಲಾದವರೇ ನಾಟಕಗಳಲ್ಲಿ ಸ್ತ್ರೀಪಾತ್ರ ನಿರ್ವಹಿಸುತ್ತಿದ್ದರು. ಆ ಕಾಲದಲ್ಲಿ  ವೃತ್ತಿರಂಗಭೂಮಿ ಪ್ರವೇಶಿಸಿದ ರಾಜಮ್ಮ ಅವರು ಸಂಸಾರನೌಕೆ, ಗೌತಮಬುದ್ಧ, ಸುಭದ್ರ ಮೊದಲಾದ ನಾಟಕಗಳಲ್ಲಿ ನಾಯಕಿಯಾಗಿ ಮಿಂಚಿದರು.

ನಾಟಕವಾಗಿ ಖ್ಯಾತಿ ಪಡೆದ ಸಂಸಾರನೌಕೆ(1936) ಚಲನಚಿತ್ರವಾದಾಗ ಅದರಲ್ಲೂ ಅಭಿನಯಿಸಿದ ರಾಜಮ್ಮನವರು ಕರ್ನಾಟಕದ ಮನೆಮಾತಾದರು. ಬೆಂಗಳೂರು ಜಿಲ್ಲೆಯ ಅಗ್ಗೊಂಡನಹಳ್ಳಿಯ ಜಮೀನುದಾರ್ ನಂಜಪ್ಪನವರ ಪುತ್ರಿಯಾದ ರಾಜಮ್ಮನವರು ನಂತರ ಸ್ವಂತ ನಿರ್ಮಾಣದ ಚಿತ್ರಗಳನ್ನು ತಯಾರಿಸಿ ನಿರ್ಮಾಪಕಿಯೂ ಆದರು.

M.V.Rajammaಇವರು 1943ರಲ್ಲಿ ನಿರ್ಮಿಸಿದ ರಾಧಾರಮಣ ಉತ್ತಮ ಚಿತ್ರವೆಂಬ ಖ್ಯಾತಿಗೆ ಪಾತ್ರವಾಯ್ತು. ಆ ನಂತರ ಪದ್ಮಿನಿ ಪಿಕ್ಚರ್ಸ್ ಸಹಯೋಗದಲ್ಲಿ ಇವರು ನಿರ್ಮಿಸಿದ ಮಕ್ಕಳರಾಜ್ಯ ಭಾರಿ ಜನಪ್ರಿಯತೆ ಗಳಿಸಿತು. ಆದರೆ, ಗಲ್ಲಾಪೆಟ್ಟಿಗೆಯಲ್ಲಿ ಸೋಲುಂಡ ಅವರು, ಚಿತ್ರನಿರ್ಮಾಣವನ್ನು ಕೈಬಿಟ್ಟರು.

ಆದರೆ, ನಟನೆ ಮುಂದುವರಿಸಿದ ಅವರು, ಮೊದಲತೇದಿ, ಸ್ಕೂಲ್ ಮಾಸ್ಟರ್, ಕಿತ್ತೂರು ಚೆನ್ನಮ್ಮ, ಸತಿಶಕ್ತಿ ಮೊದಲಾದ ಚಿತ್ರಗಳಲ್ಲಿ ನಟಿಸಿದರು. ಬಿ.ಆರ್. ಪಂತಲು - ರಾಜಮ್ಮ ಅವರ ತಾರಾಜೋಡಿ 2 ದಶಕಗಳ ಕಾಲ ಭಾರಿ ಹೆಸರು ಮಾಡಿತ್ತು. ಆನಂತರ ತಾಯಿಯ ಪಾತ್ರದಲ್ಲೂ ಅಭಿನಯಿಸಿದ ಅವರು, ದಾರಿತಪ್ಪಿದ ಮಗ ಮೊದಲಾದ ಚಿತ್ರಗಳಲ್ಲಿ ಮನೋಜ್ಞ ಅಭಿನಯ ನೀಡಿದರು.

60ಕ್ಕೂ ಹೆಚ್ಚು ಕನ್ನಡಚಿತ್ರ, 80ಕ್ಕೂ ಹೆಚ್ಚು ತಮಿಳು ಹಾಗೂ 20ಕ್ಕೂ ಹೆಚ್ಚು ತೆಲುಗು ಹಾಗೂ 1 ಹಿಂದಿ ಚಿತ್ರದಲ್ಲಿ ನಟಿಸಿರುವ ರಾಜಮ್ಮ ಅವರು ಬಹುಭಾಷಾ ನಟಿ.

Rajammaಬೆಂಗಳೂರು ಜಿಲ್ಲೆ ಅಗಂಡನಹಳ್ಳಿಯಲ್ಲಿ 1923ರಲ್ಲಿ ಜನಿಸಿದ ಅವರು ವಿದ್ಯಾಭ್ಯಾಸ ಮಾಡಿದ್ದು ಸಹ ಬೆಂಗಳೂರಿನ ಆರ್ಯ ಬಾಲಿಕಾ ಶಾಲೆಯಲ್ಲಿ. 8ನೇ ತರಗತಿವರೆಗೆ ಓದಿದ ರಾಜಮ್ಮ ನಾಟಕದ ಗೀಳಿನಿಂದ ರಂಗಭೂಮಿ ಪ್ರವೇಶಿಸಿದರು. ಆರಂಭದಲ್ಲಿ ಚಂದ್ರಕಲಾ ನಾಟಕ ಮಂಡಳಿಯಲ್ಲಿ ನಟಿಯಾಗಿದ್ದಾಗಲೇ ವೀರಪ್ಪ ಅವರನ್ನು ಮದುವೆಯಾದರು. ನಂತರ ಮದರಾಸಿಗೆ ಹೋಗಿ ನೆಲೆಸಿದರು. ಕಿತ್ತೂರು ಚೆನ್ನಮ್ಮ, ರತ್ನಗಿರಿ ರಹಸ್ಯ, ಸ್ಕೂಲ್ ಮಾಸ್ಟರ್, ಚಿನ್ನದಗೊಂಬೆ, ದುಡ್ಡೇ ದೊಡ್ಡಪ್ಪ, ಎಮ್ಮೆ ತಮ್ಮಣ್ಣ, ಮಾಲತಿ ಮಾಧವ, ಶ್ರೀಕೃಷ್ಣದೇವರಾಯ ಜಯಮ್ಮ ಅವರು ಅಭಿನಯಿಸಿದ ಕೆಲವು ಜನಪ್ರಿಯ ಚಿತ್ರಗಳು.

ಮುಖಪುಟ /ಸಿನಿಮಾ