ಮುಖಪುಟ /ಸಿನಿಮಾ   

ನೇಪಥ್ಯಕ್ಕೆ ಸರಿದ ಚಿಂದೋಡಿ ಲೀಲಾ

ಬೆಂಗಳೂರು, ಜ.21: ಹಿರಿಯ ರಂಗ ಕಲಾವಿದೆ, ಚಿತ್ರನಟಿ ಪದ್ಮಶ್ರೀ ಚಿಂದೋಡಿ ಲೀಲಾ ಗುರುವಾರ ರಾತ್ರಿ 9ಗಂಟೆ 10 ನಿಮಿಷದಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

ಕೆಲವು ದಿನಗಳಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಚಿಕಿತ್ಸೆ ಫಲ ಕಾಣದೆ ಅವರು ಕೊನೆಯುಸಿರೆಳೆದರೆಂದು ಕುಟುಂಬ ಮೂಲಗಳು ತಿಳಿಸಿವೆ. ಲೀಲಾ ಅವರಿಗೆ 72 ವರ್ಷ ವಯಸ್ಸಾಗಿತ್ತು.

ಶುಕ್ರವಾರ ಬೆಂಗಳೂರಿನ ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಲೀಲಾ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗುವುದು. ಬಳಿಕ ದಾವಣಗೆರೆಗೆ ಕೊಂಡೊಯ್ದು ಅವರ ಎಸ್ಟೇಟ್ ನಲ್ಲಿ ಅಂತಿಮ ಸಂಸ್ಕಾರ ನಡೆಸಲಾಗುವುದು ಎಂದು ಕುಟುಂಬ ವರ್ಗದವರು ಹೇಳಿದ್ದಾರೆ.

ಪ್ರತಿಭಾವಂತ ಕಲಾವಿದೆ ಚಿಂದೋಡಿ ಲೀಲಾ

 ಡಾ||ರಾಜ್ ಕುಮಾರ್ ಅಭಿನಯದ ಗಾಳಿಗೋಪುರ ಚಿತ್ರದಲ್ಲಿ ಕಲ್ಯಾಣಕುಮಾರ್ ಎದುರು ನಾಯಕಿಯಾಗಿ ನಟಿಸಿದ ಚಿಂದೋಡಿ ಲೀಲಾ ಅವರು ತಮ್ಮ ವಿಭಿನ್ನವಾದ ಹಾವಭಾವ ಹಾಗೂ ತಮ್ಮದೇ ಆದ ವಿಶಿಷ್ಟ ಶೈಲಿಯ ಡೈಲಾಗ್ ಡಿಲೆವರಿಯಿಂದ ಗಮನ ಸೆಳೆದಿದ್ದರು.

ಲೀಲಾ ಅವರಿಗೆ ತಂದೆ ತಾಯಿಗಳು ಇಟ್ಟ ಹೆಸರು ವೀರಮ್ಮ. ಬಾಲ್ಯದಿಂದಲೂ ರಂಗಭೂಮಿಯಲ್ಲಿ ನಟಿಸುತ್ತಿದ್ದ ಚಿಂದೋಡಿ ಲೀಲಾ ಅವರು 5ನೇ ವಯಸ್ಸಿನಲ್ಲಿ ಶಿವಯೋಗಿ ಸಿದ್ದರಾಮೇಶ್ವರ ನಾಟಕದಲ್ಲಿ ಬಾಲ ಸಿದ್ದರಾಮನ ಪಾತ್ರ ವಹಿಸುವ ಮೂಲಕ ರಂಗಭೂಮಿ ಪ್ರವೇಶಿಸಿದರು. ಅವರು ಕನ್ನಡ ಚಿತ್ರರಂಗ ಪ್ರವೇಶಿಸಿದ್ದು, 1972ರಲ್ಲಿ ತಯಾರಾದ ಕಿತ್ತೂರು ರಾಣಿ ಚೆನ್ನಮ್ಮ ಚಿತ್ರದ ಮೂಲಕ. ದೊರೆತ ಚಿಕ್ಕ ಪಾತ್ರದಲ್ಲೇ ಮನೋಜ್ಞ ಅಭಿನಯ ನೀಡಿದ ಲೀಲಾ ಅವರು ನಂತರ ನಾಯಕಿಯ ಪಟ್ಟಕ್ಕೇರಿದರು.

ಶರಪಂಜರ ಚಿತ್ರದಲ್ಲಿ ಮತ್ತೆ ಎರಡನೇ ನಾಯಕಿಯಾಗಿ ಒಂದರ್ಥದಲ್ಲಿ ಖಳನಾಯಕಿಯಾಗಿಯೂ ಅಭಿನಯಿಸಿ ಮನಗೆದ್ದರು. ಶ್ರೀಕೃಷ್ಣದೇವರಾಯ ಚಿತ್ರದಲ್ಲಿನ ಅವರ ಅಭಿನಯ ಮರೆಯುವಂತೆಯೇ ಇಲ್ಲ.

ರಜತ ಪರದೆಯಲ್ಲಿ ಹೇರಳ ಅವಕಾಶಗಳಿದ್ದರೂ ನೈಜ ಕಲಾ ಪ್ರತಿಭೆಯ ಪ್ರಕಾಶಕ್ಕೆ ನಿತ್ಯ ಸವಾಲಾಗುವ ರಂಗಭೂಮಿಯತ್ತಲೇ ಅವರ ಒಲವು ಹೆಚ್ಚಿತ್ತು. 1975ರಲ್ಲಿ ಸ್ವಂತವಾಗಿ ಕೆ.ಬಿ.ಆರ್. ನಾಟಕ ಕಂಪನಿ ಆರಂಭಿಸಿ ಅದರ ಜವಾಬ್ದಾರಿ ಹೊತ್ತ ಮೇಲಂತೂ ಅವರು ಸಿನಿಮಾ ರಂಗದಿಂದ ದೂರವೇ ಉಳಿದರು. ಈ ನಡುವೆಯೂ ಸಂಗೀತ ಪ್ರಧಾನವಾದ ಗಾನಯೋಗಿ ಪಂಚಾಕ್ಷರಿ ಗವಾಯಿ ಚಿತ್ರ ನಿರ್ಮಿಸಿದರು.

ಇವರ ಕಂಪನಿಯ ಪೊಲೀಸನ ಮಗಳು ನಾಟಕ ರಾಜ್ಯಾದ್ಯಂತ ದಾಖಲೆಯ ಪ್ರದರ್ಶನಗಳನ್ನು ಕಂಡಿತ್ತು. ಗಿನ್ನಿಸ್ ದಾಖಲೆಯನ್ನೂ ಮಾಡಿತ್ತು.

ಲೀಲಾ ಅವರು ರಂಗಭೂಮಿಗೆ ನೀಡಿದ ಸಾಧನೆ ಗುರುತಿಸಿ ರಾಜ್ಯ ಸರ್ಕಾರ ಇವರನ್ನು ಕರ್ನಾಟಕ ನಾಟಕ ಅಕಾಡಮಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಿತ್ತು. ಬೆಳಗಾವಿಯಲ್ಲಿ ಕನ್ನಡದ ಕಹಳೆ ಮೊಳಗಿಸಿ ಸಾವಿರಾರು ನಾಟಕ ಪ್ರದರ್ಶನ ನಡೆಸಿದ ಕೀರ್ತಿಗೂ ಪಾತ್ರರಾಗಿದ್ದ ಲೀಲಾ ಅವರು, 1990ರಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದರು.

ಚಿತ್ರ ನಿರ್ಮಾಪಕರಾಗಿ, ನಟಿಯಾಗಿ, ರಂಗಭೂಮಿ ಕಲಾವಿದೆಯಾಗಿ ವಿಶಿಷ್ಟ ಸೇವೆ ಸಲ್ಲಿಸಿದ್ದ ಇವರಿಗೆ ರಾಜ್ಯೋತ್ಸವ ಪ್ರಶಸ್ತಿ, ಪದ್ಮಶ್ರೀ, ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿಯೇ ಮೊದಲಾದ ಹತ್ತು ಹಲವು ಪ್ರಶಸ್ತಿ, ಪಾರಿತೋಷಕಗಳು ಲಭಿಸಿದ್ದವು.

ಮುಖಪುಟ /ಸಿನಿಮಾ