ಮುಖಪುಟ /ಸಿನಿಮಾ   

 ಐಂದ್ರಿತಾಗೆ ನಾಗತಿಹಳ್ಳಿ ಕಪಾಳ ಮೋಕ್ಷ

Aindritaಯುವ ನಾಯಕ ನಟಿ ಐಂದ್ರಿತಾ ರೇ ಅವರಿಗೆ ಸೆಟ್ ನಲ್ಲಿ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಕಪಾಳಕ್ಕೆ ಹೊಡೆದರೆಂಬ ಘಟನೆ ಈಗ ಚರ್ಚೆಯ ವಸ್ತುವಾಗಿದೆ. ಹೊಸ ವಿವಾದಕ್ಕೂ ನಾಂದಿ ಹಾಡಿದೆ.

ಹಾಂಕಾಂಗ್ ನಲ್ಲಿ 'ನೂರು ಜನುಮಕೂ' ಚಿತ್ರದ ಚಿತ್ರೀಕರಣ ನಡೆಯುತ್ತಿದ್ದ ಸಮಯದಲ್ಲಿ ಡಿಸೆಂಬರ್ 6ರಂದು ನಾಗತಿಹಳ್ಳಿ ಚಂದ್ರಶೇಖರ್ ತಮ್ಮ ಕೆನ್ನೆಗೆ ಬಲವಾಗಿ ಹೊಡೆದಿದ್ದು, ಇದರ ಪರಿಣಾಮವಾಗಿ ತಮ್ಮ ಕಿವಿಯಿಂದ ರಕ್ತ ಸುರಿಯಿತು. ಶ್ರವಣಶಕ್ತಿಯೂ ಕ್ಷೀಣಿಸಿದೆ ಎಂದು ಐಂದ್ರಿತಾ ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ದೂರಿದ್ದಾರೆ.

ನಾಗತಿಹಳ್ಳಿ ತಮ್ಮೊಂದಿಗೆ ಹಲವು ಬಾರಿ ಅಸಭ್ಯವಾಗಿ ವರ್ತಿಸಿದ್ದಾರೆ. ವಿನಾಕಾರಣ ಮೈ ಮುಟ್ಟುತ್ತಿದ್ದರು, ತಬ್ಬಿಕೊಳ್ಳಲು ಯತ್ನಿಸುತ್ತಿದ್ದರು, ಮಧ್ಯರಾತ್ರಿಯಲ್ಲಿ ಕರೆ ಮಾಡುತ್ತಿದ್ದರು ಇದಕ್ಕೆ ನಾನು ಪ್ರತಿರೋಧ ತೋರಿದ್ದಕ್ಕೆ ಕೆನ್ನೆಗೆ ಹೊಡೆದರು ಎಂದೂ ಆಕೆ ಗುರುತರವಾದ ಆರೋಪ ಮಾಡಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಚಿತ್ರ ಕಲಾವಿದರ ಸಂಘ ಹಾಗೂ ನಿರ್ಮಾಪಕರ ಸಂಘಕ್ಕೆ ದೂರು ನೀಡಿದ್ದು ತಮಗೆ ನ್ಯಾಯ ದೊರಕದಿದ್ದರೆ, ಕನ್ನಡದಲ್ಲಿ ಇದುವೇ ತಮ್ಮ ಕೊನೆಯ ಚಿತ್ರ ಎಂದು ಅವರು ಹೇಳಿದ್ದಾರೆ.

ನಾನು ತಪ್ಪು ಮಾಡಿಲ್ಲ ನಾಗತಿಹಳ್ಳಿ

Nagatihalli Chandrashekarಐಂದ್ರಿತಾ ಶುದ್ಧ ಸುಳ್ಳಿ, ಆಕೆ ನೀಡುತ್ತಿರುವ ಹೇಳಿಕೆಗಳು ಸತ್ಯದೂರವಾದುದು. ವಿಕೃತ ಮನಸ್ಸಿನ ಹುಡುಗಿ. ಆಕೆ ನನ್ನ ಮಗಳ ವಯಸ್ಸಿನವಳು. ನಾನು ಎಂದೂ ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಿಲ್ಲ. ಐಂದ್ರಿತಾ ಸಮಯಕ್ಕೆ ಸರಿಯಾಗಿ ಚಿತ್ರೀಕರಣಕ್ಕೆ ಬರುತ್ತಿರಲಿಲ್ಲ. ಘಟನೆ ನಡೆದ ದಿನ ಆಕೆ 3 ಗಂಟೆ ತಡವಾಗಿ ಚಿತ್ರೀಕರಣ ತಾಣಕ್ಕೆ ಬಂದರು. ಎಲ್ಲ ತಂತ್ರಜ್ಞರು, ಚಿತ್ರೀಕರಣ ತಂಡ ಇವರಿಗಾಗಿ ಗಂಟೆ ಗಟ್ಟಲೆ ಕಾಯುವಂತಾಯಿತು. ನಾನು ಸಮಯಕ್ಕೆ ಸರಿಯಾಗಿ ಬಾರದ ಕಾರಣ ಕ್ಷಮೆ ಕೋರುವಂತೆ ಸೂಚಿಸಿದೆ, ಆಕೆ ನನ್ನನ್ನೇ ತಳ್ಳಿ ಹೋದಳು, ಕೋಪಗೊಂಡು ನಾನು ಹೊಡೆದಿದ್ದು ನಿಜ ಎಂದು ನಾಗತಿಹಳ್ಳಿ ಹೇಳಿದ್ದಾರೆ.

ಐಂದ್ರಿತಾಗೆ ನಿರ್ಮಾಪಕರು 9 ಲಕ್ಷ ರೂಪಾಯಿ ಸಂಭಾವನೆ ನೀಡಿದ್ದರು. ಕೇವಲ ಒಂದು ಲಕ್ಷ ಮಾತ್ರ ಬಾಕಿ ಇತ್ತು. ಇದನ್ನು ಕೊಡುವವರೆಗೆ ಶೂಟಿಂಗ್ ಗೆ ಬರಲ್ಲ ಎಂದು ರಂಪಾಟ ಮಾಡಿದಳು ಎಂದು ದೂರಿದರು. ಆಕೆ ತಪ್ಪು ತಿದ್ದುಕೊಂಡರೆ ಜಾಣೆಯಾಗುತ್ತಾಳೆ. ಕನ್ನಡ ಚಿತ್ರದಲ್ಲಿ ನಟಿಸಲ್ಲ ಎಂಬ ಗೊಡ್ಡು ಬೆದರಿಕೆ ಹಾಕಿದರೆ ಅದು ಆಕೆಗೇ ನಷ್ಟ. ಕನ್ನಡ ಚಿತ್ರರಂಗಕ್ಕೆ ನಾಗತಿಹಳ್ಳಿ ಚಂದ್ರಶೇಖರ್ ಆಗಲೀ, ಐಂದ್ರಿತಾ ರೇ ಆಗಲಿ ಅನಿವಾರ್ಯ ಅಲ್ಲ ಎಂದು ನಾಗತಿಹಳ್ಳಿ ಚಂದ್ರಶೇಖರ್ ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಪ್ರತಿಕ್ರಿಯಿಸಿದ್ದಾರೆ.

ಮುಖಪುಟ /ಸಿನಿಮಾ