ಮುಖಪುಟ /ಸಿನಿಮಾ    

ಮರೆಯದ ಮಾಣಿಕ್ಯ ಸಾಹಸಸಿಂಹ ವಿಷ್ಣುವರ್ಧನ್
ಕನ್ನಡಚಿತ್ರರಂಗವನ್ನು ಶ್ರೀಮಂತಗೊಳಿಸಿದ ಹೃದಯವಂತ

Vishnuvardhan, ವಿಷ್ಣುವರ್ಧನ್ಕನ್ನಡ ಚಲನಚಿತ್ರರಂಗದ ಪ್ರಸಿದ್ಧ ನಾಯಕ ನಟ ವಿಷ್ಣುವರ್ಧನ್ ನಮ್ಮನ್ನಗಲಿ ವರ್ಷಗಳೇ ಉರುಳಿದರೂ, ಅದನ್ನು ನಂಬಲು ಅಭಿಮಾನಿಗಳು ಸಿದ್ಧರಿಲ್ಲ.

ಸಾಹಸಸಿಂಹ ಇಹ ಲೋಕ ತ್ಯಜಿಸಿದ್ದಾರೆ ಎಂಬುದನ್ನು ಅರಗಿಸಿಕೊಳ್ಳಲೂ ಅಭಿಮಾನಿಗಳಿಗೆ  ಆಗುತ್ತಿಲ್ಲ. ಕನ್ನಡ ಚಿತ್ರರಂಗದ ಮುತ್ತಿನ ಹಾರ ಕಳಚಿ ಬಿತ್ತಲ್ಲ ಎಂದು ಕೊರಗುವವರೇ ಹೆಚ್ಚು. ವಿಷ್ಣುವರ್ಧನ್ ಅವರಿಗೆ ಸಾಯುವ ವಯಸ್ಸು ಖಂಡಿತಾ ಆಗಿರಲಿಲ್ಲ. ಸಾವು ತರುವಂಥ ದೀರ್ಘ ಕಾಲದ ಅನಾರೋಗ್ಯವೂ ಇರಲಿಲ್ಲ. ಆದರೂ ಹೃದಯವಂತರಾದ ವಿಷ್ಣುವರ್ಧನ್ ಗೆ ಹೃದಯವೇ ಕೈಕೊಟ್ಟಿತು. ಮೈಸೂರಿನ ಹೋಟೆಲ್ ನಲ್ಲಿ ತಂಗಿದ್ದ ವಿಷ್ಣುವರ್ಧನ್ ಅವರು 2009ರ ಡಿಸೆಂಬರ್ 30ರ ಬೆಳಗಿನ ಜಾವ ತೀವ್ರ ಹೃದಯಾಘಾತದಿಂದ ಇಹವನ್ನು ತ್ಯಜಿಸಿದರು.

ಎಸ್.ಎಲ್. ಭೈರಪ್ಪನವರ ಕಾದಂಬರಿ ಆಧರಿಸಿ, ಗಿರೀಶ್ ಕಾರ್ನಾಡ್ ಮತ್ತು ಬಿ.ವಿ. ಕಾರಂತರು ನಿರ್ದೇಶಿಸಿದ ವಂಶವೃಕ್ಷ ಚಲನಚಿತ್ರದಲ್ಲಿ ಸಣ್ಣ ಪಾತ್ರ ಮಾಡುವ ಮೂಲಕ ಚಲನಚಿತ್ರ ರಂಗವನ್ನು ಪ್ರವೇಶಿಸಿದ ವಿಷ್ಣುವರ್ಧನ್  ಕನ್ನಡ ಚಿತ್ರರಂಗದಲ್ಲಿ ಮೂಡಿಸಿದ ಛಾಪು ಮರೆಯಲಾಗದಂಥದ್ದು, ಹೀಗಾಗೇ ವಿಷ್ಣು ಇಂದಿಗೂ ಮರೆಯದ ಮಾಣಿಕ್ಯ.

ಕನ್ನಡದ ದೀಮಂತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದ ನಾಗರಹಾವು ಚಿತ್ರದಲ್ಲಿ ಮೊಟ್ಟ ಮೊದಲ ಬಾರಿಗೆ ನಾಯಕನಟರಾಗಿ ಅಭಿನಯಿಸಿದ ವಿಷ್ಣು ನಂತರ ಹಿಂತಿರುಗಿ ನೋಡಲೇ ಇಲ್ಲ.

ವಿಷ್ಣುವರ್ಧನ್ನಾಗರಹಾವು (೧೯೭೨), ಭೂತಯ್ಯನ ಮಗ ಅಯ್ಯು (೧೯೭೪), ಮಕ್ಕಳ ಭಾಗ್ಯ (೧೯೭೬), ನಾಗರಹೊಳೆ (೧೯೭೭), ಹೊಂಬಿಸಿಲು (೧೯೭೮), ಬಂಧನ (೧೯೮೪), ಮಲಯ ಮಾರುತ (೧೯೮೬) ದಾದ (೧೯೮೮), ಮುತ್ತಿನಹಾರ (೧೯೯೦), ಸಂಘರ್ಷ(೧೯೯೩), ಲಾಲಿ (೧೯೯೭), ವೀರಪ್ಪನಾಯಕ (೧೯೯೮), ಸೂರಪ್ಪ (೧೯೯೯), ಬಳ್ಳಾರಿ ನಾಗ (2009) ಸೇರಿದಂತೆ 197 ಚಿತ್ರಗಳಲ್ಲಿ ನಟಿಸಿದ್ದ ಡಾ. ವಿಷ್ಣುವರ್ಧನ್ ಕನ್ನಡ ಚಿತ್ರರಂಗದ ಕರುಣಾಮಯಿ.

ಕನ್ನಡ, ಹಿಂದಿ, ತಮಿಳು ಚಿತ್ರಗಳಲ್ಲೂ ನಟಿಸಿ ಚಿತ್ರರಸಿಕರ ಆರಾಧ್ಯದೈವವಾಗಿದ್ದ ವಿಷ್ಣುವರ್ಧನ್ ಜನಿಸಿದ್ದು, ೧೯೫೨ರಲ್ಲಿ ಮೈಸೂರಿನಲ್ಲಿ. ಬಾಲ್ಯದ ವಿದ್ಯಾಭ್ಯಾಸ ನಡೆದಿದ್ದೂ ಮೈಸೂರಿನಲ್ಲೇ. ನಂತರ ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ವಿಷ್ಣುವರ್ಧನ್ ಬಾಲ್ಯದಿಂದಲೇ ಅಭಿನಯದ ಗೀಳು ಮೂಡಿಸಿಕೊಂಡಿದ್ದರು. ಕಾಲೇಜಿನಲ್ಲಿ ಓದುತ್ತಿದ್ದಾಗ ಹಲವಾರು ನಾಟಕಗಳಲ್ಲಿ ನಟಿಸಿದ್ದ ವಿಷ್ಣುವರ್ಧನ್  ಚಿತ್ರರಂಗ ಪ್ರವೇಶಿಸಿದ ಬಳಿಕ ತಮ್ಮ ಮುದ್ದು ಮುಖ ಹಾಗೂ ಪ್ರೌಢ ಅಭಿನಯದಿಂದ ಬಹುಬೇಗ ಉತ್ತುಂಗಕ್ಕೇರಿದರು.

Vishnuvardhanನಾರಾಯಣರಾವ್ ಹಾಗೂ ಕಾಮಾಕ್ಷಮ್ಮ ಅವರ ಪುತ್ರರಾಗಿ 1952ರ ಸೆಪ್ಟೆಂಬರ್ 18ರಂದು ಮೈಸೂರಿನಲ್ಲಿ ಜನಿಸಿದ ವಿಷ್ಣುವರ್ಧನ್ ಅವರ ಮೊದಲ ಹೆಸರು ಸಂಪತ್ ಕುಮಾರ್. ನಾಗರಹಾವು ಚಿತ್ರದಲ್ಲಿ ರಾಮಾಚಾರಿ ಪಾತ್ರವನ್ನು ನಿರ್ವಹಿಸಿದ ಸಂಪತ್ಕುಮಾರ್ ವಿಷ್ಣುವರ್ಧನ್ ಆದರು. ವ್ಯವಸ್ಥೆ ವಿರುದ್ಧ ಸಿಡಿದೇಳುವ ಹಾಗೂ ಸಾಮಾಜಿಕ ಕಳಕಳಿಯುಳ್ಳ ನಾಯಕ ಪಾತ್ರಗಳಲ್ಲಿ ಅಭಿನಯಿಸಿ ಚಿತ್ರರಸಿಕರ ಮನಗೆದ್ದರು.

ಕನ್ನಡದ ಮೇರು ನಟ ಡಾ.ರಾಜ್ ಕುಮಾರ್ ಅವರೊಂದಿಗೆ ಗಂಧದ ಗುಡಿ ಚಿತ್ರದಲ್ಲಿ ನಟಿಸಿದ ವಿಷ್ಣುವರ್ಧನ್, ರಾಜ್ ಕುಮಾರ್ ನಂತರ ಕನ್ನಡ ಚಿತ್ರರಂಗದ ಮೇರು ನಟರೆನಿಸಿದ್ದರು. ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್ ಅವರೊಂದಿಗೆ ಕಳ್ಳ ಕುಳ್ಳ, ಸಿಂಗಾಪುರದಲ್ಲಿ ರಾಜಾ ಕುಳ್ಳ, ಕಿಲಾಡಿ ಜೋಡಿ, ಕಿಟ್ಟು ಪುಟ್ಟು, ಕಿಲಾಡಿ ಕಿಟ್ಟು, ಮನೆಮನೆ ಕಥೆ, ಆಪ್ತಮಿತ್ರ, ಆಪ್ತರಕ್ಷಕ ಮೊದಲಾದ ಚಿತ್ರಗಳಲ್ಲಿ ನಿಟಿಸಿದ್ದ ವಿಷ್ಣುವರ್ಧನ್ ನಿರ್ಮಾಪಕರ ಪಾಲಿನ ಕಾಮಧೇನುವಾಗಿದ್ದರು. ವಿಷ್ಣುವರ್ಧನ್ ಅಭಿನಯದ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಸೋತಿದ್ದು ಅಪರೂಪ.  

ವಿಷ್ಣುವರ್ಧನ್ ಮುತ್ತಿನಹಾರ, ಲಾಲಿ, ವೀರಪ್ಪನಾಯಕ ಚಿತ್ರಗಳ ಅಭಿನಯ ಸೇರಿ 6 ಬಾರಿ ಶ್ರೇಷ್ಠನಟ ಪ್ರಶಸ್ತಿಗೆ ಪಾತ್ರರಾಗಿದ್ದರು.  

ಮುಖಪುಟ /ಸಿನಿಮಾ