ಮುಖಪುಟ /ಸಿನಿಮಾ    

ಚಾಲೆಂಜಿಂಗ್ ಸ್ಟಾರ್ ದರ್ಶನ್

Darshan, ದರ್ಶನ ಬಿಡುಗಡೆಎಸ್.ನಾರಾಯಣ್ ಅವರ ಮಹಾಭಾರತ ಚಿತ್ರದ ಮೂಲಕ ಖಳನಟರಾಗಿ ಚಿತ್ರರಂಗಕ್ಕೆ ಪ್ರವೇಶಿಸಿದ ದರ್ಶನ್  ತೂಗುದೀಪ ಶ್ರೀನಿವಾಸ್ ಅವರ ಪುತ್ರ. ತಂದೆಯಂತೆಯೇ ಕನ್ನಡ ಚಿತ್ರರಂಗದಲ್ಲಿ ಖಳನಟರಾಗಿ ತಳವೂರುವ ಸೂಚನೆ ನೀಡಿದ್ದ ದರ್ಶನ್ ಮೆಜಿಸ್ಟಿಕ್ ಚಿತ್ರದ ಮೂಲಕ ನಾಯಕನಟರಾಗಿ ಬಡ್ತಿ ಪಡೆದರು.

ತಮ್ಮ ಎತ್ತರದ ನಿಲುವು, ತೂಕವಾದ ಅಭಿನಯದಿಂದ ಮೆಜಿಸ್ಟಿಕ್ ಚಿತ್ರದಲ್ಲಿ ಜನಮನ್ನಣೆ ಪಡೆದ ದರ್ಶನ್ ಖಳನಟನಿಂದ ನಾಯಕ ನಟನಾದರೂ, ಈಗ ಪತ್ನಿ ವಿಜಯಲಕ್ಷ್ಮೀ ಮೇಲೆ ಹಲ್ಲೆ ಮಾಡಿದ ಆರೋಪ ಎದುರಿಸುವ ಮೂಲಕ ಬಂಧನಕ್ಕೆ ಒಳಗಾಗಿ ಬದುಕಿನಲ್ಲೇ ಖಳನಟರಾಗಿ ಹೋಗಿದ್ದಾರೆ.

ಆದರೂ ದರ್ಶನ್ ಅವರ ಬಗ್ಗೆ ಅವರ ಅಭಿಮಾನಿಗಳ ಪ್ರೀತಿ ಕುಂದಿಲ್ಲ. ತಮ್ಮ ನೆಚ್ಚಿನ ನಟನ ಬಿಡುಗಡೆಗಾಗಿ ಅವರು ಪೂಜೆ, ಹವನ ಹೋಮಗಳನ್ನೂ ನಡೆಸಿದ್ದಾರೆ. ಪರಪ್ಪನ ಅಗ್ರಹಾರ ಕಾರಾಗೃಹದ ಬಳಿ ಕಾದು ನಿಂತು ತಮ್ಮ ನಟನ ದರ್ಶನಕ್ಕೆ ಕಾದಿದ್ದಾರೆ.

ಎಲ್ಲರ ಮನೆಯಲ್ಲೂ ಗಂಡ ಹೆಂಡತಿ ನಡುವೆ ಜಗಳ ಇದ್ದೇ ಇರುತ್ತದೆ. ದರ್ಶನ್ ಮನೆಯಲ್ಲಿ ಇದು ತುಸು ಹೆಚ್ಚಾಗಿತ್ತು. ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ, ಬಂದೂಕು ತೋರಿಸಿ ಜೀವ ಬೆದರಿಕೆ ಹಾಕಿದ ಆರೋಪ ವಿಜಯನಗರ ಪೊಲೀಸ್ ಠಾಣೆಯಲ್ಲಿ ದಾಖಲಾಯ್ತು.

ಪೊಲೀಸರು ದರ್ಶನ್ ರನ್ನು ಬಂಧಿಸಿದರು. ನ್ಯಾಯಾಲಯ ಅವರಿಗೆ ಜಾಮೀನು ನೀಡಲು ನಿರಾಕರಿಸಿದ ಪರಿಣಾಮ ಜೈಲು ಸೇರುವಂತಾಯ್ತು. ಈಗ ಹೈಕೋರ್ಟ್ ದರ್ಶನ್ ಗೆ ಷರತ್ತಿನ ಜಾಮೀನು ನೀಡಿದೆ. ಅ.7ರಂದು ದರ್ಶನ್ ಒಂದು ತಿಂಗಳ ಸೆರೆವಾಸದ ಬಳಿಕ ಬಂಧನದಿಂದ ಬಿಡುಗಡೆಯಾಗಿದ್ದಾರೆ.

ಮೆಜೆಸ್ಟಿಕ್ ಚಿತ್ರ ಕ್ಲಿಕ್ಕಾದ ನಂತರ ಧ್ರುವ, ನಿನಗೋಸ್ಕರ, ಲಂಕೇಶ್ ಪತ್ರಿಕೆ, ಗಜ ಸೂಪರ್ ಹಿಟ್ ಆಯ್ತು. ಈ ಚಿತ್ರದ ಬಳಿಕವಂತೂ ದರ್ಶನ್‌ಗೆ ಬೇಡಿಕೆ ಹೆಚ್ಚಾಯ್ತು. ಲಂಕೇಶ್ ಪತ್ರಿಕೆ ಬಿಡುಗಡೆ ಆದ ಬಳಿಕ ದರ್ಶನ್ ತಾವು ಪ್ರೀತಿಸಿದ ಹುಡುಗಿ ವಿಜಯಲಕ್ಷ್ಮಿಯನ್ನು (2003 ಮೇ ೧೯) ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಹಿರಿಯರ ಸಮ್ಮುಖದಲ್ಲಿ ಕೈಹಿಡಿದಿದ್ದರು. ಆದರೆ ಮನೆಯಲ್ಲಿ ಉಂಟಾದ ಭಿನ್ನಾಭಿಪ್ರಾಯ ದೊಡ್ಡದಾಗಿ ದರ್ಶನ್ ಜೈಲು ಸೇರುವಂತಾಯ್ತು.

ಯುವ ಹಾಗೂ ಹೊಸ ನಾಯಕ ನಾಯಕಿಯ ಟ್ರೆಂಡ್‌ನಲ್ಲಿ ತೇಲಿ ಬಂದ ನಾಯಕರ ಪೈಕಿ ದರ್ಶನ್ ಕೂಡ ಒಬ್ಬರು. ಆದರೆ, ಸಾಲು ಸಾಲಾಗಿ ಬಂದ ನಟ ನಟಿಯರ ಪೈಕಿ ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆ ಕಂಡುಕೊಂಡವರು ಕೆಲವರೇ. ಆ ಕೆಲವರಲ್ಲಿ ದರ್ಶನ್ ಎದ್ದು ನಿಂತರು.

ಈಗ ದರ್ಶನ್ ಮತ್ತೆ ಬೇಡಿಕೆಯಲ್ಲಿದ್ದರು, ಬಂಧನದ ಅವಧಿಯಲ್ಲಿಯೇ ಬಿಡುಗಡೆಯಾದ ಸಾರಥಿ ಕೂಡ ಸೂಪರ್ ಹಿಟ್ ಆಗಿತ್ತು. ಈಗ ದರ್ಶನ್ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದಾರೆ. ಹೀಗಾಗಿ ನಿಂತುಹೋಗಿದ್ದ ಸಂಗೊಳ್ಳಿ ರಾಯಣ್ಣ ಚಿತ್ರದ ಚಿತ್ರೀಕರಣ ಮತ್ತೆ ಆರಂಭವಾಗುವ ಸಾಧ್ಯತೆ ಹೆಚ್ಚಾಗಿದೆ.

ಮುಖಪುಟ; /ಸಿನಿಮಾ