ಮುಖಪುಟ /ಸಿನಿಮಾ    

ಚಾಮಯ್ಯ ಮೇಸ್ಟ್ರು ಕೆ.ಎಸ್. ಅಶ್ವತ್ಥ್ ಅಸ್ತಂಗತ
ಕೇವಲ ಕನ್ನಡ ಚಿತ್ರಗಳಲ್ಲಿ ಮಾತ್ರವೇ ನಟಿಸಿದ ಖ್ಯಾತಿ ಅಶ್ವತ್ಥ್‌ರದು..

* ಟಿ.ಎಂ.ಸತೀಶ್

ಕೆ.ಎಸ್. ಅಶ್ವತ್ಥ್, ಕನ್ನಡ ಚಿತ್ರನಟ, K.S. Ashwath, kannada film actor.

ಮೈಸೂರು, ಜ.18: ಕಪ್ಪು ಬಿಳುಪು ಚಿತ್ರಗಳ ಕಾಲದಲ್ಲಿ ನಾಯಕನಟರಾಗಿ, ನಂತರ ಪೋಷಕ ನಟರಾಗಿ ಖ್ಯಾತಿ ಪಡೆದಿದ್ದ ಕೆ.ಎಸ್. ಅಶ್ವತ್ಥ್ ಇಂದು ಬೆಳಗ್ಗೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಅವರಿಗೆ 85 ವರ್ಷ ವಯಸ್ಸಾಗಿತ್ತು. ಅಶ್ವತ್ಥ್ ಪತ್ನಿ ಹಾಗೂ 4 ಮಕ್ಕಳನ್ನು ಅಗಲಿದ್ದಾರೆ. 

ಇತ್ತೀಚೆಗೆ ಕಾಶೀ ಯಾತ್ರೆ ಮುಗಿಸಿಕೊಂಡು ಬಂದ ಬಳಿಕ ಅಸ್ವಸ್ಥರಾಗಿ ಬಿ.ಎಂ. ಆಸ್ಪತ್ರೆಗೆ ದಾಖಲಾಗಿದ್ದ ಅಶ್ವತ್ಥ್ ಚಿಕಿತ್ಸೆ ಫಲಕಾಣದೆ ಇಂದು ಬೆಳಗಿನ ಝಾವ 1-30ರ ಸುಮಾರಿನಲ್ಲಿ ಕೊನೆಯುಸಿರೆಳೆದರು. ಮೈಸೂರಿನ ಜವರೇಗೌಡ ಉದ್ಯಾನದಲ್ಲಿ  ಅಶ್ವತ್ಥ್ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಸಂಜೆ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ರುಧ್ರಭೂಮಿಯಲ್ಲಿ ಬ್ರಾಹ್ಮಣ ಸಂಪ್ರದಾಯದ ರೀತ್ಯ ಅಂತ್ಯಸಂಸ್ಕಾರ, ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.

 ಕಂಬನಿ: ಹೆಸರಾಂತ ನಟ ಅಶ್ವತ್ಥ್ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಪ್ರತಿಪಕ್ಷ ನಾಯಕರಾದ ಸಿದ್ದರಾಮಯ್ಯ, ಚಿತ್ರರಂಗದ ಗಣ್ಯರಾದ ಜಯಮಾಲಾ, ಬಿ. ಸರೋಜಾದೇವಿ, ಜೈಜಗದೀಶ್, ರಾಜೇಂದ್ರಸಿಂಗ್ ಬಾಬು, ನಟ ಶಿವರಾಂ, ನಿರ್ಮಾಪಕ, ನಟ ದ್ವಾರಕೀಶ್ ಸೇರಿದಂತೆ ಹಲವರು ಕಂಬನಿ ಮಿಡಿದಿದ್ದಾರೆ. ಅಶ್ವತ್ಥ್ ಅವರ ಪ್ರಾಮಾಣಿಕತೆ, ಶಿಸ್ತಿನ ಬದುಕನ್ನು ಸ್ಮರಿಸಿದ್ದಾರೆ.

ಅತ್ಯುತ್ತಮ ನಟ ಅಶ್ವತ್ಥ್ : ಕರಗನಹಳ್ಳಿ ಸುಬ್ಬರಾಯ ಅಶ್ವತ್ಥ್ ಅರ್ಥಾತ್ ಕೆ.ಎಸ್. ಅಶ್ವತ್ಥ್ ಕನ್ನಡ ಚಿತ್ರರಂಗದ ಪರಿಪೂರ್ಣ ನಟರಲ್ಲೊಬ್ಬರಾಗಿದ್ದರು. ಹೊಳೆ ನರಸೀಪುರ ತಾಲೂಕಿನ ಕರಗನಹಳ್ಳಿಯಲ್ಲಿ ಪುರೋಹಿತ ಮನೆತನದಲ್ಲಿ 1925ರ ಮಾರ್ಚ್ 25ರಂದು ಹುಟ್ಟಿ, ಇಂಟರ್‌ಮೀಡಿಯೆಟ್‌ವರೆಗೆ ಕಲಿತು ಫುಡ್ ಇನ್ಸ್ ಪೆಕ್ಟರ್ ಆಗಿ ಕೆಲಸಕ್ಕೆ ಸೇರಿ ಸರಕಾರಿ ಕಚೇರಿಯಲ್ಲಿ ೧೦ ವರ್ಷಗಳ ಕಾಲ ದುಡಿದ ಅಶ್ವತ್ಥ್ ಚಿತ್ರರಂಗ ಪ್ರವೇಶಿಸಿದ್ದು ಆಕಸ್ಮಿಕ.

ಹವ್ಯಾಸಕ್ಕೆ ನಾಟಕಗಳಲ್ಲಿ ಅಭಿನಯಿಸುತ್ತಿದ್ದ ಅಶ್ವತ್ಥ್‌ರ ನಟನೆಯನ್ನು ಕಂಡ ಚಿತ್ರ ನಿರ್ದೇಶಕ ಕೆ. ಸುಬ್ರಹ್ಮಣ್ಯ ಅವರು ಸ್ತ್ರೀರತ್ನ ಚಿತ್ರಕ್ಕೆ ಅವರನ್ನು ಆಯ್ಕೆ ಮಾಡಿದರು. ಮನೆಯವರ ವಿರೋಧದ ನಡುವೆಯೂ ಚಿತ್ರರಂಗ ಪ್ರವೇಶಿಸಿದ ಅಶ್ವತ್ಥ್ ನಂತರ ಜೇನುಗೂಡು, ಕಿತ್ತೂರು ರಾಣಿ ಚೆನ್ನಮ್ಮ, ಗಾಳಿಗೋಪುರ, ನಂದಾದೀಪ, ಮಿಸ್ ಲೀಲಾವತಿ, ರಾಮಾಂಜನೇಯ ಯುದ್ಧ, ಶರಪಂಜರ, ಗೆಜ್ಜೆಪೂಜೆ, ಅಣ್ಣ ತಂಗಿ, ಭೂ ಕೈಲಾಸ, ಉಯ್ಯಾಲೆ, ನಮ್ಮ ಮಕ್ಕಳು, ಉಪಾಸನೆ, ಮಗ- ಮೊಮ್ಮಗ, ಕಾಮನಬಿಲ್ಲು, ಭಾಗ್ಯದಲಕ್ಷ್ಮೀ ಬಾರಮ್ಮ, ಗಾಂಧಿನಗರ, ನಾಗರಹಾವು, ನ್ಯಾಯವೇದೇವರು, ಮುತ್ತಿನ ಹಾರ ಸೇರಿದಂತೆ 370ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು. ಭೂಪತಿ ಇವರ ಅಭಿನಯದ ಕೊನೆಯ ಚಿತ್ರವಾಗಿತ್ತು. ಆ ನಂತರ ಅಶ್ವತ್ಥ್ ಕೆಲವು ಧಾರಾವಾಹಿಗಳಲ್ಲಿ ನಟಿಸಿದ್ದರು.

ಅಶ್ವತ್ಥ್ ಹಲವು ಚಿತ್ರಗಳಲ್ಲಿ ನಾಯಕ ನಟರಾಗಿ ಅಭಿನಯಿಸಿದ್ದರೂ ಅವರಿಗೆ ಖ್ಯಾತಿ ತಂದುಕೊಟ್ಟಿದ್ದು ನಾಗರಹಾವು ಚಿತ್ರದ ಚಾಮಯ್ಯ ಮೇಸ್ಟ್ರ ಪಾತ್ರ. ನವಜೀವನ, ಮಿಸ್ ಲೀಲಾವತಿ ಚಿತ್ರಗಳ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿ ಹಾಗೂ ಗೆಜ್ಜೆಪೂಜೆ, ಬೆಳ್ಳಿಮೋಡ, ಶರಪಂಜರ, ನಾಗರಹಾವು ಮೊದಲಾದ ಚಿತ್ರಗಳ ಅಭಿನಯಕ್ಕಾಗಿ ರಾಜ್ಯಪ್ರಶಸ್ತಿಯನ್ನೂ ಪಡೆದಿದ್ದ ಅಶ್ವತ್ಥ್ ಅನಾರೋಗ್ಯದ ಕಾರಣ ಚಿತ್ರರಂಗದಿಂದ ದೂರವಾಗಿ ಮೈಸೂರಿನ ಸರಸ್ವತಿಪುರಂ ನಿವಾಸದಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದರು.

ಅನ್ಯಭಾಷಾ ಚಿತ್ರಗಳಲ್ಲಿ ಅವಕಾಶಗಳು ಸಿಕ್ಕರೂ ಚಿತ್ರರಂಗ ಪ್ರವೇಶಿಸಿದ ದಿನದಿಂದ ಇಂದಿನವರೆಗೂ ಕೇವಲ ಕನ್ನಡ ಚಿತ್ರಗಳಲ್ಲಿ ಮಾತ್ರ ಅಭಿನಯಿಸಿದ ಖ್ಯಾತಿಯೂ ಅಶ್ವತ್ಥ್‌ರದು. 1981ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, 1994ರಲ್ಲಿ ಡಾ. ರಾಜ್ ಕುಮಾರ್ ಪ್ರಶಸ್ತಿಗೆ ಅಶ್ವತ್ಥ್ ಭಾಜನರಾಗಿದ್ದರು

ಮುಖಪುಟ; /ಸಿನಿಮಾ