ಮುಖಪುಟ /ಸಿನಿಮಾ    

ಪತ್ರಿಕಾಗೋಷ್ಠಿಯಲ್ಲಿ ಪ್ರಶಸ್ತಿ ಬದಲಾವಣೆ

ಬೆಂಗಳೂರು, ಡಿ.೩: ಕರ್ನಾಟಕ ರಾಜ್ಯ ಸರ್ಕಾರ ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಲು ರಚಿಸಿದ್ದ ಆಯ್ಕೆ ಸಮಿತಿ, ತನ್ನ ನಿರ್ಧಾರವನ್ನು ಪತ್ರಿಕಾಗೋಷ್ಠಿಯಲ್ಲಿ ಬದಲಾಯಿಸಿದ ಅಪರೂಪದ ಘಟನೆ ಇಂದು ನಡೆದಿದೆ.

ರಾಜ್ಯ ಸರ್ಕಾರ ಸಾಧಕ ನಿರ್ದೇಶಕರಿಗೆ ನೀಡುವ ಪ್ರತಿಷ್ಠಿತ ದಿ.ಪುಟ್ಟಣ್ಣ ಕಣಗಾಲ್ ಪ್ರಶಸ್ತಿಗೆ ಚಿತ್ರ ನಿರ್ದೇಶಕ ಕೆ.ಎಸ್.ಆರ್. ದಾಸ್ ಅವರ ಹೆಸರನ್ನು ಆಖೈರುಗೊಳಿಸಿತ್ತು.

ಆಯ್ಕೆ ಸಮಿತಿ ಅಧ್ಯಕ್ಷ ಭಾರ್ಗವ ಅವರ ಸಮ್ಮುಖದಲ್ಲಿಯೇ ರಾಜ್ಯದ ವಾರ್ತಾ ಕಾರ್ಯದರ್ಶಿ ಝಳಕಿ ಇದನ್ನು ಪ್ರಕಟಿಸಿದರು. ಪತ್ರಕರ್ತರು, ಇಂಥ ಪ್ರತಿಷ್ಠಿತ ಪ್ರಶಸ್ತಿಗೆ ರೀಮೇಕ್ ಚಿತ್ರ ನಿರ್ಮಿಸುವ ದಾಸ್ ಅವರ ಆಯ್ಕೆ ಹಿಂದೆ ರಾಜಕೀಯ ಪ್ರಭಾವ ಇದೆಯೇ. ಇವರು ಕರ್ನಾಟಕದ ನಾಡು, ನುಡಿ, ಸಂಸ್ಕೃತಿಗೆ ನೀಡಿರುವ ಕೊಡುಗೆ ಏನು. ಪ್ರಶಸ್ತಿಗೆ ಮೌಲ್ಯ ಇದೆಯೇ ಎಂದು ಪ್ರಶ್ನಿಸಿದಾಗ ಭಾರ್ಗವ ವಿಚಲಿತರಾದರು.

ಸಮಜಾಯಿಷಿ ನೀಡಲು ಹೋಗಿ ಮತ್ತೆ ಪೇಚಿಗೆ ಸಿಲುಕಿದರು. ವಾಸ್ತವವಾಗಿ ಈ ಪ್ರಶಸ್ತಿಗೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ನಿರ್ದೇಶಕ ಗಿರೀಶ್ ಕಾರ್ನಾಡ್ ಹೆಸರು ಪ್ರಸ್ತಾಪವಾಗಿತ್ತು, ಆದರೆ, ಅವರಿಗೆ ರಾಷ್ಟ್ರಪ್ರಶಸ್ತಿಗಳು ಬಂದಿರುವ ಹಿನ್ನೆಲೆಯಲ್ಲಿ ಈ ಪ್ರಶಸ್ತಿ ಅವರಿಗೆ ಚಿಕ್ಕದು ಎಂದು ಬೇರೆಯವರಿಗೆ ನೀಡಲಾಯಿತು ಎಂದರು.

ರಾಜ್ಯ ಸರ್ಕಾರ ನೀಡುವ ಅದೂ ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ಅವರ ಹೆಸರಿನಲ್ಲಿ ನೀಡಲಾಗುವ ಪ್ರಶಸ್ತಿ ಕನಿಷ್ಠವೇ ಎಂದು ಪತ್ರಕರ್ತರು ತಿರುಗಿಬಿದ್ದಾಗ ನಿರುತ್ತರರಾದರು.

ಹೊರ ರಾಜ್ಯದವರಾದ ಕೆ.ಎಸ್.ಆರ್. ದಾಸ್ ಅವರ ಹೆಸರನ್ನು ಬದಲಾಯಿಸಲು ಸ್ಥಳದಲ್ಲೇ ಇದ್ದ ಇತರ ಸದಸ್ಯರೊಂದಿಗೆ ಸಮಾಲೋಚಿಸುವ ಯತ್ನ ಮಾಡಿ, ಆ ಪ್ರಶಸ್ತಿಯನ್ನು ಗಿರೀಶ್ ಕಾರ್ನಾಡ್‌ಗೆ ನೀಡಿರುವುದಾಗಿ ಪ್ರಕಟಿಸಿದರು.

ಇದರೊಂದಿಗೆ ರಾಜ್ಯದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಪ್ರಶಸ್ತಿ ಪ್ರಕಟಿಸಿ ಸುದ್ದಿಗೋಷ್ಠಿಯಲ್ಲೇ ಬದಲಾಯಿಸಿ ಬೇರೊಬ್ಬರ ಹೆಸರನ್ನು ಸ್ಥಳದಲ್ಲೇ ಆಯ್ಕೆಮಾಡಿದ ಅಪರೂಪದ ಘಟನೆ ನಡೆಯಿತು. ತಿಂಗಳುಗಟ್ಟಲೆ ಸಭೆ ನಡೆಸಿ ಆಯ್ಕೆ ಮಾಡುವ ಹೆಸರನ್ನು ೧೫ ನಿಮಿಷದಲ್ಲಿ ಸ್ಥಳದಲ್ಲೇ ಬದಲಾಯಿಸುವ ಮೂಲಕ ತಮ್ಮ ಆಯ್ಕೆ ಸರಿಯಿಲ್ಲ ಎಂಬುದನ್ನು ಭಾರ್ಗವ ಪರೋಕ್ಷವಾಗಿ ಒಪ್ಪಿಕೊಂಡರು.

ಈ ಎಲ್ಲದರ ನಡುವೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ಅವರನ್ನು ಆಯ್ಕೆ ಮಾಡುವ ಮೂಲಕ ಪುಟ್ಟಣ್ಣ ಕಣಗಾಲ್ ಪ್ರಶಸ್ತಿಗೆ ಬೆಲೆ ದೊರಕಿಸಿಕೊಡುವಲ್ಲಿ ಪತ್ರಕರ್ತರು ಯಶಸ್ವಿಯಾದರು.  ಆದಾಗ್ಯೂ ಇದು ಆಯ್ಕೆ ಸಮಿತಿ ಕಾರ್ನಾಡ್‌ಗೆ ಮಾಡಿದ ಅವಮಾನ ಎಂಬುದು ನಿರ್ವಿವಾದ.

ಮುಖಪುಟ /ಸಿನಿಮಾ