ಮುಖಪುಟ /ಸಾಧಕರು     

ಡಾ.ಯು.ಆರ್. ಅನಂತಮೂರ್ತಿ ಎಂಬ ಆಲದಮರ
ಜನನ 21-12-19
32 ನಿಧನ- 22-08-14
ಸೂಜಿಗಲ್ಲಿನ ವ್ಯಕ್ತಿತ್ವದಿಂದ ಸಾಹಿತ್ಯಾಸಕ್ತರ ಹೃದಯಕ್ಕೆ ಹತ್ತಿರರಾದ ಅನಂತಮೂರ್ತಿ
,
ಕನ್ನಡಿಗರೆಲ್ಲರಿಗೆ ಬಂಧು-ಗೆಳೆಯ-ಆತ್ಮೀಯ

* ಟಿ.ಎಂ.ಸತೀಶ್

ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ ಎಂದರೆ ಬಹುಮಂದಿ ಯಾರೆಂದು ಪ್ರಶ್ನಿಸುತ್ತಾರೆ. ಅದೇ ಡಾ.ಯು.ಆರ್. ಅನಂತಮೂರ್ತಿ ಎಂದರೆ ತಮ್ಮ ಆತ್ಮೀಯ, ಹಿತೈಶಿ, ಬಂಧು, ಗೆಳೆಯ ಎನ್ನುವಂತೆ ಓ ಅನಂತ ಮೂರ್ತಿ ಅವರೇ ನನಗೆ ಗೊತ್ತು ಬಿಡಿ ಎನ್ನುತ್ತಾರೆ. (ಮೂರ್ತಿ ಅವರನ್ನು ಒಪ್ಪದವರೂ ಕೆಲವರಿದ್ದಾರೆ)

ಅನಂತ ಮೂರ್ತಿ ಅವರು ತಮ್ಮ ಬರಹ ಹಾಗೂ ಸೂಜಿಗಲ್ಲಿನಂಥ ವ್ಯಕ್ತಿತ್ವದಿಂದ ಸಾಹಿತ್ಯಾಸಕ್ತರೆಲ್ಲರಿಗೂ ಅತ್ಯಂತ ಆತ್ಮೀಯರಾಗಿದ್ದರು. ಕನ್ನಡಿಗರ ಹೃದಯಕ್ಕೆ ಹತ್ತಿರವಾಗಿದ್ದರು. ಆದರೆ ಕೆಲವೊಮ್ಮೆ ವಿವಾದಗಳನ್ನು ತಮ್ಮ ಮೈಮೇಲೆ ಎಳೆದುಕೊಳ್ಳುತ್ತಿದ್ದರು. ಅವರು ನೀಡಿದ್ದ ಕೆಲವು ಹೇಳಿಕೆಗಳು ವಿವಾದವನ್ನೂ ಹುಟ್ಟು ಹಾಕುತ್ತಿದ್ದವು. ಆದರೆ ಇದಾವುದಕ್ಕೂ ಅಂಜದ, ಅಳುಕದ ಅನಂತಮೂರ್ತಿ ಅವರು ತಮ್ಮ ನೇರ ನಡೆ-ನುಡಿಯನ್ನು ಕೊನೆಯ ತನಕ ಉಳಿಸಿಕೊಂಡು ಬಂದವರು.

ಅನಂತಮೂರ್ತಿ ಅವರು ಬಹುಮುಖ ಪ್ರತಿಭೆಯ ಧೀಮಂತ ಲೇಖಕ. ಅತ್ಯುತ್ತಮ ಕಥೆಗಾರ, ಕಾದಂಬರಿಕಾರ, ವಿಮರ್ಶಕ, ಪತ್ರಕರ್ತ (ಋಜುವಾತು ತ್ರೈಮಾಸಿಕ) ಕವಿ.

ಅನಂತಮೂರ್ತಿ ಅವರು ಹುಟ್ಟಿದ್ದು 1932ಡಿಸೆಂಬರ್ 21ರಂದು. ಹುಟ್ಟೂರು ತೀರ್ಥಹಳ್ಳಿಯ ಮೇಳಿಗೆ. ತಂದೆ ರಾಜಗೋಪಾಲಾಚಾರ್ಯ, ತಾಯಿ ಸತ್ಯಭಾಮ. ತೀರ್ಥಹಳ್ಳಿ, ಶಿವಮೊಗ್ಗದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ಮೂರ್ತಿಯವರು ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ. ಪದವಿ ಪಡೆದ ಬಳಿಕ, ಬರ್ಮಿಂಗ್ ಹ್ಯಾಂ ವಿಶ್ವವಿದ್ಯಾಲಯದಲ್ಲಿ (ರಾಜಕಾರಣ ಮತ್ತು ಕಥೆ -ಕಾದಂಬರಿ) ಪಿಎಚ್‌ಡಿ ಪದವಿ ಪಡೆದಿದ್ದರು.

ಶಿವಮೊಗ್ಗ, ಹಾಸನ, ಮೈಸೂರು ಕಾಲೇಜುಗಳಲ್ಲಿ ಉಪನ್ಯಾಸಕರಾಗಿಯೂ ಸೇವೆ ಸಲ್ಲಿಸಿದ್ದ ಅವರು, ೧೯೮೭ರ ಜುಲೈನಲ್ಲಿ ಕೇರಳದ ಕೊಟ್ಟಾಯಂನ ಗಾಂಧಿ ವಿಶ್ವವಿದ್ಯಾಲಯದ ಕುಲಪತಿಗಳಾಗಿ ನೇಮಕಗೊಂಡು, ಕಾಲೇಜು ಶಿಕ್ಷಣದಲ್ಲಿ ಹಲವು ಸುಧಾರಣೆಗಳನ್ನು ತಂದರು. ನ್ಯಾಷನಲ್ ಬುಕ್‌ಟ್ರಸ್ಟ್ ಅಧ್ಯಕ್ಷರಾಗಿ ಪ್ರಕಾಶನ ಉದ್ಯಮಕ್ಕೆ ಹೊಸ ಆಯಾಮವನ್ನೇ ನೀಡಿದ್ದರು.

ಕೇಂದ್ರ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಸ್ಥಾನವನ್ನೂ ಅಲಕಂರಿಸಿದ್ದ, ಡಾ.ಮೂರ್ತಿ, ೨೦೦೨ರ ಫೆಬ್ರವರಿಯಲ್ಲಿ ತುಮಕೂರಿನಲ್ಲಿ ನಡೆದ ೬೯ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ವಿವಾದಗಳ ನಡುವೆ, ಭಾರಿ ಸುದ್ದಿಯನ್ನೂ ಮಾಡಿದ್ದರು.

ಇತ್ತೀಚೆಗೆ ಎಂ.ಎಂ. ಕಲ್ಬುರ್ಗಿ ಅವರು ಭಾಷಣವೊಂದರಲ್ಲಿ ಅನಂತಮೂರ್ತಿ ಅವರು ದೇವರಿದ್ದಾನೆಯೇ ಎಂಬ ಸತ್ಯಾನ್ವೇಷಣೆಗೆ ತಮ್ಮ ಬಾಲ್ಯದಲ್ಲಿ ದೇವರೆಂದು ನಂಬುತ್ತಿದ್ದ ಶಿಲೆಯೊಂದರ ಮೇಲೆ ಮೂತ್ರ ಮಾಡಿದ್ದರೆಂಬ ಬಗ್ಗೆ ಹೇಳಿಕೆ ನೀಡಿದ್ದು ವಿವಾದಕ್ಕೆ ಕಾರಣವಾಗಿತ್ತು.
 

ಲೋಕಸಭೆ ಚುನಾವಣೆಗೂ ಮುನ್ನ ಮೋದಿ ಅವರು ಈ ದೇಶದ ಪ್ರಧಾನಿ ಆದರೆ ತಾವು ಭಾರತದಲ್ಲಿ ಇರುವುದಿಲ್ಲ ಎಂಬ ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿದ್ದರು, ಮೋದಿ ಅವರು ಪ್ರಧಾನಿ ಆದಾಗ ಕೆಲವರು ಅವರಿಗೆ ಪಾಕಿಸ್ತಾನಕ್ಕೆ ತೆರಳುವಂತೆ ವಿಮಾನದ ಟಿಕೆಟ್ ಕೂಡ ಕಳಿಸಿದ್ದರು. ಈ ಎಲ್ಲ ಸಂಘರ್ಷಗಳ ನಡುವೆಯೂ ಅನಂತ ಮೂರ್ತಿ ಸ್ಥಿತಪ್ರಜ್ಞರಂತೆ ಇರುತ್ತಿದ್ದರು.
ವಿವಿಧ ರಾಷ್ಟ್ರಗಳನ್ನು ಸುತ್ತಿ, ಕೋಶವನ್ನು ಓದಿ ತಮ್ಮ ದೀರ್ಘಾನುಭವ ಹಾಗೂ ಕಲ್ಪನೆಗಳನ್ನು ಕೃತಿಗಳಿಸುವುದರಲ್ಲಿ ನಿರತರಾಗುತ್ತಿದ್ದರು. ಅನಂತ ಮೂರ್ತಿ ಅವರ ಕೃತಿಗಳನ್ನು ಓದುವುದೇ ಒಂದು ಆನಂದ.
 

ಪದ್ಮಭೂಷಣ, ಜ್ಞಾನಪೀಠ, ಮಾಸ್ತಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಸಾಹಿತ್ಯ ಅಕಾಡಮಿ ಪ್ರಶಸ್ತಿಯೇ ಮೊದಲಾದ ಹಲವು ಹತ್ತು ಪ್ರಶಸ್ತಿಗಳಿಗೆ ಭಾಜನರಾಗಿದ್ದ ಮೂರ್ತಿ ಅವರದು, ಆಕರ್ಷಕ ವ್ಯಕ್ತಿತ್ವ.
 

ತುಮಕೂರಿನ ಸಾಹಿತ್ಯ ಸಮ್ಮೇಳನದಲ್ಲಿ ಅವರು ಹರಿಸಿದ ವಿಚಾರ ಧಾರೆ, ೨೫ ಪುಟಗಳ ವಿಚಾರಪೂರ್ಣ ಭಾಷಣ, ಕನ್ನಡ - ಕನ್ನಡಿಗರ ಬಗ್ಗೆ ಮೂರ್ತಿಯವರಿಗಿರುವ ಕಳಕಳಿಯನ್ನು ಬಿಂಬಿಸಿತ್ತು. ಸುಲಿದ ಬಾಳೆಯ ಹಣ್ಣಿನಂದದಿ... ಸರಳ ಸುಂದರ ಕನ್ನಡದಲ್ಲಿ ಕಂಚಿನ ಕಂಠದಿಂದ ಹೊರಹೊಮ್ಮಿದ್ದ ಆ ಅಸ್ಖಲಿತ ಭಾಷಣ ಮೂರ್ತಿಯವರು ಅಪ್ರತಿಮ ವಾಗ್ಮಿ ಎಂಬುದನ್ನು ನಿರೂಪಿಸಿದ್ದಲ್ಲದೆ, ಅವರ ವಿಚಾರಧಾರೆಗೆ ಹಿಡಿದ ಕೈಗನ್ನಡಿಯಾಗಿತ್ತು. ಅವರನ್ನು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಬಗ್ಗೆ ಟೀಕೆ ಮಾಡಿದ್ದ ಟೀಕಾಕಾರರ ಬಾಯನ್ನೂ ಮುಚ್ಚಿಸಿತ್ತು. ಅನಂತ ಮೂರ್ತಿ ಕನ್ನಡ ಸಾರಸ್ವತ ಲೋಕದಲ್ಲಿ ಅತಿ ಎತ್ತರಕ್ಕೆ ಬೆಳೆದ ಬೃಹತ್ ಆಲದ ಮರದಂತಿದ್ದರು.

ಕೃತಿಗಳು: ಸಂಸ್ಕಾರ, ಭಾರತೀಪುರ, ಎಂದೆಂದೂ ಮುಗಿಯದ ಕಥೆ, ದಿವ್ಯ, ಪ್ರಶ್ನೆ, ಮೌನಿ, ಅವಸ್ಥೆ, ಪ್ರಜ್ಞೆ ಮತ್ತು ಪರಿಸರ, ಅವಾಹನೆ, ಘಟಶ್ರಾದ್ಧ, ಬರ, ಆಕಾಶ ಮತ್ತು ಬೆಕ್ಕು, ಸಮಕ್ಷಮ, ಪೂರ್ವಾಪರ, ಹದಿನೈದು ಪದ್ಯಗಳು, ಅಜ್ಜನ ಹೆಗಲ ಸುಕ್ಕುಗಳು, ಮಿಥುನ ಇತ್ಯಾದಿ.

ಯು.ಆರ್. ಅನಂತಮೂರ್ತಿ ಅಸ್ತಂಗತ

ಮುಖಪುಟ /ಸಾಧಕರು