ಮುಖಪುಟ /ಸಾಧಕರು    

ಬೆಳೆವ ಸಿರಿ ಮೊಳಕೆಯಲ್ಲಿ, ಬಾಲ ಪ್ರತಿಭೆ ನಿಶ್ಚಯ್‌ನ ಯಶೋಗಾಥೆ

ನಿಶ್ಚಯ್ ಭಾರ್ಗವ್, ಅತ್ಯಂತ ಕಿರಿಯ ವಾರ್ತಾ ವಾಚಕ, Nischay Yongest News readerಎಲ್ಲ ಮಕ್ಕಳೂ ಪ್ರತಿಭಾವಂತರೆ. ಆದರೆ, ಆ ಮಕ್ಕಳಲ್ಲಿ ಸುಪ್ತವಾಗಿರುವ ಪ್ರತಿಭೆಗೆ ಸೂಕ್ತ ತರಬೇತಿ ನೀಡಿ, ಪ್ರಕಾಶಕ್ಕೆ ತಂದರೆ ಅವರು ಸಾಧಕರಾಗುವುದರಲ್ಲಿ ಸಂದೇಹವೇ ಇಲ್ಲ. ಈ ಮಾತಿಗೆ ಜ್ವಲಂತ ಉದಾಹರಣೆ ೧೪ರ ಹರೆಯದ ನಿಶ್ಚಯ್ ಭಾರ್ಗವ್. 

ನಿಶ್ಚಯ್ ಚರ್ಚಾಪಟು, ನೃತ್ಯಪಟು, ರಂಗಕಲಾವಿದ, ಕೀಬೋರ್ಡ್ ವಾದಕ, ಕ್ರೀಡಾಪಟು, ಚಿತ್ರನಟ (ಬಾಲನಟ) ಎಲ್ಲಕ್ಕಿಂತಲೂ  ಮಿಗಿಲಾಗಿ ಅತ್ಯಂತ ಕಿರಿಯ ವಯಸ್ಸಿನ ಕನ್ನಡ ವಾರ್ತಾವಾಚಕ. ಸ್ಫುಟವಾಗಿ, ತಪ್ಪಿಲ್ಲದೆ  ಸುಂದರವಾಗಿ ಕನ್ನಡ ಮಾತನಾಡುವ, ಕನ್ನಡ ಓದುವ ಹಾಗೂ ಆಕರ್ಷಕ ವ್ಯಕ್ತಿತ್ವದ ನಿಶ್ಚಯ್ ವಾರ್ತಾವಾಚಕನಾಗಿದ್ದರಲ್ಲಿ ಅಚ್ಚರಿ ಏನಿಲ್ಲ.

ಈ ಬಹುಮುಖ ಪ್ರತಿಭೆಯ ಬಾಲಕನ ಸಾಧನೆ ಸಾಮಾನ್ಯವೇನಲ್ಲ. ಎಲ್ಲ ತಂದೆತಾಯಿಗಳು ತಮ್ಮ ಮಕ್ಕಳು ನಿರರ್ಗಳವಾಗಿ ಇಂಗ್ಲಿಷ್‌ನಲ್ಲಿ ಮಾತನಾಡಬೇಕು, ತಮ್ಮ ಮಕ್ಕಳು ಹೆಚ್ಚು ಅಂಕ ಪಡೆದು ಸಾಫ್ಟ್ ವೇರ್ ಎಂಜಿನಿಯರ್ ಆಗಬೇಕು ಎಂದು  ಬಯಸುತ್ತಾರೆ. ಅದೇ ಆಸೆ ನಿಶ್ಚಯ ಪಾಲಕರದ್ದೂ ಆಗಿದೆ. ಹೀಗಾಗೇ ನಿಶ್ಚಯ್‌ನನ್ನು ಬೆಂಗಳೂರಿನ ಕುಮಾರನ್ಸ್ ಪಬ್ಲಿಕ್ ಶಾಲೆಗೆ ಸೇರಿಸಿದ್ದಾರೆ. ಅಲ್ಲಿ ೯ನೇ ತರಗತಿಯಲ್ಲಿ ಓದುತ್ತಿರುವ  ನಿಶ್ಚಯ್‌ನ ಪ್ರತಿಭಾ ವಿಕಾಸಕ್ಕೆ ಪಾಲಕರ ಆಸೆ -ಆಕಾಂಕ್ಷೆಗಳು ಕಿಂಚಿತ್ತೂ ಎರವಾಗಿಲ್ಲ.

ಪ್ರಶಸ್ತಿ ಸ್ವೀಕರಿಸುತ್ತಿರುವ ನಿಶ್ಚಯ್ತಂದೆ ತಾಯಿಗಳ ಸಂಪೂರ್ಣ ಪ್ರೋತ್ಸಾಹದ ಫಲವಾಗಿ  ಹನುಮಂತನಗರದ ಬಿಂಬಾ ವಿದ್ಯಾರ್ಥಿಯಾದ ನಿಶ್ಚಯ್ ಅಭಿನಯ ಕಲೆಯನ್ನು ಕರಗತ ಮಾಡಿಕೊಂಡಿದ್ದಾನೆ. ಅಂತರಕಾಲೇಜು ಕನ್ನಡ ಚರ್ಚಾಸ್ಪರ್ಧೆಗಳಲ್ಲಿ ನೂರಾರು ಬಹುಮಾನ ಪಡೆದ ತಂದೆ ಎ.ವಿ.ವೇಣುಗೋಪಾಲರಿಂದ  ಮಾತುಗಾರಿಕೆಯ ಕಲೆಯನ್ನು ರೂಢಿಸಿಕೊಂಡಿದ್ದಾನೆ. ಸಾಧನ ಸಂಗೀತ ಶಾಲೆ ವಿದ್ಯಾರ್ಥಿಯಾಗಿ ಕೀಬೋರ್ಡ್ ವಾದನದಲ್ಲಿ ಕುಶಲಿಯಾಗಿದ್ದಾನೆ. ಶಾಲೆಯ ದೈಹಿಕ  ಶಿಕ್ಷಕರ ತರಬೇತಿಯಿಂದಾಗಿ ಅತ್ಯುತ್ತಮ ಕ್ರೀಡಾಪಟುವಾಗಿ ಹೊರಹೊಮ್ಮಿ ಕಳೆದ ಐದು ವರ್ಷಗಳಿಂದ ಶಾಲಾ ಕ್ರೀಡಾಕೂಟದ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾನೆ. ಪಿ. ಶೇಷಾದ್ರಿ ಅವರ ನಿರ್ದೇಶನದ ತುತ್ತೂರಿ ಹಾಗೂ ಮಾಸ್ಟರ್  ಕಿಶನ್ ನಿರ್ದೇಶನದ ಕೇರ್ ಆಫ್ ಫುಟ್ಪಾತ್ ಚಿತ್ರಗಳಲ್ಲಿಯೂ ನಟಿಸಿದ್ದಾನೆ. ದೃಷ್ಟಿ ಫಿಲಂ ಮೇಕರ್ಸ್ ನಿರ್ಮಿಸಿದ ಸಾಕ್ಷ್ಯಚಿತ್ರ ವಯಲೆನ್ಸ್ ಅಂಡ್  ಟ್ರೂತ್‌ನಲ್ಲಿ ಪ್ರಧಾನ ಪಾತ್ರದಲ್ಲಿ ಅಭಿನಯಿಸಿದ್ದಾರೆ.  ದೂರದರ್ಶನದ  ಚಿಣ್ಣರಕಟ್ಟೆ  ಮಾಲಿಕೆಯಲ್ಲೂ  ಪಾಲ್ಗೊಂಡಿದ್ದಾನೆ. ವಿಕ್ಟರಿ ಚಾನೆಲ್‌ನಲ್ಲಿ ಕಳೆದ ಮಾರ್ಚ್‌ನಿಂದ ಮೇ ತಿಂಗಳ ಅವಧಿಯಲ್ಲಿ ಪ್ರಸಾರವಾದ  ನೇರ ಫೋನ್‌ಇನ್ ಕಾರ್ಯಕ್ರಮದಲ್ಲಿ ಕಾರ್ಯಕ್ರಮ ನಿರೂಪಕನಾಗಿಯೂ ಸೇವೆ ಸಲ್ಲಿಸಿದ್ದಾನೆ. 

ಕನ್ನಡ ವಾಹಿನಿಯ ಅತಿ ಕಿರಿಯ ವಯಸ್ಸಿನ ವಾರ್ತಾವಾಚಕ

ನೇರಪ್ರಸಾರ ಕಾರ್ಯಕ್ರಮ ನಿರೂಪಕನಾಗಿ ನಿಶ್ಚಯ್ಈಗ ಸುವರ್ಣ ವಾಹಿನಿಯಲ್ಲಿ ಪ್ರತಿ ಭಾನುವಾರ ಮಧ್ಯಾಹ್ನ  ಪ್ರಸಾರವಾಗುತ್ತಿದ್ದ ಪುಟಾಣಿ ವಾರ್ತೆಯ ವಾರ್ತಾವಾಚಕನಾಗಿ 35ಕ್ಕೂ ಹೆಚ್ಚು ಸಂಚಿಕೆಗಳಲ್ಲಿ ವೀಕ್ಷಕರ ಗಮನ ಸೆಳೆದಿದ್ದಾನೆ. ಶುದ್ಧವಾಗಿ  ಕನ್ನಡ ಮಾತನಾಡುವ ಎಳೆಯರ ಸಂಖ್ಯೆ ದಿನದಿಂದ  ದಿನಕ್ಕೆ ಕಡಿಮೆಯಾಗುತ್ತಿರುವ ಈ ಕಾಲದಲ್ಲಿ ನಿಶ್ಚಯ್‌ನ ಸ್ಫುಟವಾದ, ನಿರರ್ಗಳವಾದ ವಾಗ್ಝರಿ ಎಲ್ಲರನ್ನೂ ವಿಸ್ಮಯಗೊಳಿಸುತ್ತದೆ.

ನಿಶ್ಚಯ್ ಸುದ್ದಿಯನ್ನು ಮಂಡಿಸುವ ರೀತಿ, ನೇರ ಕಾರ್ಯಕ್ರಮಗಳಲ್ಲಿ ಕರೆ ಮಾಡುವ ಪ್ರೇಕ್ಷಕರೊಂದಿಗೆ ಸಮಯಸ್ಫೂರ್ತಿಯಿಂದ ಸಂವಾದ ನಡೆಸುವ ಪರಿ,  ಪುಟಾಣಿ ವಾರ್ತೆಯಲ್ಲಿ ಆತ ಇತರ ಪುಟಾಣಿ ಸಾಧಕರನ್ನು ಸಂದರ್ಶಿಸುವ ರೀತಿ ನೋಡಿದಾಗ ನುರಿತ ಪತ್ರಕರ್ತರೊಬ್ಬರು ವಾರ್ತೆ ಓದುತ್ತಿರುವಂತೆ ಇಲ್ಲವೇ ಕಾರ್ಯಕ್ರಮ ನಡೆಸಿಕೊಡುತ್ತಿರುವಂತೆ ಭಾಸವಾದರೆ ಅಚ್ಚರಿ ಏನಿಲ್ಲ.

ಪ್ರಶಸ್ತಿಯ ಗರಿ

ಆರ್ಯಭಟ ಪ್ರಶಸ್ತಿ ಸ್ವೀಕರಿಸುತ್ತಿರುವ ನಿಶ್ಚಯಈ ಸಾಧನೆಗೆ ನೂರಾರು  ಪ್ರಶಸ್ತಿ, ಪಾರಿತೋಷಕಗಳು ನಿಶ್ಚಯನನ್ನು ಅರಸಿ ಬಂದಿವೆ. ನಿಶ್ಚಯ್ ೨೦೦೭ರಲ್ಲಿ ಪ್ರತಿಷ್ಠಿತ ಆರ್ಯಭಟ ಪ್ರಶಸ್ತಿ, ಅಖಿಲ ಭಾರತ ಕನ್ನಡ ಮಕ್ಕಳ ಮನೆ ನೀಡುವ ಪ್ರತಿಷ್ಠಿತ ಕಲಾ ಕಣ್ಮಣಿ ರಾಜ್ಯ ಪ್ರಶಸ್ತಿಸಂಗೀತ ಸಾಧನೆಗಾಗಿ ಯುರೋಪ್‌ನ ವಿಶ್ವ ಕಲಾ ಪ್ರತಿಷ್ಠಾನದ ಸ್ಥಾನಿಕ ಘಟಕ ಕೊಡಮಾಡುವ ಲಿಯನಾರ್ಡೋ ಡಾವಿಂಚಿ ಪ್ರಶಸ್ತಿಗೂ ಪಾತ್ರನಾಗಿದ್ದಾನೆ, ಬೋರ್ನವೀಟಾ ಕಾನ್ಫಿಡೆನ್ಸ್ ಚಾಂಪಿಯನ್‌ಷಿಪ್‌ಗೆ ಬಂದ ೫೦೦೦ ಅರ್ಜಿಗಳ ಪೈಕಿ ಆಯ್ಕೆ ಮಾಡಲಾದ  ನೂರು ಮಂದಿ ಕಾನ್ಫಿಡೆಂಟ್ ಕಿಡ್‌ಗಳಲ್ಲಿ ಈತನೂ ಒಬ್ಬನಾಗಿದ್ದಾನೆ. ೨೦೦೭ನೇ ಸಾಲಿನಲ್ಲಿ ವಿಶ್ವಕಲಾರತ್ನ, ವಿಶ್ವ ಮಾನ್ಯರು ಪ್ರಶಸ್ತಿಗಳಿಗೂ ಭಾಜನನಾಗಿದ್ದಾನೆ. ಶಾಲಾ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವ ನಿಶ್ಚಯ್  ೧೦೦ ಮೀ, ೨೦೦, ೪೦೦ ಓಟ, ಲಾಂಗ್‌ಜಂಪ್ ಸ್ಪರ್ಧೆಗಳಲ್ಲಿ ೨೦ಕ್ಕೂ ಹೆಚ್ಚು ಚಿನ್ನದ ಪದಕ, ೧೫ ಬೆಳ್ಳಿಪದಕ, ೫ ಕಂಚಿನ ಪದಕ ಗಳಿಸಿದ್ದಾರೆ. ವಲಯ ಮಟ್ಟದ  ಅಥ್ಲೆಟಿಕ್ಸ್ ಕೂಡ ಹಾಗೂ ಐಸಿಎಸ್ಸಿ ಅಥ್ಲೆಟಿಕ್ಸ್ ಕೂಟದ ರಿಲೆ ರೇಸ್ ನಲ್ಲಿ ೩ನೇ ಬಹುಮಾನ ಪಡೆದಿದ್ದಾನೆ.

ಆಕಾಶವಾಣಿಯ ಮಕ್ಕಳಕಾರ್ಯಕ್ರಮಗಳಲ್ಲಿಯೂ  ಪಾಲ್ಗೊಂಡಿರುವ  ನಿಶ್ಚಯ್ ಸಾಧನೆಯನ್ನು  ಕಂಡು ೯೨.೭ರೇಡಿಯೋ ಎಫ್ ಎಂನಲ್ಲಿ ಸಿಹಿಕಹಿ  ಚಂದ್ರು  ಹಾಗೂ  ಶ್ವೇತಾ ನಿಶ್ಚಯ್ ಸಂದರ್ಶನ ಮಾಡಿದ್ದರೆ, ೯೧.೧ ರೇಡಿಯೋ ಸಿಟಿಯಲ್ಲಿ ವಾಸಂತಿ ಹರಿಪ್ರಕಾಶ್ ಸಂದರ್ಶನ ಮಾಡಿದ್ದಾರೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ನಿಶ್ಚಯ್ ಬಹುಮುಖಪ್ರತಿಭೆಯಾಗಿ  ಹೊರಹೊಮ್ಮಿದ್ದಾನೆ. ಪೈಲಟ್ ಆಗುವ ಕನಸು ಕಟ್ಟಿರುವ ನಿಶ್ಚಯ್‌ಗೆ ನಿಶ್ಚಿತ ಗೆಲವು ದೊರಕಲಿ  ಎಂಬುದು ನಮ್ಮ  ಹಾರೈಕೆ.

ಮುಖಪುಟ /ಸಾಧಕರು