ಮುಖಪುಟ /ಸಾಧಕರು   

ಕರುನಾಡಿನ ಹೆಮ್ಮೆಯ ಪರಿಪೂರ್ಣ ನಾಟಕಕಾರ ಕಾರ್ನಾಡ್
ಇಬ್ಬರು ಜ್ಞಾನಪೀಠ ಪುರಸ್ಕೃತರ ಕೃತಿಯನ್ನು ಸಿನಿಮಾ ಮಾಡಿದ ಏಕೈಕ ಜ್ಞಾನಪೀಠ ಪುರಸ್ಕೃತರೆಂದರೆ ಗಿರೀಶ್ ಕಾರ್ನಾಡ್.

* ಟಿ.ಎಂ.ಸತೀಶ್

ನಾಟಕ ಕೇವಲ ರಂಗ ಪ್ರಕಾರವೇ ಪರಂತು ಸಾಹಿತ್ಯ ಪ್ರಕಾರವಲ್ಲ ಎಂದು ಭಾವಿಸಿದವರಿಗೆ ನಾಟಕದ ಹಿರಿಮೆಯನ್ನು ತಿಳಿಯಹೇಳಿ, ನಾಟಕಕ್ಕೂ ಮಹಾಕಾವ್ಯ, ಕವಿತೆ, ಕಾದಂಬರಿಯಷ್ಟೇ ಸಂಚಾರವಿದೆ ಎಂದು ಪ್ರತಿಪಾದಿಸಿದ ಪರಿಪೂರ್ಣ ನಾಟಕಕಾರ ಗಿರೀಶ್ ಕಾರ್ನಾಡ್.

ಕಾರ್ನಾಡರು ಕೇವಲ ಸಾಹಿತಿ, ನಟಕಕಾರರಷ್ಟೇ ಅಲ್ಲ ನಟ ನಿರ್ದೇಶಕರೂ ಹೌದು. ಕಾರ್ನಾಡರ ತುಘಲಕ್ ಕನ್ನಡ ಶ್ರೇಷ್ಠ ನಾಟಕ ಎಂಬ ಮನ್ನಣೆಗೆ ಪಾತ್ರವಾಗಿದೆ. ಕಾರ್ನಾಡರು ಹುಟ್ಟಿದ್ದು ೧೯೩೮ರ ಮೇ ೧೯ರಂದು. ಮಹಾರಾಷ್ಟ್ರದಲ್ಲಿ. ಕಾರ್ನಾಡರ ಪೂರ್ವಿಕರು ಉತ್ತರ ಕನ್ನಡ ಜಿಲ್ಲೆಗೆ ಸೇರಿದವರು. ತಂದೆ ರಘುನಾಥ ಕಾರ್ನಾಡ್, ತಾಯಿ ಕೃಷ್ಣಾಬಾಯಿ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದ ಕಾರ್ನಾಡರು, ಧಾರವಾಡದ ಬಾಸೆಲ್ ಮಿಷನ್‌ನಲ್ಲಿ ಪ್ರೌಢ ಶಿಕ್ಷಣ ಪಡೆದರು. ನಂತರ ಕರ್ನಾಟಕ ಕಾಲೇಜಿನಲ್ಲಿ ಪದವಿ, ಮುಂಬೈನಲ್ಲಿ ಸ್ನಾತಕೋತ್ತರ.

ಬಳಿಕ ಆಕ್ಸ್‌ಫರ್‍ಡ್ ವಿ.ವಿ.ಯಲ್ಲಿ ತತ್ವಶಾಸ್ತ್ರ, ಅರ್ಥಶಾಸ್ತ್ರ ಮತ್ತು ರಾಜಕೀಯ ಶಾಸ್ತ್ರಗಳಲ್ಲಿ ವಿಶೇಷ ಅಧ್ಯಯನ ಮಾಡಿದ ಕಾರ್ನಾಡರು ಮದ್ರಾಸ್‌ನ ಆಕ್ಸ್‌ಫರ್ಡ್ ಪ್ರೆಸ್‌ನಲ್ಲೇ ನೌಕರಿ ಹಿಡಿದರು. ಮದ್ರಾಸಿನಲ್ಲಿದ್ದಾಗ ಸಿನಿಮಾ ರಂಗದೊಂದಿಗೆ ನಂಟು ಬೆಳೆಸಿಕೊಂಡ ಅವರು, ಅನಂತಮೂರ್ತಿ ಅವರ ಸಂಸ್ಕಾರವನ್ನು ಅವರ ಜೊತೆಗೂಡಿ ಚಲನ ಚಿತ್ರ ಮಾಡಿದರು.

ಕುವೆಂಪು ಅವರ ಕಾನೂರು ಹೆಗ್ಗಡಿತಿಯನ್ನೂ ಕಾರ್ನಾಡರು ಸಿನಿಮಾಕ್ಕೆ ಅಳವಡಿಸಿದರು. ನಿರ್ದೇಶಿಸಿದರು. ೧೯೯೮ರಲ್ಲಿ ಈ ಚಿತ್ರ ನಿರ್ದೇಶಿಸುತ್ತಿದ್ದ ಸಂದರ್ಭದಲ್ಲೇ ಅವರಿಗೆ ಜ್ಞಾನಪೀಠ ಪ್ರಶಸ್ತಿ ದೊರೆತ ಸಿಹಿ ಸುದ್ದಿ ಸಿಕ್ಕಿದ್ದು. ಹೀಗಾಗಿ ಇಬ್ಬರು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಕಾದಂಬರಿಗಳನ್ನು ಸಿನಿಮಾ ಮಾಡಿದ ಏಕೈಕ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರೆಂಬ ಗೌರವಕ್ಕೆ ಕಾರ್ನಾಡ್ ಪಾತ್ರರಾಗಿದ್ದಾರೆ.

ಸಂಸ್ಕಾರದಲ್ಲಿ ಪ್ರಾಣೇಶಾಚಾರ್ಯನಾಗಿ, ಕಾನೂರು ಹೆಗ್ಗಡಿತಿಯ ನಾಯಕನಾಗಿ ನಟಿಸಿರುವ ಕಾರ್ನಾಡರು ಕಾಡು, ಉತ್ಸವ್, ಗೋಧೂಳಿ, ಒಂದಾನೊಂದು ಕಾಲದಲ್ಲಿ ಮೊದಲಾದ ಚಿತ್ರಗಳನ್ನೂ ನಿರ್ದೇಶಿಸಿದ್ದಾರೆ. ಯಯಾತಿ, ಹಯವದನ, ನಾಗಮಂಡಲ, ತಲೆದಂಡ, ಅಗ್ನಿ ಮತ್ತು ಮಳೆ, ಟಿಪ್ಪು ಸುಲ್ತಾನ್, ತುಘಲಕ್ ಮೊದಲಾದ ಶ್ರೇಷ್ಠ ನಾಟಕಗಳನ್ನು ನೀಡಿದ್ದಾರೆ.

೧೯೭೬-೭೮ರವರೆಗೆ ಸಂಗೀತ ನಾಟಕ ಅಕಾಡಮಿ ಅಧ್ಯಕ್ಷರಾಗಿ, ಕೆಲ ಕಾಲ ಪುಣೆಯ ಫಿಲಂ ಇನ್‌ಸ್ಟಿಟ್ಯೂಟ್ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಪ್ರಶಸ್ತಿ ಪಾರಿತೋಷಕ : ಕಾರ್ನಾಡರಿಗೆ ವಿವಿಧ ವಿಭಾಗಗಳಲ್ಲಿ ಅಸಂಖ್ಯಾತ ಪ್ರಶಸ್ತಿ - ಪಾರಿತೋಷಕಗಳು ಲಭ್ಯವಾಗಿದೆ. ನಾಟಕ ಹಾಗೂ ಚಲನಚಿತ್ರಕ್ಷೇತ್ರದಲ್ಲಿ ನೀಡಿರುವ ವಿಶೇಷ ಕೊಡುಗೆಗೆ ರಾಜ್ಯ ನಾಟಕ ಅಕಾಡಮಿ ವಿಶೇಷ ಪ್ರಶಸ್ತಿ (೧೯೮೩), ೧೯೭೨ರಲ್ಲಿ ದೆಹಲಿಯ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ, ೧೯೬೨ರಲ್ಲಿ ರಾಜ್ಯ ಪ್ರಶಸ್ತಿ ಮತ್ತು ಕುಲಾಪತಿಗಳ ಸ್ವರ್ಣಪದಕ (ಯಯಾತಿ), ಕಮಲಾದೇವಿ ಚಟ್ಟೋಪಾಧ್ಯಾಯ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ (ಹಯವದನ), ರಾಜ್ಯೋತ್ಸವ ಪ್ರಶಸ್ತಿ (೧೯೮೪), ೧೯೯೨ರಲ್ಲಿ ಪದ್ಮಭೂಷಣ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ (ತಲೆದಂಡ), ವಂಶವೃಕ್ಷ - ಕಾಡು ಚಿತ್ರಗಳಿಗೆ ಸ್ವರ್ಣ ಕಮಲ, ಗೌರವ ಡಾಕ್ಟರೇಟ್ ಪಡೆದ ಕಾರ್ನಾಡರಿಗೆ ಜ್ಞಾನಪೀಠ ದೊರೆತದ್ದು ೧೯೯೮ರಲ್ಲಿ.

ಮುಖಪುಟ /ಸಾಧಕರು