ಮುಖಪುಟ /ಸಾಧಕರು  

ಬಹುಮುಖ ವ್ಯಕ್ತಿತ್ವದ ತ್ರಿವಿಕ್ರಮ ಪ್ರತಿಭೆಯ ಶಿವರಾಮ ಕಾರಂತರು
ಕೋಟ ಎಂಬ ಪುಟ್ಟ ಹಳ್ಳಿಯಲ್ಲಿ ಹುಟ್ಟಿ ಜ್ಞಾನಪೀಠದೆತ್ತರಕ್ಕೆ ಬೆಳೆದ ಕಾರಂತರದು ಅಸಾಧಾರಣ - ಅನುಪಮ ಪ್ರತಿಭೆ

* ಟಿ.ಎಂ.ಸತೀಶ್

ಕೋಟಾ ಶಿವರಾಮ ಕಾರಂತರು ಕೇವಲ ಕವಿ-ಸಾಹಿತಿ -ಲೇಖಕರಷ್ಟೇ ಅಲ್ಲ. ಅವರದು ಬಹುಮುಖ ಪ್ರತಿಭೆ. ಕಾರಂತರು ಶ್ರೇಷ್ಠ ಕನ್ನಡ ಸಾಹಿತಿ, ಕಲಾವಿದ, ವಿಜ್ಞಾನ ವಿಲಾಸಿ, ಅಲೆಮಾರಿ, ಪತ್ರಕರ್ತ, ಪ್ರಯೋಗಶೀಲ, ನೃತ್ಯಪಟು, ಪರಿಸರವಾದಿ, ಸ್ವಾತಂತ್ರ್ಯ ಹೋರಾಟಗಾರ, ಭಾಷಾ ಶಾಸ್ತ್ರಜ್ಞ... ಹೀಗೆ ಪಟ್ಟಿ ಬೆಳೆಯುತ್ತಾ ಸಾಗುತ್ತದೆ. ಕಾರಂತರಷ್ಟು ಶ್ರದ್ಧಾಪೂರ್ಣ ಮತ್ತು ಕ್ರಿಯಾಪೂರ್ಣ ಸೇವೆಯನ್ನು ಕನ್ನಡದಲ್ಲಿ ಮತ್ತಾರೂ ಮಾಡಿಲ್ಲ ಎಂದೇ ಹೇಳಬಹುದು.

ನಡೆದಾಡುವ ವಿಶ್ವಕೋಶ, ಕಡಲತೀರದ ಭಾರ್ಗವ ಎಂದೇ ಖ್ಯಾತರಾಗಿದ್ದ ಕಾರಂತರು ಹುಟ್ಟಿದ್ದು ಅಕ್ಟೋಬರ್ ೧೦, ೧೯೦೨ರಂದು. ಹುಟ್ಟೂರು ಕಡಲ ತೀರದ ಕೋಟ, ತಂದೆ ಶೇಷ ಕಾರಂತ, ತಾಯಿ ಲಕ್ಷ್ಮೀ. ಲಕ್ಷ್ಮೀ -ಶೇಷಕಾರಂತ ದಂಪತಿಗಳಿಗೆ ಐದನೇ ಮಗನಾಗಿ ಜನಿಸಿದ ಕಾರಂತರು, ಕಾಲೇಜು ವಿದ್ಯಾಭ್ಯಾಸ ಮಾಡುತ್ತಿದ್ದಾಗ, ಮಹಾತ್ಮಾ ಗಾಂ ಅವರ ತತ್ವಗಳಿಂದ ಪ್ರಭಾವಿತರಾಗಿ ಅಸಹಕಾರ ಚಳವಳಿಗೆ ಧುಮುಕಿದರು. ಆನಂತರ ಪತ್ರಕರ್ತರಾಗಿ, ಛಾಯಾಗ್ರಾಹಕರಾಗಿ, ನೃತ್ಯಪಟುವಾಗಿ, ಸಿನಿಮಾ ನಿರ್ಮಾಪಕರಾಗಿ ಹತ್ತು ಹಲವು ಕ್ಷೇತ್ರಗಳಲ್ಲಿ ಕಾರಂತರು ದುಡಿದರು. ಕೈಸುಟ್ಟುಕೊಂಡರು. ಯಕ್ಷಗಾನ, ಕೋಲಾಟ ಪ್ರದರ್ಶನದಲ್ಲಿ ಅಪ್ರತಿಮ ಯಶಸ್ಸು ಗಳಿಸಿ, ದಕ್ಷಿಣ ಕನ್ನಡ ಜಿಲ್ಲೆಯ ಜೀವಂತ ಕಲೆಯ ಪರಿಚಯವನ್ನು ದೇಶಾದ್ಯಂತ ಮಾಡಿದರು.

ಪ್ರವಾಸಿ - ಅಲೆಮಾರಿ: ಕೆಲವನ್ನು ಬಲ್ಲವರಿಂದ ಕಲಿತು, ಮತ್ತೆ ಕೆಲವನ್ನು ಕೋಶ ಓದಿ ತಿಳಿದು, ಮತ್ತೆ ಕೆಲವನ್ನು ವಿಶ್ವಪರ್ಯಟನೆಯಿಂದ ಅರಿಯಬೇಕೆನ್ನುವ ಹಿರಿಯ ಸಿದ್ಧಾಂತವನ್ನು ತಮ್ಮ ಬಾಳಲ್ಲೂ ಅಳವಡಿಸಿಕೊಂಡ ಕಾರಂತರಿಗೆ ಸಂಚಾರ (ಅಲೆಮಾರಿತನ) ಕಲಿಸಿದ್ದು ಅಪಾರ. ಸಿಂಹಳ, ನೇಪಾಳ, ಬೀರುತ್, ಇರಾನ್, ಆಫ್ಘಾನಿಸ್ತಾನ, ಹಾಂಕಾಂಗ್, ಜಪಾನುಗಳ ಸುತ್ತಿಬಂದ ಕಾರಂತರ ಪೂರ್ವದಿಂದ ಅತ್ಯಪೂರ್ವಕ್ಕೆ ಕೃತಿಯ ಬೆನ್ನುಡಿಯಲ್ಲಿ ಸಂಚಾರದ ಬಗ್ಗೆ ಕಾರಂತರ ಅಭಿಪ್ರಾಯ ಹೀಗಿದೆ :

...ಸಂಚಾರ ನನ್ನ ಬದುಕಿಗೆ ಅವಿರತವಾಗಿ ಬೆರೆತದ್ದು, ಪುಟಕೊಟ್ಟಿದ್ದು, ಸೂರ್ತಿಕೊಟ್ಟಿದ್ದು, ಬಾಹ್ಯ ಜಗತ್ತಿನ ಅನುಭವಕ್ಕೆ ಹೆದ್ದಾರಿಯಾದದ್ದು.

... ಆ ಸಂಚಾರದ ಅನುಭವಗಳೇ ನನ್ನ ಸಾಹಿತ್ಯಕ್ಕೆ ಜೀವಕಳೆಯನ್ನು ಒದಗಿಸಬೇಕು. ಸಾಹಿತ್ಯಕ್ಕೆ ಬೇಕಾದ ವಸ್ತುವನ್ನು ಸ್ವಯಂಸೂರ್ತಿಯಿಂದಲೇ ಸೃಷ್ಟಿ ಮಾಡಿ, ಕಲ್ಪನಾವಿಲಾಸದಿಂದಲೇ ಅಲಂಕರಿಸಿ ಯಾರನ್ನೂ ಮೆಚ್ಚಿಸುವುದಕ್ಕೆ ಹೋಗಲಾರೆ. .... ಸಂಚಾರ ನನ್ನ ಪಾಲಿಗೆ ನಿತ್ಯದ ವಿದ್ಯಾಭ್ಯಾಸ.

ಕೃತಿ : ಕಾರಂತರು ನಾಲ್ಕು ಸಂಪುಟಗಳ ವಿಜ್ಞಾನ ಪ್ರಪಂಚ, ಸಿರಿಗನ್ನಡ ಅರ್ಥಕೋಶ, ೪೪ ಕಾದಂಬರಿ, ೧೬ ನಾಟಕ, ೩ ಕಥಾ ಸಂಕಲನ, ೬ ಪ್ರಬಂಧ ಮತ್ತು ಚಿತ್ರಣ, ಕವನ ಸಂಗ್ರಹ, ೫ ಆತ್ಮಕಥೆ ಮತ್ತು ಜೀವನ ಚರಿತ್ರೆ, ವಿಚಾರ ಸಾಹಿತ್ಯ, ೨೫ ಮಕ್ಕಳ ಸಾಹಿತ್ಯ, ಪ್ರವಾಸ ಕಥನ, ಕಿರಿಯರ ವಿಶ್ವಕೋಶ, ಗೀತರೂಪಕ ಸೇರಿದಂತೆ ೧೫೦ಕ್ಕೂ ಹೆಚ್ಚು ಅಮೂಲ್ಯ ಕೃತಿಗಳನ್ನು ಕನ್ನಡಕ್ಕೆ ನೀಡಿದ್ದಾರೆ.

ಪ್ರಶಸ್ತಿ ಪಾರಿತೋಷಕ : ಈ ಮಹಾನ್ ಸಾಹಿತ್ಯ ಸಾಧಕನಿಗೆ ಜ್ಞಾನಪೀಠ ಪ್ರಶಸ್ತಿ (ಮೂಕಜ್ಜಿಯ ಕನಸು), ಪದ್ಮಭೂಷಣ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಎರಡು ಗೌರವ ಡಾಕ್ಟರೇಟ್, ತುಲಸಿ ಸಮ್ಮಾನ್, ಇಂದಿರಾಗಾಂ ವೃಕ್ಷಮಿತ್ರ ಪ್ರಶಸ್ತಿ, ಪಂಪ ಪ್ರಶಸ್ತಿ, ಸ್ವೀಡಿಷ್ ಅಕಾಡಮಿ ಪಾರಿತೋಷಕವೇ ಮೊದಲಾದ ಹಲವು ಪ್ರಶಸ್ತಿಗಳು ಸಂದಿವೆ. ಕಾರಂತರು ಬದುಕಿದ್ದಿದ್ದರೆ ಈಹೊತ್ತು ಶತಾಯುಷಿಗಳಾಗಿರುತ್ತಿದ್ದರು. ಆದರೆ, ತಮ್ಮ ೯೩ನೇ (೧೯೯೭) ವಯಸ್ಸಿನಲ್ಲಿ ಕಾರಂತರು ಇಹವನ್ನು ತ್ಯಜಿಸಿದರು.

ಮುಖಪುಟ /ಸಾಧಕರು